Thursday 26 March 2015

ಸಗಣಿಯವರೊಂದಿಗಿನ ಸರಸ ಸಾರ್ಥಕವಾದೀತೇ?

ಮಸಾರತ್ ಆಲಮ್! ಈ ಹೆಸರು ಜಮ್ಮು-ಕಾಶ್ಮೀರದ ಜನರಿಗೆ, ಅದರಲ್ಲೂ ಪ್ರತ್ಯೇಕತಾವಾದಿಗಳಿಗೆ ಚಿರಪರಿಚಿತ. ಆದರೆ ದೇಶದ ಉಳಿದ ಭಾಗದ ಜನಕ್ಕೆ ಅಷ್ಟಾಗಿ ಗೊತ್ತಿರಲಿಲ್ಲ. ಜೈಲಿನಲ್ಲಿದ್ದ ಇವನು ಈಗ ಬಿಡುಗಡೆಯಾಗಿ ರಾತ್ರೋರಾತ್ರಿ ಸುದ್ದಿಯಾಗಿಬಿಟ್ಟಿದ್ದಾನೆ. ಅಂದಹಾಗೆ, ಇವನ ಬಿಡುಗಡೆ ಅಷ್ಟೊಂದು ಸಂಚಲನವನ್ನೇಕೆ ಸೃಷ್ಟಿಸಿತು? ನವ ವಧುವರರಂತೆ ಕೈಹಿಡಿದು ಜೊತೆಯಾಗಿ ನಡೆಯಬೇಕಿದ್ದ ಬಿಜೆಪಿ-ಪಿಡಿಪಿ ಪಕ್ಷಗಳು ಮಧುಚಂದ್ರ ಮುಗಿಯುವ ಮುನ್ನವೇ ಮುನಿದಿರುವುದೇಕೆ? ಏಕೆಂದರೆ ಈ ಭೂಪನ ಬಯೋಡೇಟಾ ಹಾಗಿದೆ!

ಮೊತ್ತಮೊದಲ ಬಾರಿ ಇವನು ಜೈಲಿನ ಮುಖ ಕಂಡಿದ್ದು 1990ರಲ್ಲಿ. ಆಗಿನ್ನೂ ಇವನಿಗೆ 22ರ ಹರೆಯ. ಆಗಿನಿಂದ ಮೊನ್ನೆ ಬಿಡುಗಡೆಯಾಗುವ ತನಕ ಸುಮಾರು 17ವರ್ಷಗಳನ್ನು ಜೈಲಿನಲ್ಲೇ ಕಳೆದಿದ್ದಾನೆ. ಭಾರತ ಸರ್ಕಾರ ಇವನ ವಿರುದ್ಧ ಏನಿಲ್ಲವೆಂದರೂ 27 ಪ್ರಕರಣಗಳನ್ನು ದಾಖಲಿಸಿದೆ! ನಾವು ಕಾಲು ತೊಳೆಯಲು ಬಚ್ಚಲಿಗೆ ಹೋಗಿ ಬಂದಷ್ಟೇ ಸಲೀಸಾಗಿ ಇವನು ಜೈಲಿಗೆ ಹೋಗಿ ಬರುತ್ತಾನೆ. ಹೋಗಲಿ ಅನಕ್ಷರಸ್ಥನಾ, ಅಲ್ಲ. ಕಾಶ್ಮೀರದ ಶ್ರೀಮಂತ ಮಿಷನರಿ ಶಾಲೆಯೊಂದರ ವಿಜ್ಞಾನ ವಿದ್ಯಾರ್ಥಿ. ಸಾಮಾನ್ಯಜ್ಞಾನ ಕಡಿಮೆಯಾಗಿ ಅದ್ಯಾವಾಗ ಪ್ರತ್ಯೇಕವಾದದ ಭೂತ ಇವನ ತಲೆಯೊಳಗೆ ಹೊಕ್ಕಿತೋ, ಹಿಜ್ಬುಲ್ ಉಗ್ರ ಸಂಘಟನೆ ಸೇರಿ ಅದರ ಸಕ್ರಿಯ ಸದಸ್ಯನಾಗಿಬಿಟ್ಟ. ಹೇಗಾದರೂ ಮಾಡಿ ಜಮ್ಮು-ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಬೇಕೆಂಬುದೇ ಇವನ ಧ್ಯೇಯವಾಯಿತು. ಆಗಿನ್ನೂ AK-47ಗಳು ಈಗಿನಂತೆ ಸುಲಭವಾಗಿ ಕೈಗೆಟುಕುತ್ತಿರಲಿಲ್ಲ. ಆದರೇನಂತೆ, ಮನಸ್ಸಿನಲ್ಲಿ ಆವೇಶ ತುಂಬಿಕೊಂಡ ಇವನು ಹಾಗೂ ಇವನಂಥ ನೂರಾರು ಮಂದಿ, ಭಾರತೀಯ ಸೈನಿಕರ ಮೇಲೆ ಕಲ್ಲುಗಳನ್ನು, ಸಣ್ಣ ಬಂಡೆಗಳನ್ನು, ಕೆಲವೊಮ್ಮೆ ನಿಗಿನಿಗಿ ಉರಿಯುವ ಕೆಂಡಗಳನ್ನು ಎಸೆದು ತಮ್ಮ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದರು.



ಇವನ ರೋಷಾಗ್ನಿಗೆ ತುಪ್ಪ ಸುರಿಯುವಂಥ ಪ್ರಸಂಗವೊಂದು 2008ರಲ್ಲಿ ನಡೆಯಿತು. ಆಗ ಜಮ್ಮು-ಕಾಶ್ಮೀರ ಸರ್ಕಾರ ಅಮರನಾಥ ದೇಗುಲಕ್ಕೆ ಭೇಟಿ ನೀಡುವ ಹಿಂದೂ ಯಾತ್ರಿಗಳ ತಾತ್ಕಾಲಿಕ ವಾಸ್ತವ್ಯದ ಸಲುವಾಗಿ ಸುಮಾರು 99 ಎಕರೆಗಳಷ್ಟು ಅರಣ್ಯ ಭೂಮಿಯನ್ನು ಮಂಜೂರು ಮಾಡಿತು. ಪ್ರತ್ಯೇಕತಾವಾದಿಗಳು ಇಂಥ ಸುವರ್ಣಾವಕಾಶವನ್ನು ಬಿಟ್ಟಾರೆಯೇ? ಲಕ್ಷಗಟ್ಟಳೆ ಸಂಖ್ಯೆಯಲ್ಲಿ ಸೇರಿ ಹಿಂಸಾತ್ಮಕವಾಗಿ ಪ್ರತಿಭಟಿಸಿದರು. ಪರಿಣಾಮ, ಹಲವರು ಸತ್ತು ನೂರಾರು ಮಂದಿ ಗಾಯಗೊಂಡರು. ಆ ಪ್ರತಿಭಟನೆಗಳಲ್ಲಿ ಪೂರ್ಣವಾಗಿ ತೊಡಗಿಕೊಂಡ ಮಸಾರತ್ ತನ್ನದೇ ಛಾಪು ಮೂಡಿಸಿದ್ದ. ಆದ್ದರಿಂದಲೇ ಪೋಲೀಸರ ಅತಿಥಿಯಾಗಿ ಸುಮಾರು ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ.

2010ರ ಜೂನ್‍ನಲ್ಲಿ ಹೊರಬಂದ ಅವನು ಮುಂದೇನು ಎಂದು ಅತ್ತಿತ್ತ ತಿರುಗಿ ನೋಡುವಷ್ಟರಲ್ಲೇ ಮತ್ತೊಂದು ಅವಘಡವೂ ನಡೆದುಹೋಯಿತು. ಜಮ್ಮು-ಕಾಶ್ಮೀರದ ಕೆಲ ಸೇನಾಧಿಕಾರಿಗಳು ಮೂವರು ಪಾಕ್ ನುಸುಳುಕೋರರನ್ನು ಹತ್ಯೆಗೈದ ಸುದ್ದಿ ಎಲ್ಲೆಡೆ ಹಬ್ಬಿತು. ಆದರೆ ಅದು ನಕಲಿ ಕಾರ್ಯಾಚರಣೆ ಎಂದು ತಿಳಿದು ಬಂದದ್ದೇ ತಡ, ಕಣಿವೆಯ ನಾಡು ಹೊತ್ತಿ ಉರಿಯತೊಡಗಿತು. ತನ್ನ ಪಾಡಿಗೆ ತಾನು ಸ್ಟೇಡಿಯಂ ಒಂದರಲ್ಲಿ ಕ್ರಿಕೆಟ್ ಆಡುತ್ತಿದ್ದ ಅಮಾಯಕ ಯುವಕ ಟುಫೈಲ್ ಮಟ್ಟೂ ಪೋಲೀಸರ ಅಶ್ರುವಾಯು ದಾಳಿಗೆ ಬಲಿಯಾದ ಮೇಲಂತೂ ಪರಿಸ್ಥಿತಿ ಮೇರೆ ಮೀರಿತು. ಹಾಗೇ ಮಸಾರತ್‍ನ ಅಟ್ಟಹಾಸವೂ. ಅವನು ತನ್ನ ನೇತೃತ್ವದಲ್ಲಿ, ಪೋಲೀಸರ ಮೇಲೆ ಕಲ್ಲು ತೂರುವ ಒಂದು ದೊಡ್ಡ ಪಡೆಯನ್ನೇ ತಯಾರು ಮಾಡಿಬಿಟ್ಟ. ತೆರೆಮರೆಯಲ್ಲಿದ್ದೇ ಜನರನ್ನು ಹೇಗೆಲ್ಲ ಪ್ರಚೋದಿಸುತ್ತಿದ್ದ ಗೊತ್ತೇ? ತನ್ನ ದೇಶ ವಿರೋಧಿ ಹೇಳಿಕೆಗಳನ್ನು ಭಿತ್ತಿ ಪತ್ರಗಳಲ್ಲಿ ಮುದ್ರಿಸಿ ಹಂಚುತ್ತಿದ್ದ. ಸಿಡಿಗಳಲ್ಲಿ ತುಂಬಿ ಮಸೀದಿಗಳಿಗೆ ಬಂದವರೆಲ್ಲರಿಗೂ ತಲುಪಿಸುತ್ತಿದ್ದ. ಅಷ್ಟೇ ಅಲ್ಲ, ಇವನೊಳಗಿನ ಕಲಾವಿದನೂ ಜಾಗೃತನಾಗಿಬಿಟ್ಟಿದ್ದ. ಕಂಡ ಕಂಡ ಗೋಡೆಗಳ ಮೇಲೆ, 'ಗೋ ಇಂಡಿಯಾ ಗೋ' ಎಂದು ಬರೆದ. 'ಭಾರತವನ್ನು ಹೊಸಕಿ ಹಾಕಿಬಿಡು' ಎಂಬರ್ಥದ ಹಾಡನ್ನೂ ಬರೆದು ಸಾಹಿತಿಯಾದ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಕ್ಕಳು ರಿಂಗಾ ರಿಂಗಾ ರೋಸೆಸ್ ಆಡುವಾಗ ಒಬ್ಬರು ಮತ್ತೊಬ್ಬರ ಕೈಹಿಡಿದು ವೃತ್ತಾಕಾರದಲ್ಲಿ ನಿಲ್ಲುತ್ತಾರಲ್ಲ, ಹಾಗೆ ಪ್ರತಿಭಟನಾಕಾರರನ್ನು ನಿಲ್ಲಿಸಿ ತನ್ನ ಹಾಡು ಹೇಳಿಸಿ, 'ಹೊಸಕಿ ಹಾಕಿಬಿಡು' ಎಂಬ ಪದ ಬರುವಾಗ ಕಾಲನ್ನು ನೆಲಕ್ಕೆ ಅಪ್ಪಳಿಸುವಂತೆ ಹೇಳಿ ಹೊಸ ಸಮೂಹ ನೃತ್ಯ ಪ್ರಕಾರವನ್ನೇ ಹುಟ್ಟು ಹಾಕಿಬಿಟ್ಟ! ಒಟ್ಟಿನಲ್ಲಿ ಪೋಲೀಸರಿಗೆ ಬೇಕಾದವರಲ್ಲಿ ಅಗ್ರನಾದ ಮಸಾರತ್ ತನ್ನ ತಲೆಯ ಮೇಲೆ ಹಲವು ಲಕ್ಷ ರೂಪಾಯಿಗಳ ಇನಾಮನ್ನೂ ಹೊಂದಿದ್ದ. ಅಂತೂ ಇಂತೂ ಬಲೆ ಬೀಸಿ ಅವನನ್ನು ಹಿಡಿಯುವಷ್ಟರಲ್ಲಿ ಪೋಲೀಸರು ಹೈರಾಣಾಗಿದ್ದರು.

ಇದೀಗ ಮಸಾರತ್ ಹೊರಬಂದಿದ್ದಾನೆ. ಹುರಿಯತ್‍‍ನ ಪ್ರತ್ಯೇಕತಾವಾದಿ ಸಯ್ಯದ್ ಗಿಲಾನಿಯ ಕಟ್ಟಾ ಶಿಷ್ಯನಾಗಿರುವ ಇವನು ಅವನ ನಂತರದ ವಾರಸುದಾರ ಎಂದೇ ಬಿಂಬಿಸಲ್ಪಡುತ್ತಿದ್ದಾನೆ. ಇಷ್ಟು ವರ್ಷ ಜೈಲಿನಲ್ಲಿ ಕೊಳೆತಿದ್ದರಿಂದ ಇವನ ಮನಸ್ಥಿತಿ ಬದಲಾಗಿರಬಹುದು ಎಂದು ಯಾರಾದರೂ ಭ್ರಮಿಸಿದ್ದರೆ ಅವರಿಗೆ ತಕ್ಕ ಉತ್ತರವನ್ನೂ ನೀಡಿದ್ದಾನೆ. 'ಸಣ್ಣ ಜೈಲಿನಿಂದ ದೊಡ್ಡ ಜೈಲಿಗೆ ಬಂದಂತಾಗಿದೆ ಅಷ್ಟೇ. ಕಾಶ್ಮೀರದ ಜನತೆಯ ದುಃಖ-ದುಮ್ಮಾನಗಳನ್ನು ಹಂಚಿಕೊಳ್ಳಬಹುದಲ್ಲ ಎನ್ನುವುದಷ್ಟೇ ನನಗಾಗಿರುವ ಸಂತೋಷ' ಎಂಬುದು ಬಿಡುಗಡೆಯಾದ ನಂತರದ ಇವನ ಉವಾಚ! ಆದ್ದರಿಂದಲೇ ದೇಶದೆಲ್ಲೆಡೆ ಕೋಲಾಹಲವೆದ್ದಿರುವುದು. ಇನ್ನು ಇವನ ಬತ್ತಳಿಕೆಯಿಂದ ಯಾವ್ಯಾವ ಬಾಣಗಳು ಹೊರಬರುತ್ತವೋ ಎಂಬ ಚಿಂತೆ ನಮ್ಮ ಬೇಹುಗಾರಿಕಾ ಪಡೆಯನ್ನು ಆವರಿಸಿಕೊಂಡಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ.



ಇವನೇನೋ ತನ್ನ ಪ್ರಕೃತಿಗೆ ತಕ್ಕ ಮಾತುಗಳನ್ನೇ ಆಡಿದ್ದಾನೆ. ಆದರೆ ಅಧಿಕಾರಕ್ಕೇರಿದ ಒಂದೇ ವಾರದಲ್ಲಿ ಮುಫ್ತಿ ಮೊಹಮ್ಮದ್ ಸಯೀದ್ ಆತುರಾತುರವಾಗಿ ಇವನನ್ನು ಬಿಡುಗಡೆ ಮಾಡಿದ್ದೇಕೆ? ಅವರು ಹಿಂದೊಮ್ಮೆ, ಅಂದರೆ 1989ರಲ್ಲಿ ಕೇಂದ್ರದ ಗೃಹಖಾತೆಯ ಸಚಿವರಾಗಿದ್ದಾಗಲೂ ಐವರು ಉಗ್ರರನ್ನು ಬಿಡುಗಡೆ ಮಾಡಿದ್ದರು. ಆಗ ಅವರ ಮಗಳನ್ನು ಉಗ್ರರು ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡ ಕಾರಣವಿತ್ತು. ಈಗೇನಿತ್ತು? ಅಭ್ಯಾಸ ಬಲವೇ? ತನಗೆ ಬೆಂಬಲ ನೀಡಿರುವ ಮಿತ್ರ ಪಕ್ಷಕ್ಕೆ ಒಂದು ಮಾತೂ ಹೇಳದೆ ಅದರ ಒಪ್ಪಿಗೆಯಿಲ್ಲದೆ ಇಂಥ ನಿರ್ಧಾರ ತೆಗೆದುಕೊಳ್ಳುವುದು ತಪ್ಪು ಎಂಬ ಕನಿಷ್ಠ ಅರಿವೂ ಇರಲಿಲ್ಲವೇ ಅವರಿಗೆ? ಎಲ್ಲಾ ಇತ್ತು. ಒಂದು ಮೂಲದ ಪ್ರಕಾರ, ಮುಫ್ತಿ, ಬಿಡುಗಡೆ ಮಾಡಲು ಇನ್ನೂ ಹದಿನೈದು ಪ್ರತ್ಯೇಕತಾವಾದಿಗಳ ಪಟ್ಟಿಯನ್ನು ಸಿದ್ಧಮಾಡಿಟ್ಟುಕೊಂಡಿದ್ದರಂತೆ. ಅದರಲ್ಲಿದ್ದ ಮುಂದಿನ ಹೆಸರು ಕುಖ್ಯಾತ ಉಗ್ರವಾದಿ 'ಆಶಿಕ್ ಹುಸೇನ್ ಫಕ್ತೂ'ದಂತೆ. ಈಗ ಗೃಹ ಸಚಿವ ರಾಜನಾಥ್‍ಸಿಂಗ್ ಹಾಗೂ ನಮ್ಮ ಬೇಹುಗಾರಿಕಾ ಸಂಸ್ಥೆ ಮುಫ್ತಿಯವರಿಗೆ ಖಡಕ್ಕು ಎಚ್ಚರಿಕೆ ಕೊಟ್ಟಿರುವುದರಿಂದ ಆ ಪಟ್ಟಿಯನ್ನು ಅವರು ಸಧ್ಯಕ್ಕೆ ಕೈ ಬಿಟ್ಟಿದ್ದಾರಂತೆ. ಬಿಜೆಪಿಯನ್ನು ಕೇಳದೆ ಇನ್ಯಾರ ಬಿಡುಗಡೆಯನ್ನೂ ಮಾಡುವುದಿಲ್ಲ ಎಂಬ ವಾಗ್ದಾನವನ್ನೂ ಮಾಡಿದ್ದಾರಂತೆ.

ನಮ್ಮ ಬೇಹುಗಾರಿಕಾ ಸಂಸ್ಥೆ ಹಾಗೆ ಎಚ್ಚರಿಕೆ ಕೊಟ್ಟಿರುವುದಕ್ಕೂ ಕಾರಣವಿದೆ. ಈ ಆಶಿಕ್ ಹುಸೇನ್ ಫಕ್ತೂ ದೇಶದ್ರೋಹಿ ಕೆಲಸಗಳಲ್ಲಿ ಮಸಾರತ್‍ನ ತಾತ! ಜಮಾತೆ-ಉಲ್-ಮುಜಾಹಿದ್ದೀನ್‍ನ ಉನ್ನತ ಕಮಾಂಡರ್ ಆದ ಇವನು ಕಳೆದ 22ವರ್ಷಗಳಿಂದ ಶ್ರೀನಗರದ ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ಮಾನವ ಹಕ್ಕುಗಳ ಹೋರಾಟಗಾರರಾಗಿದ್ದ ವ್ಯಾಂಚೂ ಎಂಬುವರನ್ನು ಕೊಂದ ಆಪಾದನೆ ಇವನ ಮೇಲಿದೆ. ಇವನೇನಾದರೂ ಅಪ್ಪಿತಪ್ಪಿ ಹೊರಬಂದರೆ ಕಾಶ್ಮೀರದ ಕಣಿವೆಯಲ್ಲಿ ಶಾಂತಿ ಎಂಬುದು ಮರೀಚಿಕೆಯಾಗುವುದು ಖಂಡಿತ. ಉಳಿದವರ ಜಾತಕಗಳೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಆದರೂ ಪಿಡಿಪಿ ಪಕ್ಷ ಕದ್ದುಮುಚ್ಚಿ ಇವರನ್ನೆಲ್ಲ ಬಿಡುಗಡೆ ಮಾಡಲು ಹೊರಟಿತ್ತು!

ಇಲ್ಲಿಯತನಕ ಜಮ್ಮು-ಕಾಶ್ಮೀರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಹುತೇಕ ಎಲ್ಲ ಸರ್ಕಾರಗಳ ಹಣೆಬರಹವೂ ಇಷ್ಟೇ. ಅಂಜಿಕೆಗೋ, ಮತಬ್ಯಾಂಕ್‍ನ ಮುಲಾಜಿಗೋ ಒಟ್ಟಿನಲ್ಲಿ ಅವುಗಳ ಒಂದು ಕೈ ಪ್ರತ್ಯೇಕತಾವಾದಿಗಳ ಹೆಗಲ ಮೇಲೆ ಇದ್ದೇ ಇರುತ್ತದೆ. ಅಧಿಕಾರಕ್ಕೇರಿದ ಒಂದೇ ಘಂಟೆಯೊಳಗೆ ಮುಫ್ತಿ ಚುನಾವಣೆಯ ಯಶಸ್ಸಿನ ಸಮಸ್ತ ಶ್ರೇಯಸ್ಸನ್ನೂ ಹುರಿಯತ್ ಹಾಗೂ ಪಾಕಿಸ್ತಾನಗಳಿಗೆ ಧಾರೆಯೆರೆದು ಕೊಟ್ಟುಬಿಟ್ಟರು. ಜೀವವನ್ನು ಕೈಯಲ್ಲಿಟ್ಟುಕೊಂಡು ಕಾದ ಭಾರತೀಯ ಸೇನೆ, ಅಚ್ಚುಕಟ್ಟಾಗಿ ಆಯೋಜಿಸಿದ ಚುನಾವಣಾ ಆಯೋಗ ಹಾಗೂ ನೆರವನ್ನಿತ್ತ ಕೇಂದ್ರ ಸರ್ಕಾರ ಯಾವುದೂ ಅವರ ಕಣ್ಣಿಗೆ ಕಾಣಲಿಲ್ಲ! ಅದರ ನಂತರ ಅವರು ಮಾತನಾಡಿದ್ದು ಅಫ್ಜಲ್ ಗುರುವಿನ ಬಗ್ಗೆ! ಸಂಸತ್ತಿನ ಮೇಲೆ ದಾಳಿ ಮಾಡಿದ್ದ ಅಫ್ಜಲ್‍ಗೆ ಮರಣೋತ್ತರವಾಗಿ ಸಿಗಬೇಕಾದ ನ್ಯಾಯದ ಬಗ್ಗೆ ಮಾತ್ರ ಅವರ ಕನವರಿಕೆ! ಅಷ್ಟು ಬಿಟ್ಟರೆ ಪ್ರತ್ಯೇಕತಾವಾದಿಗಳ ಬಿಡುಗಡೆಯ ಚಿಂತೆ! ಹೌದಲ್ಲ. ಉಳಿದೆಲ್ಲದರ ವ್ಯವಸ್ಥೆ ನಮ್ಮ ತೆರಿಗೆ ಹಣದಿಂದ ಬಿಟ್ಟಿಯಾಗಿ ಆಗುವಾಗ ಅವರೇಕೆ ತಲೆ ಕೆಡಿಸಿಕೊಳ್ಳುತ್ತಾರೆ?

ಉಳಿದ ರಾಜ್ಯಗಳಲ್ಲಿ ನಡೆಸುವಂತೆ ಇಲ್ಲಿ ಸಲೀಸಾಗಿ ಸಮ್ಮಿಶ್ರ ಸರ್ಕಾರ ನಡೆಸುವುದು ಸಾಧ್ಯವಿಲ್ಲ ಎಂಬುದು ಬಿಜೆಪಿಗೂ ಗೊತ್ತಿದೆ. ಆದರೂ ಅದು ಸಗಣಿಯವರೊಂದಿಗೆ ಸರಸಕ್ಕೆ ನಿಂತಿದೆ. ಈಗಾಗಲೇ ಸರಣಿ ಮುಖಭಂಗಗಳನ್ನೂ ಅನುಭವಿಸಿದೆ. ಅದರ ಈ ಅಸಹಜ, ಅನಪೇಕ್ಷಿತ ಮೈತ್ರಿಯ ಹಿಂದೆ ರಾಷ್ಟ್ರೀಯತೆಯ, ಅಭಿವೃದ್ಧಿಯ ಹಲವು ಸದುದ್ದೇಶಗಳಿರಬಹುದು. ಆದರೆ ಈ ಕಣಿವೆ ರಾಜ್ಯದ ತುಂಬೆಲ್ಲ ತುಂಬಿರುವುದು ಓಬೀರಾಯನ ಕಾಲದಿಂದ ಸಿಗುತ್ತಿರುವ ವಿಶೇಷ ಸವಲತ್ತು, ಅನುಚ್ಛೇದ 370 ಎಂದೊಡನೆ ಬೆಚ್ಚಿ ಬೀಳುವ ಪ್ರಾದೇಶಿಕ ರಾಜಕೀಯ ಪಕ್ಷಗಳು, ಅಸಹಾಯಕರಾಗಿ ನೋಡುವ ಕಾಶ್ಮೀರಿ ಪಂಡಿತರು ಹಾಗೂ ನಿದ್ದೆಯಲ್ಲೂ ಪಾಕಿಸ್ತಾನವನ್ನೇ ಕನವರಿಸಿಕೊಳ್ಳುವ ಪ್ರತ್ಯೇಕತಾವಾದಿ ಸಂಘಟನೆಗಳು. ಭಾರತದ ಒಂದು ಅಂಗವೇ ಆಗಬಯಸದ ರಾಜ್ಯದೊಳಗೆ ಭಾರತೀಯತೆಯ ಕಲ್ಪನೆಗಳು ಅಷ್ಟು ಸುಲಭದಲ್ಲಿ ಸಾಕಾರಗೊಳ್ಳುವುದು ಸಾಧ್ಯವೇ? ಹೋಗಲಿ, ಕಾನೂನು ರೀತ್ಯಾ ಏನಾದರೂ ಮಾಡಬೇಕೆಂದರೆ ಇದೊಂಥರಾ 'ಹುಚ್ಚು ಬಿಡದೆ ಮದುವೆಯಾಗುವುದಿಲ್ಲ, ಮದುವೆಯಾಗದೆ ಹುಚ್ಚು ಬಿಡುವುದಿಲ್ಲ' ಎನ್ನುತ್ತಾರಲ್ಲ ಹಾಗೆ. ಸಂವಿಧಾನಕ್ಕೆ ತಿದ್ದುಪಡಿ ತರದೆ ಕಾಶ್ಮೀರಿಗಳ ಮನಸ್ಥಿತಿ ಬದಲಾಗುವುದಿಲ್ಲ, ಅವರ ಮನಸ್ಥಿತಿ ಬದಲಾಗದೆ ಸಂವಿಧಾನಕ್ಕೆ ತಿದ್ದುಪಡಿ ತರುವ ಹಾಗಿಲ್ಲ ಎಂಬಂಥ ಪರಿಸ್ಥಿತಿ.

ಒಟ್ಟಿನಲ್ಲಿ ಈ ಸರಸ ಈಗಿರುವ ವಿರಸಗಳನ್ನು ಕೊನೆಗಾಣಿಸಲಿ ಎಂಬುದೇ ಭಾರತೀಯರೆಲ್ಲರ ಅಪೇಕ್ಷೆ. ಸಾಧ್ಯವಾ ಎಂಬುದನ್ನು ಸಮಯವೇ ಹೇಳಬೇಕು! 

No comments:

Post a Comment