Saturday, 8 November 2014

ಕರಗುತ್ತಿರುವ ಕನ್ನಡಾಭಿಮಾನಕ್ಕೆ ಐಟಿ ಹೊಣೆಯೇ?

ನಮ್ಮ ಶಾಲೆಯಲ್ಲಿ ನಡೆದ ಘಟನೆ ಇದು. 'ನೀನು ನಿನ್ನ ಅಪ್ಪನ ಎಷ್ಟನೆಯ ಮಗ?', ಈ ಪ್ರಶ್ನೆಯನ್ನು ಹಿಂದಿ ಅಥವಾ ಇಂಗ್ಲೀಷಿನಲ್ಲಿ ಕೇಳಬಲ್ಲಿರಾ ಎಂದು ತರಗತಿಯಲ್ಲಿ ಸವಾಲೆಸೆದರು ನಮ್ಮ ಕನ್ನಡ ಮೇಡಂ. ಓಹೋ, ಅದೇನು ಮಹಾ ಎಂದು ಶುರು ಮಾಡಿದೆವು ನಾವು. ಆದರೆ ಅದು ಅಸಾಧ್ಯ ಎಂದು ಗೊತ್ತಾಗಿದ್ದು ನಂತರವೇ. ತಿರುಗಿಸಿ-ಮುರುಗಿಸಿ, ನಿಮ್ಮಪ್ಪನಿಗೆ ಎಷ್ಟು ಮಕ್ಕಳು ಎಂದು ಕೇಳಿದೆವು. ನೀ ಹಿರಿಯನಾ, ಕಿರಿಯನಾ ಅಥವಾ ಮಧ್ಯದವನಾ ಎಂದೂ ಕೇಳಿದೆವು. ಆದರೆ ಕಲಿತ ಬುದ್ಧಿಯನ್ನೆಲ್ಲ ಖರ್ಚು ಮಾಡಿದರೂ ನಿಖರವಾಗಿ ನೀನು ಎಷ್ಟನೆಯವನು ಎಂಬುದನ್ನು ಮಾತ್ರ ಕೇಳಲಾಗಲೇ ಇಲ್ಲ. ನಮ್ಮ ಮೇಡಂ ಆ ಪ್ರಶ್ನೆ ಕೇಳುವುದಕ್ಕೂ ಒಂದು ಕಾರಣವಿತ್ತು. ಆಗ ನಮ್ಮ ಶಾಲೆಗೆ ಹೆಚ್ಚಾಗಿ ಬರುತ್ತಿದ್ದುದು ಭಾರತೀಯ ವಾಯುಸೇನೆಯ ಅಧಿಕಾರಿಗಳ ಮಕ್ಕಳು. ಅವರದ್ದೋ ಕರ್ಣಾನಂದಕರವಾದ ಹಿಂದಿ ಭಾಷೆ. ಅವರು ಮಾತಿಗೆ ತೊಡಗಿದರೆ ಬೆರಗಿನಿಂದ ಬಾಯಿಬಿಟ್ಟುಕೊಂಡು ಕೇಳುವುದಷ್ಟೇ ನಮ್ಮ ಕೆಲಸ. ಅವರಂತೆಯೇ ಮಾತನಾಡುವ ತವಕ ಬೇರೆ! ಸರಿ, ಅವರನ್ನು ದುಂಬಾಲು ಬಿದ್ದು ಹಿಂದಿ ಕಲಿಯಲು ತೊಡಗಿದೆವು. ಕ್ರಮೇಣ ಯಾವ ಪರಿಯ ವ್ಯಾಮೋಹ ಆವರಿಸಿಕೊಂಡಿತೆಂದರೆ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ನಡೆಸುತ್ತಿದ್ದ, ಪ್ರಥಮ, ಮಧ್ಯಮ, ರಾಷ್ಟ್ರಭಾಷಾ ಮುಂತಾದ ಪರೀಕ್ಷೆಗಳಿಗೆಲ್ಲ ನಾವು ಹಾಜರ್! ಒಟ್ಟಿನಲ್ಲಿ, ಅವರೊಡನೆ ಮಾತಾಡಿ ಅವರ ಕೈಲೇ ಸೈ ಎನ್ನಿಸಿಕೊಳ್ಳುವ ಹಟ. ಬೆಳಿಗ್ಗೆ ಹಲ್ಲುಜ್ಜುವಾಗಿನಿಂದ ಶುರುವಾಗುತ್ತಿದ್ದ ಹಿಂದಿ ಜಪ, ರಾತ್ರಿ 'ರಾಮಂಸ್ಕಂದಂ ಹನುಮಂತಂ' ಶ್ಲೋಕದ ನಂತರವೂ ಮುಂದುವರೆಯುತ್ತಿತ್ತು.  ಈ ಭರದಲ್ಲಿ ಕನ್ನಡದ ಕಡೆಗಿನ ಗಮನ ಸೊನ್ನೆಯಾಯಿತು. ಸನ್ನೆ ಸಿಕ್ಕಿತು ನೋಡಿ ನಮ್ಮ ಮೇಡಂಗೆ, ನಮಗೆ ಪಾಠ ಕಲಿಸುವ ಸಲುವಾಗಿ, ಬೇಕೆಂದೇ ಈ ಪ್ರಶ್ನೆ ಕೇಳಿದರು. ನಾವು ಬೆಪ್ಪಾಗಿ ನಿಂತಾಗ ಅವರು ಹೇಳಿದ್ದು ಒಂದೇ ಮಾತು. 'ಎಲ್ಲ ಭಾಷೆಗಳೂ ಸುಂದರವೇ. ಆದರೆ ಕನ್ನಡ ಲಿಪಿಯ ಶ್ರೀಮಂತಿಕೆ, ವ್ಯಾಪ್ತಿ ಹಾಗೂ ಲಾಲಿತ್ಯ ಬೇರೆ ಯಾವ ಭಾಷೆಗೂ ಇಲ್ಲ. ಮೊದಲು ಇದನ್ನು ಪ್ರೀತಿಸಿ, ಆಸ್ವಾದಿಸಿ ನಂತರ ಉಳಿದವುಗಳನ್ನು ಕಲಿಯಿರಿ' ಎಂದು. ಅಷ್ಟೇ, ಚದುರಿ ಹೋದ ಗೋವುಗಳು ಗೊಲ್ಲ ಕರೆದೊಡನೆ ದಾರಿಗೆ ಬರುತ್ತವಲ್ಲ, ಹಾಗೆ ಬಂದೆವು ನಾವೂ ಕನ್ನಡದೆಡೆಗೆ!

ಹಿಂದಿಯ ಓದು ನಂತರವೂ ಮುಂದುವರೆಯಿತು. ಮುನ್ಷಿ ಪ್ರೇಮಚಂದರ ಮನಕಲಕುವ ಕಾದಂಬರಿಗಳನ್ನು ಓದಿದರೂ, ಹರಿವಂಶರಾಯ್ ಬಚ್ಚನ್‍ರ ಕವಿತೆಗಳನ್ನು ಮೆಲುಕುಹಾಕಿದರೂ, ಸಂತ ಕಬೀರರ, 'ದೋಹೆ'ಎಂಬ ರಸವತ್ತಾದ ನೀತಿಪಾಠಗಳನ್ನು ಮನನ ಮಾಡಿಕೊಂಡರೂ ಕನ್ನಡ ನಮ್ಮ ಹೃದಯದ ‘ಆಪ್ತತೆ’ಯ ಕಕ್ಷೆಯಿಂದ ಜಾರಿಹೋಗಲಿಲ್ಲ! ಮುಂದೆ ಸಂದರ್ಭಾನುಸಾರ ಹೊಸ ಭಾಷೆಗಳನ್ನು ಕಲಿತಷ್ಟೂ ಕನ್ನಡವೇ ಆದ್ಯತೆಯಾಗಬೇಕೆಂಬ ಹುಚ್ಚೂ ಬಲಿಯಿತು! ಇಂಥವೇ ಅನುಭವಗಳು ನಿಮ್ಮಲ್ಲಿ ಬಹಳಷ್ಟು ಮಂದಿಗೆ ಆಗಿರಬೇಕು. ಆದಾಗ್ಯೂ ಇಂದು ಯಾವ ಪರಿಸ್ಥಿತಿ ತಂದಿಟ್ಟಕೊಂಡಿದ್ದೇವೆ ನೋಡಿ. ನಾಚಿಕೆಯಾಗಬೇಕು ನಮಗೆ.

ನವೆಂಬರ್ ತಿಂಗಳು ಬಂದರೆ ಮಾತ್ರ ಕನ್ನಡಾಂಬೆ ನೆನಪಾಗುತ್ತಾಳೆ. ಅದರಲ್ಲೂ, ಕರ್ನಾಟಕ ರಕ್ಷಣಾ ವೇದಿಕೆಯವರು ಆಡುವುದನ್ನು ನೋಡಿದರೆ ಸಾಕು, ಅವಳು ಅವರಿಗೆ ಮಾತ್ರ ಹೆತ್ತತಾಯಿ, ನಮಗೆಲ್ಲ ಮಲತಾಯಿಯೇನೋ ಎನಿಸಿಬಿಡುತ್ತದೆ! ಹೇಗೆ ಈ ಉದಾಸೀನದಿಂದ ಹೊರಬರುವುದು? ನಮ್ಮ ಭಾಷೆಯನ್ನು ಪ್ರೀತಿಸುವ ಅಗತ್ಯದ ಅರಿವು ಮೂಡಿಸುವುದು ಹೇಗೆ? ಬೆಂಗಳೂರಿನ ಕೆಲ ಬಡಾವಣೆಗಳಿಗೆ, ರಸ್ತೆಗಳಿಗೆ ಹೋದರೆ ಕರ್ನಾಟಕ ಎಂದು ದೇವರಾಣೆಗೂ ಅನಿಸುವುದಿಲ್ಲ. ಬರೀ ತಮಿಳು, ತೆಲುಗು, ಹಿಂದಿ, ಉರ್ದುಗಳ ದರ್ಬಾರು! ಮಾಲ್‍ಗಳಲ್ಲಿ ಹೋಗಿ ನಿಂತರೆ ಯಾರ ಬಾಯಿಂದಲೂ ಅಪ್ಪಿತಪ್ಪಿಯೂ ಕನ್ನಡದ ನಾಲ್ಕು ಅಕ್ಷರಗಳು ಉದುರುವುದಿಲ್ಲ. ಶಾಲೆ, ಕಾಲೇಜುಗಳಂತೂ ಇಂಗ್ಲೀಷ್‍ಮಯ! ಬೆಂಗಳೂರು ಅಕ್ಷರಶಃ ಕಲಸುಮೇಲೋಗರವಾಗಿದೆ. ಕನ್ನಡಿಗರೆಲ್ಲ ಕಳೆದುಹೋಗುತ್ತಿದ್ದಾರೆ. ಏಕೆ ಹೀಗೆ ಎಂದು ಯಾರನ್ನಾದರೂ ಕೇಳಿ ನೋಡಿ, ಅವರದ್ದು ಒಂದೇ ಉತ್ತರ. 'ಈ ಹಾಳಾದ್ದು ಐಟಿ, ಬಿಟಿ ಬಂದಾಗಿನಿಂದ ಬೆಂಗಳೂರು ಎಕ್ಕುಟ್ಟಿ ಹೋಗಿದೆ. ಮೊದಲು ಚೆನ್ನಾಗಿತ್ತು' ಎಂಬುದು. ಬೆಂಗಳೂರು ಹಾಳಾಗಿದೆಯೆಂದರೆ ಕಾರಣ ಈ ಉದ್ಯಮಗಳು ಮಾತ್ರವೇ? ಇರಲಾರದು.

1985ರಲ್ಲಿ ಅಮೆರಿಕದ 'ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್' ತನ್ನ ಶಾಖೆ ತೆರೆಯಲು ಬೆಂಗಳೂರನ್ನು ಮೊತ್ತಮೊದಲಿಗೆ ಆರಿಸಿಕೊಂಡಿತು ನೋಡಿ, ಆಗಿನಿಂದಲೇ ಬೆಂಗಳೂರು ಇಂಥ ಒಂದು ಬದಲಾವಣೆಗೆ ತಯಾರಾಗಬೇಕಿತ್ತು. ಹಾಗಾಗಲಿಲ್ಲ. ನಂತರ ಒಂದಾದಮೇಲೊಂದರಂತೆ ಐಟಿ ಕಂಪೆನಿಗಳು ಹುಟ್ಟಿಕೊಂಡವು. ಊಹೂಂ, ನಮ್ಮ ವ್ಯವಸ್ಥೆ, ಮಾನಸಿಕತೆ ಒಂದಿಂಚೂ ಅಲುಗಾಡಲಿಲ್ಲ. ವಿಪ್ರೋ, ಇನ್ಫೋಸಿಸ್‍ನಂಥ ದಿಗ್ಗಜರಿಗೆ ಮಣೆ ಹಾಕುವ ಹೆಮ್ಮೆಯೂ ಬೆಂಗಳೂರಿನದಾಯಿತು. ಸಾವಿರಾರು ಕೆಲಸಗಳು ಹುಟ್ಟಿಕೊಂಡಂತೆಯೇ ವಲಸಿಗರೂ ಬರತೊಡಗಿದರು. ಮೊದಲು ನೆರೆಯ ತಮಿಳುನಾಡು ಹಾಗೂ ಆಂಧ್ರವರೇ ಹೆಚ್ಚಿದ್ದರೂ ಈಗ ಬಹುತೇಕ ಎಲ್ಲ ರಾಜ್ಯಗಳವರೂ ಇದ್ದಾರೆ. ಆಗೆಲ್ಲ ಬರೀ ಕೆಲಸಕ್ಕೆಂದು ವಲಸೆ ಬರುತ್ತಿದ್ದರಲ್ಲವೇ? ಈಗ ತಾಂತ್ರಿಕ ಶಿಕ್ಷಣ ಪಡೆಯುವ ಹಂತದಲ್ಲೇ ಲಗ್ಗೆ ಹಾಕುತ್ತಿದ್ದಾರೆ. ಕಾಮೆಡ್-ಕೆ ಎಂಬ ಅಗ್ನಿಪರೀಕ್ಷೆಯನ್ನು ದಾಟಿ, ಇಲ್ಲಿಯ ಕಾಲೇಜೊಂದರಲ್ಲಿ ಸೀಟು ಗಿಟ್ಟಿಸಿಕೊಂಡು ಬಿಟ್ಟರೆ ಮುಗಿಯಿತು, ಬೆಂಗಳೂರು ಕೈಗೆ ಹತ್ತಿದಂತೆಯೇ. ಮುಂದೆ ಕೆಲಸವೂ ಇಲ್ಲೇ ಆಗಿ ಅಪಾರ್ಟ್‍ಮೆಂಟ್‍ವೊಂದನ್ನು ಕೊಂಡರೆ ಬದುಕು ಸಾರ್ಥಕವಾದಂತೆ! ಬೆಂಗಳೂರೇ ಏಕೆ? ಏಕೆಂದರೆ ಇದು ಭಾರತದ ಸಿಲಿಕಾನ್ ವ್ಯಾಲಿ. ಹೇರಳ ಅವಕಾಶಗಳ ಆಗರ. ಎರಡು ಸಾವಿರಕ್ಕೂ ಹೆಚ್ಚಿನ ಐಟಿ, ಬಿಟಿ ಕಂಪೆನಿಗಳ ತವರೂರು. ನೆರೆಯಲ್ಲಿ ಚೆನ್ನೈ ಹಾಗೂ ಹೈದರಾಬಾದ್‍ಗಳಿದ್ದರೂ ವಲಸಿಗರ ಪ್ರಾಶಸ್ತ್ಯ ಇದಕ್ಕೇ ಏಕೆ? ಕಾರಣ, ವೈಪರೀತ್ಯವಿಲ್ಲದ ಇಲ್ಲಿಯ ಹವಾಗುಣ ಹಾಗೂ ಎಲ್ಲರನ್ನೂ ಸಹಿಸಲು ತಯಾರಿರುವ ಸ್ನೇಹಪರ ಜನ!

ಇಂದು ಲಕ್ಷಗಟ್ಟಳೆ ಸಂಖ್ಯೆಯಲ್ಲಿ ವಾಸವಿರುವ ವಲಸಿಗರನ್ನು, ಕನ್ನಡಾಂಬೆ ಸೊಲ್ಲೆತ್ತದೆ ಸಹಿಸುತ್ತಿದ್ದಾಳೆ. ನಮ್ಮದಲ್ಲದ ಅಪಾರ್ಟ್‍ಮೆಂಟ್ ಸಂಸೃತಿಗೆ ನಾವು ವಿಧಿಯಿಲ್ಲದೇ ಮೊರೆಹೋಗುತ್ತಿರುವುದನ್ನು ನೋಡುತ್ತಿದ್ದಾಳೆ. ನಾವು ಕನ್ನಡದ ಬೆಲೆಯನ್ನು ಕಳೆಯುತ್ತಿರುವುದಕ್ಕೆ ಸಾಕ್ಷಿಯಾಗುತ್ತಿದ್ದಾಳೆ. ಅವಳೇನು ಮಾಡಿಯಾಳು, ನಾವು ಅಭಿಮಾನಹೀನರಾಗಿರುವಾಗ? ಕನ್ನಡ ಡಿಂಡಿಮವನ್ನು ಬಾರಿಸುವ ಬದಲು ಕನ್ನಡವನ್ನೇ ಬಾರಿಸುತ್ತಿದ್ದೇವೆ ಮುಲಾಜಿಲ್ಲದೆ! ವ್ಯವಹಾರಕ್ಕೆ ಬೇಕಾದ ಇಂಗ್ಲಿಷನ್ನು ಎಲ್ಲಿಡಬೇಕೋ ಅಲ್ಲಿಡದೆ ಬದುಕಿನ ತುಂಬಾ ಹರವಿಕೊಂಡಿದ್ದೇವೆ. ಮಕ್ಕಳ ಮೇಲೂ ಹೇರುತ್ತಿದ್ದೇವೆ. ಅವರಿಗೆ ಕನ್ನಡ ಸ್ಪಷ್ಟವಾಗಿ ಬರದಿದ್ದರೂ ಪರವಾಗಿಲ್ಲ, ನಿರರ್ಗಳವಾದ ಇಂಗ್ಲೀಷ್ ಕಡ್ದಾಯವಾಗಿ ಬರಲೇಬೇಕು! ನಾವು ಕರ್ನಾಟಕಲ್ಲಿರುವ ಅನ್ಯಭಾಷಿಗರೊಂದಿಗೆ ಅವರ ಭಾಷೆಯಲ್ಲೇ ಮಾತನಾಡಬೇಕು. ನೀವೇ ನೋಡಿ, ಕಛೇರಿಗಳಲ್ಲಿ ನಾಲ್ಕು ಜನ ತಮಿಳರು ಒಂದೆಡೆ ಸೇರಿದಾಗ, ಅವರ ಬಾಯಲ್ಲಿ ತಮಿಳು ಬಿಟ್ಟು ಬೇರೆ ಭಾಷೆ ಬಂದರೆ ತಮಿಳಮ್ಮನ ಮೇಲಾಣೆ! ನಮ್ಮದು ಮಾತ್ರ ಹಾಗಲ್ಲ. ನಾಲ್ಕು ಜನ ಕನ್ನಡಿಗರು ಸೇರಿದರೂ ಸಂಭಾಷಿಸಲು ಇಂಗ್ಲೀಷೇ ಬೇಕು. ಕನ್ನಡ ಮಾತನಾಡಲು ಅದೇನೋ ಕೀಳರಿಮೆ. ಒಣ ಜಂಭ. ನಾವೇ ಮಾತನಾಡದಿದ್ದ ಮೇಲೆ ಹೊರಗಿನವರಿಗೆ ಕಲಿಸುವುದು ಹೇಗೆ? ಕನ್ನಡ ಬರುತ್ತದಾ ಎಂದು ಕೇಳಿದರೆ 'ಕನ್ನಡ್ ಗೋತಿಲ್ಲಾ' ಎನ್ನುತ್ತಾರೆ. ಕಲಿಸಲು ಮುಂದಾಗುತ್ತೇವೆನ್ನಿ, ಅವರೇನನ್ನುತ್ತಾರೆ ಗೊತ್ತೇ? 'ಭಾರತೀಯರಿಗೆ ಯಾವ ರಾಜ್ಯದಲ್ಲಿ ಹೇಗೆ ಬೇಕಾದರೂ ಬದುಕುವ ಮೂಲಭೂತ ಹಕ್ಕಿದೆ, ನೀವು ಬಲವಂತಪಡಿಸುವ ಹಾಗಿಲ್ಲ. ನಾವು ಕನ್ನಡ ಕಲಿಯಬೇಕಾಗಿಯೇ ಇಲ್ಲ' ಎನ್ನುತ್ತಾರೆ! ಇದೇ ಜನ ಪಕ್ಕದ ತಮಿಳುನಾಡಿಗೆ ಹೋಗುತ್ತಾರಲ್ಲ, ಆಗ ಮೈಮನಸ್ಸಿನ ಎಲ್ಲ ಮೂಲೆಗಳ ಭೂತವನ್ನೂ ಬಿಡಿಸುತ್ತಾರೆ ಅಮ್ಮನ ಅಭಿಮಾನಿಗಳು! ಉತ್ತರಭಾರತದ ಹೋಟೆಲುಗಳು ಸಿಗದೆ ಸರವಣ ಭವನದ ಅನ್ನವನ್ನು ಬಲವಂತವಾಗಿ ಗಂಟಲಲ್ಲಿ ತುರುಕಿಕೊಳ್ಳುಬೇಕಾಗಿ ಬರುತ್ತದಲ್ಲ, ಆಗ ಅರಿವಾಗುತ್ತದೆ ಬೆಂಗಳೂರಿಗರ ಹೃದಯ ವೈಶಾಲ್ಯ!

ಉತ್ರ್ಪೇಕ್ಷೆಯಲ್ಲ, ಅಲ್ಲಿಯ ಜನರ ಒರಟುತನಕ್ಕೆ ಬಲಿಯಾಗಿ ಕಣ್ಣಲ್ಲಿ ನೀರುಹಾಕಿಕೊಂಡಿರುವ ಹಲವರ ಉದಾಹರಣೆಗಳನ್ನು ನಾವು ನೋಡಿದ್ದೇವೆ. ನಮಗೆ ಆ ಮಟ್ಟದ ದುರಭಿಮಾನ ಖಂಡಿತ ಸಲ್ಲ, ಆದರೆ ನಮ್ಮ ಭಾಷೆಯ ಬಗ್ಗೆ ಸ್ವೀಕೃತಿಯ ಮನೋಭಾವವನ್ನು ಬೆಳೆಸಬೇಡವೇ? ದೇಶದೆಲ್ಲೆಡೆಯಿರುವ ಮುಸ್ಲಿಮರು ಆಯಾ ರಾಜ್ಯಗಳ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಎಷ್ಟರಮಟ್ಟಿಗೆಂದರೆ, ಅವರ ಮಾತಿನ ಶೈಲಿಯಿಂದ ಧರ್ಮದ ಗುರುತು ಹಿಡಿಯಲು ಆಗುವುದೇ ಇಲ್ಲ. ಕರ್ನಾಟಕದ ಮುಸ್ಲಿಮರಿಗೆ ಮಾತ್ರ ಕನ್ನಡದ ಮೇಲೆ ಮುನಿಸು. ಉರ್ದುವೇ ಅವರಿಗೆ ಸೊಗಸು! ಮತ್ತೊಂದು ದೊಡ್ಡ ಕೊರತೆ ಒಗ್ಗಟ್ಟಿನದು. ಒಂದು ಕಛೇರಿಯಲ್ಲಿ ಓರ್ವ ಮಲೆಯಾಳಿ ಆಯ್ಕೆಯಾದ ಎಂದಿಟ್ಟುಕೊಳ್ಳಿ, ತನ್ನವರನ್ನೆಲ್ಲ ಅಲ್ಲಿಗೆ ಶತಾಯ-ಗತಾಯ ತಂದು ಸೇರಿಸುತ್ತಾನೆ. ಆಯಕಟ್ಟಿನ ಜಾಗ ಹಿಡಿದರಂತೂ ಮುಗಿಯಿತು. ತನ್ನ ಕೈಕೆಳಗೆ ತನ್ನವರನ್ನೇ ಪೇರಿಸುತ್ತಾನೆ. ನಾವು ಅದರಲ್ಲಿಯೂ ಎಡವುತ್ತೇವೆ. ಬಯಲುಸೀಮೆ, ಕರಾವಳಿ ಎಂದು ಮುಖ ನೋಡಿ ಮಣೆ ಹಾಕುವ ನಮ್ಮ ತಾರತಮ್ಯ ಮುಗಿಯುವುದೇ ಇಲ್ಲ. ನಾವು ಮನಸ್ಸು ಮಾಡುವ ಹೊತ್ತಿಗೆ ಮತ್ತ್ಯಾರೋ ತನ್ನ ಭಾಷೆಯವನಿಗೆ ಕೆಲಸ ಕೊಡಿಸಿರುತ್ತಾನೆ! ಇನ್ನೊಂದು ವಿಷಯವೆಂದರೆ ಈ ಅನ್ಯಭಾಷಿಗರು ತಮ್ಮ ಗುಂಪಿನಲ್ಲಿ ಯಾರನ್ನೂ ಬಿಟ್ಟುಕೊಡುವುದಿಲ್ಲ. ಒಬ್ಬನಲ್ಲಿ ಏನಾದರೂ ನ್ಯೂನತೆಯಿತ್ತೆಂದಿಟ್ಟುಕೊಳ್ಳಿ, ಉಳಿದವರು ಹೆಗಲಿಗೆ ನಿಲ್ಲುತ್ತಾರೆ. ಆತ್ಮವಿಶ್ವಾಸದ ಪ್ರತಿರೂಪವಾದ ಉತ್ತರಭಾರತದವರಂತೂ ಒಂದು ಕೈ ಹೆಚ್ಚೇ. 'ಗಣಪತಿಯನ್ನು ಮಾಡುತ್ತೀಯಾ' ಎಂದು ಕೇಳಿದರೆ, 'ಓಹೋ ಧಾರಾಳವಾಗಿ. ಜೊತೆಗೆ ಅವರಪ್ಪನನ್ನೂ ಮಾಡುತ್ತೇನೆ ಎಂಬಂಥ ನಿಲುವು'! ಇಂಥವರೊಡನೆ ಸೆಣೆಸಾಡುವಾಗ ಎಷ್ಟೋ ಸಲ ನಮ್ಮವರ ಮನೋಬಲ ಕುಗ್ಗುವುದೂ ಇದೆ.

ಹಾಗೆಂದು ಐಟಿ ಉದ್ಯಮ ಬರೀ ವಲಸಿಗರದೇ ಸೊತ್ತಾಗಿಲ್ಲ. ನಮ್ಮ ಮಧ್ಯಮ ವರ್ಗದ ಕನ್ನಡಿಗರು ಇಂದು ನೆಮ್ಮದಿಯ ಬದುಕು ಕಟ್ಟಿಕೊಂಡಿರುವುದರಲ್ಲಿ ಇದರ ಪಾಲೇ ಹೆಚ್ಚಿನದು. ಮೀಸಲಾತಿಯ ಕಾಟವಿಲ್ಲದೆ ಬುದ್ಧಿವಂತಿಕೆಯೇ ಆಧಾರವಾಗಿರುವ ಇದರಿಂದ ಎಷ್ಟು ಹುಡುಗರು ತಮ್ಮ ಅಪ್ಪಂದಿರ ಅಡುಗೆ ಕೆಲಸ, ಲೆಕ್ಕ ಬರೆವ ಕೆಲಸಗಳನ್ನು ಬಿಡಿಸಿಲ್ಲ? ಎಷ್ಟು ಅಮ್ಮಂದಿರು ಹೊಲಿಗೆ ಯಂತ್ರಗಳನ್ನು ಪಕ್ಕಕ್ಕಿಟ್ಟು ಸಂತಸಪಟ್ಟಿಲ್ಲ? ದೇಶ ವಿದೇಶಗಳನ್ನು ಸುತ್ತಿ ಬರುವ, ಅಲ್ಲೇ ನೆಲೆಸುವ ಎಷ್ಟು ಕನಸುಗಳು ಸಾಕಾರಗೊಂಡಿಲ್ಲ? ಈ ಉದ್ಯಮದಿಂದ ಪರೋಕ್ಷವಾಗಿ ಎಷ್ಟು ಕೆಲಸಗಳು ಹುಟ್ಟಿಕೊಂಡಿಲ್ಲ? ನಮ್ಮ ಬೆಂಗಳೂರು, ಐಟಿ ಉದ್ಯಮದಲ್ಲಿ ವಿಶ್ವದ ಕಣ್ಮಣಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಅದರಿಂದಾಗುವ ಆನುಕೂಲಗಳು ಮಾತ್ರ ಬೇಕು, ಅನಾನುಕೂಲಗಳನ್ನು ಸಂಭಾಳಿಸಲಾರೆವೆಂಬುದು ಹೇಡಿತನವಲ್ಲವೆ? ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ನಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಕಾಳಜಿ ನಮ್ಮೆಲ್ಲರಿಗಿರಬೇಕು. ಲಿಪಿಗಳ ರಾಣಿ ಎಂದು ಆಚಾರ್ಯ ವಿನೋಭಾ ಭಾವೆಯವರಿಂದ ಕರೆಸಿಕೊಂಡಿದ್ದಾಳೆ ನಮ್ಮ ಕನ್ನಡಾಂಬೆ. ದೇವನಾಗರಿ ಲಿಪಿಯಲ್ಲಿ ಬರೆವ ಹಿಂದಿ, ರೋಮನ್ ಲಿಪಿಯಲ್ಲಿ ಬರೆವ ಇಂಗ್ಲೀಷುಗಳು ತನ್ನದೇ ಲಿಪಿ ಹೊಂದಿರುವ ಕನ್ನಡಕ್ಕೆ ಯಾವ ಹೋಲಿಕೆ? ಈಗ್ಗೆ ನೂರು ವರ್ಷಗಳ ಹಿಂದೆಯೇ ಕನ್ನಡದ ಶಬ್ದಕೋಶವನ್ನು ರಚಿಸಿದ್ದ ಜರ್ಮನಿಯ ಫರ್ಡಿನೆಂಡ್ ಕಿಟಲ್. ಆ ಪರದೇಸಿಗಿದ್ದ ಕನ್ನಡ ಪ್ರೇಮಕ್ಕಿಂತ ನಮ್ಮದು ಕಡೆಯೇ?
ಬಳಕೆಯಲ್ಲಿಡದೆ ಬಿಟ್ಟರೆ ಹಳಸುವುದು ಸಂಬಂಧ ಹಾಗೂ ಭಾಷೆಗಳು ಮಾತ್ರವಂತೆ. ಸಂಬಂಧಗಳಿಗೇನೋ ರಕ್ತದ ಹಂಗಿದೆ. ಹೇಗಾದರೂ ಬೆಸೆದುಕೊಳ್ಳುತ್ತವೆ. ಭಾಷೆ ಉಳಿಯುವ ಬಗೆ?

3 comments:

 1. ಬಳಕೆಯಲ್ಲಿಡದೆ ಬಿಟ್ಟರೆ ಹಳಸುವುದು ಸಂಬಂಧ ಹಾಗೂ ಭಾಷೆಗಳು ಮಾತ್ರವಂತೆ. ಎಂಥಾ ಮಾತು! ಬಹು ಸತ್ಯ! ಧನ್ಯವಾದ ಸಹನಾ ಅವರೇ! ಭಾಷಾಭಿಮಾನವ ಬಡಿದೆಬ್ಬಿಸಿದ್ದಕ್ಕೆ! ಶ್ರೀವತ್ಸ ಜೋಶಿಯವರಿಂದ ಪರಿಚಿತವಾದ ನಿಮ್ಮ ಬ್ಲಾಗ್ ಅನ್ನು ತಪ್ಪದೇ ಓದುತ್ತೀನಿ. ಹೀಗೇ ವಿಚಾರಕ್ಕೆ ಎಡೆ ಮಾಡುವ ಲೇಖನಗಳನ್ನು ಬರೆಯುತ್ತಿರಿ.

  ReplyDelete
 2. ತುಂಬಾ ಒಳ್ಳೆಯ ಲೇಖನ ಸಹನ ರವರೆ , ಎಲ್ಲ ಕನ್ನಡಿಗರು ಅರಿಯ ಬೇಕಾದ ಸತ್ಯ

  ReplyDelete
 3. ನಿಜವಾದು ಮಾತು ಸಹನಾ ಅವರೇ. ಇದು ಎಲ್ಲರಿಗೂ ಗೊತ್ತಾಗಬೇಕಲ್ಲ. ಈ ಪರಭಾಷಿಗರ ಹಾವಳಿ ಬರೀ ಐ ಟಿ ಉದ್ಯಮಕಷ್ಟೇ ಸೀಮಿತವಾಗಿಲ್ಲ, ಎಲ್ಲಾ ಕಡೆನೂ ಇದೆ. ಸಂಶೋಧನಾವಲಯದಲ್ಲಂತೂ ಕನ್ನಡಿಗರನ್ನು ಭೂತಕನ್ನಡಿಯಲ್ಲಿ ಹುಡುಕಬೇಕು. ಉದಾಹರಣೆಗೆ ಬೆಂಗಳೂರಿನಲ್ಲಿರೋ ಪ್ರತಿಷ್ಟಿತ ವಿಜ್ಞಾನ ಸಂಶೋಧನಾ ಕೇಂದ್ರಗಳಲ್ಲಿ ಕನ್ನಡಿಗರ ಸಂಖ್ಯೆ ವಿರಳ. ಬರೀ ಐ ಟಿ ಎಂದು ಜಪ ಮಾಡಿದ್ದರ ಫಲ ಇದು. ಹಿಂದೊಮ್ಮೆ ನನ್ನ ಹಳೇ ವಿದ್ಯಾಲಯದಲ್ಲಿ ಸಂಶೋಧನೆ ನಡೆಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಕನ್ನಡಿಗರೂ ಬಹು ಸಂಖ್ಯೆಯಲ್ಲಿ ಇದ್ದರು. ಒಬ್ಬ ಕೇರಳಿಗ ಅದು ಹ್ಯಾಗೋ ನಮ್ಮ ಗುರುಗಳ ಬಳಿ ಶಿಷ್ಯನಾಗಿ ಸೇರಿದ. ಆದಾದ ಮೂರೇ ವರ್ಷಗಳಲ್ಲಿ ಅವರ ಸಂಖ್ಯೆ ೨೫% ಆಗಿದೆ. ಇನ್ನೊಬ್ಬ ಮಲೆಯಾಳಿ ಪ್ರಾಧ್ಯಾಪಕನಂತೂ ಬರೀ ಅವರನ್ನೇ ತನ್ನ ಶಿಷ್ಯರನ್ನಾಗಿ ತೆಗೆದುಕೊಳ್ಳುತ್ತಿದ್ದಾನೆ. ಕನ್ನಡಿಗರಾದ ನಮ್ಮ ಗುರುಗಳು ಆ ರೀತಿಯ ಯಾವ ತಾರತಮ್ಯ ಮಾಡುತ್ತಿಲ್ಲ. ಅವರ ಶಿಷ್ಯಂದಿರಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯದ ವಿದ್ಯಾರ್ಥಿಗಳಿದ್ದಾರೆ.

  ನನ್ನ ಮಾತು ಅದೆಲ್ಲಿಲಿಗೋ ಹೋಗುತ್ತಿದೆ. ಹೋಗಲಿ ಬಿಡಿ, ಆ ಕನ್ನಡಾಂಭೆ ಎಲ್ಲರಿಗೂ ಒಳ್ಳೆ ಬುದ್ದಿ ಕೊಡಲಿ. ಒಳ್ಳೆಯ ಲೇಖನ.

  ReplyDelete