Sunday, 30 November 2014

ಜರ್ಮನ್ ಬೇಡವೆಂದು ಸ್ಮೃತಿ ಇರಾನಿ ಹೇಳಿದ್ದೇಕೆ?

ಮಾನವಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಕೆಲ ದಿನಗಳ ಹಿಂದೆ ಒಂದು ಫರ್ಮಾನು ಹೊರಡಿಸಿದರು. ಅದರ ಒಕ್ಕಣೆ ಇಷ್ಟೇ. 'ಈಗ ಕೇಂದ್ರೀಯ ವಿದ್ಯಾಲಯಗಳು ತ್ರಿಭಾಷಾ ಸೂತ್ರದಡಿಯಲ್ಲಿ ಸೇರಿಸಿಕೊಂಡಿರುವ ಜರ್ಮನ್ ಭಾಷೆಯನ್ನು ತಕ್ಷಣವೇ ಕೈಬಿಡಬೇಕು. ಬದಲಿಗೆ ಸಂಸ್ಕೃತವನ್ನು ಸೇರಿಸಿಕೊಳ್ಳಬಹುದು. ಈ ನಿಯಮ ಅನ್ವಯವಾಗುವುದು ಆರರಿಂದ ಎಂಟನೆಯ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ'. ಅವರು ಇಷ್ಟು ಹೇಳಿದ್ದೇ ತಡ ಎಲ್ಲೆಡೆಯಿಂದ ಆಪಾದನೆಗಳ ಸುರಿಮಳೆ ಶುರು! ಇದು ಕೇಸರೀಕರಣ, ಹಿಂದುತ್ವ, ಆರ್‍ಎಸ್‍ಎಸ್ನ ಕೈವಾಡ ಎಂದು ಹೂಂಕರಿಸಿದವರೇ ಎಲ್ಲರೂ. ಮೊದಲೇ ಸ್ಮೃತಿ ಈ ಜಾಗದಲ್ಲಿ ಕುಳಿತಿರುವುದು ಬಹಳ ಮಂದಿಗೆ ಸಹ್ಯವಾಗುತ್ತಿಲ್ಲ. ಮಾಡೆಲ್ ಆಗಿ, ನಟಿಯಾಗಿ, ಕಡೇಪಕ್ಷ ಹೇಳಿಕೊಳ್ಳಬಹುದಾದಂಥ ವಿದ್ಯಾರ್ಹತೆಯೂ ಇಲ್ಲದ ಅವರು ಈ ಹುದ್ದೆಗೆ ಹೇಗೆ ಶೋಭೆ ತಂದಾರು ಎಂಬುದೇ ಬಹುತೇಕರ ಪ್ರಶ್ನೆ. ಅದು ಸಮಂಜಸವೂ ಹೌದು. ಆದರೆ ವಿದೇಶಿ ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಪಡೆದು ಬಂದು ಆಯಕಟ್ಟಿನ ಜಾಗಗಳಲ್ಲಿ ಕುಳಿತವರ ಉದಾಹರಣೆಗಳನ್ನು ನಾವು ನೋಡಿಲ್ಲವೇ? ಅವರೇನು ಕಡಿದು ಕಟ್ಟೆ ಹಾಕಿರುವುದು? ಮೇಲಾಗಿ, ಹುದ್ದೆಗೆ ಬೇಕಾದ ಕಾರ್ಯಕ್ಷಮತೆ ಇಲ್ಲವೆಂಬುದು ಸಾಬೀತಾದ ಮೇಲೂ ಅಂಥವರಿಗೆ ಸಲಾಮು ಹೊಡೆಯಲು ಇದು ದಾಕ್ಷಿಣ್ಯಕ್ಕೆ ಬಿದ್ದು ನಡೆಸುತ್ತಿರುವವರ ಸರ್ಕಾರವಲ್ಲ. ಇರಲಿ, ಈಗ ವಿಷಯಾಂತರವಾಗುವುದು ಬೇಡ. ಸ್ಮೃತಿ ಹಾಗೆ ಹೇಳಿದ್ದರ ಹಿಂದಿರುವ ವಾಸ್ತವವನ್ನು ನೋಡೋಣ.

ಕಳೆದ ಅಕ್ಟೋಬರ್‍ 27ರಂದು ಕೇಂದ್ರೀಯ ವಿದ್ಯಾಲಯ ಸಂಘಟನೆಯ ನಿರ್ದೇಶಕರುಗಳು ಹಾಗೂ ಸ್ಮೃತಿಯವರ ನಡುವೆ ಸಭೆಯೊಂದು ನಡೆದಿತ್ತು. ಅದರಲ್ಲಿ ಬೆಳಕಿಗೆ ಬಂತು ನೋಡಿ ಶಿಕ್ಷಣ ನೀತಿಯನ್ನು ಉಲ್ಲಂಘಿಸಿ, 2011ರಲ್ಲೇ ನಡೆದಿದ್ದ ಒಂದು ಒಪ್ಪಂದ! ಆ ಒಪ್ಪಂದದ ಬಗ್ಗೆ ಹೇಳುವ ಮೊದಲು ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಹೇಳಲೇಬೇಕು.
1968ರಲ್ಲಿ ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿದೆ ನೀತಿ ಇದು. ಇದರ ಪ್ರಕಾರ, ಎಲ್ಲ ಶಾಲೆಗಳಲ್ಲೂ ತ್ರಿಭಾಷಾ ಸೂತ್ರ ಅನ್ವಯವಾಗಬೇಕು. ಒಂದು ಭಾಷೆ ಇಂಗ್ಲೀಷ್ ಆಗಿದ್ದು, ಮತ್ತೆರಡು ಕಡ್ದಾಯವಾಗಿ ಭಾರತೀಯ ಭಾಷೆಗಳೇ ಆಗಿರಬೇಕು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಮೊದಲ ಭಾಷೆ ಇಂಗ್ಲೀಷ್, ಎರಡನೆಯದು ಹಿಂದಿ ಹಾಗೂ ಮೂರನೆಯದು ಸಂಸ್ಕೃತ ಅಥವಾ ಆಯಾ ರಾಜ್ಯಕ್ಕೆ ಸೇರಿದ ಭಾಷೆ.

ವಿಷಯ ಸರಳವಾಗಿಯೇ ಇದೆಯಲ್ಲವೇ? ಇನ್ನು ಆ ಒಪ್ಪಂದಕ್ಕೆ ಬರೋಣ. ಅದು ನಡೆದದ್ದು ಕೇಂದ್ರೀಯ ವಿದ್ಯಾಲಯ ಸಂಘಟನೆ ಹಾಗೂ ಜರ್ಮನ್ ಭಾಷೆಯನ್ನು ಕಲಿಸುವ ಸಂಸ್ಥೆಯೊಂದರ ನಡುವೆ. ಅದರಲ್ಲಿ, ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಮೂರನೆಯ ಭಾಷೆಯಾಗಿ ಜರ್ಮನ್‍ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯನೀಡಲಾಗಿತ್ತು! ಜರ್ಮನ್ ಭಾಷೆಯನ್ನು ಕಲಿಸುವ ಹೊಣೆಯನ್ನು ಆ ಸಂಸ್ಥೆಯೇ ಹೊತ್ತು, ಅದಕ್ಕೆಂದೇ 700 ಶಿಕ್ಷಕರನ್ನೂ ಒದಗಿಸಿತ್ತು! ಕೇಂದ್ರೀಯ ವಿದ್ಯಾಲಯ ಸಂಘಟನೆಯ ಪರವಾಗಿ, ಮಾನವಸಂಪನ್ಮೂಲ ಖಾತೆಯ ಅಂದಿನ ರಾಜ್ಯ ಸಚಿವರಾಗಿದ್ದ ಇ.ಅಹಮದ್ ಸಹಿ ಮಾಡಿದ್ದರೆ, ಜರ್ಮನಿಯ ತರಬೇತಿ ಸಂಸ್ಥೆಯ ಪರವಾಗಿ ಅಲ್ಲಿನ ಸಚಿವರೊಬ್ಬರ ಸಹಿಯಿತ್ತು! ಈ ವಿಷಯ ಸ್ಮೃತಿಯವರ ಗಮನಕ್ಕೆ ಬಂದುದಾದರೂ ಏಕೆ? ಒಪ್ಪಂದದ ನವೀಕರಣವಾಗಬೇಕಿದ್ದರಿಂದ! ತಕ್ಷಣ ಇದನ್ನು ರದ್ದು ಗೊಳಿಸಿದ ಅವರು ತಕ್ಕ ಸ್ಪಷ್ಟೀಕರಣವನ್ನೂ ನೀಡಿದರು. ಅಷ್ಟೇ ಅಲ್ಲ, ನಮ್ಮ ಶಿಕ್ಷಣ ನೀತಿಯನ್ನು ಉಲ್ಲಂಘಿಸಿದ್ದೇಕೆ ಎಂಬುದರ ತನಿಖೆಯನ್ನೂ ಶುರು ಮಾಡಿಸಿದರು.

ಇದು ನಿಜವಾಗಿಯೂ ಗಂಭೀರವಾದ ವಿಷಯವಲ್ಲವೇ? ತ್ರಿಭಾಷಾ ಸೂತ್ರ ಕೇಂದ್ರೀಯ ವಿದ್ಯಾಲಯಗಳಿಗೂ ಅನ್ವಯವಾಗಲೇಬೇಕು. ಅಂದ ಮೇಲೆ ಅದನ್ನು ಮೀರುವ ಅನುಮತಿ ದೊರಕಿದ್ದು ಹೇಗೆ? ಯಾರಿಂದ? ಈ ವಿಷಯ ಅಂದಿನ ಪ್ರಧಾನಿ ಮನಮೋಹನ್‍ ಸಿಂಗ್‍ರಿಗೆ ಗೊತ್ತಿರಲಿಲ್ಲವೇ? ಖಂಡಿತ ಗೊತ್ತಿತ್ತು. ಏಕೆಂದರೆ ಕಳೆದ ವರ್ಷ ಏಪ್ರಿಲ್‍ನಲ್ಲಿ ಅವರು ಜರ್ಮನಿಯ ಪ್ರವಾಸ ಕೈಗೊಂಡಾಗ ಇದೇ ಕೇಂದ್ರೀಯ ವಿದ್ಯಾಲಯದ ಕೆಲ ಪ್ರತಿಭಾವಂತ ಮಕ್ಕಳನ್ನು (ಜರ್ಮನ್ ಕಲಿಯುತ್ತಿದ್ದ) ತಮ್ಮೊಡನೆ ಕರೆದೊಯ್ದಿದ್ದರು!

ಇಷ್ಟೆಲ್ಲಾ ನಡೆದಿರುವುದು ಯಾರ ಗಮನಕ್ಕೂ ಬರಲೇ ಇಲ್ಲ. ಸ್ಮೃತಿಯ ಮಾತುಗಳನ್ನು ಕೇಳುವ ವ್ಯವಧಾನವೂ ಯಾರಿಗೂ ಇರಲಿಲ್ಲ. 'ಎತ್ತು ಈಯಿತು' ಎಂದರೆ 'ಕೊಟ್ಟಿಗೆ ಕಟ್ಟು' ಎಂಬಂಥ ಮನಸ್ಥಿತಿಯ ಟಿವಿ ಮಾಧ್ಯಮದವರ ದಯೆಯಿಂದ ಸುದ್ದಿಗೆ ರೆಕ್ಕೆ ಪುಕ್ಕಗಳು ಬಂದಾಗಿತ್ತು! ಈಗ ಹೇಳಿ, ಸ್ಮೃತಿ ಮಾಡಿದ್ದರಲ್ಲಿ ತಪ್ಪೇನಿದೆ? ಸಾಂವಿಧಾನಿಕವಾಗಿ ಅಂಗೀಕರಿಸಲ್ಪಟ್ಟ 125 ಭಾಷೆಗಳು ಹಾಗೂ 1600 ಆಡುಭಾಷೆಗಳಿರುವ ನಮಗೆ ಭಾಷೆಯ ಅರೆಯೇ? ಹಾಗೆಂದು ಜರ್ಮನ್ ಭಾಷೆಯ ಮೇಲೆ ನಿಷೇಧವನ್ನೇನೂ ಹೇರಿಲ್ಲ. ಹವ್ಯಾಸಿ ಅಥವಾ ಹೆಚ್ಚುವರಿ ಭಾಷೆಯಾಗಿ ಅದರ ಕಲಿಕೆಯನ್ನೂ ಮುಂದುವರೆಸಬಹುದಾಗಿದೆ. ಆದರೂ ಜರ್ಮನ್ ಸರ್ಕಾರ ಎಷ್ಟು ತಲೆ ಕೆಡಿಸಿಕೊಂಡಿದೆಯೆಂದರೆ, ವಿಷಯ ತಿಳಿಯುತ್ತಿದ್ದಂತೆಯೇ, ಜರ್ಮನಿಯ ರಾಯಭಾರಿ ಮೈಕಲ್ ಸ್ಟೀನರ್ ಸಂಸ್ಕೃತ ಶಿಕ್ಷಕ ಸಂಘಕ್ಕೆ ಓಡಿ ಹೋದರು. ಈ ನಿರ್ಣಯವನ್ನು ಬದಲಾಯಿಸುವಂತೆ ಕೋರಿದರು. ಅಷ್ಟೇ ಅಲ್ಲ, ಜಿ20 ಶೃಂಗ ಸಭೆಯಲ್ಲೂ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಮೋದಿಯವರನ್ನು ಈ ವಿಷಯ ಕುರಿತು ಪರಿಶೀಲಿಸುವಂತೆ ಮನವಿ ಮಾಡಿಕೊಂಡರು! ಎಷ್ಟು ಅಭಿಮಾನ ನೋಡಿ ತಮ್ಮ ಭಾಷೆಯ ಮೇಲೆ ಅವರಿಗೆ.

ನಿಮಗೆ ಗೊತ್ತಿರಲಿ, ಇಂದು ಭಾರತದಲ್ಲಿ ಜರ್ಮನ್ ಮಾತ್ರವಲ್ಲ, ಫ್ರೆಂಚ್ ಹಾಗೂ ಸ್ಪೇನ್ ದೇಶಗಳ ಭಾಷೆಗಳನ್ನೂ ಕಲಿಸಲಾಗುತ್ತಿದೆ. ಕೆಲ ತಿಂಗಳುಗಳ ಹಿಂದೆ ಚೀನಾದ ಅಧ್ಯಕ್ಷ ಜಿನ್‍ಪಿಂಗ್ ಪತ್ನೀ ಸಮೇತರಾಗಿ ಬಂದಿದ್ದು ನಿಮಗೆ ನೆನಪಿರಬಹುದು. ಆಗ ಅವರ ಪತ್ನಿ ಭೇಟಿಕೊಟ್ಟಿದ್ದು ದೆಹಲಿಯ ಟಾಗೋರ್ ಅಂತಾರಾಷ್ಟ್ರೀಯ ಶಾಲೆಗೆ! ಅಲ್ಲಿ ಅವರನ್ನು ರಂಜಿಸಿದ್ದು ಮ್ಯಾಂಡರಿನ್ (ಚೈನೀ ಭಾಷೆ) ಕಲಿಯುತ್ತಿದ್ದ ಮಕ್ಕಳು! ಇದು ಒಳ್ಳೆಯ ಬೆಳವಣಿಗೆ ಸರಿಯೇ. ಆದರೆ ಮೊದಲು ನಮ್ಮ ಭಾಷೆಗಳ ಬೆಲೆಯನ್ನು, ಮಹತ್ವವನ್ನು ಅರಿಯಬೇಕಿದೆ.

ಇಂದು ಸ್ಮೃತಿಯವರ ನಿರ್ಧಾರದ ಫಲವಾಗಿ 500 ಕೇಂದ್ರೀಯ ವಿದ್ಯಾಲಯಗಳ, ಅದರಲ್ಲಿ ಕಲಿಯುತ್ತಿರುವ ಸುಮಾರು 70ಸಾವಿರ ವಿದ್ಯಾರ್ಥಿಗಳ ಬಾಳು ಅಂಧಕಾರಮಯವಾಗಲಿದೆ ಎಂದು ಬೊಬ್ಬೆ ಹಾಕುತ್ತಿದ್ದಾರಲ್ಲ ಕೆಲಮಂದಿ, ಅದು ನಿಜವೇ? ಇಲ್ಲಿ ಕೇಂದ್ರೀಯ ವಿದ್ಯಾಲಯಗಳ ಬಗ್ಗೆಯೂ ಕೊಂಚ ಹೇಳಬೇಕು. ಕೇಂದ್ರ ಸರ್ಕಾರದ ಸೇವೆಯಲ್ಲಿರುವ, ಅದರಲ್ಲಿಯೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವವರ ಮಕ್ಕಳ ಸಲುವಾಗಿ 1963ರಲ್ಲಿ ಅಸ್ತಿತ್ವಕ್ಕೆ ಬಂತು ಕೇಂದ್ರೀಯ ವಿದ್ಯಾಲಯ. ಪದೇ ಪದೇ ಎತ್ತಂಗಡಿಯಾಗಿ ದೇಶದ ಯಾವುದೇ ಭಾಗಕ್ಕೆ ಹೋದರೂ, ಕೇಂದ್ರ ಸರ್ಕಾರಿ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಏಕರೂಪ ಪಠ್ಯಕ್ರಮವನ್ನು ಜಾರಿಗೊಳಿಸಲಾಯಿತು. ಈಗ ಅವುಗಳ ಸಂಖ್ಯೆ ಒಂದು ಸಾವಿರದಷ್ಟಿದೆ! ತ್ರಿಭಾಷಾ ಸೂತ್ರವನ್ನು ಅಳವಡಿಸಿನೋಡಿದರೆ ಇಲ್ಲಿಯ ಮಕ್ಕಳಿಗೆ ಮೂರನೆಯ ಭಾಷೆಯಾಗಿ ಪ್ರಾದೇಶಿಕ ಭಾಷೆಯನ್ನು ಪಠ್ಯಕ್ರಮದಲ್ಲಿ ಸೇರಿಸುವುದರ ಔಚಿತ್ಯವೇ ಕಾಣುವುದಿಲ್ಲ. ಒಂದು ರಾಜ್ಯದಲ್ಲಿ ಇಂತಿಷ್ಟೇ ವರ್ಷ ಇದ್ದೇ ಇರುತ್ತಾರೆಂಬ ಖಾತ್ರಿಯೇ ಇಲ್ಲವಲ್ಲ! ಆದ್ದರಿಂದಲೇ ಇವರಿಗೆ ಮೂರನೆಯ ಭಾಷೆಯಾಗಿ ಸಂಸ್ಕೃತವೇ ಕಡ್ಡಾಯವಾಯಿತು. 2011ರ ತನಕ ಹೀಗೇ ನಡೆದುಕೊಂಡು ಬಂದಿತ್ತು. ಈಗ ಮತ್ತೆ ಅದೇ ಪರಿಪಾಠ ಮುಂದುವರೆಯಬೇಕಿದೆ. ಅವರ ಸಂಕಟಕ್ಕೆ ಕಾರಣವೂ ಅದೇ. ಸಂಸ್ಕೃತವನ್ನು ಬಲವಂತವಾಗಿ ಹೇರಿ ಸ್ವಾತಂತ್ರ್ಯ ಹರಣಮಾಡುತ್ತಿದ್ದಾರೆ ಎನ್ನುತ್ತಿರುವ ಈ ಮಂದಿಗೆ ಒಂದು ವಿಷಯ ಗೊತ್ತಾಗಬೇಕು. ಇಂದು ಸಂಸ್ಕೃತದ ಕುರಿತು ಅಧ್ಯಯನ ನಡೆಸುತ್ತಿರುವ ವಿದೇಶಗಳ ಪೈಕಿ ಮುಂಚೂಣಿಯಲ್ಲಿರುವುದು ಜರ್ಮನಿಯೇ! ಇಲ್ಲಿ ಪ್ರಶ್ನೆ ಸಂಸ್ಕೃತದ್ದು ಮಾತ್ರವಲ್ಲ, ದೇಶೀಯ ವಿದ್ಯೆಗಳನ್ನೆಲ್ಲ ಕೇವಲವಾಗಿ ಕಾಣುವ ನಮ್ಮ ಮನಸ್ಥಿತಿಯದ್ದು. ‘ಸಂವಿಧಾನದಲ್ಲಿ ಅಶ್ಲೀಲ ಎಂದು ಹೇಳಿಲ್ಲ’ ಎನ್ನುತ್ತಾ ನಾವು ಸಾರ್ವಜನಿಕವಾಗಿ ಚುಂಬಿಸುವ 'ಕಿಸ್ ಆಫ್ ಲವ್'ಗೆ ತೆರೆದುಕೊಳ್ಳುತ್ತಿದ್ದೇವೆ, ಅಲ್ಲಿ ಈಗಾಗಲೇ ನಮ್ಮ ಯೋಗಾಸನ, ಧ್ಯಾನ, ಪ್ರಾಣಾಯಾಮಗಳು ಚೀನಾ ಹಾಗೂ ಅಮೆರಿಕವನ್ನು ಸಂಪೂರ್ಣವಾಗಿ ವ್ಯಾಪಿಸಿಕೊಂಡಿದೆ.

ಇಲ್ಲಿ ಒಂದು ಮುಖ್ಯವಾದ ವಿಷಯವನ್ನು ಹೇಳಲೇಬೇಕು, ತ್ರಿಭಾಷಾ ಸೂತ್ರವನ್ನು ಜಾರಿಗೆ ತಂದಿದ್ದೇ ಸಮಗ್ರತೆ ಹಾಗೂ ಭಾವೈಕ್ಯತೆಗಳನ್ನು ಮೂಡಿಸುವ ಸಲುವಾಗಿ. ಸ್ವಾತಂತ್ರ್ಯ ಬರುವುದು ಖಚಿತವಾಗುತ್ತಿದ್ದಂತೆ ನಮ್ಮನ್ನು ಹರಿದು ತಿಂದಿದ್ದು ಎರಡು ಮುಖ್ಯವಾದ ಸಮಸ್ಯೆಗಳು. ಒಂದು ಧರ್ಮವಾದರೆ ಮತ್ತೊಂದು ಭಾಷೆ! ಸ್ವಾತಂತ್ರ್ಯಾನಂತರ ಯಾವ ಭಾಷೆಯನ್ನು ಅಧಿಕೃತವಾಗಿ ರಾಷ್ಟ್ರಭಾಷೆ ಎಂದು ಪರಿಗಣಿಸಬೇಕು ಎಂಬ ವಿಷಯಕ್ಕೆ ಎಷ್ಟು ದೊಡ್ಡ ಜಗಳ ನಡೆಯಿತು ಗೊತ್ತೇ? ಹಿಂದಿಯನ್ನು ಆಯ್ಕೆಮಾಡೋಣವೆಂದರೆ ದಕ್ಷಿಣ ಭಾರತದವರಿಂದ ತೀವ್ರ ವಿರೋಧ. ಇಂಗ್ಲೀಷ್ ವ್ಯಾವಹಾರಿಕವಾಗಿ ಚೆನ್ನಿದ್ದರೂ ಅದು ನಮ್ಮದಲ್ಲವಲ್ಲ! ಕೊನೆಗೆ ಯಾವ ನಿರ್ಣಯಕ್ಕೆ ಬರಲಾಯಿತೆಂದರೆ, 1950ರ ಜನವರಿ 26ರಿಂದ 15 ವರ್ಷಗಳ ಕಾಲ, ಮೊದಲ ಅಧಿಕೃತ ಭಾಷೆಯಾಗಿ ಹಿಂದಿ, ಎರಡನೆಯದಾಗಿ ಇಂಗ್ಲೀಷ್ ಇರಬೇಕೆಂದು ತೀರ್ಮಾನವಾಯಿತು. ಸರ್ಕಾರದ ಲೆಕ್ಕಾಚಾರವೇನಿತ್ತೆಂದರೆ, ಹದಿನೈದು ವರ್ಷಗಳಲ್ಲಿ ಹಿಂದಿ ಎಲ್ಲರಲ್ಲೂ ಭಾವೈಕ್ಯತೆಯನ್ನು ಮೂಡಿಸುವಂತಾದರೆ 1965ರಲ್ಲಿ ಅದನ್ನೇ ಅಧಿಕೃತ ಭಾಷೆಯೆಂದು ಸ್ವೀಕರಿಸುವುದು. ಆದರೆ ಹಾಗಾಗಲಿಲ್ಲ. 1965ರ ಜನವರಿ 25ರಂದು ಮದ್ರಾಸಿನಲ್ಲಿ (ಇಂದಿನ ತಮಿಳುನಾಡು) ಜೋರು ಪ್ರತಿಭಟನೆ ಶುರುವಾಯಿತು. ವಿದ್ಯಾರ್ಥಿಗಳು ಹಾಗೂ ಡಿಎಂಕೆ ಪಕ್ಷ ಸೇರಿ ಹಮ್ಮಿಕೊಂಡ ಈ ಪ್ರತಿಭಟನೆ ಎರಡು ತಿಂಗಳಾದರೂ ನಿಲ್ಲಲಿಲ್ಲ. ನೂರಾರು ಸಾವುನೋವುಗಳಾಗಿ ರಕ್ತದೋಕುಳಿ ಹರಿಯಿತು. ಕೊನೆಗೆ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಯಿತೆಂದರೆ, ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಅರೆಸೇನಾ ಪಡೆಗಳ ನೆರವಿನಿಂದ ಪ್ರತಿಭಟನೆಯನ್ನು ಹತ್ತಿಕ್ಕಬೇಕಾಯಿತು! ಪರಿಣಾಮವಾಗಿ ಅಂದು ಅಧಿಕಾರಕ್ಕೇರಿದ ಡಿಎಂಕೆ ಪ್ರಾದೇಶಿಕತೆಯ ಹೊಸ ಭಾಷ್ಯವನ್ನೇ ಬರೆಯಿತು. ಅಂದು ತಮಿಳರ ಮನಸ್ಸಿಗೆ ಹಿಡಿದ 'ಹಿಂದಿ ಅಥವಾ ಬೇರೆ ಭಾಷೆಯನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳಬಾರದು' ಎಂಬ ಜಿಡ್ಡು ಇಂದೂ ಯಾವ ಸೀಗೇಕಾಯಿ ಹಾಕಿ ತಿಕ್ಕಿದರೂ ಹೋಗುತ್ತಿಲ್ಲ!

ಸಂಸ್ಕೃತದ ವಿಷಯದಲ್ಲಿ ಈ ಮನಸ್ಥಿತಿ ಬರದಿದ್ದರೆ ಸಾಕು. ನಮ್ಮ ಭಾಷೆಗಳು ಗೌಣವಲ್ಲ ಎಂಬುದನ್ನು ನಾವೇ ಒಪ್ಪಿಕೊಳ್ಳದಿದ್ದರೆ ಮಕ್ಕಳು ಎಲ್ಲಿಂದ ಕಲಿತಾರು? ಬೇರೆ ಭಾಷೆಗಳನ್ನು ಆಯಾ ಸಂದರ್ಭಾನುಸಾರ ಕಲಿಯುವ ಸ್ವಾತಂತ್ರ್ಯಹೇಗೂ ಇದ್ದೇ ಇರುತ್ತದಲ್ಲ?

ಸ್ಮೃತಿ ಒಂದು ಸಣ್ಣ ಇರುವೆ ಗೂಡಿಗೆ ಹಾಕಿರುವುದಕ್ಕೇ ಇಷ್ಟು ಕೋಲಾಹಲವಾಗುತ್ತಿದೆಯಲ್ಲ, ಇನ್ನು ದೊಡ್ಡ ದೊಡ್ಡ ಹುತ್ತಗಳಿಗೆ ಕೈ ಹಾಕಿದಾಗ ಏನಾದೀತೋ? ಕಾದು ನೋಡೋಣ! 

2 comments:

  1. ಭಾರತದಲ್ಲಿ ಸಂಸ್ಕೃತವು ಸತ್ತ ಬಾಷೆಯೆಂಬುದನ್ನು ಮರೆ ಮಾಚಿದ್ದಾರೆ. ಅದು ಕ್ಲಿಷ್ಟಬಾಷೆ ಆದ್ದರಿಂದಲೇ ಅದನ್ನು ಸರಳವಾಗಿಮಾತನಾಡುವವರ ಸಂಖ್ಯೆ ೫೦೬೯ ಭಾರತದ ಉದ್ದಗಲಕ್ಕೂ ಜನರು ಮಾತ್ರವೇ ಎಂಬುದನ್ನು ಅರಿಯಬೇಕಿದೆ. ಅದರಲ್ಲಿ ಒಂದೇ ಪದಕ್ಕೆ ಬೇರೆ ಬೇರೆ ಅರ್ಥೈಸಬಹುದು. ನಾನು ಹೇಳಿದ್ದೇ ಮಾತೇ ಇಲ್ಲವೆನ್ನಲು ಸಾಧ್ಯ. ಸಾವಿರಾರು ವರ್ಷದಿಂದಲೇ ನಿಂತನೀರಾಗಿದ್ದ ಎಲ್ಲರು ಬಿಟ್ಟ ಹೊಲಸು ಬಾಷೆಯನ್ನು ಎತ್ತಿ ಹಿಡಿದಿರುವುದು ಸಮಂಜಸವಲ್ಲ.

    ReplyDelete
  2. ನಾನು ಅಂದೇ ಒಂದು ಲೇಖನದಲ್ಲಿ ಬರೆದಿದ್ದೇ ಕನಸುಗಾರ ಮುಠ್ಠಾಳ ಜನರು ಬಂದರೇ ಇದನ್ನು ತರಲು ಮುಂದಾಗುತ್ತಾರೆ. ಭಾರತದಲ್ಲಿ ಇವರ ಮತವಾದಿ ಧರ್ಮವಾದ ಸಂಖ್ಯೆ ಹೆಚ್ಚಾಗುತ್ತದೆ. ನಮ್ಮನಮ್ಮಲ್ಲೇ ಒಡಕು ಹೆಚ್ಚಾಗುತ್ತದೆ. ಭಾರತವು ಒಂದು ಒಡೆದ ಕನ್ನಡಿ ಯೆಂಬುದು ನೂರಕ್ಕೆ ನೂರು ಸಾಬೀತು ಆಗಲಿದೆ.

    ReplyDelete