Monday, 8 December 2014

ಹೇ ರಾಮ, ಏನು ಅಯೋಧ್ಯೆಯ ಮಂದಿರದ ಮರ್ಮ?

ಇಂದಿಗೆ ಸರಿಯಾಗಿ ಇಪ್ಪತ್ತೆರಡು ವರ್ಷಗಳು ಸಂದಿವೆ ಆ ಘಟನೆ ನಡೆದು. 1992ರ ಡಿಸೆಂಬರ್ ಆರನೆಯ ತಾರೀಖು ಮಧ್ಯಾಹ್ನ 12.35ಕ್ಕೆ ಬಾಬರಿ ಮಸೀದಿಯ ಮೊದಲ ಗುಮ್ಮಟ ಧರೆಗುರುಳಿತ್ತು. ಇನ್ನೆರಡೇ ಘಂಟೆಗಳಲ್ಲಿ ಉಳಿದ ಎರಡು ಗುಮ್ಮಟಗಳೂ ನೆಲಸಮವಾಗಿದ್ದವು. ನಂತರ ನಡೆದ ಗಲಭೆಗಳಲ್ಲಿ ಸಂಭವಿಸಿದ ಸಾವು ನೋವುಗಳಿಗೆ ಲೆಕ್ಕವಿಲ್ಲ ಬಿಡಿ. ಆಗಿನಿಂದ ಪ್ರತಿ ವರ್ಷ ಡಿಸೆಂಬರ್ ಆರು ಬಂತೆಂದರೆ ಒಂದು ರೀತಿಯ ಬಿಗುವಿನ ವಾತಾವರಣ. ಹಿಂದೂಗಳೆಲ್ಲ ಸೇರಿ ಏನೋ ಮಾಡಬಾರದ್ದನ್ನು ಮಾಡಿಬಿಟ್ಟರು ಎಂಬ ಮುಸ್ಲಿಮರ ರೋದನ. ಈ ಬಾರಿಯೂ ಹಾಗೇ ಆಗುತ್ತಿತ್ತೇನೋ, 92 ವರ್ಷದ ಅಜ್ಜ ಮೊಹಮ್ಮದ್ ಹಾಶಿಮ್ ಅನ್ಸಾರಿ ಬಾಯಿಬಿಡದಿದ್ದರೆ! ಈ ಹಾಶಿಮ್ ಅನ್ಸಾರಿ ಯಾರು ಗೊತ್ತೇ? ಬಾಬರಿ ಮಸೀದಿಯ ಸಲುವಾಗಿ ನ್ಯಾಯಾಲಯದ ಕಟಕಟೆಯೇರಿದ ಹಿರಿಯ ತಲೆಗಳಲ್ಲಿ ಒಬ್ಬರು! ಇಷ್ಟೂ ವರ್ಷ ನ್ಯಾಯ ಬೇಕು ನ್ಯಾಯ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದ ಈತ ಈಗ ಇದ್ದಕ್ಕಿದ್ದಂತೆ ಮನಸ್ಸು ಬದಲಾಯಿಸಿಬಿಟ್ಟಿದ್ದಾರೆ. 'ಇದು ಬರೀ ರಾಜಕೀಯದಾಟ. 'ರಾಮ್ ಲಲ್ಲಾ' ನನ್ನು ಹಿಂದೂಗಳೇ ಇಟ್ಟುಕೊಳ್ಳಲಿ, ವಿಷಯವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳೋಣ, ಮೋದಿಯವರು ಬಂದರೆ ಮಾತುಕತೆಗೆ ಸಿದ್ಧ' ಎಂದು ಹೇಳಿದ್ದಾರೆ. ನಾವು ಆಶ್ಚರ್ಯ ಪಡುವುದು ಹಾಗಿರಲಿ, ಅವರ ಇಡೀ ಮುಸ್ಲಿಂ ಸಮುದಾಯವೇ ಗಾಬರಿಯಾಗಿಬಿಟ್ಟಿದೆ! ಅವರು ಪ್ರಕರಣ ವಾಪಸ್ ಪಡೆಯುತ್ತಿರುವುದು ರಾಜಕೀಯ ಒತ್ತಡಕ್ಕೆ ಸಿಲುಕಿ ಎಂಬುದು ಕೆಲವರ ಸಮಜಾಯಿಷಿಯಾದರೆ, ಅವರೊಬ್ಬರು ಹಿಂತೆಗೆಯುವುದರಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ, ನಾವು ಯುದ್ಧ ಮಾಡಿಯೇ ಸಿದ್ಧ ಎಂಬುದು ಉಳಿದವರ ದೃಢ ಸಂಕಲ್ಪ. ಭೇಷ್ ಎನ್ನಲೇಬೇಕು ಇವರ ಹಟಕ್ಕೆ! ಇಂಥ ಆರೋಗ್ಯಕರ ಬದಲಾವಣೆಯನ್ನು ಬಯಸುವ ಮನಸ್ಸುಗಳಿಗೆ ಉತ್ತೇಜನ ದೊರೆತು, ಅವರ ಸಂಖ್ಯೆ ಹೆಚ್ಚಿಬಿಟ್ಟರೇನು ಗತಿ? ಅಲ್ಲೆಲ್ಲೋ ಸ್ವರ್ಗದಲ್ಲಿ(?) ಕುಳಿತು ಬಗ್ಗಿ ನೋಡುತ್ತಿರುವ ಬಾಬರನ ಆತ್ಮ ಕನಲಿಬಿಡುವುದಿಲ್ಲವೇ? ಹೋಗಲಿ, ಅಂಥ ಘನಂದಾರಿ ಕೆಲಸವನ್ನೇನು ಮಾಡಿದ್ದಾನೆ ಬಾಬರ್? ನೋಡೋಣ ಬನ್ನಿ.


ಇಸವಿ 1525ರಲ್ಲಿ ಅಫಘಾನಿಸ್ತಾನದ ಕಾಬುಲ್‍ನಿಂದ ಭಾರತಕ್ಕೆ ಅಡಿಯಿಟ್ಟ ಮೊಘಲರ ಮೊತ್ತ ಮೊದಲ ಆಕ್ರಮಣಕಾರನೇ ಬಾಬರ್. ಪಾಣಿಪತ್‍ನ ಮೊದಲ ಯುದ್ಧದಲ್ಲಿ ಇಬ್ರಾಹಿಂ ಲೋಧಿಯನ್ನು ಸೋಲಿಸುತ್ತಿದ್ದಂತೆಯೇ ಅವನಿಗೆ ಆನೆ ಬಲ ಬಂದಿತು. ಉತ್ತರ ಭಾರತದ ಹಲವು ರಾಜರುಗಳನ್ನು ಸೋಲಿಸಿದ ಅವನು ಮಾಡಿದ ಮೊದಲ ಕೆಲಸ ಇಸ್ಲಾಂ ಧರ್ಮವನ್ನು ಹೇರತೊಡಗಿದ್ದು. ಅದೂ ಹೇಗೆ? ಹಿಂದೂಗಳ ಶ್ರದ್ಧಾ ಕೇಂದ್ರವಾಗಿದ್ದ ದೇವಾಲಯಗಳನ್ನು ಒಂದೊಂದಾಗಿ ನೆಲಸಮ ಮಾಡಿ ಅಲ್ಲಿ ಮಸೀದಿಗಳನ್ನು ಕಟ್ಟಿಸಿ! ಅದಾದ ನಂತರ ಹಿಂದೂಗಳ ಮತಾಂತರ! ಹೀಗೆ ಸಾಗಿದ ಅವನ ಕಣ್ಣಿಗೆ ಬಿದ್ದಿದ್ದು ಆಯೋಧ್ಯೆಯ ಶ್ರೀರಾಮ ಮಂದಿರ. ಸರಯೂ ನದಿ ತಟದಲ್ಲಿರುವ ಅಯೋಧ್ಯೆ ರಾಮನ ಜನ್ಮಭೂಮಿ ಎಂಬುದು, ಹಿಂದೂಗಳ ಪಾಲಿನ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲೊಂದು ಎಂಬುದು ಅವನಿಗೆ ಗೊತ್ತಿತ್ತು. ಆದ್ದರಿಂದಲೇ 1528ರಲ್ಲಿ ತನ್ನ ಸೇನಾಧಿಕಾರಿ 'ಮೀರ್ ಬಾಕಿ'ಯನ್ನು ಕಳಿಸಿ ಮಂದಿರವನ್ನು ಕೆಡವಿಸಿದ. ಅದೇ ಜಾಗದಲ್ಲಿ ಮಸೀದಿಯನ್ನೂ ಕಟ್ಟಿಸಿದ. ಇಂದಿಗೂ ಒಂದು ವ್ರಣವಾಗಿ, ಕೆರೆದಷ್ಟೂ ಉಲ್ಪಣಿಸಿ ಕಾಡುತ್ತಿರುವ ಆ ಮಸೀದಿಯೇ ಬಾಬರಿ ಮಸೀದಿ!

ಒಂದು ಮಂದಿರವನ್ನು ಕೆಡವುವುದೆಂದರೆ ಬರೀ ಗೋಡೆಗಳನ್ನು, ಶಿಖರಗಳನ್ನು ಉರುಳಿಸುವುದಲ್ಲ. ನಮ್ಮ ಧರ್ಮವನ್ನು ಹೀಗಳೆಯುವುದು, ನಮ್ಮ ಇರವನ್ನೇ ಅಲ್ಲಗಳೆಯುವುದು ಹಾಗೂ ನಮ್ಮ ಶ್ರದ್ಧೆ, ನಂಬಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ ಎಂಬುದನ್ನು ಸಾರಿ ಹೇಳುವುದು. ದೇವರ ವಿಗ್ರಹಗಳಿಗೆ ಬೀಳುವ ಏಟು ನಮ್ಮ ಆಂತರ್ಯವನ್ನು ನಡುಗಿಸುವುದಿಲ್ಲವೇ? ಮನಸ್ಸುಗಳು ಅನಾಥವಾಗಿ ನೆಲೆಯಿಲ್ಲದೆ ಅಲೆದಾಡುವುದಿಲ್ಲವೇ? ಎಂಥ ದಾರ್ಷ್ಟ್ಯ, ಅದೇನು ದುರುಳತನ? ಧರ್ಮವನ್ನು ಹೀಗೆ ಪ್ರಚಾರ ಮಾಡಿ ಎಂದು ಯಾವ ದೇವರು ಹೇಳುತ್ತಾನೆ? ಮಸೀದಿ ಕಟ್ಟಲೇ ಬೇಕೆಂದಿದ್ದರೆ ಖಾಲಿ ಜಾಗದಲ್ಲಿ ಕಟ್ಟಬಹುದಿತ್ತಲ್ಲವೇ? ಮಂದಿರವನ್ನು ಕೆಡವಿಯೇ ಕಟ್ಟುವ ಹಟ ಏಕೆ? ಇಂಥ ಪೆಟ್ಟು ತಿಂದಮೇಲೆ ಹಿಂದೂಗಳು ಹೇಗೆ ಸುಮ್ಮನಿದ್ದಾರು? ಮರಳಿ ರಾಮ ಮಂದಿರವನ್ನು ಕಟ್ಟುವ ಪ್ರಯತ್ನಕ್ಕೆ ಕೈ ಹಾಕಿದರು. ನೀವು ನಂಬಲಿಕ್ಕಿಲ್ಲ, ಇದರ ಸಲುವಾಗಿ 1528ರಿಂದ ಹಿಡಿದು 1934ರ ವರೆಗೂ 76 ಯುದ್ಧಗಳು ನಡೆದಿವೆ!

1885ರಷ್ಟು ಹಿಂದೆಯೇ ಮಸೀದಿಯ ಹೊರ ಆವರಣದಲ್ಲಿ ರಾಮನ ಹೆಸರಿನಲ್ಲಿ ಒಂದು ಸಣ್ಣ ಕಟ್ಟೆಯೊಂದನ್ನು(ಹಿಂದಿಯಲ್ಲಿ ಚಬೂತರಾ ಎಂದು ಕರೆಯುತ್ತಾರೆ) ಕಟ್ಟಿಕೊಂಡ ಹಿಂದೂಗಳು ಅಲ್ಲಿ ಪೂಜೆ, ಆರತಿಗಳನ್ನು ಮಾಡುತ್ತಿದ್ದರು. ಮಹಂತ ರಘುವರ ದಾಸರು ಅಲ್ಲಿ ದೇವಸ್ಥಾನ ಕಟ್ಟುವ ಕೋರಿಕೆಯನ್ನು ಬ್ರಿಟಿಷರ ಮುಂದಿಟ್ಟಾಗ ಅದನ್ನು ನಿರಾಕರಿಸಲಾಯಿತು. ಕಾರಣ ಮಂದಿರವನ್ನು ಧ್ವಂಸಗೊಳಿಸಿ ಅದಾಗಲೇ 350 ವರ್ಷಗಳಾಗಿದ್ದವಲ್ಲ! ಆದರೆ 1934ರಲ್ಲಿ ಮುಸ್ಲಿಮರು ಎಗ್ಗಿಲ್ಲದೇ ನಡೆಸಿದ ಗೋಹತ್ಯೆ ಹಿಂದೂಗಳನ್ನು ಕೆರಳಿಸಿಬಿಟ್ಟಿತು. ಸೀದಾ ಬಾಬರಿ ಮಸೀದಿಯನ್ನು ಹತ್ತಿ ಮೂರೂ ಗುಮ್ಮಟಗಳನ್ನು ಮೊತ್ತ ಮೊದಲ ಸಲ ಧ್ವಂಸ ಮಾಡಿದರು! ಅದನ್ನು ರಿಪೇರಿ ಮಾಡಿಸಿದ ಬ್ರಿಟಿಷ್ ಸರ್ಕಾರ ಖರ್ಚನ್ನು ಕರದ ರೂಪದಲ್ಲಿ ವಸೂಲಿ ಮಾಡಿದ್ದು ಹಿಂದೂಗಳಿಂದಲೇ. ಆದರೆ ಆ ಘಟನೆಯ ನಂತರ ಮುಸ್ಲಿಮರು ರಾಮಜನ್ಮ ಭೂಮಿಗೆ ಕಾಲಿಡುವ ಧೈರ್ಯ ಮಾಡಲಿಲ್ಲ.

ಸ್ವಾತಂತ್ರ್ಯಾನಂತರ, ಅಂದರೆ 1949ರ ಡಿಸೆಂಬರ್ 23ರಂದು ಬೆಳಿಗ್ಗೆ ಚಬೂತರಾದಲ್ಲಿ ರಾಮ ಲಲ್ಲಾ (ಬಾಲ ರಾಮ)ನ ವಿಗ್ರಹಗಳು ಪ್ರತ್ಯಕ್ಷವಾದವು. ಅಷ್ಟೇ ಅಲ್ಲ, ಪೂಜೆಗಳೂ ನಿಯಮಿತವಾಗಿ ನಡೆಯತೊಡಗಿದವು. ಇದನ್ನು ನೋಡಿದ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿ ರಾಮಜನ್ಮ ಭೂಮಿಯ ಒಡೆತನ ತನಗೆ ಬೇಕೆಂದು ಉತ್ತರಪ್ರದೇಶದ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿತ್ತು. ಆದೇ ಸಮಯದಲ್ಲೇ 'ರಾಮ ಜನ್ಮ ಭೂಮಿ ಮುಕ್ತಿ ಆಂದೋಲನ' ಜನರಲ್ಲಿ ಜಾಗೃತಿಯನ್ನು ಮೂಡಿಸುವ ಒಂದು ಚಳುವಳಿಯಾಗಿ ಹೊಮ್ಮಿದ್ದು. ಸರ್ಕಾರದ ಜೊತೆ ಗುದ್ದಾಡಿ ಶಿಲಾನ್ಯಾಸ ನಡೆಸಿ, ಮಂದಿರದ ನಿರ್ಮಾಣದ ರೂಪು ರೇಷೆಗಳನ್ನು ಒಂದೆಡೆ ತಯಾರು ಮಾಡುತ್ತಿದ್ದರೆ, ಮತ್ತೊಂದೆಡೆ ವಕ್ಫ್ ಮಂಡಳಿಯೊಡನೆ ಮಾತುಕತೆಯೂ ಜಾರಿಯಲ್ಲಿತ್ತು. ಮುಸ್ಲಿಮರಿಗೆ ಈ ಜಾಗದ ಮಹತ್ವದ ಅರಿವನ್ನು ಮೂಡಿಸಿ ಅವರನ್ನು ಒಪ್ಪಿಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳು ನಡೆದವು. ಆದರೆ ಈ ಪ್ರಕರಣದಲ್ಲಿ ಮುಖ್ಯವಾಗಿ ಮಧ್ಯಸ್ಥಿಕೆ ವಹಿಸ ಬೇಕಾಗಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಪಾತ್ರವನ್ನು ಸರಿಯಾಗಿ ನಿಭಾಯಿಸಲೇ ಇಲ್ಲ. ಬದಲಿಗೆ, ಹಿಂದೂಗಳ ಮನಸ್ಸನ್ನು ಘಾಸಿಗೊಳಿಸುವ ಕೆಲಸಕ್ಕೆ ಕೈಹಾಕಿದವು.

ಅದು 1990ರ ಅಕ್ಟೋಬರ್ 30. ರಾಮಜನ್ಮಭೂಮಿಯಲ್ಲಿ ಶಾಂತಿಯುತ ಕರಸೇವೆಯನ್ನು ಹಮ್ಮಿಕೊಳ್ಳಲಾಗಿತ್ತು. ಲಕ್ಷಾಂತರ ಕರಸೇವಕರು ಸೇರಿ, ರಾಮಮಂದಿರ ನಿರ್ಮಾಣದ ತಮ್ಮ ಹಕ್ಕನ್ನು ಪ್ರತಿಪಾದಿಸುವುದು ಮೂಲ ಉದ್ದೇಶವಾಗಿತ್ತು. ನೋಡ ನೋಡುತ್ತಿದ್ದಂತೆಯೇ ಹೆಚ್ಚಿದ ಅವರ ಸಂಖ್ಯೆ, ಅವರಲ್ಲಿ ಮನೆ ಮಾಡಿದ್ದ ಆವೇಶ ಹಾಗೊ ಜೈ ಶ್ರೀ ರಾಮ್ ಎಂಬ ಅವರ ಎಡಬಿಡದ ಘೋಷಣೆ, ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಂ ಸಿಂಗ್‍ರ ಎದೆಯಲ್ಲಿ ನಡುಕವನ್ನೇ ಹುಟ್ಟಿಸಿಬಿಟ್ಟಿತು. ಕರಸೇವಕರನ್ನು ಹೆದರಿಸಿ ಹಿಮ್ಮೆಟ್ಟಿಸಲು ಏನು ಮಾಡಿದರು ಗೊತ್ತೇ ಮುಲಾಯಂ? ಗುಂಡು ಹೊಡೆಯುವಂತೆ ಆದೇಶಿಸಿದರು ಅರೆಸೇನಾ ಪಡೆಗಳಿಗೆ! ಕೆಲ ನಿಮಿಷಗಳಲ್ಲೇ ನೂರಾರು ಕರಸೇವಕರು ಹೆಣವಾದರು. ಎಷ್ಟು ಜನ ಸತ್ತರೆಂಬ ಲೆಕ್ಕ ಸಿಗಬಾರದೆಂದು ಮತ್ತೊಂದು ಉಪಾಯ ಮಾಡಿದರು. ಅವರ ಹೆಣಗಳಿಗೆ ಉಸುಕಿನ ಚೀಲಗಳನ್ನು ಕಟ್ಟಿ ಸರಯೂ ನದಿಯಲ್ಲಿ ಮುಳುಗಿಸಿದರು. ಹೆಣಗಳು ತೇಲದೇ ಇದ್ದರೆ ಲೆಕ್ಕ ಹೇಗೆ ಸಿಕ್ಕೀತು? ಅಂದು ಮುಸ್ಲಿಮರಿಂದ ಶಭಾಸ್‍ಗಿರಿ ಪಡೆಯುವ ಸಲುವಾಗಿ ಹೇಡಿಯಂತೆ ಗುಂಡಿನ ಮಳೆಗರೆಸಿದ ಮುಲಾಯಂ ಸಿಂಗರಿಗೆ 'ಮುಲ್ಲಾ ಮುಲಾಯಂ' ಎಂಬ ಅಡ್ಡ ಹೆಸರು ಶಾಶ್ವತವಾಗಿ ಅಂಟಿಕೊಂಡಿತು!

ಇದರ ನಂತರ ಮತ್ತೊಂದು ಮಹತ್ವದ ಘಟನೆ ನಡೆಯಿತು. ಪ್ರಧಾನ ಮಂತ್ರಿಯಾಗಿ ಅಧಿಕಾರಕ್ಕೇರಿದ ಚಂದ್ರಶೇಖರ್ ವಿಶ್ವ ಹಿಂದೂ ಪರಿಷತ್ ಹಾಗೂ ಬಾಬರಿ ಮಸೀದಿಯ ಕಾರ್ಯಕಾರಿ ಸಮಿತಿ ಎರಡನ್ನೂ ಬರ ಹೇಳಿದರು. ಅವರು ಹೇಳಿದ್ದಿಷ್ಟೇ 'ಎರಡೂ ಕಡೆಯವರು ಸಾಕ್ಷ್ಯಗಳನ್ನು ಒಟ್ಟು ಮಾಡಿ ತನ್ನಿ. ಒಂದು ವೇಳೆ ಬಾಬರಿ ಮಸೀದಿಗೆ ಮೊದಲು ಅಲ್ಲಿ ಶ್ರೀರಾಮನ ಮಂದಿರವಿತ್ತು ಎಂಬುದು ಸಾಬೀತಾದರೆ, ಮುಸ್ಲಿಮರು ತಮ್ಮ ಅಹವಾಲನ್ನು ಹಿಂತೆಗೆದುಕೊಳ್ಳಬೇಕು' ಎಂದು. ಈ ಸಭೆ ನಡೆದಿದ್ದು 1990ರ ಡಿಸೆಂಬರ್ ನಾಲ್ಕರಂದು. 1991ರ ಜನವರಿ 24ರ ವರೆಗೂ ಸಾಕ್ಷ್ಯಗಳನ್ನು ತಂದೊಪ್ಪಿಸುವ ಗಡುವನ್ನು ನೀಡಲಾಗಿತ್ತು.  ಐತಿಹಾಸಿಕ, ಪುರಾತತ್ವ ಇಲಾಖೆಯ, ಕಂದಾಯ ಇಲಾಖೆಯ ಹಾಗೂ ಕಾನೂನಿಗೆ ಸಂಬಂಧಿಸಿದ (ಒಟ್ಟಾರೆ ನಾಲ್ಕು ವಿಧದ ಸಾಕ್ಷ್ಯಗಳನ್ನು) ತೋರಿಸುವುದು ಕಡ್ಡಾಯವಾಗಿತ್ತು. ನಿಗದಿತ ದಿನದಂದು ಹಿಂದೂಗಳ ರಾಯಭಾರಿ ಎಲ್ಲ ಸಾಕ್ಷ್ಯಗಳೊಂದಿಗೆ ಹಾಜರಾದರೆ ಮುಸ್ಲಿಮರು ತಂದದ್ದು ಇತಿಹಾಸ ಮತ್ತು ಪುರಾತತ್ವ ಇಲಾಖೆಯ ಸಾಕ್ಷ್ಯಗಳನ್ನು ಮಾತ್ರ. ಉಳಿದ ಸಾಕ್ಷ್ಯಗಳನ್ನು ತರಲು ಆರು ವಾರಗಳ ಗಡುವು ಕೇಳಿ ಹೋದ ಮುಸ್ಲಿಮರು ಆಮೇಲೆ ನಾಪತ್ತೆ! ಕರೆಸಿ ಕೇಳಿದರೆ ಸಾಕ್ಷ್ಯವೂ ಇಲ್ಲ, ಸಮಂಜಸ ಉತ್ತರವೂ ಇಲ್ಲ.

ಅಲ್ಲಿ ಸಾಕ್ಷ್ಯವಿದ್ದರೆ ತಾನೆ ತರುವುದು? ಮಸೀದಿಯನ್ನು ಕಟ್ಟಲು ಬಾಬರ್ ಖಾಲಿ ಜಾಗವನ್ನು ಗುರುತಿಸಿದ್ದಕ್ಕೆ ಯಾವ ಆಧಾರವೂ ಇರಲಿಲ್ಲ. ಆದರೆ ಅಲ್ಲಿ ಶ್ರೀರಾಮನ ಮಂದಿರವಿದ್ದುದಕ್ಕೆ ಹೇರಳವಾದ ಸಾಕ್ಷಿಗಳಿದ್ದವು. ನಮ್ಮ ರಾಮಾಯಣ, ಉಪನಿಷತ್ತುಗಳಷ್ಟೇ ಅಲ್ಲದೆ, ಆ ಕಾಲದಲ್ಲಿ ಭಾರತಕ್ಕೆ ಪ್ರವಾಸ ಬಂದಿದ್ದ ಐರೋಪ್ಯ ದೇಶಗಳ ವಿಲಿಯಂ ಫ್ಲಿಂಚ್, ಫ್ಯೂರರ್ ಹಾಗೂ ಜೋಸೆಫ್ ಟಿಫೆನ್‍ಥೆಲ್ಲರ್ ದಾಖಲಿಸಿದ್ದ ಬರಹಗಳಿದ್ದವು. ಹೊರಗಿನವರದ್ದು ಬಿಡಿ, ಮುಸ್ಲಿಂ ಲೇಖಕರೇ ಬಾಬರನು ಮಸೀದಿ ಕಟ್ಟಿದ ಬಗೆಯನ್ನು ಸ್ಪಷ್ಟವಾಗಿ ಬರೆದಿಟ್ಟಿದ್ದರು! ಮಿರ್ಜಾ ಜಾನ್, ಮಿರ್ಜಾ ರಜಬ್ ಅಲಿ ಬೈಗ್ ಹಾಗೂ ಖುದ್ದು ಬಾಬರಿ ಮಸೀದಿಯ ಇಮಾಮ್ ಆಗಿದ್ದ ಮೌಲ್ವಿ ಅಬ್ದುಲ್ ಕರೀಮ್ ಬರೆದಿರುವುದನ್ನು ಹೇಗೆ ಅಲ್ಲಗಳೆಯಲಾದೀತು? ಇಷ್ಟು ಸಾಲದೆಂಬಂತೆ ಪುರಾತತ್ವ ಇಲಾಖೆ ಅಗೆದು ಹೊರ ತೆಗೆದ ರಾಶಿ ರಾಶಿ ಕಂಬಗಳು, ಶಿಲಾ ಶಾಸನಗಳು ಹಾಗೂ ದೇವ ದೇವತೆಯರ ವಿಗ್ರಹಗಳು. ಕೊರತೆಯಿದ್ದದ್ದು ಸಾಕ್ಷಿಗಳಲ್ಲಲ್ಲ, ನೋಡಲು ತಯಾರಿಲ್ಲದ ಮನಸುಗಳಲ್ಲಿ!


ವಿಷಯ ಅಲ್ಲಿಗೇ ನಿಂತಿದ್ದರಿಂದ 1992ರ ಡಿಸೆಂಬರ್ ಆರರಂದು ಮತ್ತೊಂದು ಕರಸೇವೆಯನ್ನು ಹಮ್ಮಿಕೊಳ್ಳಲಾಯಿತು. ಲಕ್ಷಗಟ್ಟಳೆ ಸಂಖ್ಯೆಯಲ್ಲಿ ಸೇರಿದ್ದರು ರಾಮಭಕ್ತರು. ಸರಯೂ ನದಿಯಿಂದ ತಲಾ ಒಂದೊಂದು ಹಿಡಿ ಮರಳನ್ನು ತಂದು ರಾಶಿ ಹಾಕುತ್ತಿದ್ದರು. ಅದೆಲ್ಲಿತ್ತೋ ಆವೇಶ, ಕರಸೇವಕನೊಬ್ಬ ಗುಮ್ಮಟವೊಂದನ್ನು ಹತ್ತಿ ಜೈ ಶ್ರೀರಾಮ್ ಎಂದದ್ದೇ ತಡ, ಎಲ್ಲರ ಸಂಯಮದ ಕಟ್ಟೆ ಒಡೆಯಿತು. ಒಟ್ಟಾಗಿ ಲಗ್ಗೆಯಿಟ್ಟವರೇ ಮಸೀದಿಯನ್ನು ಪುಡಿ ಪುಡಿ ಮಾಡಿಬಿಟ್ಟರು. ಇಲ್ಲಿ ಒಂದು ಮುಖ್ಯವಾದ ವಿಷಯವನ್ನು ಹೇಳಬೇಕು. ಅಯೋಧ್ಯೆಯಲ್ಲಿ ಹೀಗೆ ಮಂದಿರಗಳನ್ನು ಒಡೆದುಕಟ್ಟಿರುವ ಇನ್ನೂ ಎರಡು ಮಸೀದಿಗಳಿವೆ. ಅವು 'ಸ್ವರ್ಗ ದ್ವಾರ್' ಮತ್ತು 'ತ್ರೇತಾ ಠಾಕೂರ್ ಮಂದಿರ್'‍ಗಳು. ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಕರಸೇವಕರು ಆ ಮಸೀದಿಗಳನ್ನೂ ಧ್ವಂಸ ಮಾಡಬಹುದಿತ್ತಲ್ಲವೇ? ರೋಷಾವೇಷದಿಂದ ಸಿಕ್ಕ ಸಿಕ್ಕ ಮುಸ್ಲಿಮರನ್ನು ಕೊಚ್ಚಿ ಕೊಲ್ಲಬಹುದಿತ್ತಲ್ಲವೇ? ಆದರೆ ಹಾಗಾಗಲಿಲ್ಲ.

ನಂತರವಷ್ಟೇ ಅಲಹಾಬಾದ್‍ನ ಉಚ್ಚ ನ್ಯಾಯಲಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು. ವಿಚಾರಣೆಗಳೆಲ್ಲ ನಡೆದು ತೀರ್ಪು ಹೊರಬಿದ್ದಿದ್ದು 2010ರಲ್ಲಿ. ಅದರ ಪ್ರಕಾರ ಸುನ್ನಿ ವಕ್ಫ್ ಮಂಡಳಿಯ ಅಹವಾಲು ವಜಾ ಆಗಿದೆ. ರಾಮಜನ್ಮಭೂಮಿ ಮುಸ್ಲಿಮರ, ಹಿಂದೂಗಳ ಹಾಗೂ ನಿರ್ಮೋಹಿ ಅಖಾಡಾ (ಇವರೂ ರಾಮನನ್ನು ಪೂಜಿಸುವ ಸಾಧುಗಳೇ) ನಡುವೆ ಸಮನಾಗಿ ಹಂಚಲ್ಪಟ್ಟಿದೆ. ಮತ್ತೆ ಎಲ್ಲರೂ ಈಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಈಗ ಹೇಳಿ, ಬಾಬರಿ ಮಸೀದಿಗಾಗಿ ಹೋರಾಡುತ್ತೇವೆನ್ನುವ ಮುಸ್ಲಿಮರಿಗೆ ಅರ್ಥವಾಗದ ಚಿದಂಬರ ರಹಸ್ಯ ಏನಿದೆ ಇಲ್ಲಿ? ಬಾಬರನಿಗೂ ಭಾರತೀಯ ಮುಸ್ಲಿಮರಿಗೂ ಎತ್ತಣಿಂದೆತ್ತಣ ಸಂಬಂಧ? ನಿಮಗೆ ಗೊತ್ತಿರಲಿ, ಭಾರತೀಯ ಮುಸ್ಲಿಮರು ಒಲಸೆ ಬಂದವರಲ್ಲ. ಈ ನೆಲವೇ ಅವರ ಮೂಲ. ಹೋಗಲಿ ಬಾಬರ್ ತನ್ನ ಜೊತೆ ಎಷ್ಟು ಜನರನ್ನು ಕರೆತಂದಿದ್ದ? ಕೇವಲ ಹನ್ನೆರಡು ಸಾವಿರ! ಹಾಗಾದರೆ ಲಕ್ಷಗಟ್ಟಳೆ ಮುಸ್ಲಿಮರು ಹುಟ್ಟಿಕೊಂಡಿದ್ದು ಹೇಗೆ? ಗಿಡ ಮರಗಳಂತೆ ಭೂತಾಯಿಯ ಒಡಲಿನಿಂದಲ್ಲ,  ಮಳೆಹನಿಯಂತೆ ಆಕಾಶದಿಂದಲೂ ಅಲ್ಲ. ಮತಾಂತರವೆಂಬ ಹೇಯ ಕೃತ್ಯದಿಂದ ಎಂಬುದನ್ನು ಬಿಡಿಸಿ ಹೇಳಬೇಕೇ? ಸಂಕಟವಾಗುವುದೇ ಅದಕ್ಕೆ. ಎಲ್ಲಿಯವರೆಗೂ ಮುಸ್ಲಿಮರು ಬಾಬರಿ ಮಸೀದಿ ಬೇಕು ಎನ್ನುತ್ತಾರೋ ಅಲ್ಲಿಯವರೆಗೂ ಬಾಬರನನ್ನು, ಅವನ ಧರ್ಮಾಂಧತೆ, ಕ್ರೌರ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದೇ ಅರ್ಥ. ಅವರು ಬಾಬರನನ್ನು ಬಿಡದಿದ್ದರೆ, ನಮ್ಮವರು ಎನ್ನುವ ಭಾವ ನಮಗೆ ಬರುವುದು ಹೇಗೆ? ತಮ್ಮವನೇ ಆದ ಹಿಟ್ಲರ್ ನಡೆಸಿದ ಹತ್ಯಾಕಾಂಡಕ್ಕೆ ಜರ್ಮನ್ನರು ಇಂದಿಗೂ ಕ್ಷಮೆ ಕೇಳುತ್ತಲೇ ಇದ್ದಾರೆ. ಪರಕೀಯನಾದ ಬಾಬರನೊಂದಿಗಿನ ಕೊಂಡಿ ಕಳಚಲಾರದೇ?

ನಿಮಗೆ ಗೊತ್ತಿರಲಿ, ಏನಿಲ್ಲವೆಂದರೂ 30ಸಾವಿರ ಮಂದಿರಗಳನ್ನು ಕಳೆದುಕೊಂಡಿದ್ದೇವೆ ನಾವು. ಅದಕ್ಕೆ ಪರಿಹಾರ ಕೇಳಿಲ್ಲ. ಅವೇ ಮಂದಿರಗಳನ್ನು ಮತ್ತೆ ಕಟ್ಟಿ ಕೊಡಿ ಎಂದು ಹಟಕ್ಕೆ ಬಿದ್ದಿಲ್ಲ. ಹೋಗಲಿ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತೇವೆಂದು 30ಸಾವಿರ ಮಸೀದಿಗಳನ್ನು ಧ್ವಂಸ ಮಾಡಿಲ್ಲ. ನಮಗೆ ತುಂಬಾ ಅಪ್ಯಾಯಮಾನವಾದ ಮೂರು ಶ್ರದ್ಧಾ ಕೇಂದ್ರಗಳಿವೆ. ಅಯೋಧ್ಯೆಯ ರಾಮ ಮಂದಿರ, ಮಥುರೆಯಲ್ಲಿರುವ ಕೃಷ್ಣನ ಜನ್ಮ ಸ್ಥಾನ ಹಾಗೂ ಕಾಶಿಯಲ್ಲಿರುವ ವಿಶ್ವೇಶ್ವರನ ದೇವಸ್ಥಾನ. ಇಂದು ಈ ಮೂರೂ ನಮ್ಮ ಪಾಲಿನ ಪೂರ್ಣ ಪ್ರಮಾಣದ ದೇವಸ್ಥಾನಗಳಾಗಿ ಉಳಿದಿಲ್ಲ. ಅಲ್ಲಿರುವ ಮಸೀದಿಗಳನ್ನು ತೆರವುಗೊಳಿಸಿ ನಮ್ಮದನ್ನು ನಮಗೆ ಹಿಂತಿರುಗಿಸಿ ಎಂದು ಕೇಳುವುದು ತಪ್ಪೇ? ಮುಸ್ಲಿಂ ಗ್ರಂಥಗಳ ಪ್ರಕಾರ ಬಲವಂತವಾಗಿ ವಶಪಡಿಸಿಕೊಂಡ ಸ್ಥಳ ಪ್ರಾರ್ಥನಾ ಯೋಗ್ಯವೇ ಅಲ್ಲ. ಅಂದಮೇಲೆ ಅದನ್ನು ಬಿಟ್ಟುಕೊಡಬಾರದೆಂಬ ಹಟವೇಕೆ?

ಹನ್ನೆರಡನೆಯ ಶತಮಾನದಲ್ಲಿ ಸ್ಪೇನ್ ದೇಶವನ್ನು ಮುಸ್ಲಿಮರು ಮುತ್ತಿಗೆ ಹಾಕಿದಾಗ ಅಲ್ಲಿದ್ದ ಚರ್ಚುಗಳನ್ನು ಮುರಿದು ಎಲ್ಲರನ್ನೂ ಮತಾಂತರ ಮಾಡಿಬಿಟ್ಟಿದ್ದರು. ಮತ್ತೆ ಅಧಿಕ್ಕಾರಕ್ಕೇರಿದ ಕ್ರೈಸ್ತರು, ಮತಾಂತರಗೊಂಡವರಿಗೆ ಕೊಟ್ಟಿದ್ದು ಮೂರೇ ಆಯ್ಕೆಗಳು ‘ಕ್ರೈಸ್ತ ಮತಕ್ಕೆ ಮರಳಿ, ದೇಶ ಬಿಟ್ಟು ತೊಲಗಿ ಅಥವಾ ಸಾಯುವುದಕ್ಕೆ ಸಿದ್ಧರಾಗಿ!’ ಚರ್ಚುಗಳೆಲ್ಲಾ ಮತ್ತೆ ಯಥಾಸ್ಥಿತಿಗೂ ಬಂದವು. ಇದಕ್ಕಿಂತ ಉದಾಹರಣೆ ಬೇಕೇ ಹಿಂದೂಗಳಷ್ಟು ಸಹಿಷ್ಣುಗಳು ಬೇರೊಬ್ಬರಿಲ್ಲವೆಂಬುದಕ್ಕೆ?

ನಮಗಿರುವ ಅಪಾರ ಸಹನೆ ನಮ್ಮ ದೌರ್ಬಲ್ಯವಲ್ಲ, ಒಳ್ಳೆಯತನ ಅಷ್ಟೇ. ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಪುಂಖಾನುಪುಂಖವಾಗಿ ಬರೆಯುವ ಮುಸ್ಲಿಂ ಲೇಖಕ/ಲೇಖಕಿಯರಲ್ಲಿ ಒಂದೇ ಒಂದು ಮನವಿ. ಈ ಹೊತ್ತು ಮುಸ್ಲಿಂ ಸಮಾಜ ಬದಲಾವಣೆಯ ಕಿಟಕಿಗಳನ್ನು ಸ್ವಲ್ಪ ಸ್ವಲ್ಪವಾಗಿ ತೆರೆಯುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಅದರಿಂದ ತೂರಿ ಬರುವ ಸತ್ಯದ ಪ್ರಖರ ಕಿರಣಗಳು ಮೊದಲಿಗೆ ಕಣ್ಣನ್ನು ಕುಕ್ಕಿದರೂ ಕ್ರಮೇಣ ಅಭ್ಯಾಸವಾಗಲಿವೆ ಎಂದು ಅವರಿಗೆ ಬಿಡಿಸಿ ಹೇಳಬಲ್ಲಿರಾ? ಆ ಬೆಳಕಿನಿಂದಾಗಿ ಮುಂದೊಂದು ದಿನ ಅವರಿರುವ ಕತ್ತಲೆ ಕೋಣೆಯ ಸಮಸ್ತವೂ ಝಗಮಗಿಸಿ ಅವರ ಭ್ರಮೆಗೂ ವಾಸ್ತವಕ್ಕೂ ಇರುವ ವ್ಯತ್ಯಾಸವನ್ನು ಅವರೇ ನೋಡಬಲ್ಲರು ಎಂಬುದನ್ನು ಮನದಟ್ಟು ಮಾಡಿಕೊಡಬಲ್ಲಿರಾ? ಇದು ಸದ್ಯದ ಪರಿಸ್ಥಿತಿಯಲ್ಲಿ ಸಮನ್ವಯ, ಸೌಹಾರ್ದಗಳನ್ನು ಹೆಚ್ಚಿಸಲು ನೀವು ಹೊರಲೇಬೇಕಾದ ಸಾಮಾಜಿಕ ಜವಾಬ್ದಾರಿ. ನೀವು ಮುಂದಡಿಯಿಡಿ, ನಾವು ನಿಮ್ಮ ಬೆನ್ನಿಗಿರುತ್ತೇವೆ. ಆಗಬಹುದಾ?

No comments:

Post a Comment