Wednesday, 31 December 2014

ಆಮಿಷದ ಉದ್ಯಮ ಮತಾಂತರವನ್ನು ಆಯ್ಕೆ ಎಂದು ಬಿಂಬಿಸುವಿರಲ್ಲ

ನಿನ್ನೆ ಪ್ರಕಟವಾದ, ವೇಣುರವರ ಲೇಖನದಲ್ಲಿ ಹಲವಾರು ಪ್ರಶ್ನೆಗಳಿದ್ದವು. ಪ್ರಶ್ನೆ ಕೇಳುವವರು ಪ್ರಶ್ನೆಗಳನ್ನು ಎದುರಿಸಲೂ ಸಿದ್ಧರಿರಬೇಕು ಎನ್ನುತ್ತಾರಲ್ಲ, ಆದ್ದರಿಂದ ಈ ಧಾಟಿಯ ಪ್ರತಿಕ್ರಿಯೆ.‘ವೇಣುರವರೇ, ನೀವು ನಿಜವಾಗಿಯೂ ಮತಾಂತರದ ಆಶಯ, ಸ್ವರೂಪಗಳು ಗೊತ್ತಿಲ್ಲದ ಅಮಾಯಕರೋ ಅಥವಾ ಬೇಕಂತಲೇ ಹಾಗೆ ನಟಿಸುತ್ತಿದ್ದೀರೋ? ನೀವು ಸಮರ್ಥಿಸಿಕೊಳ್ಳುತ್ತಿರುವ ಪರಿ 'ಬೆರಳಿಗೆ ಗಾಯವಾಗಿದೆ, ಆದ್ದರಿಂದ ಕೈಯನ್ನೇ ಕತ್ತರಿಸಿಬಿಡೋಣ' ಎಂಬಂತಿಲ್ಲವೇ?

ಅಂಬೇಡ್ಕರ್‍ರ ಉದಾಹರಣೆಯನ್ನು ಜಾಣತನದಿಂದ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದೀರಲ್ಲ ಏಕೆ? ‘ಏನಾದರಾಗಲಿ, ನಾನು ಸಾಯುವಾಗ ಹಿಂದೂವಾಗಿ ಮಾತ್ರ ಸಾಯುವುದಿಲ್ಲ’ ಎಂದು ಭೀಷ್ಮ ಪ್ರತಿಜ್ಞೆ ಮಾಡಿಬಿಟ್ಟಿದ್ದರು ನಮ್ಮ ಸಂವಿಧಾನ ಶಿಲ್ಪಿ. ಹಾಗೆ ಮಾಡಿದ ಮೇಲೆ ಮತಾಂತರಗೊಳ್ಳಲು ಅವರು ತೆಗೆದುಕೊಂಡ ಸಮಯ ಎಷ್ಟು ಗೊತ್ತೇ? ಬರೋಬ್ಬರಿ ಇಪ್ಪತ್ತು ವರ್ಷಗಳು! ಅದೂ, ಅನಾರೋಗ್ಯ ಉಲ್ಪಣಿಸಿದಾಗ. ಹಾಗಾದಾಗಲೂ ಅವರು ಮೊತ್ತ ಮೊದಲು ಬಾಗಿಲು ಬಡಿದದ್ದು ಬೌದ್ಧ ಧರ್ಮದ್ದಲ್ಲ, ಸಿಖ್ಖರ ಸಮುದಾಯದ್ದು! ಅಲ್ಲಿ ಸರಿಯಾದ ಮನ್ನಣೆ ಸಿಗುವುದಿಲ್ಲ ಎಂದು ಖಾತ್ರಿಯಾದ ಮೇಲಷ್ಟೇ ಬೌದ್ಧ ಧರ್ಮದ ಕಡೆ ಹೊರಳಿ ನೋಡಿದ್ದು ಅವರು. ಅದಕ್ಕೆ ಅವರು ಆಯ್ದುಕೊಂಡದ್ದು 1956ನೇ ಇಸವಿಯ ಅಕ್ಟೋಬರ್ ತಿಂಗಳ 14ನೇ ತಾರೀಖನ್ನು. ಅಂದು ತಾವೊಬ್ಬರೇ ಮತಾಂತರಗೊಳ್ಳಲಿಲ್ಲ, ಸುಮಾರು ಐದು ಲಕ್ಷ ದಲಿತರನ್ನೂ ಮತಾಂತರಗೊಳಿಸಿದರು! ಇದಾದ ಮೇಲೆ ಅವರು ಬದುಕಿದ್ದು ಬರೀ ಎರಡೇ ತಿಂಗಳು. ತಮ್ಮ ನಂತರ ಆ ಜನರ ಪಾಡು ಏನಾಗಬಹುದೆಂದು ಏಕೆ ಯೋಚಿಸಲಿಲ್ಲ ಅಷ್ಟು ಬುದ್ಧಿವಂತರಾದ ಅಂಬೇಡ್ಕರ್?

ಯಾವ ಭ್ರಮಾಲೋಕದಲ್ಲಿದ್ದೀರಿ ವೇಣುರವರೇ ನೀವು? 'ನೊಂದ, ವಿದ್ಯಾವಂತ, ಸ್ವಾಭಿಮಾನಿ ದಲಿತ ತನ್ನ ಸಾಮಾಜಿಕ ಗೌರವವನ್ನು ಕಾಪಾಡಿಕೊಳ್ಳಲು ಮತಾಂತರವಾಗದೆ ಇನ್ನಾವ ಮಾರ್ಗವಿದೆ' ಎನ್ನುತ್ತೀರಲ್ಲ, ಸಮಾಜದಲ್ಲಿ ಗೌರವ ಹುಟ್ಟುವುದೇ ವಿದ್ಯೆಯಿಂದ ಎಂಬುದು ಇಷ್ಟೊಂದು ಓದಿಕೊಂಡ ನಿಮಗೆ ಗೊತ್ತಿಲ್ಲವಾ? ಚೆನ್ನಾಗಿ ಓದಿ ವಿದ್ಯಾವಂತನಾದ ದಲಿತ ಏಕೆ ನೊಂದುಕೊಳ್ಳುತ್ತಾನೆ? ಎಷ್ಟು ಜನ ದಲಿತ ಇಂಜಿನಿಯರುಗಳು, ಡಾಕ್ಟರುಗಳು, ಸ್ವಾಭಿಮಾನದ, ಗೌರವದ, ಹೆಮ್ಮೆಯ ಬದುಕು ನಡೆಸುತ್ತಿಲ್ಲ? ಅವರೆಲ್ಲಾ ಮತಾಂತರಗೊಳ್ಳುತ್ತಿದ್ದಾರಾ? ವಿದ್ಯೆ ಇಲ್ಲದೆ, ಬಡತನದಲ್ಲಿ ಬೇಯುತ್ತಿರುವ ಹಳ್ಳಿಗರೇ ಮತಾಂತರದ ಮೊರೆ ಹೋಗುತ್ತಿರುವುದು ಎಂಬುದು ನಿಮ್ಮ ಕಣ್ಣಿಗೆ ಮಾತ್ರ ಏಕೆ ಕಾಣಿಸುತ್ತಿಲ್ಲ? ಸಂವಿಧಾನದ 25ನೇ ವಿಧಿಯತ್ತ ಬೊಟ್ಟು ಮಾಡಿ ತೋರಿಸಿ, ಮತಾಂತರಕ್ಕೆ ಸಮ್ಮತಿ ಇದೆ ಎನ್ನುತ್ತೀರಲ್ಲ, ಸಮಾಜದ ನೈತಿಕ ಸ್ವಾಸ್ಥ್ಯವನ್ನು ಹಾಳುಗೆಡವದಿದ್ದರೆ ಮಾತ್ರ ಸಮ್ಮತಿ ಇದೆ ಎಂದಿರುವುದನ್ನು ಏಕೆ ಹೇಳುವುದಿಲ್ಲ? ಎಲ್ಲ ನೋವುಗಳಿಗೂ ಏಸು ಕ್ರಿಸ್ತನೇ ದಿವ್ಯೌಷಧ ಎಂದು ಹೇಳುವ ಮಿಷನರಿಗಳಿಗೂ, ಮತಾಂತರವಲ್ಲದೆ ಅನ್ಯಮಾರ್ಗವಿಲ್ಲ ಎನ್ನುತ್ತಿರುವ ನಿಮಗೂ ಏನೂ ವ್ಯತ್ಯಾಸವೇ ಇಲ್ಲವಲ್ಲ ಸ್ವಾಮಿ? ಈ ಚಂದಕ್ಕಾಗಿಯಾ ನಮ್ಮ ಸರ್ಕಾರಿ ಶಾಲೆಗಳ ಶಿಕ್ಷಕ ಶಿಕ್ಷಕಿಯರು ರಾಜ್ಯದ ಮೂಲೆ ಮೂಲೆಗಳಲ್ಲಿರುವ ಶಾಲೆಗಳಿಗೆ ಹೋಗಿ ಶ್ರಮಿಸುತ್ತಿರುವುದು? ದಲಿತ ಮಕ್ಕಳಿಗೆ ಕಲಿಸಲು ತಿಣುಕುವ ಅವರ ಬವಣೆಯನ್ನು ನೋಡಿದ್ದೀರಾ ಎಂದಾದರೂ?

ನಿಮ್ಮ ಪ್ರಕಾರ ದನಗಳನ್ನು ಪೂಜಿಸಿ ಜನಗಳನ್ನು ದೂರವಿಟ್ಟ ಧರ್ಮದಲ್ಲಿ ಮಾನವೀಯತೆ ಇಲ್ಲ ಅಲ್ಲವೇ? ಹಾಗಾದರೆ ದನಗಳನ್ನು ಭಕ್ಷಿಸಿ ಜನಗಳನ್ನು ಕೊಲ್ಲುವ ಧರ್ಮದಲ್ಲಿ ಮಾನವೀಯತೆ ಇದೆಯಾ? ದೂರವಿಡುವುದು ಕೊಲ್ಲುವುದಕ್ಕಿಂತ, ಅತ್ಯಾಚಾರ ಮಾಡುವುದಕ್ಕಿಂತ ಹೀನ ಕೆಲಸ ಎಂದು ಅರ್ಥ ಮಾಡಿಕೊಳ್ಳೋಣವಾ ಇನ್ನು ಮೇಲೆ? ಸಾವಿರಾರು ವರ್ಷಗಳಿಂದ ಮತಾಂತರಕ್ಕೆ, ಅತ್ಯಾಚಾರಗಳಿಗೆ ಬಲಿಯಾದರೂ ಕ್ರೌರ್ಯವನ್ನು ಎಂದೂ ಒಂದು ಮಾರ್ಗವಾಗಿ ಪರಿಗಣಿಸದ ಹಿಂದೂಗಳಲ್ಲಿ ಮಾನವೀಯತೆಯ ಲವಲೇಶವೂ ಇಲ್ಲ ಅಲ್ಲವೇ ನಿಮ್ಮ ಪ್ರಕಾರ?

'ತಾವು ಸ್ಪರ್ಶಿಸದ, ಸಹಾನುಭೂತಿ, ಪ್ರೀತಿ ತೋರದ ಜನರು ಮತಾಂತರವಾಗುತ್ತಾರೆಂದರೆ  ನೀವೇಕೆ ವೃಥಾ ಗಾಬರಿಗೊಳ್ಳುತ್ತೀರಿ?' ಎಂದು ಕೇಳಿದ್ದೀರಿ. ಕಣ್ಣುಬಿಟ್ಟು ಸ್ವಲ್ಪ ಸುತ್ತ-ಮುತ್ತ ನೋಡಿ. ಸ್ಪರ್ಶಿಸದ, ಸಹಾನುಭೂತಿ ತೋರದ ಕಾಲ ಮುಗಿಯುತ್ತಾ ಬಂದಿದೆ. ಇಂದು ನೂರಾರು ಸ್ವಯಂಸೇವಕರು, ಹಿಂದೂ ಸಂಘಟನೆಗಳ ಕಾರ್ಯಕರ್ತರು ದಲಿತರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ. ನಾವು ಗಾಬರಿಯಾದಂತೆ ಕಾಣುತ್ತಿದ್ದೇವಾ ನಿಮಗೆ? ಖಂಡಿತ ಇಲ್ಲ. ಹೀಗೇ ಬಿಟ್ಟರೆ ಈ ವ್ಯಾಧಿ ನಮ್ಮನ್ನೇ ಆಪೋಶನ ತೆಗೆದುಕೊಂಡುಬಿಡಬಹುದೆಂದು ಎಚ್ಚೆತ್ತುಕೊಳ್ಳುತ್ತಿದ್ದೇವೆ ಅಷ್ಟೇ. ಮುಗ್ಧ ಜನರನ್ನು ಪ್ರೀತಿ ಕನಿಕರದ ಹೆಸರಿನಲ್ಲಿ ಸೆಳೆಯುವುದನ್ನು ಪ್ರತಿಭಟಿಸುತ್ತಿದ್ದೇವೆ. ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿದ್ದೂ ಇದೇ ಕನಿಕರದಿಂದಲೇ ಅಲ್ಲವೇ? 60 ವರ್ಷಗಳಲ್ಲಿ ಇಡೀ ದಲಿತ ಸಮುದಾಯಕ್ಕೆ ಎಷ್ಟು ಸಹಾಯಮಾಡಿದೆ ಈ ಕನಿಕರ? ‘ಭಯವೇ ನಿಮಗೆ? ಹಿಂದೂ ಧರ್ಮ ಅಷ್ಟೊಂದು ಬಲಹೀನವೇ?’ ಎಂದೂ ಕೇಳಿದ್ದೀರಿ. ಛೆ! ಆ ಅಭದ್ರತೆ ನಮ್ಮನ್ನು ಕಾಡಲು ಸಾಧ್ಯವೇ ಇಲ್ಲ ಬಿಡಿ. ನಿನ್ನೆ ಮೊನ್ನೆ ಹುಟ್ಟಿದ ನವಜಾತ ಶಿಶು ಎಂದುಕೊಂಡಿದ್ದೀರೇನು ಇಂಥ ಒಂದು ಸಣ್ಣ ಜಾಂಡೀಸ್ ಬಂದರೆ ಸಾಯಲು? ಸಾವಿರಾರು ‘ಎಬೋಲ’ಗಳನ್ನು ಮೆಟ್ಟಿ ನಿಂತ ಧರ್ಮ ನಮ್ಮದು. ಹಿಂದೂ ಧರ್ಮ ಬಲಹೀನವಾಗಿದ್ದಿದ್ದರೆ, ನಿಮ್ಮಂಥವರ, ನಿಮ್ಮನ್ನು ಮೀರಿಸುವಂಥವರ ಆರ್ಭಟದ ಮಧ್ಯೆಯೂ ಇಷ್ಟು ಕಾಲ ಉಳಿಯುವುದು ಸಾಧ್ಯವಿತ್ತೇ ಹೇಳಿ?

ಧರ್ಮವೇನು ಬಾಡಿಗೆ ಮನೆಯೇ ಮನಸ್ಸು ಬಂದಂತೆ ಬದಲಾಯಿಸಲು? ನಮ್ಮದೇ ಜಾತಿಯ ಬೇರೊಂದು ಮನೆಯ ಹೆಣ್ಣುಮಗು ಸೊಸೆಯಾಗಿ ಬಂದರೇ ಒಪ್ಪಿಕೊಳ್ಳಲು ಆಯುಷ್ಯವೆಲ್ಲಾ ತಿಣುಕಾಡುವ ಜನ ನಾವು. ಇನ್ನು ಮತಾಂತರವಾದವರ ಪಾಡೇನು? ‘ದಲಿತರನ್ನು ನಿಮ್ಮಂತೆಯೇ ಕ್ರೈಸ್ತರು, ಮುಸ್ಲಿಮರು ಒಪ್ಪಿಕೊಳ್ಳದೇ ಹೋದರೆ ಅದು ಅವರ ತಪ್ಪೇ’ ಎಂದು ಕೇಳಿದ್ದೀರಿ. ಅದನ್ನೇ ಸ್ವಾಮಿ ನಾವೂ ನಿಮ್ಮನ್ನು ಕೇಳುತ್ತಿರುವುದು. ಒಪ್ಪಿಕೊಳ್ಳುವುದಿಲ್ಲ ಎಂದು ಗೊತ್ತಿದ್ದಮೇಲೂ ಅಲ್ಲಿಗೆ ದೂಡುವ ಹಟವೇಕೆ? ಅಲ್ಲಿಗೆ ಹೊಂದಿಕೊಳ್ಳಲು ಒಂದೆರಡು ತಲೆಮಾರುಗಳಾದರೂ ಆದೀತೇನೋ ಎನ್ನುತ್ತೀರಲ್ಲ, ಅಷ್ಟು ತಲೆಮಾರುಗಳನ್ನು ಬಲಿಕೊಡಬೇಕೇಕೆ? ಆ ಹೊಂದಾಣಿಕೆಯನ್ನು ಇಲ್ಲಿದ್ದೇ ಮಾಡಿಕೊಂಡರಾಗದೇ?

ಮತಾಂತರವನ್ನೂ ಹೊಸ ಧರ್ಮಗಳ ಹುಟ್ಟನ್ನೂ ಒಂದೇ ತಕ್ಕಡಿಯಲ್ಲಿಟ್ಟು ಏಕೆ ತೂಗುತ್ತೀರ? ವೇದಗಳನ್ನು ತಿರಸ್ಕರಿಸಿದ ಬುದ್ಧ ಬೌದ್ಧ ಧರ್ಮವನ್ನು ಹುಟ್ಟುಹಾಕಿದ್ದು ಧರ್ಮ ಜಿಜ್ಞಾಸೆ, ಚಿಂತನ ಮಂಥನಗಳ ಫಲಶ್ರುತಿಯಿಂದ. ಆಗ ಧರ್ಮ ಪ್ರಚಾರ ನಡೆಯುತ್ತಿದ್ದುದೂ ತರ್ಕ, ಅಧ್ಯಯನ, ವಾದ-ವಿವಾದಗಳ ತಳಹದಿಯ ಮೇಲೇ. ಈಗ ನಡೆಯುವ ಮತಾಂತರಗಳಲ್ಲೂ ಜನರಿಗೆ ತಮ್ಮದಾಗಲಿರುವ ಧರ್ಮದ ಆಳ ಅಗಲಗಳು ಗೊತ್ತಿರುತ್ತವಾ? ಅಂಬೇಡ್ಕರ್, ಐದೂ ಲಕ್ಷ ಜನರಿಗೆ ಮೊದಲು ಬೌದ್ಧ ಧರ್ಮದ ಸೂಕ್ಷ್ಮಗಳನ್ನು ಹೇಳಿಕೊಟ್ಟು ನಂತರ ಮತಾಂತರಗೊಳಿಸಿದರಾ?

'ಸ್ವಭಾವತಃ ಸಜ್ಜನರೂ ಸರಳರೂ ಆದ ಕ್ರೈಸ್ತರನ್ನು ಕಂಡರೇಕೆ ಭಯ?' ಎನ್ನುತ್ತಾ ಅವರ ಗುಣಗಾನ ಮಾಡುತ್ತೀರಿ. 'ಅತಿವಿನಯಂ ಧೂರ್ತ ಲಕ್ಷಣಂ' ಎನ್ನುತ್ತೇವೆ ನಾವು. ಇಷ್ಟೊಂದು ಸಂಖ್ಯೆಯಲ್ಲಿರುವ ಶಾಲೆ ಕಾಲೇಜುಗಳು, ಆಸ್ಪತ್ರೆಗಳು ಬರೀ ಸಮಾಜ ಸೇವೆಗೆ ಮೀಸಲಿವೆ ಎಂಬ ಹೂವನ್ನು ನಮ್ಮ ಕಿವಿಯ ಮೇಲೇಕೆ ಇಡುತ್ತೀರಿ? ಅವರ ಶಾಲೆ, ಆಸ್ಪತ್ರೆಗಳು ಮತಾಂತರ ಕೇಂದ್ರಗಳಾಗಿರುವುದು ನಮಗೆ ಗೊತ್ತಿಲ್ಲವೆ? ಅಲ್ಲಿ ಸಕಲವೂ ಏಸುಮಯ. ಹಳ್ಳಿಗಾಡಿನ ದೀನದಲಿತರ ಮೈದಡವುವುದು, ಕಣ್ಣೀರು ಒರೆಸುವುದು ಎಲ್ಲವೂ ಮತಾಂತರವಾಗುವವರೆಗೆ ಮಾತ್ರ. ಪ್ರೀತಿಯ ಧಾರೆ ಎನ್ನುತ್ತೀರಲ್ಲ, ಅದೂ ನಾಲ್ಕು ದಿನಗಳ ನಂತರ ಬತ್ತಿ ಹೋಗುವ ಕೃತಕ ಜಲಧಾರೆ! ಮತಾಂತರವಾಗುವ ಮುನ್ನ ಒಟ್ಟುಗಂಟಿನಲ್ಲಿ ಕೊಟ್ಟಿರುತ್ತಾರಲ್ಲ ಹಣ, ಮತಾಂತರವಾದ ಮೇಲೆ ಅದನ್ನು ಏಸುವಿನ ಸೇವೆಯ ಹೆಸರಿನಲ್ಲಿ ತಿಂಗಳಿಗೆ ಇಷ್ಟಿಷ್ಟೇ ಎಂದು ವಸೂಲಿ ಮಾಡುತ್ತಾರೆ!

ಇನ್ನು, ಅವರು ನಮ್ಮ ದಲಿತರನ್ನು ಚರ್ಚುಗಳಲ್ಲಿ ಬಿಟ್ಟುಕೊಂಡು ಕೀಳರಿಮೆಯಿಂದ ಮುಕ್ತಗೊಳಿಸಿದರು ಎನ್ನುವುದು ನಿಮ್ಮ ವಾದ. ಹಾಗಿದ್ದ ಪಕ್ಷದಲ್ಲಿ ಅವರ ಚರ್ಚುಗಳ, ಏಸುವಿನ ಸ್ವರೂಪ ಏಕೆ ಬದಲಾಗುತ್ತಿತ್ತು? ಸ್ವಲ್ಪ ಅರ್ಥಮಾಡಿಕೊಳ್ಳಿ. ಆ ಯೇಸುವಿನಲ್ಲಿ ನಮ್ಮ ಜನರಿಗೆ ಹಿಂದೂ ದೇವರುಗಳು ಕಾಣುತ್ತಿಲ್ಲ. ಸಣ್ಣ ಗರ್ಭಗುಡಿಯಲ್ಲಿದ್ದೇ ಮನಸ್ಸನ್ನು ಅಗಾಧವಾಗಿ ವ್ಯಾಪಿಸಿಕೊಳ್ಳುವ ನಮ್ಮ ದೇವರುಗಳು ಆ ಎತ್ತರದ ಶಿಲುಬೆಗಳಲ್ಲಿ, ವಿಗ್ರಹಗಳಲ್ಲಿ ಹುಡುಕಿದರೂ ಸಿಗುತ್ತಿಲ್ಲ. ‘ತಪ್ಪು ಮಾಡಿಬಿಟ್ಟೆವಾ’ ಎಂಬ ಕೀಳರಿಮೆಯಿಂದ ನರಳುತ್ತಿದ್ದಾರೆ ಜನ. ಅದನ್ನು ಹೋಗಲಾಡಿಸುವ ಸಲುವಾಗಿಯೇ ಚರ್ಚುಗಳು ಆಲಯಗಳಾಗುತ್ತಿವೆ. ಏಸುಕ್ರಿಸ್ತ ಕೃಷ್ಣನಾಗಿ ಕೊಳಲನ್ನೂದುತ್ತಾ ಕಾಣಿಸಿಕೊಂಡರೆ, ಮೇರಿಯಮ್ಮ ಅಂಚು-ಸೆರಗಿನ ಸೀರೆಯುಟ್ಟು ನಿಂತಿದ್ದಾಳೆ! ಇನ್ನು ಹೇಗೆ ಹೇಳಿದರೆ ನಿಮಗೆ ಅರ್ಥವಾದೀತು?

ಹೀಗೆ ಅನ್ಯ ಧರ್ಮಗಳು ನಮ್ಮ ಸನಾತನ ಧರ್ಮದ ಬೇರುಗಳನ್ನು ಕತ್ತರಿಸುವ ಕೆಲಸಕ್ಕೆ ಕೈ ಹಾಕಿರುವಾಗ. ನಮ್ಮ ರೆಂಬೆ ಕೊಂಬೆಗಳನ್ನು ನಾವೂ ಹೊರದೇಶಗಳಲ್ಲಿ ಚಾಚುವುದರಲ್ಲೇನು ತಪ್ಪು?
'ಅಂಬೇಡ್ಕರ್‍ರಂಥ ಮೇಧಾವಿಯೇ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಎಂದ ಮೇಲೆ ಹಿಂದೂ ಧರ್ಮದಲ್ಲೇ ದೋಷವಿರಬೇಕಲ್ಲವೇ?' ಎಂದು ಕೇಳುತ್ತೀರಲ್ಲ, ನಿಮ್ಮ ಪ್ರಶ್ನೆಗೆ ನಗಬೇಕೋ, ಅಳಬೇಕೋ? ಅವರು ಮೇಧಾವಿಯೇ ಇರಬಹುದು, ಆದರೆ ಹಿಂದೂ ಧರ್ಮವನ್ನು ಬಿಟ್ಟು ಹೋಗಿದ್ದು ಧರ್ಮವನ್ನು ಸಮಗ್ರವಾಗಿ ಅಭ್ಯಸಿಸಿ ಅದರಲ್ಲಿ ಕಂಡು ಬಂದ ನ್ಯೂನತೆಗಳಿಂದಲ್ಲ. ಜಾತಿ ಪದ್ಧತಿಯೆಂಬ ಅನಿಷ್ಟದಿಂದ ರೋಸಿಹೋಗಿ! ಅವರಷ್ಟೇ ಅಥವಾ ಅವರಿಗಿಂತ ಮೇಧಾವಿಗಳೆನಿಸಿಕೊಂಡ ಅನ್ಯ ಧರ್ಮೀಯರನೇಕರು ಹಿಂದೂ ಧರ್ಮಕ್ಕೆ ಬಂದಿದ್ದಾರಲ್ಲ, ಹಾಗಾದರೆ ಅವರ ಧರ್ಮಗಳಲ್ಲೂ ದೋಷವಿದೆಯೆಂದು ಹೀಗೇ ಎದೆತಟ್ಟಿ ಹೇಳುತ್ತೀರಾ?

ಜನತೆ ತಮಗೆ ಕ್ಷೇಮ ಎನಿಸಿದ ಕಡೆ ಹೋಗುವುದನ್ನು ನಾವು ಹಂಗಿಸುತ್ತೇವೆ ಎನ್ನುತ್ತೀರ. ಕ್ಷೇಮಕ್ಕೂ ಪ್ರಲೋಭನೆಗೂ ವ್ಯತ್ಯಾಸ ಗೊತ್ತಿಲ್ಲವೇ ನಿಮಗೆ? ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಜನರಿಗೆ ದುಡ್ಡು ಅಥವಾ ಪುಕ್ಕಟೆ ಸೌಲಭ್ಯಗಳ ಆಸೆ ತೋರಿಸಿದರೆ ಹೋಗದೆ ಏನು ಮಾಡಿಯಾರು? ಹಾಗೆ ಹೋದವರು ತಮ್ಮ ಕ್ಷೇಮ ಅಲ್ಲಿಲ್ಲ ಎಂದರಿವಾದ ಮೇಲೆ ಹಿಂದಿರುಗಬಯಸಿದರೆ ಅದಕ್ಕೂ ಬೊಬ್ಬೆ ಹೊಡೆಯುವುದೇಕೆ? ಮಡಿವಂತಿಕೆ ಬರೀ ಹಿಂದೂಗಳಲ್ಲಿದೆ ಎಂದು ಯಾರು ಹೇಳಿದ್ದು ನಿಮಗೆ? ವ್ಯಾಟಿಕನ್‍‍ನವರ ಹಾಗೂ ಅರಬ್ಬರ ಮಡಿವಂತಿಕೆಗಳ ಬಗ್ಗೆ ಗೊತ್ತಿಲ್ಲವೇ?

ಹಿಂದೆ ಅನುಭವಿಸಿದ ಅವಮಾನ, ನೋವು, ಕಹಿಗಳು ಮುಂದಿನ ಸಾಮರಸ್ಯಕ್ಕೆ ಪಾಠವಾಗಬೇಕು, ಪಲಾಯನವಾದಕ್ಕೆ ಪ್ರೇರಣೆಯಲ್ಲ. ನಮ್ಮ ಜುಟ್ಟನ್ನು ನಮ್ಮ ಕೈಯಲ್ಲಿಟ್ಟುಕೊಳ್ಳುವ ಬದಲು ಅನ್ಯರ ಕೈಗೆ ಕೊಟ್ಟು, 'ಕೋ, ಕತ್ತರಿಸು' ಎಂದರೆ ಬಿಟ್ಟಾರೆಯೇ? 

No comments:

Post a Comment