Wednesday 2 July 2014

ವೈರುದ್ಧ್ಯದ ನಡುವೆಯೂ ಒಗ್ಗಟ್ಟಾಗಿರುವುದು ಸಾಧ್ಯ!

ಸ್ನೇಹ, ಸಂಬಂಧ ಹಾಗೂ ಉದ್ಯೋಗಗಳಲ್ಲಿ ಒಂದೇ ಒಂದು ಸಣ್ಣ ತಪ್ಪು ಮಾಡಿ ನೋಡೋಣ. ಕಥೆ ಮುಗಿಯಿತು ಅಂತಲೇ ಲೆಕ್ಕ. ಅಲ್ಲಿಯವರೆಗಿನ ನಿಮ್ಮ ಒಳ್ಳೆಯತನಗಳೆಲ್ಲಾ ಅಳಿಸಿಹೋಗುತ್ತವೆ. ಆ ಕ್ಷಣದಿಂದ ನೀವು ಆಜನ್ಮ ವೈರಿಯಾಗಿಬಿಡುತ್ತೀರ. ಮತ್ತೆ ಅದೇ ಹಳೆಯ ನಂಬಿಕೆ ವಿಶ್ವಾಸ ಗಳಿಸಿಕೊಳ್ಳಲು ಭಗೀರಥ ಪ್ರಯತ್ನವೂ ಸಾಲುವುದಿಲ್ಲ. 'ಈ ಕೆಲಸ ಇವತ್ತು ಮಾಡಲಾಗುತ್ತಿಲ್ಲ ಬಾಸ್, ನಾಳೆ ಮಾಡ್ತೇನೆ' ಅಂತ ಸೀದಾ ಮುಖದ ಮೇಲೆ ಹೇಳಿ ನೋಡಿ. ಅಷ್ಟೆ! ಅಲ್ಲಿಯವರೆಗೂ ಹಗಲು ರಾತ್ರಿ ತೇಯ್ದು ಮೂಡಿಸಿದ್ದ ಒಳ್ಳೆಯ ಅಭಿಪ್ರಾಯದ ಗತಿ ಗೋವಿಂದ! ಮೇಲಧಿಕಾರಿಯ ಒಳಗಿನ ‘ಅಹಂ’ ಎಂಬ ಕಾಳ ಸರ್ಪ ಭುಸುಗುಡುತ್ತಾ ಹೆಡೆಯೆತ್ತಿಬಿಡುತ್ತದೆ. 'ನಂಗೇ ಆಗಲ್ಲ ಅಂತೀಯಾ, ಗೊತ್ತಿದೆ ಬಿಡು ನಿನ್ನ ಕೆರಿಯರ್‍ನ ಹೇಗೆ ಮರ್ಡರ್ ಮಾಡ್ಬೇಕು ಅಂತ' ಎಂದು ಆ ಕ್ಷಣವೇ ಮನಸಲ್ಲಿ ಮಚ್ಚು ಲಾಂಗು ಮಸೆಯತೊಡಗುತ್ತಾನೆ. ಗೆಳೆಯನ ಯಾವುದಾದರೂ ಕೆಲಸವನ್ನು ಕಟುವಾಗಿ ವಿರೋಧಿಸಿ ನೋಡಿ. ಇದ್ದಕ್ಕಿದ್ದಂತೆ ಅವನು ನಿಮ್ಮನ್ನು ಎಲ್ಲದರಲ್ಲೂ ಮರೆಯತೊಡಗುತ್ತಾನೆ. ಅಷ್ಟು ದಿನ ಹೆಗಲು ಕೊಟ್ಟದ್ದು ಅರ್ಥಹೀನವಾಗಿಬಿಡುತ್ತದೆ. ಇನ್ನು ಸಂಬಂಧಿಕರಲ್ಲಂತೂ ಮುಗಿದೇ ಹೋಯಿತು. ನಯ-ನಾಜೂಕಿನ ಮಾತುಗಾರಿಕೆ ಬಿಟ್ಟು ಬೇಕಂತಲೇ ಸ್ವಲ್ಪ ಒರಟಾಗಿ ಪ್ರತಿಕ್ರಿಯಿಸಿ ಬಿಡಿ, ನಿಮಗೆ ಜಂಭ ಅಥವಾ ದೊಡ್ಡಸ್ತಿಕೆ ಬಂದಿರುವುದರ ಬಗ್ಗೆ ಇಡೀ ಕುಟುಂಬ ವರ್ಗಕ್ಕೆ ಸುತ್ತೋಲೆ ಹೊರಡಿಸಿಬಿಡುತ್ತಾರೆ.



ಹೇಳಿದ್ದನ್ನೆಲ್ಲ ಕೇಳುತ್ತಾ, ಸರಿಯೆಂದು ತಲೆಯಾಡಿಸುತ್ತಾ ಇರುವವರೆಗೆ ಮಾತ್ರ ಸಂಬಂಧಗಳಿಗೆ ಉಳಿಗಾಲ, ಬೆಲೆ. ವಿರೋಧಿಸಿದರೆ ಅಥವಾ ಇತರರ ದೃಷ್ಟಿಯಲ್ಲಿ ತಪ್ಪು ಎನಿಸುವಂಥ ಕೆಲಸ ಮಾಡಿಬಿಟ್ಟರೆ ಮನಸಿಗೆ ಮೈಲಿಗೆ ಹಿಡಿದುಬಿಡುತ್ತದೆ. ಆ ತಪ್ಪನ್ನು ಒತ್ತಟ್ಟಿಗಿಟ್ಟು, ವ್ಯಕ್ತಿಯನ್ನು ಮೊದಲಿನಂತೆಯೇ ಪ್ರೀತಿಸುವ, ವ್ಯವಹರಿಸುವ ಕ್ರಿಯೆ ಕೊಡಲಿ ಪೆಟ್ಟು ತಿನ್ನುತ್ತದೆ. ವಿಷಯಾಧಾರಿತ ವೈರುದ್ಧ್ಯವನ್ನಿಟ್ಟುಕೊಂಡೂ ಒಬ್ಬರನ್ನು ಪ್ರೀತಿಸುವುದು ಅಷ್ಟೊಂದು ಕಷ್ಟವೇ? ನಿಜ, ನಮಗದು ತುಂಬಾ ಕಷ್ಟ. ಆಚರಣೆಗೆ ತರಲು ತಿಣುಕಾಡಿಬಿಡುತ್ತೇವೆ. ಆದರೆ ದಕ್ಷಿಣ ಅಮೆರಿಕದ ಎರಡು ದೇಶಗಳು 19ನೇ ಶತಮಾನದಿಂದಲೇ ಪರಸ್ಪರರನ್ನು ವಿರೋಧಿಸುತ್ತಾ ಅಷ್ಟೇ ತೀವ್ರವಾಗಿ ಪ್ರೀತಿಸುತ್ತಾ ಬಂದಿವೆ. ಇದೆಲ್ಲ ಏಕೆ ನೆನಪಾಗುತ್ತಿದೆಯೆಂದರೆ ಆ ದೇಶಗಳು ಈಗ ನಡೆಯುತ್ತಿರುವ ಫುಟ್‍ಬಾಲ್‍ನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಅವೇ ಅರ್ಜೆಂಟಿನಾ ಮತ್ತು ಬ್ರೆಜಿಲ್!


ಹೆಸರೊಂದೇ ಸಾಕು, ಫುಟ್‍ಬಾಲ್‍ನಲ್ಲಿನ ಕಡು ವೈರ ಕಣ್ಮುಂದೆ ಬರಲು. ಇವುಗಳ ಹಣಾಹಣಿ 'ದಕ್ಷಿಣ ಅಮೆರಿಕನ್ನರ ಕದನ' ಎಂದೇ ಖ್ಯಾತ. ಜಿದ್ದಾಜಿದ್ದು ಯಾವ ಮಟ್ಟದ್ದೆಂದರೆ ಆಡಿರುವ 95 ಪಂದ್ಯಗಳಲ್ಲಿ ಅರ್ಜೆಂಟಿನಾ ಗೆದ್ದಿರುವುದು 36ರಲ್ಲಾದರೆ ಬ್ರೆಜಿಲ್ ಗೆದ್ದಿರುವುದು 35ರಲ್ಲಿ. ಬ್ರೆಜಿಲ್ ಐದು ವಿಶ್ವಕಪ್‍ಗಳನ್ನು ಗೆದ್ದಿದ್ದರೆ ಅರ್ಜೆಂಟಿನಾ ಗೆದ್ದಿರುವುದು ಎರಡೇ. ಅರ್ಜೆಂಟಿನಾಗೆ ಸಾಲಾಗಿ ಎರಡು ಒಲಿಂಪಿಕ್‍ ಚಿನ್ನ ದಕ್ಕಿದ್ದರೆ ಬ್ರೆಜಿಲ್‍ನ ಗಳಿಕೆ ಶೂನ್ಯ. ಅದೇನೇ ಇದ್ದರೂ ಫುಟ್‍ಬಾಲ್ ಪ್ರಪಂಚದ ಅಗ್ರ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಇವುಗಳ ಹೆಸರು ಮಾತ್ರ ಇರಲೇಬೇಕು.

ದಕ್ಷಿಣ ಅಮೆರಿಕದ ರಾಷ್ಟ್ರಗಳ ಪೈಕಿ ಮೊತ್ತ ಮೊದಲು ಫುಟ್‍ಬಾಲ್‍ ಆಡತೊಡಗಿದ್ದು ಅರ್ಜೆಂಟಿನಾ ಮತ್ತು ಉರುಗ್ವೆ. ತಡವಾಗಿ ಕಣಕ್ಕಿಳಿದ ಬ್ರೆಜಿಲ್ ನಿಧಾನವಾಗಿ ಬಲಾಢ್ಯವಾಗತೊಡಗಿದಂತೆ ಹೊತ್ತಿತು ನೋಡಿ ಅದರ ಹಾಗೂ ಅರ್ಜೆಂಟಿನಾ ನಡುವಿನ ದ್ವೇಷದ ಕಿಡಿ. ಅದೇನು ಪೈಪೋಟಿ, ಅದೆಷ್ಟು ರೋಷ, ಕೆಚ್ಚು ಆಟಕ್ಕಿಳಿದರೆ!1937ರ ಪಂದ್ಯದಲ್ಲಿ ಎರಡು ಗೋಲು ಹೊಡೆದ ಅರ್ಜೆಂಟಿನಾ ಆಟಗಾರರು ಬ್ರೆಜಿಲ್‍ನ ಕರಿಯ ಆಟಗಾರರನ್ನು ಕೋತಿಗಳೆಂದು ಯಾವ ಪರಿ ಅಣಕಿಸಿದರೆಂದರೆ ಅವರು ಸಿಟ್ಟಿಗೆದ್ದು ಮೈದಾನದಿಂದಲೇ ಹೊರನಡೆದರು. ಮತ್ತೆ 1939ರ ರೋಕಾ ಕಪ್ ಪಂದ್ಯಾವಳಿಯಲ್ಲಿ ಮುಖಾಮುಖಿಯಾದಾಗ ಮೊದಲ ಪಂದ್ಯದಲ್ಲಿ ಅರ್ಜೆಂಟಿನಾ 5-1ರ ಅಂತರದಿಂದ ಗೆದ್ದಿತು. ಎರಡನೆಯ ಪಂದ್ಯದ ಸ್ಕೋರ್ 2-2 ಇದ್ದಾಗ ಬ್ರೆಜಿಲ್‍ನ ಪರವಾಗಿ ಪೆನಾಲ್ಟಿ ಕೊಟ್ಟಿದ್ದಕ್ಕೆ ಸಿಟ್ಟಿಗೆದ್ದ ಅರ್ಜೆಂಟಿನಾ ಆಟಗಾರ ಅರ್ಕಾಡಿಯೊ ಲೋಪೆಜ್ ರೆಫರಿಯನ್ನು ಕೆಟ್ಟದಾಗಿ ನಿಂದಿಸಿದ. ಪೋಲೀಸರು ಬಂದು ಲೋಪೆಜ್‍ನನ್ನು ಹೊರಗಟ್ಟಿದ್ದೇ ತಡ ಸಿಟ್ಟಾದ ಅರ್ಜೆಂಟಿನಾ ತಾನೇನು ಕಡಿಮೆ ಎಂದು ಮೈದಾನದಿಂದ ಹೊರನಡೆಯಿತು. ಎದುರಾಳಿ ತಂಡದ ಗೋಲ್‍ಕೀಪರ್ ಇಲ್ಲದೆಯೇ ಗೋಲ್ ಹೊಡೆದ ಬ್ರೆಜಿಲ್, ಪಂದ್ಯ ಗೆದ್ದದ್ದೂ ಆಯಿತು! ಇಷ್ಟಾದರೂ ಎರಡೂ ತಂಡಗಳು ಆಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಮತ್ತೆ 1945ರಲ್ಲಿ ನಡೆದ ಪಂದ್ಯದಲ್ಲಿ ಬ್ರೆಜಿಲ್‍ನ ಆಟಗಾರನೊಬ್ಬ ಅರ್ಜೆಂಟಿನಾದವನ ಕಾಲು ಮುರಿದ. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು 1946ರಲ್ಲಿ ಅದೇ ಘಟನೆ ಮರುಕಳಿಸಿದಾಗ. ಬ್ರೆಜಿಲ್‍ನ ರೋಜಾ ಪಿಂಟೋ ಅರ್ಜೆಂಟಿನಾದ ನಾಯಕ ಜೋಸ್‍ನ ಮಂಡಿಯ ಕೆಳಗಿನ ಮೂಳೆ ಮುರಿದು ಹೋಗುವಂಥ ಪೆಟ್ಟನ್ನು ಕೊಟ್ಟಾಗ ರೊಚ್ಚಿಗೆದ್ದ ಪ್ರೇಕ್ಷಕರು ಮೈದಾನಕ್ಕೆ ನುಗ್ಗಿ, ಎಲ್ಲವೂ ಅಲ್ಲೋಲಕಲ್ಲೋಲವಾಗಿ ಸ್ವಲ್ಪ ಹೊತ್ತು ಆಟವನ್ನೇ ನಿಲ್ಲಿಸಬೇಕಾಯಿತು. ಮತ್ತೆ ಮುಂದುವರೆದ ಆಟ ಮುಕ್ತಾಯಗೊಂಡಾಗ ಅರ್ಜೆಂಟಿನಾ 2-0 ಅಂತರದಲ್ಲಿ ಗೆದ್ದಿತು. ಆದರೆ ನಾಯಕ ಜೋಸ್ ಮತ್ತೆಂದೂ ಆಡಲಾಗದಷ್ಟು ಪೆಟ್ಟು ತಿಂದಿದ್ದ. ಈ ಘಟನೆಯಿಂದಾಗಿ ಮುಂದಿನ ಹತ್ತು ವರ್ಷಗಳವರೆಗೂ ಯಾವೊಂದು ತಂಡವೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲೇ ಇಲ್ಲ!



ಹಾಗೂ ಹೀಗೂ ಮತ್ತೆ 1978ರ ನಂತರ ಶುರುವಾದ ಪಂದ್ಯಗಳಲ್ಲಿ ಅರ್ಜೆಂಟಿನಾದ ಸಲುವಾಗಿ ಪೆರು ದೇಶ ಬೇಕೆಂತಲೇ ಸೋತ, ಡೀಗೋ ಮಾರಡೋನಾ ಬ್ರೆಜಿಲ್‍ನವನಿಗೆ ಒದೆ ಕೊಟ್ಟ ಘಟನೆಗಳು ನಡೆದವು. ಇವರಿಬ್ಬರ ಆಟದ ಖದರು ಎಷ್ಟೆಂದರೆ ಒಂದಷ್ಟು ಮಂದಿ ಮೈದಾನದಲ್ಲಿ ಬಡಿದಾಡಿಕೊಳ್ಳಲೇ ಬೇಕು ಹಾಗೂ ಅಲ್ಲಿ ಪೋಲೀಸ್ ಮತ್ತು ಆಂಬುಲೆನ್ಸ್ ಇರಲೇಬೇಕು! ಇಲ್ಲದಿದ್ದರೆ ಆಡುವವರಿಗೂ ನೆಮ್ಮದಿ ಇಲ್ಲ, ನೋಡುವವರಿಗೂ ತೃಪ್ತಿ ಇಲ್ಲ! ಇದ್ದುದರಲ್ಲೇ ಗಲಾಟೆಯಿಲ್ಲದೆ ನಡೆದದ್ದು ಬೀಜಿಂಗ್‍ನ ಒಲಿಂಪಿಕ್ ಪಂದ್ಯ. ಬ್ರೆಜಿಲ್ ಸೋತರೂ ಯಾರ ಮೈಮೂಳೆಗಳೂ ಪುಡಿಯಾಗಲಿಲ್ಲ ಸದ್ಯ!

ಮೈದಾನದಲ್ಲೇ ಈ ಪರಿ ಕಿತ್ತಾಡಿಕೊಳ್ಳುವ ದೇಶಗಳು ಉಳಿದ ವಿಷಯಗಳಿಗೂ ರಂಪ ಮಾಡಿಕೊಂಡು ಪದೇ ಪದೇ ವಿಶ್ವ ಸಂಸ್ಥೆಯ ಬಾಗಿಲು ಬಡಿಯಬೇಕಿತ್ತಲ್ಲವೇ? ಅಲ್ಲೇ ಇರುವುದು ನೋಡಿ ಸ್ವಾರಸ್ಯ ಮತ್ತು ವೈವಿಧ್ಯ. ಉಳಿದೆಲ್ಲಾ ವಿಷಯಗಳಲ್ಲೂ ಈ ರಾಷ್ಟ್ರಗಳದ್ದು ಗಳಸ್ಯ-ಕಂಠಸ್ಯ. ಒಟ್ಟಿಗೇ ಸ್ವಾತಂತ್ರ್ಯ ಪಡೆದ ಇವೆರಡೂ ಗಡಿ ವಿಷಯಕ್ಕೆ ಕಿತ್ತಾಡಿದ ಇತಿಹಾಸವೇ ಇಲ್ಲ. ಹೋಗಲಿ ಒಂದೇ ಒಂದು ಸಣ್ಣ ಜಗಳ? ಇಲ್ಲ. ನಡೆದದ್ದು ಒಂದೇ ಯುದ್ಧ, ಪರಗ್ವೇ ದೇಶದ ಮೇಲೆ ಇವುಗಳು ಒಟ್ಟಾಗಿ ಮಾಡಿದ್ದು, ಅದೂ 1865ರಷ್ಟು ಹಿಂದೆ. 1945ರಲ್ಲಿ ನೀರಿನ ಹಂಚಿಕೆ ವಿಷಯಕ್ಕೆ ಕೈ-ಕೈ ಮಿಲಾಯಿಸುವ ಚಂದದ ಅವಕಾಶ ಒದಗಿ ಬಂದಿತ್ತು. ಅದನ್ನೂ ಆಗಗೊಡದೆ ತಮ್ಮಲ್ಲೇ ರಾಜತಾಂತ್ರಿಕವಾಗಿ ಬಗೆಹರಿಸಿಕೊಂಡವು. ಆಗ ಎರಡೂ ದೇಶಗಳಲ್ಲಿ ಇದ್ದದ್ದು ಮಿಲಿಟರಿ ಆಡಳಿತ ಬೇರೆ. ಒಂದಾದರೂ ಹನಿ ನೆತ್ತರು ಹರಿಯಬೇಕಿತ್ತಲ್ಲವೇ?. ಹಾಗಾಗಲಿಲ್ಲ. ನಂತರ 1982ರಲ್ಲಿ ಅರ್ಜೆಂಟಿನಾ ಫಾಕ್‍ಲ್ಯಾಂಡ್ ದ್ವೀಪಸಮೂಹಗಳ ಮೇಲೆ ಯುದ್ಧಕ್ಕೆ ಹೋದಾಗ, ಬ್ರಿಟನ್ನಿನ ಯುದ್ಧ ವಿಮಾನ ಹಾಗೂ ಅದರಲ್ಲಿದ್ದ ಸೈನಿಕರನ್ನು ಬಂದಿಯಾಗಿಟ್ಟುಕೊಂಡಾಗಲೆಲ್ಲ ಬ್ರೆಜಿಲ್ ಅದರ ಬೆನ್ನಿಗಿತ್ತು. ಯುದ್ಧದಲ್ಲಿ ಸೋತು ವಿಶ್ವಸಂಸ್ಥೆಯೊಂದಿಗೆ ಮುಖ ಮುರಿದುಕೊಂಡ ಅರ್ಜೆಂಟಿನಾಗೆ ನಷ್ಟವಾದರೂ ಆಗಬೇಕಿತ್ತು ತಾನೆ? ಬ್ರೆಜಿಲ್ ಬಿಡಲಿಲ್ಲ. ತಾನೇ ಅದರ ಪರವಾಗಿ ವಾದ ಮಂಡಿಸುತ್ತಿತ್ತು. ಮಿಲಿಟರಿ ಆಡಳಿತ ಕೊನೆಯಾಗಿ ಎರಡೂ ದೇಶಗಳಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದದ್ದೇ ತಡ, ಬೆಸುಗೆ ಇನ್ನಷ್ಟು ಗಟ್ಟಿಯಾಯಿತು.

ಈಗಂತೂ ಅಣ್ವಸ್ತ್ರಗಳು ಎರಡೂ ರಾಷ್ಟ್ರಗಳ ಬಳಿ ಇವೆ. ಆದರೆ ಪರಸ್ಪರರ ವಿರುದ್ಧ ಪ್ರಯೋಗಿಸುವುದಿಲ್ಲವೆಂಬ ಪ್ರತಿಜ್ಞೆ ಮಾಡಿಕೊಂಡಿವೆ. ತಮ್ಮ ವಾಯುಪಡೆ ಹಾಗೂ ನೌಕಾಪಡೆಗಳ ಯುದ್ಧವಿಮಾನಗಳನ್ನು ಹಂಚಿಕೊಳ್ಳುತ್ತವೆ. ಸೈನ್ಯಕ್ಕೆ ಬೇಕಾದ ವಾಹನಗಳ ತಯಾರಿಕೆಯಲ್ಲಿಯೂ ಸಮಾನ ಪಾಲುದಾರಿಕೆ. ಎಲ್ಲೂ ಒಂದನ್ನೊಂದು ಶಂಕಿಸುವ, ಬೆನ್ನಿಗೆ ಚೂರಿ ಹಾಕುವ ಪ್ರಶ್ನೆಯೇ ಇಲ್ಲ. 2003ರಿಂದೀಚೆಗೆ ಮಾಡಿಕೊಂಡಿರುವ ಕೃಷಿ, ಆರ್ಥಿಕ ಹಾಗೂ ವಿದೇಶಾಂಗ ವಲಯಗಳಿಗೆ ಸಂಬಂಧಿಸಿದ ಒಪ್ಪಂದಗಳೆಲ್ಲ ಎರಡೂ ದೇಶಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ. ಇವುಗಳ ಆಂತರಿಕ ಹಣಕಾಸು ವಿನಿಮಯ ವ್ಯವಹಾರಗಳಲ್ಲಿ ಅಮೆರಿಕದ ಡಾಲರ್‍ಗೂ ಪ್ರವೇಶವಿಲ್ಲ! ಬಾಹ್ಯಾಕಾಶಕ್ಕೆ ಸಂಬಂಧಿಸಿದ ಎಲ್ಲ ಪ್ರಯೋಗಗಳೂ ಜಂಟಿಯೇ. ರಾಕೆಟ್ ಉಡಾಯಿಸುವುದೂ ಒಟ್ಟಾಗಿಯೇ. ಇಂದಿಗೂ ಬ್ರೆಜಿಲ್ ಫಾಕ್‍ಲ್ಯಾಂಡ್‍ಗೆ ಸೇರಿದ ಬ್ರಿಟನ್ನಿನ ಹಡಗುಗಳನ್ನು ತನ್ನ ಬಂದರಿಗೆ ಬಿಟ್ಟುಕೊಳ್ಳುತ್ತಿಲ್ಲ. ಹೀಗಿರಬೇಕು ಬೇಷರತ್ ಬೆಂಬಲ ಎಂದರೆ!

ಎಲ್ಲಕ್ಕಿಂತ ಸೋಜಿಗವೇನು ಗೊತ್ತೆ? ಬ್ರೆಜಿಲ್‍ನ ಅಧ್ಯಕ್ಷೆ ಡಿಲ್ಮಾ ರೂಸೆಫ್ ಹಾಗೂ ಅರ್ಜೆಂಟಿನಾ ಅಧ್ಯಕ್ಷೆ ಕ್ರಿಸ್ಟೀನಾ ಫರ್ನಾಂಡಿಸ್ ಇಬ್ಬರೂ ಮಹಿಳಾಮಣಿಗಳು. ಎರಡು ಜಡೆ ಸೇರಿದ ಕಡೆ ಜಗಳವಿರಲೇಬೇಕೆಂದು ಹೇಳಿದವರು ಯಾರು? ಅವಕಾಶ ಸಿಕ್ಕಾಗಲೆಲ್ಲ ಇಬ್ಬರೂ ಪರಸ್ಪರರ ದೇಶಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ.

ಇಷ್ಟೆಲ್ಲ ಸೌಹಾರ್ದವಿದ್ದರೂ ಫುಟ್‍ಬಾಲ್ ವಿಷಯದಲ್ಲಿ ಒಬ್ಬರಾದರೂ ತಗ್ಗಿ-ಬಗ್ಗಿ ನಡೆಯುತ್ತಾರೆಯೇ? ಉಹೂಂ. ವಿಶ್ವಕಪ್ ಪಂದ್ಯ ಶುರುವಾಗುವ ಮುನ್ನಿನ ಅಭ್ಯಾಸ ಪಂದ್ಯಗಳು ನಡೆಯುತ್ತವಲ್ಲ, ಅಲ್ಲಿ ಅರ್ಜೆಂಟಿನಾದ ಪಂದ್ಯವನ್ನು ವೀಕ್ಷಿಸಲು ಸುಮಾರು 5000ಮಂದಿ ಸೇರಿದ್ದರು. ಅವರಲ್ಲಿ ಬಹುತೇಕರು ಬ್ರೆಜಿಲ್‍ನವರು. ಅರ್ಜೆಂಟಿನಾ ಮೈದಾನಕ್ಕಿಳಿಯುತ್ತಿದ್ದಂತೆ ಶಿಳ್ಳೆ ಹಾಕಿ, ಕೂಗಿ, ಅಣಕಿಸಿ ಹುಯಿಲೆಬ್ಬಿಸಿದರು. ಅರ್ಜೆಂಟಿನಾದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಸುಮ್ಮನೆ ನಕ್ಕು ಎಲ್ಲರೆಡೆ ಕೈ ಬೀಸಿ ಆಟ ಶುರುವಿಟ್ಟುಕೊಂಡ. ಅರ್ಜೆಂಟಿನಾದ ಚೊಚ್ಚಲ ಪಂದ್ಯವಿದ್ದದ್ದು ಬೋಸ್ನಿಯಾ-ಹರ್ಜೆಗೋವಿನಾ ತಂಡದೊಂದಿಗೆ. ಅದಕ್ಕೂ ದಾಳಿಯಿಟ್ಟ ಬ್ರೆಜಿಲ್‍ನ ಅಭಿಮಾನಿಗಳು ಬೆರಳೆಣಿಕೆಯಷ್ಟಿದ್ದ ಬೋಸ್ನಿಯಾ ಅಭಿಮಾನಿಗಳಿಗಿಂತ ಹೆಚ್ಚಾಗಿ ಅವರ ಪರ ಕಿರುಚಾಡಿ ಅರ್ಜೆಂಟಿನಾವನ್ನು ಕಿಚಾಯಿಸಿದರು. ಬ್ರೆಜಿಲ್‍ನ ಪಂದ್ಯವೇ ಅಲ್ಲದಿದ್ದ ಮೇಲೆ ಅವರಿಗೆ ಬರುವ ಅಗತ್ಯವೇನಿತ್ತು ಹೇಳಿ? ಮೆಸ್ಸಿ ಮೇಲಿನ ಪ್ರೀತಿ. 'ನಮಗೆ ಅರ್ಜೆಂಟಿನಾ ಕಂಡರಾಗದು, ಆದರೆ ಮೆಸ್ಸಿ ಎಂದರೆ ಅಪಾರವಾದ ಗೌರವ ಹಾಗೂ ಅಭಿಮಾನವಿದೆ' ಎಂದು ಬಾಯಿಬಿಟ್ಟು ಹೇಳುವ ಅವರು ‘ಅರ್ಜೆಂಟಿನಾವನ್ನು ಪ್ರೋತ್ಸಾಹಿಸಲು ಬರುವುದಿಲ್ಲ, ಅದರ ಆಟ ನೋಡಲು ಬರುತ್ತೇವೆ’ ಎನ್ನುತ್ತಾರೆ.



ಅವರೆಲ್ಲರ ಬಯಕೆ ಅರ್ಜೆಂಟಿನಾ ಹಾಗೂ ಬ್ರೆಜಿಲ್ ಫೈನಲ್‍ಗೆ ಬರಬೇಕೆಂಬುದು. ಹಾಗಾಗಿಬಿಟ್ಟರೆ ಅದಕ್ಕಿಂತ ರೋಚಕ ಪಂದ್ಯ ಮತ್ತೊಂದು ಸಿಗಲಿಕ್ಕಿಲ್ಲ. ಈ ಆಟ ಹೀಗೇ ಮುಂದುವರೆಯುತ್ತಾ ಹೋಗುತ್ತದೆ. ಇಲ್ಲೊಬ್ಬ ಪೀಲೆ ಹುಟ್ಟಿದರೆ ಅಲ್ಲೊಬ್ಬ ಮಾರಡೋನ ಹುಟ್ಟುತ್ತಾನೆ. ಅಲ್ಲೊಬ್ಬ ಮೆಸ್ಸಿ ಹುಟ್ಟಿದರೆ ಇಲ್ಲೊಬ್ಬ ನೇಮಾರ್ ಹುಟ್ಟುತ್ತಾನೆ. ಮೈದಾನದಲ್ಲಿ ಹದ್ದು ಮೀರಿ ವರ್ತಿಸುವ ಇವರು ತಮ್ಮ ದೇಶಗಳ ಸರಹದ್ದನ್ನು ಒಟ್ಟಾಗಿಯೇ ಕಾಯುತ್ತಾರೆ. ಕಾಲ್ಚೆಂಡನ್ನು ಮನಬಂದಂತೆ ಒದ್ದರೂ ತಮ್ಮ ನೆರೆಯ ದೇಶದವರ ರುಂಡಗಳನ್ನು ಅಪ್ಪಿತಪ್ಪಿಯೂ ಚೆಂಡಾಡುವುದಿಲ್ಲ. ಸಿಟ್ಟು ಆಕ್ರೋಶಗಳೆಲ್ಲ ಮೈದಾನದಲ್ಲಿ ಸ್ಫೋಟಿಸುತ್ತವೆಯೆ ಹೊರತು ಬಾಂಬ್‍ಗಳಾಗಿ ಜೀವಗಳ ಬಲಿ ಪಡೆಯುವುದಿಲ್ಲ.

ಒಗ್ಗಟ್ಟು ಮತ್ತು ಸಾಮರಸ್ಯಗಳ ಪಾಠವನ್ನೂ ನಾವು ಎ,ಬಿ,ಸಿ,ಡಿಯಿಂದಲೇ ಪ್ರಾರಂಭಿಸಬಹುದು; ಇಲ್ಲಿ ಎ ಎಂದರೆ ಅರ್ಜೆಂಟಿನಾ, ಬಿ ಅಂದರೆ ಬ್ರೆಜಿಲ್! 

1 comment:

  1. ಚೆನ್ನಾಗಿದೆ ಮೇಡಂ ನಿಮ್ಮ ಚಿಂತನೆ....

    ReplyDelete