Tuesday, 10 March 2015

ಇಂದಿನ ಮಹಿಳೆಗೆ ಮಹಿಳಾವಾದದ ಟೊಳ್ಳು ಸಮರ್ಥನೆ ಬೇಕಿಲ್ಲ!

ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ನೆನೆಯಲಿಕ್ಕೇನೋ ಅಸಂಖ್ಯ ಮಹಿಳಾ ಸಾಧಕಿಯರು ಸಿಗುತ್ತಾರೆ. ಆದರೆ ತಮ್ಮ ಬರಹಗಳಲ್ಲಿ ಮಹಿಳೆಯರನ್ನು ಸದಾ ನೈತಿಕತೆಯ, ಮನಸ್ಸಾಕ್ಷಿಯ ಕುರುಹುಗಳನ್ನಾಗಿ ಬಿಂಬಿಸುತ್ತಲೇ ಬಂದಿರುವ, ಅವರ ಮನಸ್ಥಿತಿಯ ಹಲವು ಆಯಾಮಗಳನ್ನು ಯಥಾವತ್ತಾಗಿ ಚಿತ್ರಿಸಿರುವ ಎಸ್.ಎಲ್ ಭೈರಪ್ಪನವರನ್ನು ಈ ಹೊತ್ತು ನೆನೆಯಲೇಬೇಕೆನಿಸುತ್ತಿದೆ. ಅದರಲ್ಲೂ ಮಹಿಳಾವಾದವೆಂಬ ಮೊರೆತ ಮೇರೆ ಮೀರುತ್ತಿರುವ ಇಂದಿನ ದಿನಗಳಲ್ಲಿ ಈ ನೆನಕೆ ಹೆಚ್ಚು ಪ್ರಸ್ತುತವೂ ಹೌದು.

ಹಲವು ವರ್ಷಗಳ ಹಿಂದಿನ ಘಟನೆ ಇದು. ಆಗಿನ್ನೂ ಭೈರಪ್ಪನವರ ವಂಶವೃಕ್ಷವನ್ನು ಓದಿರಲಿಲ್ಲ. ನಮ್ಮ ನೆರೆಮನೆಯಲ್ಲಿ ಪುಟ್ಟ ಹುಡುಗಿಯೊಬ್ಬಳಿದ್ದಳು. ಅಬ್ಬಬ್ಬಾ ಎಂದರೆ ಏಳರ ಪ್ರಾಯ. ಅಸಾಧ್ಯ ಚೂಟಿ. ಮನೆಯಲ್ಲಿದ್ದುದು ಅಪ್ಪ ಹಾಗೂ ಮಗಳಿಬ್ಬರೇ. ತಂದೆ ತಾವು ಬೆಳಿಗ್ಗೆ ಕೆಲಸಕ್ಕೆ ಹೋಗುವ ಹೊತ್ತಿಗೆ ಇಬ್ಬರಿಗೂ ಹೊಟ್ಟೆಗೆ ಏನನ್ನಾದರೂ ಬೇಯಿಸಿ, ಮಗಳನ್ನು ಅಣಿಮಾಡಿ ಅವಳನ್ನು ಹತ್ತಿರದ ಶಾಲೆಗೆ ಬಿಟ್ಟು ಹೋಗುತ್ತಿದ್ದರು. ಶಾಲೆ ಮುಗಿಸಿ ಬರುತ್ತಿದ್ದ ಮಗು ಸಂಬಂಧಿಯೊಬ್ಬರ ಮನೆಯಲ್ಲಿರುತ್ತಿತ್ತು. ತಂದೆ ಕೆಲಸದಿಂದ ಹಿಂದಿರುಗಿ ಬರುವಾಗ ಅವಳನ್ನು ಕರೆತರುತ್ತಿದ್ದರು. ಆ ಮಗುವಿಗಾಗಿ ಅವರು ಪಡುತ್ತಿದ್ದ ಶ್ರಮ, ವಹಿಸುತ್ತಿದ್ದ ಆಸ್ಥೆ ಮತ್ತು ಆ ಮಗು ಅವರಿಗಾಗಿ ಹಂಬಲಿಸುತ್ತಿದ್ದುದನ್ನು ನೋಡುತ್ತಿದ್ದ ನಮಗೆ, ಮಗಳಿಗೆ ಅಪ್ಪ ಹೆಚ್ಚೋ, ಅಪ್ಪನಿಗೆ ಮಗಳೋ ಎಂಬ ಗೊಂದಲ ಉಂಟಾಗುತ್ತಿತ್ತು. ನಂತರ ತಿಳಿದು ಬಂದದ್ದೇನೆಂದರೆ, ಆ ಹುಡುಗಿಯ ತಾಯಿ ಅದಿನ್ನೂ ಚಿಕ್ಕ ಮಗುವಾಗಿದ್ದಾಗಲೇ ಸಂಸಾರವನ್ನು ತೊರೆದು ತಾವು ಪ್ರೀತಿಸಿದವರೊಂದಿಗೆ ಹೊರಟು ಹೋಗಿದ್ದರಂತೆ! ಆಗ ಆ ವಿಷಯ ಅಷ್ಟಾಗಿ ಕಾಡಿರಲಿಲ್ಲ. ಮುಂದೆ ವಂಶವೃಕ್ಷವನ್ನು ಓದಿದಾಗ ಕಾತ್ಯಾಯಿನಿಯ ಜಾಗವನ್ನು ಆ ಮಗುವಿನ ಅಮ್ಮನೇ ಆಕ್ರಮಿಸಿಕೊಂಡಿದ್ದರು. ಕಣ್ಣ ಮುಂದೆ ಆ ಅಪ್ಪ ಮಗಳ ಚಿತ್ರವೇ ಬಂದು ಅವ್ಯಕ್ತವಾದ ವೇದನೆಯಾಗುತ್ತಿತ್ತು. ಕಾತ್ಯಾಯಿನಿಗೇನೋ ಹೌದು ಎನ್ನಬಹುದಾದ ಒಂದು ಕಾರಣವಿತ್ತು. ಈಕೆಗೇನಿತ್ತು ಎಂಬುದು ಆಗ ಅರ್ಥವಾಗಿರಲಿಲ್ಲ. ಈಗ ಅರ್ಥವಾಗುತ್ತಿದೆ. ಇದೊಂದೇ ಅಲ್ಲ, ಇಂಥ ಹಲವು ಅನರ್ಥಗಳಿಗೆ ಎಡೆ ಮಾಡಿಕೊಡುತ್ತಿರುವ ಚಿಂತನೆಗಳು ಹಾಗೂ ಅವು ಹುಟ್ಟಿಸುತ್ತಿರುವ ಹುಸಿ ಸಮರ್ಥನೆಗಳು ಚೆನ್ನಾಗಿಯೇ ಅರ್ಥವಾಗುತ್ತಿದೆ.
ಇಲ್ಲ. ನಾವು ಸ್ವಘೋಷಿತ ಮಹಿಳಾವಾದಿಗಳಲ್ಲ. ವಿಚಾರವಾದಿ ಹೋರಾಟಗಾರ್ತಿಯರೂ ಅಲ್ಲ. ದೊಡ್ಡ ದೊಡ್ಡ ವೇದಿಕೆಗಳಲ್ಲಿ ಖಂಡ-ತುಂಡವಾಗಿ ಭೈರಪ್ಪನವರ ಬರಹಗಳನ್ನು ಜರಿಯುವ, ಅವರನ್ನು ವಿಕೃತ ಮನಸ್ಸಿನವರು ಎಂದು ಹೇಳುವಷ್ಟು ವಿಪರೀತಿ ಬುದ್ಧಿಯನ್ನು ದೇವರು ನಮಗೆ ದಯಪಾಲಿಸಿಯೂ ಇಲ್ಲ, ಆ ಸೌಭಾಗ್ಯ ನಮಗೆ ಬೇಡವೂ ಬೇಡ. ಆದರೆ ಸಾಮಾನ್ಯ ಮಹಿಳೆಯರಾಗಿ ಆ ಪಾತ್ರಗಳನ್ನು ಮನಸ್ಸಿನಲ್ಲೇ ಜಗಿದು ನುಂಗುವಾಗ, ಅಷ್ಟು ಹೊತ್ತೂ ಆ ಪಾತ್ರಗಳಾಗಿಯೇ ಜೀವಿಸುವಾಗ ನಮ್ಮ ಮನಸ್ಸುಗಳಿಗಿರುವ ನೈತಿಕತೆಯೆಂಬ ಬೇಲಿ ನಮಗರಿವಿಲ್ಲದಂತೆಯೇ ಮತ್ತಷ್ಟು ಬಿಗಿಯಾಗುತ್ತದೆ. ಮನಸ್ಸಾಕ್ಷಿಯನ್ನು ಮೀರಿ ನಡೆಯಬಾರದೆಂಬ ನಾವು ಹಾಕಿಕೊಂಡಿರುವ ನಿಯಮ ಮನಸ್ಸಿನೊಳಗೇ ಮತ್ತಷ್ಟು ಹೆಪ್ಪುಗಟ್ಟುತ್ತದೆ. ಹಾಗಾದರೆ ವಂಶವೃಕ್ಷ, ಅಂಚು, ಕವಲು ಹಾಗೂ ಯಾನಗಳನ್ನೇ ಉದಾಹರಿಸಿ ಸಿಕ್ಕ ಸಿಕ್ಕ ಮೇಜುಗಳನ್ನು ಕುಟ್ಟುವ, ಮೈಕುಗಳಲ್ಲಿ ಗಂಟಲು ಹರಿದುಕೊಳ್ಳುವ ಮಹಿಳಾವಾದಿಗಳಿಗೆ, ಪ್ರಗತಿಪರರಿಗೆ ಹೀಗೇಕನಿಸುವುದಿಲ್ಲ? ಭೈರಪ್ಪನವರದ್ದು ಮಹಿಳೆಯರ ಕುರಿತಾದ ಕ್ರೌರ್ಯ ಮನಸ್ಥಿತಿ ಎಂದೇಕೆ ಬೊಬ್ಬೆ ಹೊಡೆಯುತ್ತಾರೆ? ಮಹಿಳಾವಾದಿಗಳಿಗೆ ಪ್ರಿಯವಾದ ಆ ನಾಲ್ಕೂ ಕಾದಂಬರಿಗಳ ಮಹಿಳಾ ಪಾತ್ರಗಳನ್ನು ಒಮ್ಮೆ ನಮ್ಮ ಹಾಗೂ ಅವರ ದೃಷ್ಟಿಕೋನಗಳಿಂದ ನೋಡಿಯೇಬಿಡೋಣ.

ವಂಶವೃಕ್ಷದ ಪ್ರಮುಖ ಸ್ತ್ರೀ ಪಾತ್ರವಾದ ಕಾತ್ಯಾಯಿನಿ ವಿಧವೆ. ಐದು ವರ್ಷದ ಮಗುವಿನ ತಾಯಿ. ತನ್ನನ್ನೇ ನಂಬಿದ್ದ ವಯೋವೃದ್ಧ ಅತ್ತೆ ಮಾವಂದಿರನ್ನು, ಮನೆಯ ಜವಾಬ್ದಾರಿಗಳೆಲ್ಲವನ್ನೂ, ಕೊನೆಗೆ ತಾನು ಹೆತ್ತ ಮಗನನ್ನೂ ಬಿಟ್ಟು ಓಡಿ ಹೋಗಿ ಬೇರೊಬ್ಬನನ್ನು ಮದುವೆಯಾಗುತ್ತಾಳೆ. ಮಾವ ಶ್ರೀನಿವಾಸ ಶ್ರೋತ್ರಿಯವರು ಬಲವಾಗಿ ನಂಬಿದ್ದ ವಂಶವೃಕ್ಷವನ್ನು ತಾನು ಹೀಗೆ ತೊರೆದು ಹೋಗಿದ್ದು ಕ್ರಮೇಣ ಅವಳ ಮನಸ್ಸನ್ನು ಕಿತ್ತು ತಿನ್ನುತ್ತದೆ. ಹೊಸ ಗಂಡನಿಗೆ ತಕ್ಕ ಹೆಂಡತಿಯಾಗಲಾರದೆ, ಅವನ ಮಕ್ಕಳನ್ನೂ ಹೆರಲಾಗದೆ ಪಾಪ ಪ್ರಜ್ಞೆಯಿಂದ ನರಳಿ ಸಾಯುತ್ತಾಳೆ. ಇಲ್ಲಿ ವಂಶವೃಕ್ಷವೆಂಬುದು ನೆಪವಷ್ಟೆ. ಎಲ್ಲ ಸಂಬಂಧಗಳಿಗೂ ಯಾವುದೋ ಕರ್ತವ್ಯದ ಸಂಕೋಲೆಯೊಂದಿರುತ್ತದೆ, ಇರಲೇಬೇಕು ಎನಿಸುವುದಿಲ್ಲವಾ? ನಮ್ಮ ಮಹಿಳಾವಾದಿಗಳಾಗಿದ್ದರೆ ಏನು ಮಾಡಿಸುತ್ತಿದ್ದರು ಕಾತ್ಯಾಯಿನಿಯ ಕೈಲಿ? ಮತ್ತೆ ಮೂರು ಮಕ್ಕಳನ್ನು ಹಡೆಸಿ ಶ್ರೋತ್ರಿಯರಿಗೆ ಸಡ್ದು ಹೊಡೆಯುವಂತೆ, ಅವರ ಎದುರೇ ಬದುಕಿ ತೋರಿಸುವಂತೆ ಮಾಡುತ್ತಿದ್ದರಾ? ಇಲ್ಲಿ ಪ್ರಶ್ನೆ ವಿಧವಾ ವಿವಾಹದ್ದಲ್ಲವೇ ಅಲ್ಲ. ಆದರೆ ಸಂದರ್ಭದ ವಿವೇಚನೆಯಿಲ್ಲದೆ ಬರೀ ತನ್ನ ದೈಹಿಕ ಕಾಮನೆಯ ಪೂರ್ತಿಗೋಸ್ಕರ ಮನೆಯನ್ನು, ಮಕ್ಕಳನ್ನು ಬಿಟ್ಟು ಹೊರಟುಬಿಡುವುದು ಮಹಿಳಾವಾದವಾ? ಅದು ಆ ಕ್ಷಣಕ್ಕೆ ಸರಿ ಎನಿಸಬಹುದು. ಆಮೇಲಾದರೂ ಆ ಕೊರಗು ಜೀವನಪರ್ಯಂತ ಕಾಡುವುದಿಲ್ಲವಾ? ಅಂಥವರೆಲ್ಲ ಆದರ್ಶ ಮಹಿಳೆಯರಾಗಿಬಿಟ್ಟರೆ, ಗಂಡನನ್ನು ಕಳೆದುಕೊಂಡ ಮೇಲೂ ಜೀವನಪೂರ್ತಿ ಒಂಟಿಯಾಗಿದ್ದು ಮಕ್ಕಳಿಗೋಸ್ಕರ ಹೆಣಗಿ ಅವರನ್ನು ದಡ ಸೇರಿಸುವ ತಾಯಂದಿರು ಮುಟ್ಠಾಳರಾ? ತಮ್ಮ ಆಸೆ, ಕಾಮನೆಗಳನ್ನು ಹತ್ತಿಕ್ಕಿಕೊಂಡು ಮಕ್ಕಳ ಏಳ್ಗೆಯಲ್ಲಿ ಸಾರ್ಥಕ್ಯ ಕಾಣುವ ವಿಧವೆಯರು ತಪ್ಪು ಮಾದರಿಯಾಗುತ್ತಾರಾ ಈ ಆಧುನಿಕ ಸಮಾಜದಲ್ಲಿ?

ಇನ್ನು ಅಂಚು ಕಾದಂಬರಿಯಲ್ಲಿ ಬರುವ ಡಾ.ಅಮೃತಾಳ ಪಾತ್ರ. ಬಹಳ ಬುದ್ಧಿವಂತೆಯಾಗಿದ್ದರೂ ತನ್ನ ಚಿಕ್ಕಮ್ಮನಿಂದಲೇ ಮೋಸ ಹೋಗುವ ಅಮೃತಾ ಹತಾಶಳಾಗಿ ತನ್ನೆರಡು ಮಕ್ಕಳೊಂದಿಗೆ ಬದುಕುತ್ತಿರುತ್ತಾಳೆ. ಅವಳದ್ದು ತನಗಾದ ಅನ್ಯಾಯವನ್ನು ಅರಗಿಸಿಕೊಂಡು ಬದುಕಲಾರದೆ, ಬದುಕನ್ನು ಕೊನೆಗಾಣಿಸಿಕೊಂಡು ಸಾಯಲಾರದೆ ತೊಳಲಾಡುವ ಮಾನಸಿಕ ಸ್ಥಿತಿ. ಅವಳ ಮನೆಯ ರಿಪೇರಿಯ ಕಾರಣಕ್ಕೆ ಜೊತೆಯಾಗುವ ಆರ್ಕಿಟೆಕ್ಟ್ ಸೋಮಶೇಖರ ಮೊದಮೊದಲು ಅವಳನ್ನು ಅರಿಯಲಾಗದೆ ಹೆಣಗಿ, ಕೊನೆಗೆ ಅರಿತು ಜೊತೆಯಾಗುವ ಪರಿಯಲ್ಲಿ ಏನು ಅಭ್ಯಂತರವಿದೆ ಮಹಿಳಾವಾದಿಗಳಿಗೆ? ಇನ್ನೆಲ್ಲಿ ರಿವಾಲ್ವರಿನಿಂದ ಗುಂಡು ಹೊಡೆದುಕೊಂಡು ಸಾಯುತ್ತಾಳೋ, ಇನ್ನೆಲ್ಲಿ ನಡುರಾತ್ರಿಯಲ್ಲಿ ಚಾಮುಂಡಿ ಬೆಟ್ಟ ಹತ್ತಲು ಹೊರಡುತ್ತಾಳೋ ಎಂದು ಹೊತ್ತಲ್ಲದ ಹೊತ್ತಿನಲ್ಲಿ ಓಡೋಡಿ ಬರುವ ಸೋಮಶೇಖರ, ಅವಳನ್ನು ವಿನಾಶದ ಅಂಚಿನಿಂದ ಹೊರಗೆಳೆದು ತಂದು ಜೊತೆಯಾಗಿ ನಿಲ್ಲುತ್ತಾನಲ್ಲ, ಆ ಪ್ರಕ್ರಿಯೆಯಲ್ಲಿ ಯಾವ ಕ್ರೌರ್ಯವಿದೆ? ಅಥವಾ ಮಹಿಳೆಯೋರ್ವಳು ಇಷ್ಟು ಅಧೀರಳಾಗಬಲ್ಲಳು ಎಂದು ತೋರಿಸಿರುವುದು ಇಡೀ ಸ್ತ್ರೀ ಕುಲಕ್ಕೇ ಅವಮಾನವಾ? ಇಂಥ ಮನೋವ್ಯಥೆಯ ಹಲವಾರು ಉದಾಹರಣೆಗಳು ನಮ್ಮ ಸುತ್ತಮುತ್ತಲೆಲ್ಲ ಇವೆಯಲ್ಲ, ಕಾಣುವುದಿಲ್ಲವಾ ವಿಚಾರವಾದಿಗಳ ಕಣ್ಣಿಗೆ?

ಕವಲು ಕಾದಂಬರಿಗಂತೂ ಮಹಿಳಾ ವಿಮೋಚನೆಯೇ ವಸ್ತು. ತನ್ನ ಕಂಪೆನಿಯ ಮಾಲೀಕನನ್ನೇ ಉಪಾಯವಾಗಿ ಬಲೆಗೆ ಹಾಕಿಕೊಂಡು ಮದುವೆಯಾಗುವ ಮಂಗಳ, ತನ್ನ ಸ್ವಪ್ರತಿಷ್ಠೆಗೋಸ್ಕರ ಗಂಡನನ್ನು ದೂರ ಮಾಡಿಕೊಳ್ಳುವ ಇಳಾ, ಇಬ್ಬರೂ ಮಹಿಳಾವಾದದ ಅಪರಾವತಾರವೇ ಅಲ್ಲವೇ? ತಮ್ಮ ಉದ್ದೇಶ ಸಾಫಲ್ಯಕ್ಕಾಗಿ ಏನನ್ನಾದರೂ ಮಾಡುವ ಇವರಿಬ್ಬರೂ ಕೊನೆಗೆ ಗೆದ್ದೂ ಸೋತಿರುವುದರಲ್ಲಿ ತಪ್ಪೇನಿದೆ? ವರದಕ್ಷಿಣೆ ಕಿರುಕುಳವೆಂದು ಸುಳ್ಳು ಕೇಸುಗಳನ್ನು ಜಡಿದು ಗಂಡನ ಮನೆಯವರ ಬಾಳನ್ನು ನರಕವಾಗಿಸಿರುವ ಎಷ್ಟು ಹೆಣ್ಣುಮಕ್ಕಳಿಲ್ಲ ನಮ್ಮ ನಡುವೆ? ನೆಮ್ಮದಿಯ ಸಂಸಾರಗಳಲ್ಲಿ ಮುಳ್ಳಾಗಿ ನುಸುಳಿ ಹುಳಿ ಹಿಂಡುವ ಮಹಿಳಾಮಣಿಗಳಿಗೆ ಕೊರತೆಯೇ ನಮ್ಮ ಸಮಾಜದಲ್ಲಿ? ತೀರ ಸಭ್ಯ, ಮೃದು ಹೃದಯಿಗಳಾದ ಗಂಡಂದಿರನ್ನು ತಮ್ಮ ತಂದೆ-ತಾಯಿಯರಿಂದಲೇ ದೂರವಿಟ್ಟು ನೋಯಿಸುವ, ಅವರು ದುಡಿಯುವ ಪ್ರತಿ ಕಿಲುಬು ಕಾಸಿನ ಮೇಲೂ ಹಕ್ಕು ಚಲಾಯಿಸುವ ರಾಕ್ಷಸೀರೂಪಿ ಹೆಂಡತಿಯರೇನು ಕಡಿಮೆಯೇ? ಅಂಥವರಿಗೆಲ್ಲ ಹೋಗಿ ಬುದ್ಧಿ ಹೇಳುತ್ತಾರಾ ಮಹಿಳಾವಾದಿಗಳು? ಮಂಗಳೆಯನ್ನು ತನ್ನ ದೈಹಿಕ ಕಾಮನೆಗಾಗಿ ಬಳಸಿಕೊಳ್ಳುವ ಮೇಡಮ್ ಸರಾಫ್‍, ಪುರುಷರ ಮೇಲಿನ ಅವಲಂಬನೆಯನ್ನು ಇಲ್ಲವಾಗಿಸುವಲ್ಲಿ ಇದು ಅವಶ್ಯಕ ಎನ್ನುತ್ತಾಳೆ. Lesbian Feminism ಎನ್ನುವ, ಸುಮಾರು 70ರ ದಶಕದಿಂದಲೇ ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಮಹಿಳಾ ವಿಮೋಚನೆಯ ಕೊಳಕು ಜಾಡ್ಯದ ಬಗ್ಗೆ ಇಷ್ಟು ನೇರವಾಗಿ ಹೇಳಿರುವ ಭೈರಪ್ಪನವರಿಗೆ ವಿಚಾರವಾದಿಗಳಿಂದ ಒಂದಾದರೂ ಶಹಬ್ಬಾಸ್‍ಗಿರಿ ಬೇಡವೇ?

ಇನ್ನು ಯಾನದಲ್ಲಿ ಬರುವ ಫ್ಲೈಯಿಂಗ್ ಆಫೀಸರ್ ಉತ್ತರಾಳ ಪಾತ್ರ. ಪ್ರಯೋಗದ ಸಲುವಾಗಿ ಅಂತರಿಕ್ಷಯಾನ ಕೈಗೊಂಡು ಸಹೋದ್ಯೋಗಿ 'ಯಾದವ್'ನೊಂದಿಗೆ ಪತ್ನಿಯಂತೆ ಜೀವಿಸಬೇಕು ಎಂಬುದು ಉತ್ತರಾಳಿಗೆ ತಿಳಿದು ಬರುತ್ತದೆ. ಬೇರೆ ಜಾತಿಯವನಾದರೂ ಅವನನ್ನು ದೇವಸ್ಥಾನವೊಂದರಲ್ಲಿ ಮದುವೆಯಾಗಿ, ದೈವ ಹಾಗೂ ಮನಸ್ಸುಗಳೆರಡರ ಸಾಕ್ಷಿಯಾಗಿ ಗಂಡನೆಂದು ಸ್ವೀಕರಿಸಿದ ನಂತರವೇ ಅವಳು ಅವನೊಡನೆ ಅಂತರಿಕ್ಷಕ್ಕೆ ಹಾರುವುದು. ನಂತರ ಅಂಥದ್ದೇ ಮತ್ತೊಂದು ಪಯಣ ನಿಷ್ಕರ್ಷೆಯಾದಾಗ ಗಂಡ ಯಾದವ್ ಅವಳ ಜೊತೆ ಬರಲೊಪ್ಪುವುದಿಲ್ಲ. ಗಂಡನಲ್ಲದ ಮತ್ತೊಬ್ಬ ವಿಜ್ಞಾನಿಯನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದೆ ಇಡೀ ಯಾನದ ಮೂಲ ಉದ್ದೇಶಕ್ಕೇ ಧಕ್ಕೆ ತರುವ ಮಟ್ಟಕ್ಕೆ ಹೋಗುತ್ತಾಳಲ್ಲ ಉತ್ತರಾ, ಏನಿದೆ ಅಂಥ ತಪ್ಪು ಅವಳ ಪಾತ್ರದಲ್ಲಿ? ನಮ್ಮ ಮಹಿಳಾವಾದಿಗಳಾಗಿದ್ದರೆ ಉತ್ತರಾಳ ಬಾಯಲ್ಲಿ ಸಲೀಸಾಗಿ, 'ಗಂಡ ಯಾನಕ್ಕೆ ಬರದಿದ್ದುದರಿಂದ ಪತ್ನಿ ಮತ್ತೊಬ್ಬರ ಸನಿಹವನ್ನು ಬಯಸುವುದು ತೀರ ಸಹಜ' ಎಂದು ಹೇಳಿಸಿಬಿಡುತ್ತಿದ್ದರೇನೋ!ಇವಿಷ್ಟೇ ಅಲ್ಲ. ಗೃಹಭಂಗದ ನಂಜಮ್ಮ, ಸಾರ್ಥದ ಚಂದ್ರಿಕೆ, ದಾಟುವಿನ ಸತ್ಯಭಾಮಾ ಹಾಗೂ ಅದೇ ಕಾದಂಬರಿಯಲ್ಲಿನ ಮಾದಿಗರ ಹೆಣ್ಣಾದ ಮಾತಂಗಿ ಎಲ್ಲರೂ ಗಟ್ಟಿಗರೇ. ತಾವು ನಂಬಿದ ತತ್ವಕ್ಕೆ, ತಮ್ಮ ಮನಸ್ಸಿಗೆ ಎಂದೂ ಮೋಸ ಮಾಡಿಕೊಳ್ಳದೆ ಬದುಕನ್ನು ಜಯಿಸಿದವರೇ. ಸ್ವಲ್ಪ ಯೋಚಿಸಿ ನೋಡಿ, ಗಂಡು ಹಾಗೂ ಹೆಣ್ಣುಮಕ್ಕಳ ನಡುವಿನ ತಾರತಮ್ಯ ಇಂದು ನಿನ್ನೆಯದಲ್ಲ. ಅದು ನಮ್ಮ ಅಜ್ಜಿ, ಮುತ್ತಜ್ಜಿಯರು ಮನೆಯ ಹುಡುಗರಿಗೆ ಬಿಸಿಯಾದ ಅನ್ನ ಬಡಿಸಿ ಹೆಣ್ಣುಮಕ್ಕಳಿಗೆ ತಂಗಳು ಹಾಕುವ ಕಾಲದಿಂದಲೇ ಇತ್ತು. ಅವರಿಗೆ ಮಾತ್ರ ಗಟ್ಟಿ ಮೊಸರು, ನಮಗೆ ಮಾತ್ರ ನೀರು ಮಜ್ಜಿಗೆ ಎಂದು ಗೊಣಗಿಕೊಂಡು ಉಂಡೆದ್ದ ಎಷ್ಟು ಹೆಣ್ಣುಮಕ್ಕಳಿಲ್ಲ ನಮ್ಮ ನಡುವೆ? ಈಗ ಓದು-ಬರಹದ, ಕೆಲಸ-ಕಾರ್ಯದ ಸ್ವಾತಂತ್ರ್ಯ ಸಿಕ್ಕಿದೆಯೆಂದು ಮಹಿಳಾ ವಿಮೋಚನೆಯ ಹೆಸರಿನಲ್ಲಿ ಅತಿರೇಕಕ್ಕೆ ತೊಡಗುವುದು ಹಳೆಯ ಲೆಕ್ಕವನ್ನೆಲ್ಲ ಚುಕ್ತಾ ಮಾಡುವ ಪರಿಯಾ? ನಾಲ್ಕಾರು ಮಂದಿ ಅಕ್ಷರಕುಕ್ಷಿಗಳ ಗುಂಪು ವಿಮೋಚನೆಯ ಹೆಸರಿನಲ್ಲಿ ಬೊಬ್ಬಿರಿದರೆ ಸಿಕ್ಕಿಬಿಡುತ್ತದಾ ವಿಮೋಚನೆ? ಸಾಧ್ಯವಾಗಿಬಿಡುತ್ತದಾ ಸಮಾನತೆ? ಹಾಗಾದರೆ ಮಹಿಳಾವಾದಿಗಳು ಇಷ್ಟೊಂದು ಜಾಗಟೆ ಬಾರಿಸುತ್ತಿದ್ದರೂ ಅತ್ಯಾಚಾರಗಳು ಕಡಿಮೆಯೇಕಾಗಿಲ್ಲ? ತೀರ ಸಣ್ಣ ಸಣ್ಣ ಹಸುಳೆಗಳು ಬಲಿಯಾಗುವುದಾದರೂ ಏಕೆ ನಿಂತಿಲ್ಲ? ಸಣ್ಣ-ದೊಡ್ಡ ಮೈಕುಗಳಲ್ಲಿ ಸಮಾನತೆಯ, ವೈಚಾರಿಕತೆಯ ಕಹಳೆ ಮೊಳಗುತ್ತಿದ್ದರೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಆಸಿಡ್ ದಾಳಿಗಳೇಕೆ ನಿಂತಿಲ್ಲ? ಅದೂ ಹೋಗಲಿ, ಅನೈತಿಕ ಸಂಬಂಧಗಳಿಂದಾಗುತ್ತಿರುವ ಕೊಲೆಗಳು ಇಷ್ಟೊಂದು ಹೆಚ್ಚುತ್ತಿರುವುದೇಕೆ?
ಮಹಿಳಾವಾದದ, ವಿಚಾರವಾದದ ಧ್ವಜ ಹಾರಿಸುವವರನ್ನು, ಅವರ ಆವೇಶವನ್ನು ಕಂಡರೆ ನಿಜಕ್ಕೂ ದಿಗಿಲಾಗುತ್ತದೆ. ಏಕೆಂದರೆ ಅವರು ಪ್ರತಿಪಾದಿಸುವ ಸಮಾನತೆ ವಿದ್ಯೆ, ಉದ್ಯೋಗಾವಕಾಶಗಳನ್ನು ಮೀರಿ ಸಂಬಂಧಗಳ ಬುಡ ಕಡಿಯುವ ಮಟ್ಟಕ್ಕೆ ಬೆಳೆದುಬಿಟ್ಟಿದೆ. ಇಂದು ಲಕ್ಷಾಂತರ ಮಂದಿ ಹೆಣ್ಣುಮಕ್ಕಳು ದುಡಿಯಲು ಹೋಗುತ್ತಿದ್ದಾರೆ. ತನ್ನ ಹೆಂಡತಿ ಹೊರಗೆ ದುಡಿಯುತ್ತಾಳಲ್ಲ ಎಂಬ ಕಕ್ಕುಲತೆಯಿಂದ ಮನೆಕೆಲಸದಲ್ಲಿ, ಮಕ್ಕಳ ಲಾಲನೆ-ಪಾಲನೆಯಲ್ಲಿ ಕೈ ಜೋಡಿಸುತ್ತಿರುವ ಗಂಡಸರೆಷ್ಟಿಲ್ಲ ಹೇಳಿ? ಕೆಲಸದ ನಿಮಿತ್ತ ದೇಶ-ವಿದೇಶಗಳಲ್ಲಿ ಒಂಟಿಯಾಗಿ ಸಂಚರಿಸುವ ಹೆಂಡತಿಯರನ್ನು, 'ನೀನು ಹೋಗಿ ಬಾ, ನಾನು ಮನೆ ಕಡೆ ಸಂಭಾಳಿಸುತ್ತೇನೆ' ಎಂದು ಹುರಿದುಂಬಿಸಿ ಕಳುಹಿಸಿಕೊಡುತ್ತಿರುವ ಎಷ್ಟು ಗಂಡಂದಿರಿಲ್ಲ? ಹಾಗೆ ಹೊರಗೆ ಹೊರಟ ಹೆಂಡತಿಯರು ತನ್ನ ಗಂಡ ತನಗೆ ಬೌದ್ಧಿಕ ಮಟ್ಟದಲ್ಲಿ ತಕ್ಕವನಲ್ಲವೆಂತಲೋ ಅಥವಾ ಅನುರೂಪನಲ್ಲವೆಂತಲೋ ಬೇರೊಬ್ಬನ ತೆಕ್ಕೆಗೆ ಬಿದ್ದರೆ? ಪರವಾಗಿಲ್ಲವಂತೆ! ಅದನ್ನೂ ಸಮರ್ಥಿಸಿಕೊಳ್ಳುತ್ತದೆ ನೋಡಿ ಮಹಿಳಾವಾದ! ಸಮಾನತೆ ಎಂದರೆ ಅದೇ ಅಲ್ಲವೇ ಮತ್ತೆ? ಗಂಡು ಮಾಡಬಹುದಾದರೆ ಹೆಣ್ಣೇಕೆ ಮಾಡಬಾರದು? ಗಂಡು ಸಿಗರೇಟ್ ಸೇದಬಹುದು, ವಿಸ್ಕಿ ಕುಡಿಯಬಹುದು ಎಂದಾದರೆ ಹೆಣ್ಣೇಕೆ ವಂಚಿತಳಾಗಬೇಕು? ಗಂಡು ಸೂಳೆಕೇರಿಗೆ ಹೋಗಬಹುದಾದರೆ ಹೆಣ್ಣೇಕೆ ಪರಪುರುಷರ ಸಂಗ ಮಾಡಬಾರದು? ಒಟ್ಟಿನಲ್ಲಿ ಎಲ್ಲಕ್ಕೂ ಜೈ. ಸಮಾನತೆಯ ಹೆಸರಿನಲ್ಲಿ ಸಾಗುತ್ತಿದೆಯಲ್ಲ ಈ ಓಟ, ಇದರಲ್ಲಿ ಹೆಣ್ಣುಮಕ್ಕಳಿಗೆ ಮುನ್ನುಗ್ಗುವ ಅವಕಾಶಗಳೆಷ್ಟಿವೆಯೋ, ಅಮಲೇರಿ ನೈತಿಕವಾಗಿ ಮುಗ್ಗರಿಸುವ ಅಪಾಯವೂ ಅಷ್ಟೇ ಇದೆ. ಹೀಗೆ ಮುಗ್ಗರಿಸಿ ಬೀಳುವ ಮಂದಿಯೆಲ್ಲ ಗೆದ್ದೆವೆಂಬ ಭ್ರಮೆಯಲ್ಲಿ ಬೀಗುವ ವಿಪರೀತ ಬುದ್ಧಿವಂತರೇ! ಇವರನ್ನು ಅಕ್ಷರಶಃ ಉಪಯೋಗಿಸಿಕೊಳ್ಳುವವರು ಯಾರು ಹೇಳಿ? ಮತ್ತದೇ ಗಂಡಸರು! ಹಾಗಾದರೆ ಎಲ್ಲಿ ಬಂತು ಸಮಾನತೆ?

ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಖಂಡಿತ ಬೇಕು, ಜೊತೆಗೆ ಅದರ ಇತಿ-ಮಿತಿ, ಪರಿಣಾಮಗಳ ವಿವೇಚನೆಯೂ. ವಿಮೋಚನೆಯ, ಸಮಾನತೆಯ ಹೆಸರಿನಲ್ಲಿ ಎಲ್ಲವೂ ಕಲಸುಮೇಲೋಗರವಾಗುತ್ತಿರುವ ಈ ದಿನಗಳಲ್ಲಿ ನೈತಿಕತೆಯ ಒಂದು ಸಣ್ಣ ಪಾಠ ಉತ್ತರಾಳ ರೂಪದಲ್ಲಿ ದೊರಕಿದರೆ ಯಾಕಾಗಬಾರದು? ಮನಸ್ಸಾಕ್ಷಿಯನ್ನು ಮರೆತು ಓಡುವ ಮನಸ್ಸುಗಳಿಗೆ ಮಂಗಳೆಯ ರೂಪದ ಕಡಿವಾಣ ಬೀಳುವುದಾದರೆ ಅದರಲ್ಲಿ ತಪ್ಪೇನಿದೆ? ಭೈರಪ್ಪನವರು ಈ ಸಮಾಜದಿಂದ ಆಯ್ದುಕೊಂಡ, ಸಮಾಜಕ್ಕೆ ಹೋಲುವಂಥ ಪಾತ್ರಗಳನ್ನು ಸೃಷ್ಟಿಸಿದ್ದಾರೆಯೇ ಹೊರತು ಎಲ್ಲರೂ ಅದರಂತೆಯೇ ನಡೆದುಕೊಳ್ಳಲೇಬೇಕೆಂಬ ಪ್ರಮಾಣವನ್ನೇನೂ ಮಾಡಿಸಿಕೊಂಡಿಲ್ಲವಲ್ಲ?


ಸಮಾನತೆಯ ಜೋಕಾಲಿಯಲ್ಲಿ ಜೀಕುವಾಗಲೂ ಕೈಗಳು ನೈತಿಕತೆ ಹಾಗೂ ಮನಸ್ಸಾಕ್ಷಿಗಳನ್ನು ಗಟ್ಟಿಯಾಗಿ ಹಿಡಿದಿರಲೇಬೇಕು. ಇಲ್ಲದಿದ್ದರೆ ಆಯತಪ್ಪಿ ಬೀಳುವವರು ನಾವೇ, ನಷ್ಟವೂ ನಮಗೇ. ಅಲ್ಲವೇ?

1 comment:

  1. ಅದ್ಭುತ ಲೇಖನ.!!
    ಭೈರಪ್ಪನವರನ್ನು ಸಾರ್ವಜನಿಕವಾಗಿ ಜರಿದು ಅದರಿಂದ ಪುಬ್ಲಿಸಿಟಿ ಪಡೆಯುವ ಹೀನ ಮನಸ್ಸಿನ ಮಹಿಳಾವಾದಿಗಳು ತಪ್ಪದೇ ಓದಬೇಕಾದ ಅಂಕಣವಿದು..

    ReplyDelete