Saturday 22 November 2014

ಆರೇ ತಿಂಗಳಲ್ಲಿ ಅಮರಾವತಿ ಧರೆಗಿಳಿದೀತೇ?

ಈ ಘಟನೆ ಇತ್ತೀಚಿನದು. ಮೋದಿಯವರು ಆಸ್ಟ್ರೇಲಿಯಾ ದೇಶದ ಸಿಡ್ನಿ ನಗರಿಯಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರಲ್ಲ, ಅವತ್ತು ನಡೆದದ್ದು. ಅದನ್ನು ಹೇಳುವ ಮುನ್ನ ಒಂದಷ್ಟು ಪೀಠಿಕೆಯನ್ನೂ ಸೇರಿಸುವ ಅಗತ್ಯವಿದೆ. ಪ್ರತಿ ರಾತ್ರಿ ಒಂಭತ್ತಕ್ಕೆ ನಮ್ಮ ರಾಷ್ಟ್ರೀಯ ಸುದ್ದಿ ವಾಹಿನಿಗಳೆಲ್ಲಾ ಪೈಪೋಟಿಗೆ ಬಿದ್ದು ಚರ್ಚೆ ನಡೆಸುತ್ತವೆ. ನೀವು ಪ್ರಚಲಿತ ವಿದ್ಯಮಾನಗಳಲ್ಲಿ ಆಸಕ್ತಿಯುಳ್ಳವರಾಗಿದ್ದರೆ, ಇದು ನಿಮಗೆ ಈಗಾಗಲೇ ಗೊತ್ತಿರುತ್ತದೆ. ಪ್ರತಿ ಸುದ್ದಿ ವಾಹಿನಿಯನ್ನೂ ಐದು ನಿಮಿಷಗಳ ಕಾಲ ನೋಡಿದರೂ ಸಾಕು, ಅಂದಿನ ಹಗರಣ, ರಾಜಕಾರಣ, ಸುದ್ದಿಗಳ ಹೂರಣವೆಲ್ಲಾ ಸಿಕ್ಕಿಬಿಡುತ್ತದೆ. ಹಾಗೇ ಪುಕ್ಕಟೆ ಮನರಂಜನೆಯೂ! ಎಲ್ಲ ವಾಹಿನಿಗಳಲ್ಲೂ ಓರ್ವ ಸಂಪಾದಕ, ಅವನ ಸುತ್ತ ಏನಿಲ್ಲವೆಂದರೂ ಐದಾರು ಮಂದಿ ವಿಶ್ಲೇಷಕರು. ಎಲ್ಲರೂ ಸೇರಿ ಒಂದು ವಿಷಯದ ಹಗ್ಗವನ್ನು ಜಗ್ಗಾಡಲು ಶುರು ಮಾಡಿಕೊಂಡರೆ ಮುಗಿಯಿತು, ವಾದ-ವಿವಾದಗಳ ಕಾವು ಏರಿ, ಕೆಲವೊಮ್ಮೆ ಕಿವಿಯ ತಮಟೆ ಹರಿದು ಹೋಗುವಷ್ಟು ಜೋರಾದ ಕಿರುಚಾಟ. ಕೆಲವರದ್ದು ಕೀ ಕೊಟ್ಟ ಬೊಂಬೆಗಳಂತೆ ನಿರಂತರ ವಟವಟ. ಒಟ್ಟಿನಲ್ಲಿ ಟಿವಿ ಪರದೆಯ ಮೇಲೆ ನಿತ್ಯ ದೊಂಬರಾಟ!



ಈಗ ಘಟನೆಗೆ ಬರೋಣ. ಇಂಥದ್ದೇ ಒಂದು ಚರ್ಚೆ ನಡೆದಿತ್ತು ಮೋದಿಯವರು ಸಿಡ್ನಿ ತಲುಪಿದ ದಿನ. ಖ್ಯಾತ ವಾಹಿನಿಯೊಂದರ ಸಂಪಾದಕ ಮಹಾಶಯರು ತಮ್ಮ ವಿಶ್ಲೇಷಕರ ತಂಡದಲ್ಲಿ  ಆಸ್ಟ್ರೇಲಿಯಾದವನೊಬ್ಬನನ್ನು ಹಿಡಿದುಕೊಂಡು ಬಂದು ಕೂರಿಸಿಕೊಂಡಿದ್ದರು. ಅಂದು ಅವರು ಚರ್ಚಿಸುತ್ತಿದ್ದ ವಿಷಯ, 'ಮೋದಿಯವರ ಭೇಟಿಯಿಂದ ಆಸ್ಟ್ರೇಲಿಯಾ, ಭಾರತದಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಲಿದೆಯಾ' ಎಂಬುದು. ಅವರ ಚರ್ಚೆಯ ಧಾಟಿಯನ್ನು ನೀವು ನೋಡಬೇಕಿತ್ತು. 'ಈಗ ಬರೀ ಹದಿನೈದು ಮಿಲಿಯನ್‍ಗಳಷ್ಟಿರುವ ಹೂಡಿಕೆ ಮೋದಿಯವರು ಹೋದ ಮಾತ್ರಕ್ಕೇ ಅದರ ದುಪ್ಪಟ್ಟಾಗಿಬಿಡಲು ಸಾಧ್ಯವೇ?' ಎಂದು ಇವರು ಅಬ್ಬರಿಸಿ ಕೇಳುವುದಕ್ಕೂ, ಆ ಪುಣ್ಯಾತ್ಮ 'ಸಾಧ್ಯವಿಲ್ಲ. ಮೋದಿಯವರ ಭೇಟಿಯಿಂದಾಗಿ ಹೂಡಿಕೆ ಹೆಚ್ಚಾಗುವುದೇ ಇಲ್ಲ’ ಎನ್ನುವುದಕ್ಕೂ ಸರಿಯಾಗಿ ತಾಳೆಯಾಗುತ್ತಿತ್ತು. 'ನೋಡಿ, ಮೋದಿಯವರಿಂದಾಗಿ ಯಾವ ಪವಾಡವೂ ನಡೆಯುತ್ತಿಲ್ಲ' ಎನ್ನುತ್ತಿದ್ದ ಸಂಪಾದಕರ (ಸೆಕ್ಯುಲರ್ ಎಂದು ಬೇರೆ ಹೇಳಬೇಕೇ?) ಮುಖದ ಮೇಲೆ ವಿಜಯದ ನಗು. ಅಲ್ಲ, ಭರ್ತಿ 28 ವರ್ಷಗಳ ನಂತರ ನಮ್ಮ ದೇಶದ ಪ್ರಧಾನಿಯೊಬ್ಬರು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದಾರೆ, ಈ ಭೇಟಿ ಮುಂದಿನ ಹೂಡಿಕೆಗಳಿಗೆ ಮುನ್ನುಡಿಯಾಗಲಿದೆ ಎಂಬ ಸಾಮಾನ್ಯ ಜ್ಞಾನ ನಮಗಿದೆ, ಆ ಸಂಪಾದಕರಿಗೆ ಬೇಡವೇ? ಪರಕೀಯನೊಬ್ಬನನ್ನು ಬಳಸಿಕೊಂಡು ನಮ್ಮ ಪ್ರಧಾನಿಯನ್ನು ಹೀಗಳೆಯುತ್ತಾರಲ್ಲ, ಅವರ ಬಗ್ಗೆ ಮಾತನಾಡಲು ಅವನು ಯಾವ ಊರಿನ ದಾಸಯ್ಯ? ಇಂಥ ಅವಕಾಶಗಳನ್ನು ಸೃಷ್ಟಿಸುವ ಪತ್ರಕರ್ತರ ಮನೋವಿಕೃತಿಗೆ ಏನೆನ್ನಬೇಕು? ಚರ್ಚೆ ಹಾಗಿರಲಿ, ನಮ್ಮವರ ತಿಕ್ಕಲುತನವನ್ನು ಕಂಡು ಆ ವಿದೇಶದವನು ಮನಸ್ಸಿನಲ್ಲೇ ಎಷ್ಟು ಮುಸಿ ಮುಸಿ ನಕ್ಕನೋ ದೇವರೇ ಬಲ್ಲ!

ನಿಜವಾಗಿಯೂ ಹೇಸಿಗೆಯಾಯಿತು. ಆ ಸಂಪಾದಕರು ಯಾರೆಂದುಕೊಂಡಿರಿ? ಅಮೆರಿಕದ ಮ್ಯಾಡಿಸನ್ ಚೌಕದಲ್ಲಿ ಮೋದಿಯವರ ಅಭಿಮಾನಿಯೊಬ್ಬರನ್ನು ಕೆಣಕಿ ಅವರಿಂದ ಒದೆ ತಿಂದು ಬಂದವರು! ಇವರೊಬ್ಬರೇ ಅಲ್ಲ, ಒಂದು ವ್ಯವಸ್ಥಿತ ಜಾಲವೇ ಮೋದಿಯವರ ತಪ್ಪುಗಳ ಷರಾ ಬರೆಯಲು ತುದಿಗಾಲಲ್ಲಿ ನಿಂತಿದೆ. ಆರು ದಶಕಗಳಿಂದ ಇಲ್ಲದಿದ್ದ ಆತುರ ಈಗೇಕೆ? ಆರಿಸಿ ಕಳುಹಿಸಿದ ಜನರು ವಹಿಸಿದರೇ ಇವರಿಗೆ ಮಾಸ್ತರಿಕೆಯ ಉಸಾಬರಿಯನ್ನು? ನೀವೇ ಹೇಳಿ, ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ವ್ಯಕ್ತಿಯೋರ್ವ ಏನೇನು ತಾನೆ ಮಾಡಬಲ್ಲ? ಹೀಗೆ ಪ್ರತಿ ಕೆಲಸದಲ್ಲೂ ತಪ್ಪು ಹುಡುಕುವ ಧೋರಣೆ ಸರಿಯೇ? ಅಧಿಕಾರಕ್ಕೇರಿದ ತಕ್ಷಣ ನಮ್ಮ ಪ್ರಧಾನಿ ನೆರೆ ರಾಷ್ಟ್ರಗಳ ಭೇಟಿಗೆ ಹೊರಟಾಗಲೇ ಗೊಣಗಾಟ ಶುರುವಾಗಿತ್ತು. ದೇಶದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸದೆ ತಕ್ಷಣ ಹೊರಟಿದ್ದು ತಪ್ಪು ಎಂದು. ಆದರೆ ನೆರೆಯವರ ಹೃದಯ ಬೆಚ್ಚಗಾಗುವುದು, ಅವರೊಂದಿಗೆ ಕೈ ಕುಲುಕಿದಾಗ ಮಾತ್ರವೇ ಎಂಬುದು ಕಾಲೆಳೆಯುವ ಮಂದಿಗೆ ಹೇಗೆ ತಾನೆ ಅರ್ಥವಾದೀತು? ಆ ದೇಶಗಳಿಂದ ದೊರೆತ ಅಪೂರ್ವ ಪ್ರತಿಕ್ರಿಯೆಯನ್ನು ನೋಡಿದ ಮೇಲೆ ಸುಮ್ಮನಾದರು!

ನಂತರ ಶುರುವಾಗಿದ್ದು 'ಮೋದಿಯವರು ನಮ್ಮನ್ನು ಹತ್ತಿರಕ್ಕೇ ಬಿಟ್ಟುಕೊಳ್ಳುವುದಿಲ್ಲ' ಎಂಬ, ಮಾಧ್ಯಮದವರ ಬೊಬ್ಬೆ. ಸರಿ, ದೀಪಾವಳಿಯ ಸಂದರ್ಭದಲ್ಲಿ ಇವರಿಗಾಗಿಯೇ ಮೋದಿಯವರು ಒಂದು ಕೂಟವನ್ನು ಏರ್ಪಡಿಸಿದ್ದರು. ‘ಮೋದಿ’ ಎಂಬ ಪದ ಕಿವಿಗೆ ಬಿದ್ದರೆ ಸಾಕು, ಮೈಮೇಲೆ ಉಗ್ರನರಸಿಂಹನನ್ನು ಆವಾಹಿಸಿಕೊಳ್ಳುತ್ತಿದ್ದ ಪ್ರತಾಪಿಗಳು ಅಂದು ಅವರ ಸೌಜನ್ಯ, ಪ್ರೀತಿಯ ಶಾಖಕ್ಕೆ ಬೆಣ್ಣೆಯಂತೆ ಕರಗಿದರು! ಪ್ರತಿಯೊಬ್ಬರನ್ನೂ ನಗುನಗುತ್ತಾ ಆತ್ಮೀಯತೆಯಿಂದ ಮಾತನಾಡಿಸಿದ ಅವರ ಜೊತೆ 'ಸೆಲ್ಫೀ'ಗಳನ್ನು ತೆಗೆಸಿಕೊಳ್ಳಲು ಹಾತೊರೆದದ್ದನ್ನು ನೋಡಿದಾಗ, ಇವರೇನಾ ಆ ಪತ್ರಕರ್ತರು ಎಂದು ನಿಜವಾಗಿಯೂ ಅನುಮಾನವುಂಟಾಯಿತು! 'ನನ್ನ ಮಗನಿಗೆ ತೋರಿಸಬೇಕು' ಎಂದೋ ಅಥವಾ 'ನನ್ನ ಗಂಡನಿಗೆ ಹೇಳಿ ಬಂದಿದ್ದೇನೆ, ಮೋದಿಯವರ ಜೊತೆ ಫೋಟೋ ತೆಗೆಸಿಕೊಂಡು ತೋರಿಸುತ್ತೇನೆ ಅಂತ' ಎಂದೋ ಇವರೆಲ್ಲಾ ಚಿಕ್ಕ ಮಕ್ಕಳಂತೆ ಸಂಭ್ರಮಿಸಿದ್ದನ್ನು ನೋಡಿ ನಾವು ಅವಾಕ್ಕಾದೆವು!



ಮುಂದಿನ ತಪ್ಪು ಸ್ವಚ್ಛ ಭಾರತ ಅಭಿಯಾನಕ್ಕೆ ಗಾಂಧೀಜಿಯನ್ನು ಬಳಸಿಕೊಂಡಿದ್ದು! ಕಾಂಗ್ರೆಸ್ ಸರ್ಕಾರದ ಸ್ವಘೋಷಿತ ಆಸ್ತಿಯಾದ ಅವರನ್ನು ಹಾಗೆಲ್ಲ ಬೇರೆಯವರ ಪಾಲು ಮಾಡಲಾದೀತೇ? ಉಳಿದವರು ಹಾಗಿರಲಿ, ಇಂದಿರೆಯ ಕುಟುಂಬಕ್ಕೆ ಪರಮಾಪ್ತರಾಗಿದ್ದ ಅಮಿತಾಭ್‍ ಬಚ್ಚನ್‍ರಂಥ ಘಟಾನುಘಟಿಯೇ ಪೊರಕೆ ಹಿಡಿದು ಬೀದಿಗಿಳಿದರೆ ಕಾಂಗ್ರೆಸ್‍ಗೆ ತುರಿಕೆಯಾಗದೆ ಇದ್ದೀತೆ? ಸ್ವಚ್ಛತಾ ಅಭಿಯಾನದಲ್ಲಿ ರಾಜಕೀಯ ಸಲ್ಲ ಎಂದು ಹೇಳಿದವರೆಲ್ಲರನ್ನೂ ಕೆಕ್ಕರಿಸಿ ನೋಡಿತು ಅದು. ಸ್ವಚ್ಛತೆಯ ಅಮಲೇರಿಸಿಕೊಂಡು ಕೇರಳದ ಬೀದಿಗಳನ್ನು ಸುತ್ತಿದ ಶಶಿ ತರೂರ್‍ರನ್ನು ಪಕ್ಷದ ವಕ್ತಾರರ ಸ್ಥಾನದಿಂದ ಕೆಳಗಿಳಿಸಲು ಇದೂ ಒಂದು ಕಾರಣವೇ!

ಅಕ್ಟೋಬರ್ 31ರಂದು ಮತ್ತೊಂದು ರಂಪ! ಆ ದಿನ ಇಂದಿರೆಯ ಹತ್ಯೆಯಾದದ್ದು ಎಂಬುದು ಮಾತ್ರ ನಮ್ಮ ಜನಕ್ಕೆ ಗೊತ್ತಿತ್ತು. ಅಂದೇ ಸರ್ದಾರ್ ಪಟೇಲ್‍ರ ಜನ್ಮ ದಿನ ಎಂಬುದು ಬಹುತೇಕರಿಗೆ ಗೊತ್ತಿರಲೇ ಇಲ್ಲ! ಆ ದಿನವನ್ನು ಪಟೇಲರ ಸ್ಮರಣೆಗೆ ಮೀಸಲಾಗಿಟ್ಟಿತು ಮೋದಿ ಸರ್ಕಾರ! ಛೆ, ಎಲ್ಲಾದರೂ ಉಂಟೇ? ದೇಶಕ್ಕಾಗಿ ಹುತಾತ್ಮರಾದವರನ್ನು (ಕಾಂಗ್ರೆಸ್‍ನ ಪ್ರಕಾರ!) ನೆನೆಯದೇ ಇರುವುದು ಅಕ್ಷಮ್ಯ ಅಪರಾಧವಲ್ಲವೇ? ತಮಾಷೆ ನೋಡಿ, ಇಂದಿರೆಯ ವಿಷಯದಲ್ಲಿ ಮಾಡಿದಂತೆ ಇನ್ನೆಲ್ಲಿ ನೆಹರೂ ಜನ್ಮದಿನವನ್ನೂ ಕಡೆಗಣಿಸುತ್ತಾರೋ ಎಂಬ ದಿಗಿಲಿನಲ್ಲಿ ತಾನೇ ತುರಾತುರಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿತು ಕಾಂಗ್ರೆಸ್. ಆದರೆ ಕುಳಿತಲ್ಲಿಯೇ ತಣ್ಣಗೆ ನೆಹರೂರನ್ನು ಸ್ಮರಿಸಿಕೊಂಡು ಅದಕ್ಕೆ ಫಜೀತಿ ತಂದಿಟ್ಟರು ಮೋದಿ! ಹೀಗೆ, ಮಹಾರಾಷ್ಟ್ರ, ಹರಿಯಾಣದ ವಿಧಾನಸಭಾ ಚುನಾವಣೆಗಳಿಂದ ಹಿಡಿದು ಗಡಿಯಲ್ಲಿ ಪಾಕ್ ಸೈನಿಕರ ಜೊತೆಗಿನ ಗುಂಡಿನ ಚಕಮಕಿಯವರೆಗೂ ಎಲ್ಲದರಲ್ಲೂ ಮೋದಿಯವರದ್ದೇ ತಪ್ಪು ಎಂದು ಬಿಂಬಿಸುತ್ತಿದ್ದಾರೆ ಈ ಕಾಮಾಲೆ ಕಣ್ಣಿನವರು!

ಆದರೆ ವಾಸ್ತವ ಬೇರೆಯೇ ಇದೆ. ಅಧಿಕಾರ ಹಿಡಿದ ಲಾಗಾಯ್ತು, ಕಾಲಿಗೆ ಚಕ್ರಗಳನ್ನು ಕಟ್ಟಿಕೊಂಡು ಓಡಾಡುತ್ತಿದ್ದಾರೆ ನಮ್ಮ ಪ್ರಧಾನಿ. ಆರು ದಶಕಗಳ ಕೊಳೆಯನ್ನು ಝಾಡಿಸಲು ಅವಿರತ ಶ್ರಮಿಸುತ್ತಿದ್ದಾರೆ. ದೇಶದ ಒಳಗಿನ ಹಾಗೂ ಹೊರಗಿನ ಆಗುಹೋಗುಗಳಿಗೆ ತಮ್ಮನ್ನು ಸಮನಾಗಿ ಒಡ್ಡಿಕೊಳ್ಳುತ್ತಿದ್ದಾರೆ. ಇತೀಚೆಗೆ ಆಸ್ಟ್ರೇಲಿಯಾ ದೇಶದ ಬ್ರಿಸ್ಬೇನ್ ನಗರದಲ್ಲಿ ಜಿ20 ರಾಷ್ಟ್ರಗಳ ಶೃಂಗ ಸಭೆ ನಡೆಯಿತಲ್ಲ, ಅಲ್ಲಿ ಮೋದಿಯವರನ್ನು ಕಂಡ ಒಬಾಮಾ 'ಯೂ ಆರ್ ಎ ಮ್ಯಾನ್ ಆಫ್ ಆಕ್ಷನ್' ಎಂದರು. ಇಂಥ ಮಾತುಗಳು ಓರ್ವ ಅಧ್ಯಕ್ಷನ ಬಾಯಿಂದ ಸುಮ್ಮನೇ ಬರುವುದಿಲ್ಲ! 'ಆಕ್ಟ್ ಈಸ್ಟ್' ಹಾಗೂ 'ಮೇಕ್ ಇನ್ ಇಂಡಿಯಾ' ಕರೆಗಳು ಜನಪ್ರಿಯವಾಗುತ್ತಿವೆ. ಮೋದಿಯವರ ವರ್ಚಸ್ಸು ಎಲ್ಲರನ್ನೂ ಸೆಳೆಯುತ್ತಿದೆ. ಹಾಗೆ ಹೊರಗಿನವರಿಗೆ ಕರೆ ಕೊಡುತ್ತಿರುವ ಮೋದಿ ದೇಶದ ಒಳಗೆ ಕೈಕಟ್ಟಿ ಕುಳಿತಿಲ್ಲ. ತುಕ್ಕು ಹಿಡಿದಿರುವ ವ್ಯವಸ್ಥೆಯ ರಿಪೇರಿ ಆರಂಭಿಸಿದ್ದಾರೆ. ಆಯಕಟ್ಟಿನ ಜಾಗಗಳಿಗೆ ಕಾರ್ಯದರ್ಶಿಗಳಾಗಿ ಅನಿಲ್ ಸ್ವರೂಪ್ ಹಾಗೂ ಅರವಿಂದ ಸುಬ್ರಮಣಿಯನ್‍ರಂಥ ಬುದ್ಧಿವಂತರನ್ನು ಆರಿಸಿದ್ದಾರೆ. ಶುದ್ಧಹಸ್ತರೂ, ದಕ್ಷರೂ, ಬುದ್ಧಿವಂತರೂ ಆದ ಮನೋಹರ್ ಪಾರಿಕ್ಕರ್‍, ಸುರೇಶ್ ಪ್ರಭು ಇವರುಗಳಿಗೆ ಕೆಲ ಮುಖ್ಯ ಜವಾಬ್ದಾರಿಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದವರನ್ನು ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕೆ ಸರಿಸಿದ್ದಾರೆ. ಪೆಟ್ರೋಲ್, ಡೀಸಲ್‍ಗಳ ದರ ಕಡಿತದಿಂದ ಹಿಡಿದು ಕಪ್ಪು ಹಣವನ್ನು ತರುವುದರವರೆಗೂ ಎಲ್ಲ ನಿರ್ಧಾರಗಳನ್ನೂ ಜನಪರವಾಗಿ ತೆಗೆದುಕೊಳ್ಳುತ್ತಿದ್ದಾರೆ.

ರಾಜಕೀಯವೆಂದಮೇಲೆ ತಂತ್ರಗಾರಿಕೆ ಇಲ್ಲದಿರುತ್ತದೆಯೇ? ಮಹಾರಾಷ್ಟ್ರದಲ್ಲಿ ಬಹುಮತದ ಸಲುವಾಗಿ ರಾಜಿ ಮಾಡಿಕೊಳ್ಳಬಾರದೆಂಬ ನಿಲುವು ತಳೆಯಿತು ಪಕ್ಷ. ನೆರವಿಗೆ ಬಂದಿದ್ದು ಧ್ವನಿಮತವೆಂಬ ತಂತ್ರಗಾರಿಕೆ. ಮುಂಬರಲಿರುವ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯಲ್ಲೂ ಅಷ್ಟೇ. ಕಾಲೂರಲು ಮೊದಲು ನೆಲೆಯೊಂದು ಸಿಗಲಿ ಎಂದು ಹಲವು ದಿಕ್ಕಿನಲ್ಲಿ ಪ್ರಯತ್ನಗಳು ನಡೆದಿವೆ. ಅವಕಾಶಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸೃಷ್ಟಿಸಬಲ್ಲ, ‘ಅಮಿತ್ ಶಾ’ರಂಥ ಚಾಣಕ್ಯರು ಮುಖ್ಯರಾಗುವುದೇ ಇಲ್ಲಿ. ಅತ್ತ ಕಡೆ ತಮಿಳುನಾಡಿನಲ್ಲಿ ರಜನಿ 'ನನಗೆ ರಾಜಕೀಯವೆಂದರೆ ಭಯವೇನೂ ಇಲ್ಲ' ಎಂದು ತಮ್ಮದೇ ರೀತಿಯಲ್ಲಿ ಸಂದೇಶವನ್ನು ರವಾನಿಸುತ್ತಿದ್ದಾರೆ. ಆದರೆ ಒಂದಂತೂ ಸ್ಪಷ್ಟ. ಈ ಎಲ್ಲ ತಂತ್ರಗಾರಿಕೆಗಳೂ ನಡೆದಿರುವುದು ದೇಶದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು!

ರಾಹುಲ್‍ರ ನಿಷ್ಕ್ರಿಯತೆಯಿಂದ ರೋಸಿಹೋಗಿರುವ ಕಾಂಗ್ರೆಸ್‍ ನಾಯಕರು ಪ್ರಿಯಾಂಕ ಬೇಕೆಂದು ರಚ್ಚೆ ಹಿಡಿದಿದ್ದಾರೆ. ಆದರೆ ವಾದ್ರಾನನ್ನು ಸುತ್ತುವರಿದಿರುವ ಅಕ್ರಮ ಅಸ್ತಿಯ ವಿಷವರ್ತುಲ ಪ್ರಿಯಾಂಕಳನ್ನು ಆಪೋಶನ ತೆಗೆದುಕೊಳ್ಳದೆ ಬಿಟ್ಟೀತೇ? ಒಟ್ಟಿನಲ್ಲಿ, ದಿನೇ ದಿನೇ ಹೆಚ್ಚುತ್ತಿರುವ ಮೋದಿಯವರ ಜನಪ್ರಿಯತೆ ಬಹಳಷ್ಟು ಮಂದಿಯ ನಿದ್ದೆಗೆಡಿಸಿದೆ! ಉದಾಹರಣೆಗೆ, ಮೊನ್ನೆ ಸಿಡ್ನಿಯ ಆಲ್‍ಫೋನ್ಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದಿದ್ದ ಜನಸ್ತೋಮವನ್ನು ಕಂಡು ಕಂಗಾಲಾದರು ಕಾಂಗ್ರೆಸ್‍ನ ಸಲ್ಮಾನ್ ಖುರ್ಷಿದ್. ಜನರನ್ನು ದುಡ್ಡು ಕೊಟ್ಟು ಕರೆದೊಯ್ಯಲಾಗುತ್ತಿದೆ ಎಂದು ಹುಯಿಲೆಬ್ಬಿಸಿದರು. ಹಾಗೆ ಜನರನ್ನು ಸೇರಿಸಲು ಇದೇನು ಕಾಂಗ್ರೆಸ್ ನಾಯಕರ, ಬರೆದಿದ್ದನ್ನು ಓದುವ ಭಾಷಣ ಕೆಟ್ಟುಹೋಯಿತೆ? ಮತ್ತೊಂದು ಆಸಕ್ತಿಕರ ಬೆಳವಣಿಗೆಯನ್ನೂ ನಿಮಗೆ ಹೇಳಲೇಬೇಕು. ಅರವಿಂದ್ ಕೇಜ್ರಿವಾಲ್ ನೆನಪಿದ್ದಾರೆ ತಾನೆ? ದೆಹಲಿಯ ಮುಖ್ಯಮಂತ್ರಿಯಾಗಿದ್ದೇ ತಡ, ಇನ್ನೇನು ಪ್ರಧಾನಿಯೂ ಆಗಿಬಿಡುತ್ತೇನೆಂಬ ಹುಮ್ಮಸ್ಸಿಗೆ ಬಿದ್ದು ದೆಹಲಿಯನ್ನು ಒದ್ದು ಓಡಿದ್ದರಲ್ಲ? ಆಮೇಲೆ ‘ಕೈಸುಟ್ಟುಕೊಂಡು ತಪ್ಪು ಮಾಡಿಬಿಟ್ಟೆ’ ಎಂದು ಹಪಹಪಿಸಿದ್ದು ಹಳೇ ಸುದ್ದಿ. ಈಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಎಕೆ-49 (49 ದಿನಗಳ ಆಡಳಿತ ನೀಡಿದ್ದಕ್ಕೆ) ಎಂದೇ ಖ್ಯಾತರು! ಬರಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಅವರು ಸಜ್ಜಾಗುತ್ತಿರುವುದು ಹೇಗೆ ಹೇಳಿ? ಮೋದಿಯವರ ಗುಣಗಾನ ಮಾಡುತ್ತಾ! ಹೀಗಾದರೂ ಜನ ತಮ್ಮನ್ನು ನಂಬುತ್ತಾರೇನೋ ಎಂಬ ಆಸೆ ಅವರಿಗೆ ಪಾಪ!

ಇವ್ಯಾವುಗಳ ಪರಿವೆಯೂ ಇಲ್ಲದೆ, ದೇಶ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾರೆ ನಮ್ಮ ಪ್ರಧಾನಿ. ಅಭಿವೃದ್ಧಿ, ಸುಖ, ಶಾಂತಿಗಳನ್ನೊಳಗೊಂಡ ಸ್ವರ್ಗವನ್ನು ಧರೆಗಿಳಿಸುವುದು ಸುಲಭದ ಮಾತಲ್ಲ. ಆ ಸಾಹಸ ಎಲ್ಲರ ಕೈಗಳಿಗೆ ಎಟಕುವುದೂ ಇಲ್ಲ. ಅದಕ್ಕೆ ಕಠಿಣವಾದ ಇಚ್ಛಾಶಕ್ತಿ ಹಾಗೂ ಸಮಯ ಎರಡೂ ಬೇಕು. ದೇಶಕ್ಕೋಸ್ಕರ ತನ್ನ ಖಾಸಗಿ ಬದುಕನ್ನೇ ಮುದುರಿ ಮೂಲೆಗೆಸೆದ ಮನುಷ್ಯನ ಇಚ್ಛಾಶಕ್ತಿಯ ಬಗ್ಗೆ ಎರಡು ಮಾತಿಲ್ಲ! ಅದರೆ ಹೆಜ್ಜೆ ಹೆಜ್ಜೆಗೂ ಮುಳ್ಳಾಗದೆ ಆತನಿಗೆ ಬೇಕಾದ ಸಮಯ ಕೊಡಲು ನಾವು ಸಿದ್ಧರಿದ್ದೇವಾ?


No comments:

Post a Comment