Tuesday, 10 March 2015

ಉಕ್ಕಿನ ಹಕ್ಕಿಗಳ ಕಲರವದ ಹಿಂದೆ….

ಮೊನ್ನೆ ಫೆಬ್ರುವರಿ 18ರಿಂದ 22ರವರೆಗೂ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಬರೀ ಉಕ್ಕಿನ ಹಕ್ಕಿಗಳದ್ದೇ ರಾಜ್ಯಭಾರ. ಒಂದೊಂದರದ್ದೂ ಒಂದೊಂದು ಗಾತ್ರ, ಆಕಾರ, ಬಣ್ಣ ಹಾಗೂ ಕ್ಷಮತೆ! ಕೆಲವು ಭಾರತದ ಮಣ್ಣಿನದ್ದೇ ಆದರೂ ಹೆಚ್ಚಿನವು ವಿದೇಶಗಳಿಂದ ವಲಸೆ ಬಂದವು. ಅವು ಸುಮ್ಮನೆ ನೆಲದ ಮೇಲೆ ನಿಂತರೂ ಚಂದ, ಆಗಸದಲ್ಲಿ ಹಾರಾಡಿದರೂ ಚಂದ. ಒಟ್ಟಿನಲ್ಲಿ ಅವು ಮಾಡಿದ ಮೋಡಿ ಹೇಗಿತ್ತು ಅಂತೀರಿ? ನೆತ್ತಿಯ ಮೇಲಿನ ಸುಡುಬಿಸಿಲನ್ನೂ ಲೆಕ್ಕಿಸದೆ ಅವುಗಳನ್ನು ನೋಡಲು ಹೋದ ಲಕ್ಷಗಟ್ಟಳೆ ಜನ ನಿಬ್ಬೆರಗಾದರು. ನೆಲದ ಮೇಲೆ ತಣ್ಣಗೆ ನಿಂತಿದ್ದ ಕೆಲ ಹಕ್ಕಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಆಗಸದಲ್ಲಿ ರಂಗು ಚೆಲ್ಲಿಕೊಂಡು ಹಾರಾಡಿದವುಗಳನ್ನು ಕಂಡು ಚಿಕ್ಕ ಮಕ್ಕಳಂತೆ ಕೇಕೆ ಹಾಕಿ ನಕ್ಕರು. ಅವುಗಳ ಸದ್ದಿನೊಂದಿಗೆ ತಮ್ಮದೂ ದನಿ ಬೆರೆಸಿ ನಲಿದರು. ಅವುಗಳ ಸಾಹಸವನ್ನು ನೋಡಿ ಕೆಲಕ್ಷಣಗಳ ಮಟ್ಟಿಗೆ ತಮ್ಮಿರವನ್ನೇ ಮರೆತರು. ಹೃದಯದ ಬಡಿತವನ್ನು ಏರುಪೇರಾಗಿಸಿಕೊಂಡು ಬೆರಳನ್ನು ಕಚ್ಚಿ ಸುಮ್ಮನೇ ನಿಂತರು. ಹೌದು. ಇಷ್ಟೆಲ್ಲಾ ಭಾವನೆಗಳ ಸಿಂಚನಕ್ಕೆ ಕಾರಣವಾದದ್ದು ಈ ಬಾರಿಯ 'ಏರೋ ಇಂಡಿಯಾ 2015'.
ಇಡೀ ಏಷ್ಯಾ ಖಂಡಕ್ಕೇ ಕೀರ್ತಿ ತರುತ್ತಿರುವ, ನಮ್ಮ ದೇಶದ ಹೆಮ್ಮೆಯ ಏರ್ ಶೋ ಬರೋಬ್ಬರಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಅಂದಹಾಗೆ, 1996ರಲ್ಲಿ ಶುರುವಾದ ಈ ವೈಮಾನಿಕ ಅಭಿಯಾನಕ್ಕೆ ಈ ವರ್ಷ ದಶಕದ ಆವೃತ್ತಿಯ ಸಂಭ್ರಮ. ಪ್ರತಿ ಬಾರಿಯೂ ನಮ್ಮ ಕರ್ನಾಟಕದ ನಗರಿ ಬೆಂಗಳೂರೇ ಇದರ ಆತಿಥ್ಯವಹಿಸುತ್ತಿರುವುದು ನಮ್ಮ ಹೆಮ್ಮೆಯ ಕಿರೀಟಕ್ಕೆ ಮತ್ತೊಂದು ಗರಿಯೇ ಸರಿ! ಇದೊಂಥರಾ ವಿಮಾನಗಳ ಸಂತೆಯಿದ್ದಂತೆ. ನಮ್ಮ ರೈತರು ತಾವು ಬೆಳೆದದ್ದನ್ನೆಲ್ಲಾ ತಂದು ಸಂತೆಯಲ್ಲಿ ಗುಡ್ಡೆ ಹಾಕಿ ಮಾರುವುದಿಲ್ಲವೇ? ಇದೂ ಹಾಗೆಯೇ. ದೇಶ-ವಿದೇಶಗಳಿಂದ ಆಗಮಿಸುವ ವಿಮಾನ ತಯಾರಿಕಾ ಸಂಸ್ಥೆಗಳು ತಮ್ಮ ದೇಶದ ಅತ್ಯಾಧುನಿಕ ಯುದ್ಧವಿಮಾನಗಳು, ಹೆಲಿಕಾಪ್ಟರ್‍ಗಳು ಹಾಗೂ ಕ್ಷಿಪಣಿಗಳನ್ನು ಪ್ರದರ್ಶಿಸುತ್ತವೆ ಹಾಗೂ ಮಾರಾಟಕ್ಕಿಡುತ್ತವೆ. ಅಷ್ಟೇ ಅಲ್ಲ, ಅವುಗಳ ತಾಂತ್ರಿಕ ಕೌಶಲದ ಬಗ್ಗೆ ಜಂಭವನ್ನೂ ಕೊಚ್ಚಿಕೊಳ್ಳುತ್ತವೆ. ಖರೀದಿಯ ಆಸಕ್ತಿಯುಳ್ಳ ವೈಮಾನಿಕ ಪ್ರಪಂಚದ ದೊಡ್ಡಣ್ಣರುಗಳು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಈ ಬಾರಿಯಂತೂ ಒಟ್ಟು 750ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸಿದ್ದವು. 109 ದೇಶಗಳಿಂದ ಪರಿಣಿತರ ತಂಡಗಳು ಆಗಮಿಸಿದ್ದವು. ಉದ್ಯಮಿಗಳ ಸಂಖ್ಯೆಯಂತೂ ಒಂದೂವರೆ ಲಕ್ಷವನ್ನು ಮೀರಿತ್ತು! ಪ್ರಧಾನಿ ಮೋದಿಯವರೇ ಉದ್ಘಾಟಿಸಿದ ಮೇಲೆ ಕಾರ್ಯಕ್ರಮ ಕಳೆಗಟ್ಟದೆ ಇರುತ್ತದೆಯೇ? ಜೊತೆಗೆ 'ಮೇಕ್ ಇನ್ ಇಂಡಿಯಾ' ಎಂಬ ಘೋಷವಾಕ್ಯ ಬೇರೆ. ಅದಕ್ಕೆ ಕಾರಣವೂ ಇದೆ. ಇಂದು ಭಾರತ ರಕ್ಷಣಾ ಸಾಮಗ್ರಿಗಳ ಆಮದಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಆಮದೆಂದರೆ ಖಂಡಿತ ಹೆಗ್ಗಳಿಕೆಯಲ್ಲ. ಅತಿಯಾದ ಆರ್ಥಿಕ ಹೊರೆ. ಆದ್ದರಿಂದಲೇ ಅದನ್ನು ಸ್ವಲ್ಪ ಸ್ವಲ್ಪವಾಗಿಯೇ ತಹಬದಿಗೆ ತಂದು ರಫ್ತಿನಲ್ಲಿ ಮೊದಲಿಗರಾಗಬೇಕೆಂಬುದು ಮೋದಿಯವರ ಕನಸು. ಇಲ್ಲಿಯತನಕ ಏನಾಗುತ್ತಿತ್ತೆಂದರೆ ಬಿಡಿ ಭಾಗಗಳು ವಿದೇಶಗಳಲ್ಲಿ ತಯಾರಾಗಿ ಭಾರತಕ್ಕೆ ಬರುತ್ತಿದ್ದವು. ಇಲ್ಲಿ ಅವುಗಳ ಜೋಡಣೆ ಮಾತ್ರ ನಡೆಯುತ್ತಿದ್ದುದು. ಇನ್ನು ಮುಂದೆ ಬಿಡಿ ಭಾಗಗಳಿಂದ ಹಿಡಿದು ಸಮಸ್ತವನ್ನೂ ಭಾರತದಲ್ಲೇ ತಯಾರಿಸಿ ಜೋಡಿಸೋಣ ಎಂದು ಕರೆ ಕೊಟ್ಟಿದ್ದಾರೆ ಮೋದಿ. ಅವರ ಕರೆಗೆ ಹಲವು ದೇಶಗಳು ಸ್ಪಂದಿಸಿವೆ. ಪರಿಣಾಮವೇನಾಗುತ್ತದೋ ಕಾದು ನೋಡಬೇಕು.

ಉದ್ಯಮವಲಯಕ್ಕೆ ಸಂಬಂಧಿಸಿದ ವ್ಯಾವಹಾರಿಕ ವಿಷಯಗಳೇನೇ ಇರಲಿ, ನಮಗಂತೂ ಪ್ರತಿಬಾರಿಯೂ ಏರ್ ಶೋ ಎಂಬುದು ಸಡಗರದ ವಿಚಾರ ಎಂಬುದರಲ್ಲಿ ಎರಡು ಮಾತಿಲ್ಲ. ಆಕಾಶದಲ್ಲಿ ಸಲೀಸಾಗಿ ಪಲ್ಟಿ ಹೊಡೆಯುವ, ವಿವಿಧ ಚಿತ್ತಾರಗಳನ್ನು ರಚಿಸುವ, ಆಕಾರಗಳನ್ನು ಹೆಣೆಯುವ, ಬೆಚ್ಚಿ ಬೀಳಿಸುವಂಥ ಸಾಹಸಗಳನ್ನು ಪ್ರದರ್ಶಿಸುವ ದೇಶಿ, ವಿದೇಶೀ ವೈಮಾನಿಕ ತಂಡಗಳೊಂದಿಗೆ ನಮಗೆ ಅದೇನೋ ಅನನ್ಯ ಬೆಸುಗೆ. ಉದಾಹರಣೆಗೆ ನಮ್ಮ ಹಿಂದೂಸ್ಥಾನ್ ಏರೋನಾಟಿಕ್ಸ್ ಸಂಸ್ಥೆಯ  ತೇಜಸ್ ಹಾಗೂ ಸೂರ್ಯಕಿರಣದ ತಂಡಗಳನ್ನೇ ತೆಗೆದುಕೊಳ್ಳಿ. 1998 ರಿಂದಲೂ ಅವುಗಳ ಸಾಹಸವನ್ನು ನೋಡುತ್ತಲೇ ಬಂದಿದ್ದೇವೆ. 2005 ರಿಂದ ಈ ಗುಂಪಿಗೆ ಸೇರ್ಪಡೆಗೊಂಡ ಸಾರಂಗ್ ತನ್ನ ಚೊಚ್ಚಲ ಪ್ರದರ್ಶನದಲ್ಲೇ ಎಲ್ಲರ ಮನಸೂರೆಗೊಂಡಿತ್ತು. 2007 ರಲ್ಲಂತೂ ಅಭ್ಯಾಸ ನಡೆಸುತ್ತಿರುವಾಗ ಒಂದು ಸಾರಂಗ್ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಅದರ ಸಹ ಪೈಲಟ್ ಮರಣ ಹೊಂದಿದ್ದ. ಅದಾಗ್ಯೂ ಆ ತಂಡ ತನ್ನ ಪ್ರದರ್ಶನವನ್ನು ರದ್ದು ಮಾಡಿರಲಿಲ್ಲ . ಇವುಗಳಷ್ಟೇ ಅಲ್ಲದೆ ರಷ್ಯಾ ದೇಶದ ಮಿಗ್ ವಿಮಾನ, ಅಮೆರಿಕದ ಎಫ್-15, ಫ್ರಾನ್ಸ್ ದೇಶದ ಮಿರಾಜ್ ಹಾಗೂ ಫಾಲ್ಕನ್, ಇಂಗ್ಲೆಂಡಿನ ಹಾಕ್ ಹಾಗೂ ಜಾಗ್ವರ್‍ಗಳ ದರ್ಪ ದೌಲತ್ತುಗಳನ್ನು ಒಮ್ಮೆ ನೋಡಿದವರು ಇನ್ನೆಂದಿಗೂ ಮರೆಯಲಾರರು. 2011ರ ಎಂಟನೆಯ ಆವೃತ್ತಿಯಲ್ಲಿ ಸೂರ್ಯಕಿರಣ ತನ್ನ ಕೊನೆಯ ಪ್ರದರ್ಶನ ನೀಡಿತು. ಏಕೆಂದರೆ ಅದಕ್ಕೆ ನಿವೃತ್ತಿ ನೀಡಿ ಆ ಮಾದರಿಯ ಬದಲು ಹಾಕ್ ವಿಮಾನಗಳನ್ನು ಬಳಸಿಕೊಳ್ಳುವ ಯೋಜನೆಯನ್ನು ಜಾರಿಗೆ ತರಲಾಯಿತು. ಆದರೆ ಇಂದಿಗೂ ಜನ ಸೂರ್ಯಕಿರಣ್ ತಂಡದ ಪ್ರದರ್ಶನವನ್ನು ನೆನೆಯುತ್ತಾರೆ. ಈ ಬಾರಿಯ ಪ್ರದರ್ಶನಗಳನ್ನು ನೋಡಿದ ಬಹುತೇಕರಿಗೆ ಅನಿಸಿದ್ದು, 'ಛೆ, ಸೂರ್ಯಕಿರಣ ತಂಡವೂ ಇರಬೇಕಾಗಿತ್ತು' ಎಂದೇ. ಇಂಥ ಸಣ್ಣ ಪುಟ್ಟ ನಿರಾಸೆಗಳೇನೇ ಇದ್ದರೂ ಸುಮಾರು ಮೂರು ಲಕ್ಷ ಮಂದಿ ಈ ಬಾರಿಯ ಏರ್ ಶೋ ವೀಕ್ಷಿಸಿ ಆನಂದತುಂದಿಲರಾಗಿದ್ದಾರೆ.


 ಈ ಬಾರಿ ಭಾಗವಹಿಸಿದ್ದ ಕೆಲ ಮುಖ್ಯ ತಂಡಗಳೆಡೆ ಗಮನ ಹರಿಸೋಣ ಬನ್ನಿ. ಭಾರತೀಯ ವಾಯುಸೇನೆಯ ಹೆಮ್ಮೆಯ 'ಸಾರಂಗ್' ಹೆಲಿಕಾಪ್ಟರ್‍‍ಗಳ ತಂಡ ತನ್ನ ಅಮೋಘ ಪ್ರದರ್ಶನವನ್ನು ಎಂದಿನಂತೆ ಈ ಬಾರಿಯೂ ಮುಂದುವರೆಸಿತು. ಆ ತಂಡದಲ್ಲಿದ್ದ ಒಂದು ವಿಶೇಷವೇನು ಗೊತ್ತೇ? ಮೊತ್ತ ಮೊದಲ ಬಾರಿಗೆ ಇಬ್ಬರು ಮಹಿಳೆಯರು ತಂಡದಲ್ಲಿ ಸ್ಥಾನ ಪಡೆದದ್ದು! ಅದೊಂದೇ ಅಲ್ಲದೆ 'ಧ್ರುವ್' ಹೆಲಿಕಾಪ್ಟರ್‍ಗಳೂ ಮನಸೂರೆಗೊಳ್ಳುವ ಕಸರತ್ತು ನಡೆಸಿದವು. ಇನ್ನು ಇಂಗ್ಲೆಂಡಿನ ಏರೋಸೂಪರ್‍ಬ್ಯಾಟಿಕ್ಸ್ ತಂಡ ಬ್ರೆಟ್ಲಿಂಗ್‍ನ 'ವಿಂಗ್ ವಾಕರ್ಸ್' ಮಾಡಿದ ಮೋಡಿಯನ್ನಂತೂ ಪದಗಳಲ್ಲಿ ವರ್ಣಿಸುವುದು ಸಾಧ್ಯವೇ ಇಲ್ಲ. ಭೂಮಿಯಿಂದ ನೂರಾರು ಅಡಿ ಎತ್ತರಕ್ಕೆ ಚಿಮ್ಮಿದ ಎರಡು ವಿಮಾನಗಳ ಮೇಲೆ ತಲಾ ಒಬ್ಬೊಬ್ಬರಂತೆ ಹತ್ತಿ ನಿಂತ ಲಲನೆಯರು ಕಸರತ್ತುಗಳನ್ನು ಮಾಡಿದ್ದೇ ಮಾಡಿದ್ದು. ಅದೂ ಏಕಕಾಲದಲ್ಲಿ, ಇಬ್ಬರ ನಡುವೆ  ಅಂಗಾಂಗಗಳ ಚಲನೆಯಲ್ಲಿ ಒಂಚೂರೂ ವ್ಯತ್ಯಾಸವಿಲ್ಲದಂತೆ! ಅವರು ನೀಡಿದ ಕರಾರುವಾಕ್ ಪ್ರದರ್ಶನ ಹೇಗಿತ್ತಪ್ಪಾ ಎಂದರೆ ಎರಡು ಬೊಂಬೆಗಳಿಗೆ ಒಂದೇ ಸಮಯಕ್ಕೆ ಕೀಲಿ ಕೊಟ್ಟು ಆಟವಾಡಲು ಬಿಟ್ಟಂತಿತ್ತು! ಅವರೇನೋ ಲೀಲಾಜಾಲವಾಗಿ ಮಾಡುತ್ತಿದ್ದರು, ಆದರೆ ನೆರೆದಿದ್ದ ಜನಸ್ತೋಮಕ್ಕೆ ತನ್ನ ಆಶ್ಚರ್ಯ, ಆತಂಕ ಹಾಗೂ ಮೆಚ್ಚುಗೆಗಳನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ಸ್ವೀಡನ್ನಿನ ಏರೋಬ್ಯಾಟಿಕ್ ತಂಡ 'ಸ್ಕ್ಯಾಂಡಿನೇವಿಯನ್ ಏರ್ ಶೋ' ಭಾರತದ ಧ್ವಜದ ತ್ರಿವರ್ಣದ ರಂಗನ್ನು ಗಾಳಿಯಲ್ಲಿ ಚೆಲ್ಲಾಡಿ ಎಲ್ಲರನ್ನೂ ಪುಳಕಿತರನ್ನಾಗಿಸಿದ್ದೂ ಆಯಿತು. ರಷ್ಯನ್ ಏರೋಬ್ಯಾಟಿಕ್ ತಂಡ ‘ಯಾಕೋಲೆವ್’ ಪ್ರದರ್ಶಿಸಿದ ಮೈನವಿರೇಳಿಸುವ ಸಾಹಸವೂ ಕಡಿಮೆಯದ್ದಾಗಿರಲಿಲ್ಲ. ಇನ್ನೇನು, ಈ ಬಾರಿಯೂ ಎಲ್ಲವೂ ಸುಸೂತ್ರವಾಗಿ ಮುಗಿಯಿತು ಎಂದುಕೊಳ್ಳುತ್ತಿದ್ದಾಗಲೇ ಜೆಕ್ ಗಣರಾಜ್ಯದ ತಂಡ 'ರೆಡ್ ಬುಲ್ಸ್' ಒಂದು ಸಣ್ಣ ಅವಘಡವನ್ನೆದುರಿಸಿತು. ಪ್ರದರ್ಶನ ನೀಡುತ್ತಿರುವಾಗ ಸಮತೋಲನ ಕಳೆದುಕೊಂಡ ಅದರ ಎರಡು ವಿಮಾನಗಳ ರೆಕ್ಕೆಗಳು ಪರಸ್ಪರ ಬಡಿದುಕೊಂಡು ನೋಡುಗರಲ್ಲಿ ಗಾಬರಿ ಮೂಡಿಸಿದರೂ ತಕ್ಷಣವೇ ಸಂಭಾಳಿಸಿಕೊಂಡು ಭೂಮಿಗಿಳಿದಿದ್ದರಿಂದ ಯಾವುದೇ ಪ್ರಾಣಾಪಾಯಗಳಾಗಲಿಲ್ಲ. ಒಟ್ಟಾರೆ, ಪ್ರದರ್ಶಿಸಿದವರ ಹಾಗೂ ನೋಡುಗರ ಮನಃಪಟಲಗಳಲ್ಲಿ ಈ ವರ್ಷದ ‘ಏರ್ ಶೋ’ನ ನೆನಪುಗಳು ಬಹುಕಾಲದವರೆಗೆ ಉಳಿಯಲಿವೆ ಎಂಬುದಂತೂ ಸ್ಪಷ್ಟವಾಗಿತ್ತು


ಹಾಗಾದರೆ ಈ ಕಾರ್ಯಕ್ರಮದ ಮೂಲ ಉದ್ದೇಶವೇನು? ಒಂದೆಡೆ ವಿಮಾನ ತಯಾರಕರನ್ನು ಒಟ್ಟು ಮಾಡಿ ಪ್ರದರ್ಶನ ಏರ್ಪಡಿಸಿ, ಮತ್ತೊಂದೆಡೆ ವೈವಿಧ್ಯಮಯ ಸಾಹಸಗಳಿಂದ ಜನರ ಶಹಬ್ಬಾಸ್‍ಗಿರಿ ಪಡೆದರೆ ಕಾರ್ಯಕ್ರಮ ಸಾರ್ಥಕವಾಗಿದೆ ಎಂದರ್ಥವೇ? ಖಂಡಿತ ಇಲ್ಲ. ಸಾರ್ಥಕ್ಯದ ಹಾದಿ ಬಲು ಕಠಿಣವಿದೆ. ಬಲ ಕಳೆದುಕೊಂಡಿರುವ ನಮ್ಮ ರಕ್ಷಣಾ ವಲಯವನ್ನು ಸದೃಢಗೊಳಿಸಬೇಕಿದೆ. ನಮಗೆ ಶಸ್ತ್ರಾಸ್ತ್ರಗಳ, ಯುದ್ಧವಿಮಾನಗಳ ಅಗತ್ಯವಿದೆಯೆಂದು, ಕಿರಾಣಿ ಅಂಗಡಿಯಿಂದ ಸಾಮಾನು ಕೊಂಡಂತೆ ಜಾಗತಿಕೆ ಮಾರುಕಟ್ಟೆಯಿಂದ ಕೊಂಡುಕೊಳ್ಳುವುದರಲ್ಲಿ ಯಾವ ಜಾಣತನವೂ ಇಲ್ಲ. ಮಿಲಿಯಗಟ್ಟಳೆ ಹಣ ವ್ಯಯಿಸಿ ಸಾಲಗಾರರಾಗಿ ಅವುಗಳನ್ನು ಖರೀದಿಸುವುದಕ್ಕಿಂತ ಅವುಗಳ ತಯಾರಿಕೆಯ ತಂತ್ರಜ್ಞಾನವನ್ನು ಅರಿಯುವುದು ಇಂದಿನ ತುರ್ತು ಅಗತ್ಯ. ಆದ್ದರಿಂದಲೇ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮೋದಿ ಸರ್ಕಾರ ಒಂದು ಉತ್ತಮ ಕೆಲಸ ಮಾಡಿದೆ. ಹೆಲಿಕಾಪ್ಟರ್‍ಗಳ ಹಾಗೂ ಜಲಾಂತರ್ಗಾಮಿ ಹಡಗುಗಳ ಖರೀದಿಗಾಗಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಕರೆದಿದ್ದ ಜಾಗತಿಕ ಟೆಂಡರನ್ನು ರದ್ದುಗೊಳಿಸಿದೆ. ಆ ಮೂಲಕ ಅದಕ್ಕೆ ವ್ಯಯವಾಗಲಿದ್ದ ಮಿಲಿಯಗಟ್ಟಳೆ ಡಾಲರುಗಳನ್ನು ಉಳಿಸಿದೆ. ಅದರ ಮುಂದುವರಿದ ಭಾಗವೇ ಏರೋ ಇಂಡಿಯಾದಲ್ಲಿ ಮಾರ್ದನಿಸಿದ 'ಮೇಕ್ ಇನ್ ಇಂಡಿಯಾ' ಎಂಬ ಘೋಷಣೆ. ತಾಂತ್ರಿಕ ಕೌಶಲವನ್ನು ಎರವಲು ಪಡೆದು ಎಲ್ಲವನ್ನೂ ನಮ್ಮಲ್ಲಿಯೇ ತಯಾರಿಸಿದರೆ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವುದೇ ಅಲ್ಲದೆ ರಕ್ಷಣಾ ಸಾಮಗ್ರಿಗಳ ಬರವೂ ನೀಗುತ್ತದೆ. ಆದ್ದರಿಂದಲೇ ಈ ವಿಷಯವನ್ನು ನಿಸ್ಸಂಕೋಚವಾಗಿ ಏರೋ ಇಂಡಿಯಾ ಉದ್ಘಾಟನೆಯಲ್ಲಿ ಹೇಳಿದರು ಮೋದಿ. 'ಭಾರತ ರಕ್ಷಣಾ ಸಾಮಗ್ರಿಗಳ ಆಮದಿನಲ್ಲಿ ವಿಶ್ವದಲ್ಲೇ ಮೊದಲ ರಾಷ್ಟ್ರ ಎಂಬುದು ನಿಮ್ಮ ಕಿವಿಗೆ ಇಂಪಾಗಿರುವ ವಿಷಯ ನಿಜ, ಆದರೆ ಅದು ನಮಗೆ ಪ್ರಿಯವಾದದ್ದಲ್ಲ. ಯಾವುದರಲ್ಲಿ ಇರಬಾರದೋ ಅದರಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ನಮಗೆ ರಕ್ಷಣಾ ಸಾಮಗ್ರಿಗಳನ್ನು ಬರಿದೇ ಮಾರುವ ಬದಲಿಗೆ ತಂತ್ರಜ್ಞಾನದಲ್ಲಿ ಪಾಲುದಾರರಾಗಿ ಬನ್ನಿ' ಎಂದು ವಿದೇಶೀ ತಯಾರಕರನ್ನು ಕುರಿತು ಅವರು ಆಡಿದ ನೇರ ಮಾತುಗಳಲ್ಲಿ ಅವರ ಉದ್ದೇಶ ಸ್ಪಷ್ಟವಾಗಿತ್ತು.

ತಮ್ಮ ಮಾತುಗಳಿಗೆ ಇಂಬು ಕೊಡುವಂತೆ ಈ ವರ್ಷದ ಬಜೆಟ್‍ನಲ್ಲೂ ರಕ್ಷಣಾ ಇಲಾಖೆಯ ಅಭಿವೃದ್ಧಿಗೆ ಹೆಚ್ಚು ಹಣವನ್ನು ಮೀಸಲಿಟ್ಟಿದೆ ಮೋದಿ ಸರ್ಕಾರ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಇನ್ನೊಂದು ದಶಕದಲ್ಲಿ ನಾವೂ ಅಮೆರಿಕ, ರಷ್ಯಾಗಳಿಗೆ ಪೈಪೋಟಿ ನೀಡುವುದು ಖಂಡಿತ. ಆ ‘ಅಚ್ಛೇ ದಿನಗಳು’ ಬೇಗ ಬರಲಿ ಎಂದು ಹಾರೈಸೋಣ ಅಲ್ಲವೇ?

No comments:

Post a Comment