Friday 11 July 2014

ಅತ್ಯಾಚಾರಕ್ಕೆ ಪರವಾನಗಿ ಕೊಟ್ಟರೆ ಬೋಕೊ ಹರಾಮ್ ಹುಟ್ಟೀತು ಜೋಕೆ!

ಮೊತ್ತಮೊದಲನೆಯದಾಗಿ ಒಂದು ಸಿಹಿ ಸುದ್ದಿ. ಐಎನ್‍ಎಸ್ ವಿಕ್ರಾಂತ್‍ನ ಉಳಿವಿಗಾಗಿ ನಡೆಸಿದ ಹೋರಾಟ ಫಲ ನೀಡಿದೆ! ರಕ್ಷಣಾ ಸಚಿವಾಲಯ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆದಿದ್ದು, ನೌಕೆಯ ಹಾಲಿ ಸ್ಥಿತಿ-ಗತಿ, ಅದರ ಪುನಶ್ಚೇತನಕ್ಕೆ ತಗಲುವ ವೆಚ್ಚ ಹಾಗೂ ಅದನ್ನು ಸ್ಮಾರಕವಾಗಿಸಲು ಬೇಕಾಗುವ ಹಣಕಾಸು ಮತ್ತಿತರ ಅಂಶಗಳ ಕುರಿತು ಮಾಹಿತಿಯನ್ನು ಕೇಳಿದೆ. ಅಷ್ಟೇ ಅಲ್ಲ, ನಿತಿನ್ ಗಡ್ಕರಿಯವರ ಆಸಕ್ತಿಯಿಂದಾಗಿ, ಪ್ರಧಾನಿಗಳ ಕಾರ್ಯಾಲಯವೂ ಇದರಲ್ಲಿ ವಿಶೇಷ ಆಸ್ಥೆ ತಾಳಿದೆ! ನಾವು ಕಲೆತು ಕೈಜೋಡಿಸಿದರೆ ಎಲ್ಲವೂ ಸಾಧ್ಯ ಎಂಬುದಕ್ಕೊಂದು ತಾಜಾ ನಿದರ್ಶನ…

ಕೆಲ ದಿನಗಳ ಹಿಂದೆಯಷ್ಟೇ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‍ನ ಸಂಸದ ತಪಸ್ ಪಾಲ್ ಆಡಿರುವ ಮಾತುಗಳನ್ನು ಕೇಳಿದ್ದೀರಾ? ತಮ್ಮ ಪಕ್ಷದ ಕಾರ್ಯಕರ್ತರಿಗೆ ವಿರೋಧ ಪಕ್ಷದ(ಕಮ್ಯುನಿಸ್ಟ್) ಯಾರಾದರೂ ತೊಂದರೆ ಮಾಡಿದಲ್ಲಿ ಅವರನ್ನು ಗುಂಡಿಟ್ಟು ಕೊಲ್ಲುವುದೇ ಅಲ್ಲದೇ ತಮ್ಮ ಹುಡುಗರನ್ನು ಛೂ ಬಿಟ್ಟು ಅವರ ಮನೆಯ ಹೆಂಗಸರ ಮೇಲೆ ಅತ್ಯಾಚಾರವನ್ನೂ ಮಾಡಿಸುವುದಾಗಿ ಎದೆ ತಟ್ಟಿ ಹೇಳಿಕೊಂಡಿದ್ದಾರೆ. ಇವರು ಶುರುಮಾಡಬೇಕೆಂದಿರುವ ಅತ್ಯಾಚಾರ ಅಭಿಯಾನ(?) ಯಾವ ಪಲ್ಸ್ ಪೋಲಿಯೋ ಅಥವಾ ಸಾಕ್ಷರತಾ ಆಂದೋಲನಕ್ಕೂ ಕಡಿಮೆಯಿಲ್ಲ ಎಂದುಕೊಂಡುಬಿಟ್ಟಿದ್ದಾರೇನೋ! ಇದನ್ನು ಕೇಳಿದ ಮಮತಾ ದೀದಿ ಕ್ಷಮೆಯಾಚಿಸುವಂತೆ ಅವರನ್ನು ಗದರಿಸಿ ಅವಸವಸರವಾಗಿ ಕ್ಷಮಿಸಿಯೂ ಬಿಟ್ಟಿದ್ದಾರೆ. ದೀದಿಗೆ ಸಿಟ್ಟು ಬಂದಿರುವುದು ಯಾರ ಮೇಲೆ ಗೊತ್ತೇ? ತಪಸ್ ಮೇಲಂತೂ ಖಂಡಿತ ಅಲ್ಲ. ಇದನ್ನೆಲ್ಲ ಮೊಬೈಲ್‍ನಲ್ಲಿ ಚಿತ್ರಿಸಿಕೊಂಡು ಯಥಾವತ್ತಾಗಿ ಮಾಧ್ಯಮದವರಿಗೆ ನೀಡಿದ ಅಯೋಗ್ಯನ ಮೇಲೆ. ನಾದಿಯಾ ಜಿಲ್ಲೆಯ ನಕಾಶಿಪಾರಾ ಪೋಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್‍ಗೆ ಶತಾಯ ಗತಾಯ ಆ ಅಯೋಗ್ಯನನ್ನು ಪತ್ತೆ ಹಚ್ಚುವಂತೆ ಆದೇಶಿಸಲಾಗಿದೆ. ಇನ್ನು ಅವನು ಹೇಗೆ ತಪ್ಪಿಸಿಕೊಳ್ಳುತ್ತಾನೋ ದೇವರೇ ಬಲ್ಲ. ಅವನದು ಹಾಗಿರಲಿ, ಅವನ ಹೆಂಡತಿ ಹಾಗೂ ಹೆಣ್ಣು ಮಕ್ಕಳ(ಇದ್ದರೆ) ಗತಿ?

ಈ ವಿಷಯದ ಕುರಿತು ತಮ್ಮನ್ನು ಪ್ರಶ್ನಿಸುತ್ತಿರುವ ಮಾಧ್ಯಮಗಳ ಮೇಲೆ ಎಂದಿನಂತೆ ಹರಿಹಾಯುತ್ತಿರುವ ದೀದಿ, ಇಂಥ ಹೇಳಿಕೆ ಕೊಟ್ಟ ಮಾತ್ರಕ್ಕೆ ತಪಸ್‍ನನ್ನು ಕೊಂದು ಬಿಡಲಾ ಎಂದು ವ್ಯಂಗ್ಯವಾಗಿ ಕೇಳುತ್ತಿದ್ದಾರೆ. ಸ್ತ್ರೀಯರ ಮೇಲಿನ ದೌರ್ಜನ್ಯದಲ್ಲಿ ಪಶ್ಚಿಮ ಬಂಗಾಳದ್ದೇ ಮೊದಲ Rank ಯಾಕೆ ಎಂದು ಕೇಳಿದೊಡನೆ ಉರಿದು ಬೀಳುವ ದೀದಿಗೆ ಏಷ್ಯಾದ ಅತಿದೊಡ್ಡ ಕೆಂಪುದೀಪ ಪ್ರದೇಶವಾದ ಸೋನಾಗಾಚಿ ಇರುವುದು ಕಲ್ಕತ್ತದಲ್ಲಿ ಎಂಬುದು ಮರೆತು ಹೋಗಿದೆಯೇ? ಅತ್ಯಾಚಾರಕ್ಕೆ ಬಲಿಯಾಗಿ ಸಮಾಜದಿಂದ ಪರಿತ್ಯಕ್ತರಾಗಿ ಅಲ್ಲಿಗೆ ಹೋಗಿ ಸೇರುತ್ತಿರುವವರನ್ನು ಇವರ ಮುಂದೆ ತಂದು ಸಾಲಾಗಿ ನಿಲ್ಲಿಸೋಣವೇ? ಅಥವಾ ವೇಶ್ಯಾವಾಟಿಕೆಯ ಸಲುವಾಗಿ ಆಮದಾಗುತ್ತಿರುವ ವಿದೇಶಿ ಹೆಣ್ಣುಮಕ್ಕಳ ಸಂಖ್ಯೆ ಇಡೀ ದೇಶಕ್ಕೆ ಹೋಲಿಸಿದರೆ ಕಲ್ಕತ್ತಾದಲ್ಲೇ ಅತಿ ಹೆಚ್ಚು ಎಂಬುದನ್ನು ಅಂಕಿ-ಅಂಶಗಳ ಸಮೇತ ನಿರೂಪಿಸೋಣವೇ?

ಪಶ್ಚಿಮ ಬಂಗಾಳದ್ದು ಈ ಕಥೆಯಾದರೆ ಉತ್ತರ ಪ್ರದೇಶದ್ದಂತೂ ಕೇಳುವುದೇ ಬೇಡ. ಒಂದಕ್ಕೆ ಇನ್ನೊಂದು ಉಚಿತ ಎಂಬಂತೆ, ಅತ್ಯಾಚಾರ ಮಾಡಿಸಿಕೊಂಡರೆ ಮರಕ್ಕೆ ನೇತುಹಾಕಿಸಿಕೊಳ್ಳುವ ದಯಾಮರಣ ಫ್ರೀ! ಅಖಿಲೇಶ್ ಯಾದವ್‍ರ ರಾಜ್ಯಭಾರದಲ್ಲಿ ಉತ್ತರಪ್ರದೇಶ ಹೆಂಗಸರಿಗೆ ಹಾಗೂ ಮಕ್ಕಳಿಗೆ ಅತ್ಯಂತ ಅಸುರಕ್ಷಿತ ರಾಜ್ಯ ಎಂಬ ಕುಖ್ಯಾತಿ ಗಳಿಸಿದೆ. ಇರಬೇಕಾದ್ದೇ. 20ಕೋಟಿ ಜನಸಂಖ್ಯೆಯ ರಾಜ್ಯವನ್ನು ಬರೀ 1.8ಲಕ್ಷ ಪೋಲೀಸರ ಕೈಗಿತ್ತರೆ ಇನ್ನೇನಾಗಲು ಸಾಧ್ಯ? ಅಪ್ಪನ ಆಳ್ವಿಕೆಯ ಕಾಲದಲ್ಲಿದ್ದ ದಾಖಲೆ ಅತಿಹೆಚ್ಚು ಕೊಲೆಗಳದ್ದು. ದಾಖಲಾಗಿದ್ದ ಕೊಲೆಗಳ ಸಂಖ್ಯೆ 6126! ಮಗನ ಸಾಧನೆ ಅತ್ಯಾಚಾರದಲ್ಲಿನ ಹೆಚ್ಚಳ. ಅದೂ ಶೇಕಡ 50ರಷ್ಟು. ಕಳೆದ ವರ್ಷವೊಂದರಲ್ಲೇ ದಾಖಲಾದ ಅತ್ಯಾಚಾರಗಳ ಸಂಖ್ಯೆ 3050! ಸರಿಯೆ. ಕಂತೆಗೆ ತಕ್ಕ ಬೊಂತೆ.

ಇನ್ನು ದೆಹಲಿ. ದೇಶವೊಂದರದೇ ಅಲ್ಲ, ಅತ್ಯಾಚಾರಗಳ ರಾಜಧಾನಿಯೂ ಹೌದು. ನಿರ್ಭಯಾಳ ಹಂತಕರಿಗೆ ಗಲ್ಲು ಶಿಕ್ಷೆಯಾಗಿದ್ದರೂ ಪರಿಸ್ಥಿತಿ ಹತೋಟಿಗೆ ಬಂದಿಲ್ಲ. ನಮ್ಮ ನ್ಯಾಯಾಂಗವೇ ತಲೆ ತಗ್ಗಿಸುವಷ್ಟರ ಮಟ್ಟಿಗೆ ಸಾಗಿದೆ ಅತ್ಯಾಚಾರಿಗಳ ಭರಾಟೆ. ಮತ್ತೊಂದು ರೀತಿಯ ಕಳವಳಕಾರಿ ಬೆಳವಣಿಗೆ ನೆರೆಯ ಕೇರಳದಲ್ಲಿ ನಡೆದಿದೆ. ದಿನವೊಂದಕ್ಕೆ ಸುಮಾರು 200 ಹೆಣ್ಣುಮಕ್ಕಳು, ಅದರಲ್ಲೂ ಹಿಂದೂಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಿದ್ದಾರೆ. ಹೀಗೆ ಕಾಣೆಯಾಗುವವರಲ್ಲಿ ಹತ್ತರಿಂದ ಹದಿನಾರು ವರ್ಷದೊಳಗಿನವರೇ ಹೆಚ್ಚು! ಇವರೆಲ್ಲ ಕೊನೆಗೆ ತಲುಪುವುದು ಸೂಳೆಗೇರಿಗಳನ್ನೇ!

ಪ್ರತಿಯೊಂದು ಅತ್ಯಾಚಾರ ಬೆಳಕಿಗೆ ಬಂದಾಗಲೂ, ಮಾಧ್ಯಮಗಳು ಇದಕ್ಕೆ ಅನಾವಶ್ಯಕ ಪ್ರಾಶಸ್ತ್ಯ ನೀಡುತ್ತಿವೆ ಎಂದು ಬೊಬ್ಬೆ ಹಾಕುವ ರಾಜಕಾರಣಿಗಳಿಗೆ, ಈ ಹೊತ್ತಿನ ಆವಶ್ಯಕತೆ ಹೆಣ್ಣುಮಕ್ಕಳ ಸುರಕ್ಷತೆ ಎಂಬುದು ಏಕೆ ಮನದಟ್ಟಾಗುತ್ತಿಲ್ಲ? ಪಕ್ಷ, ಧರ್ಮ, ಜನಾಂಗ ಅಥವಾ ದೇಶಕ್ಕೆ ಸಂಬಂಧಪಟ್ಟ ವ್ಯಾಜ್ಯಗಳೆಲ್ಲ ಹೆಣ್ಣುಮಕ್ಕಳ ಅಪಹರಣ ಹಾಗೂ ಅತ್ಯಾಚಾರಗಳಲ್ಲೇ ಪರ್ಯವಸಾನವಾಗುತ್ತಿರುವುದೇಕೆ? ವಿಕೃತ ಮನಸುಗಳ ಎಲ್ಲ ಕಾಯಿಲೆಗಳಿಗೂ ಪರಸ್ತ್ರೀ ಶೋಷಣೆಯೇ ಮದ್ದೇ? ತಪಸ್‍ರಂಥ ಸಂಸದರು ಯಾರನ್ನೋ ಶಿಕ್ಷಿಸಲೋಸುಗ ಹೆಣ್ಣುಕುಲದ ಶೀಲಹರಣದ ಕಂಕಣ ತೊಟ್ಟು ನಮಗೆ ಬೋಕೊ ಹರಾಮ್‍ಅನ್ನು ನೆನಪಿಸುತ್ತಿದ್ದಾರೆ.

ಎಷ್ಟು ಭಯಾನಕ ಈ ಬೋಕೊ ಹರಾಮ್ ಎಂಬ ಹೆಣ್ಣುಬಾಕ, ಕ್ರೂರ, ಮುಸ್ಲಿಂ ಮೂಲಭೂತವಾದಿ ಸಂಘಟನೆ ಗೊತ್ತಿದೆಯೇ ನಿಮಗೆ?

ಇದೇ ವರ್ಷದ ಏಪ್ರಿಲ್ ತಿಂಗಳ 16ನೇ ತಾರೀಖಿನ ಮಧ್ಯರಾತ್ರಿ. ನೈಜೀರಿಯಾ ದೇಶದ ಚಿಬೋಕ್‍ ಎಂಬಲ್ಲಿನ, ಹೆಣ್ಣುಮಕ್ಕಳ ಒಂದು ವಸತಿ ಶಾಲೆ. 395 ಹೆಣ್ಣುಮಕ್ಕಳು ಮಲಗಿ ನಿದ್ದೆಹೋಗಿದ್ದರು. ಮೋಟಾರ್ ಬೈಕ್ ಹಾಗೂ ಟ್ರಕ್ಕುಗಳಲ್ಲಿ ಬಂದ ನೂರಾರು ಶಸ್ತ್ರಧಾರಿಗಳು ಆ ಹೆಣ್ಣುಮಕ್ಕಳನ್ನು ಹೊತ್ತೊಯ್ಯಲು ಪ್ರಯತ್ನಿಸಿದರು. ಸುಮಾರು ನೂರು ಹುಡುಗಿಯರು ತಪ್ಪಿಸಿಕೊಂಡು ಓಡಿದರೆ, ಉಳಿದವರು ಅಪಹರಣಕಾರರ ಕೈಗೆ ಸಿಕ್ಕಿಬಿಟ್ಟರು. ಹುಡುಗಿಯರನ್ನು ಹೊತ್ತೊಯ್ಯುವ ಮುನ್ನ ಅಪಹರಣಕಾರರು ಸುಮ್ಮನೆ ಹೋಗಲಿಲ್ಲ. ಶಾಲೆಯಲ್ಲಿದ್ದ ಆಹಾರ ಸಾಮಗ್ರಿಯ ದಾಸ್ತಾನಿಗೆ ಹಾಗೂ ಕಟ್ಟಡಕ್ಕೆ ಬೆಂಕಿ ಹಚ್ಚಿದರು! ಹಾಗೆ ಅವೇಳೆಯಲ್ಲಿ ಬಂದು ಅನಾಮತ್ತಾಗಿ ಹೆಣ್ಣುಮಕ್ಕಳನ್ನು ಅಪಹರಿಸಿದವರು ಬೇರಾರೂ ಅಲ್ಲ, ಉತ್ತರ ನೈಜೀರಿಯಾ ತುಂಬೆಲ್ಲಾ ಅಕ್ಷರಶಃ ಅಶಾಂತಿಯನ್ನು ಬಿತ್ತಿರುವ ಬೋಕೊ ಹರಾಮ್ ಎಂಬ ಮುಸ್ಲಿಂ ಮೂಲಭೂತವಾದಿ ಸಂಘಟನೆಯ ಉಗ್ರಗಾಮಿಗಳು.

ಬೋಕೊ ಹರಾಮ್ ಎಂಬುದರ ಅರ್ಥವೇ 'ಆಂಗ್ಲರ ಶೈಲಿಯ ಶಿಕ್ಷಣ ಪಡೆಯುವುದು ಮಹಾಪರಾಧ' ಎಂದು! ಕುರಾನ್ ಓದುವುದನ್ನು ಬಿಟ್ಟು ಎ,ಬಿ,ಸಿ,ಡಿ ಕಲಿಯುವವರನ್ನು ಹಿಡಿದು ಶಿಕ್ಷಿಸುವುದೇ ಈ ಸಂಘಟನೆಯ ಗುರಿಯೆಂದ ಮೇಲೆ ವಸತಿ ಶಾಲೆಯಲ್ಲಿದ್ದು ಕಲಿಯುತ್ತಿದ್ದ ಹುಡುಗಿಯರನ್ನು ಬಿಟ್ಟಾರೆಯೇ? ನೈಜೀರಿಯಾದ ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಕ್ರೈಸ್ತ ಮತದವರನ್ನು ಹೊಸಕಿ ಹಾಕುವುದು ಹಾಗೂ ಇಸ್ಲಾಂ ಧರ್ಮವನ್ನು ಷರಿಯಾ ಕಾನೂನಿನ ಪ್ರಕಾರ ಪಾಲಿಸದ ಮುಸ್ಲಿಮರನ್ನು ಮುಲಾಜಿಲ್ಲದೆ ಹಿಡಿದು ಕೊಲ್ಲುವುದೇ ಈ ಉಗ್ರಗಾಮಿಗಳ ಉದ್ದೇಶ! ನೈಜೀರಿಯಾವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಪರಿವರ್ತಿಸಲು ಅಂದು ಒಸಾಮ-ಬಿನ್-ಲಾಡೆನ್‍ನಿಂದ ಅಪಾರ ಹಣ, ಜನ ಬೆಂಬಲ ಪಡೆದು ಚಿಗುರೊಡೆದ ಈ ಸಂಘಟನೆ ಇಂದು ಬಲಿಷ್ಠವಾಗಿ ಬೇರು ಬಿಟ್ಟಿದೆ.

ಇಷ್ಟು ವರ್ಷಗಳಿಂದ ಸಾವಿರಾರು ಜನರನ್ನು ಕೊಲ್ಲುತ್ತಲೇ ಬಂದಿರುವ ಇದು ಈ ವರ್ಷದಲ್ಲಿ ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚಿನ ನಾಗರಿಕರನ್ನು ಕೊಂದು ಹಾಕಿದೆ. ಬಾಂಬ್ ದಾಳಿಗಳಿಗೆ, ರಕ್ತಪಾತಕ್ಕೆ ನಾವೆಲ್ಲ ಈಗೀಗ ಒಗ್ಗಿ ಹೋಗಿದ್ದೇವೆ ಅನಿಸುತ್ತದೆ. ಆದರೆ, ವಿಶ್ವದ ಗಮನವನ್ನು ತನ್ನೆಡೆ ಸೆಳೆಯಲು ಹೆಣ್ಣುಮಕ್ಕಳ ಅಪಹರಣಕ್ಕಿಳಿದಿರುವುದು ಮಾತ್ರ ನಿಜಕ್ಕೂ ಆತಂಕ ಮೂಡಿಸುತ್ತಿದೆ.  ಅಂದು ಅಪಹೃತರಾದ ಮಕ್ಕಳು ಇಂದಿನವರೆಗೂ ಪತ್ತೆಯಾಗಿಲ್ಲ. ನೈಜೀರಿಯಾದ ಅಧ್ಯಕ್ಷರ ಹೆಸರು 'ಗುಡ್‍ಲಕ್ ಜೊನಾಥನ್' ಆದರೂ ಅವರನ್ನು ನೆಚ್ಚಿಕೊಳ್ಳಲಾಗದೆ ಜನ ತಮ್ಮ ಬ್ಯಾಡ್‍ಲಕ್‍ಅನ್ನು ಹಳಿದುಕೊಳ್ಳುತ್ತಿದ್ದಾರೆ. ಏಕೆಂದರೆ ತೈಲಭರಿತವಾದ ಈ ರಾಷ್ಟ್ರದಲ್ಲಿ ಅಭಿವೃದ್ಧಿಯನ್ನು ಬದಿಗೊತ್ತಿ ಭ್ರಷ್ಟಾಚಾರದ ಭಾಷ್ಯ ಬರೆದ ಜೊನಾಥನ್ ಅವರಿಂದಲೇ ಇಂದು ಬೋಕೊ ಹರಾಮ್ ಈ ಮಟ್ಟಕ್ಕೆ ಬೆಳೆದಿರುವುದು ಎಂಬ ಅಭಿಪ್ರಾಯ ಎಲ್ಲರಿಗೂ ಇದೆ.  ಆದ್ದರಿಂದ ನಿರ್ವೀರ್ಯವಾಗಿರುವ ಸರ್ಕಾರವನ್ನು ನೆಚ್ಚಿಕೊಳ್ಳದೇ ತಂದೆ-ತಾಯಿಯರೇ ತಮ್ಮ ಬೈಕುಗಳನ್ನು ದಟ್ಟಡವಿಯ ಸಂದು-ಗೊಂದುಗಳಲ್ಲಿ ನುಗ್ಗಿಸಿಕೊಂಡು ಹೋಗುತ್ತಿದ್ದಾರೆ. ಬೋಕೊ ಹರಾಮ್‍ನ ರಾಕ್ಷಸರು ಕಾಡಿನ ಯಾವ ಮೂಲೆಯಲ್ಲಿ ತಮ್ಮ ಕಂದಮ್ಮಗಳನ್ನು ಕೂಡಿಹಾಕಿರಬಹುದು ಎಂದು ಹಗಲು-ರಾತ್ರಿಗಳ ಪರಿವೆಯಿಲ್ಲದೆ ಹುಡುಕಾಡುತ್ತಿದ್ದಾರೆ. ಹೀಗೆ ಕಾಡಿನ ಗರ್ಭ ಹೊಕ್ಕಿರುವ ಅವರುಗಳಿಗೆ ತಾವು ಜೀವಂತವಾಗಿ ಹೊರಬರುತ್ತೇವೆಂಬ ಖಾತ್ರಿಯಿಲ್ಲ. ಅದು ಅವರಿಗೆ ಮುಖ್ಯವೂ ಅಲ್ಲ ಬಿಡಿ.

ಈ ಪಾಶವೀತನದ ಕಾರಣಕರ್ತ ಬೋಕೊ ಹರಾಮ್ನ ನಾಯಕ ಅಬುಬಕರ್ ಶೇಕಾವು ಒಂದು ವೀಡಿಯೊ ಬಿಡುಗಡೆ ಮಾಡಿದ್ದಾನೆ. ಅದರಲ್ಲಿ, 'ಅಂಗ್ಲರ ಪದ್ಧತಿಯ ಶಾಲೆಯಲ್ಲಿ ಕಲಿಯುತ್ತಿದ್ದ ನಿಮ್ಮ ಮಕ್ಕಳನ್ನು ಹೊತ್ತೊಯ್ದಿರುವವನು ನಾನೇ. ಅವರನ್ನು ಮಾರುವಂತೆ ಅಲ್ಲಾಹುವಿನಿಂದ ಆಜ್ಞೆಯಾಗಿದೆ. ಆದ್ದರಿಂದ ಮಾರಿಬಿಡುತ್ತೇನೆ' ಎಂದು ಗಹಗಹಿಸುತ್ತಿದ್ದಾನೆ. ಇಷ್ಟು ಹೊತ್ತಿಗೆ ಶೇಕಾವುನ ತಂಡದವರು ಆ ಹುಡುಗಿಯರ ಮೇಲೆರಗಿ ತಮ್ಮ ತೃಷೆ ತೀರಿಸಿಕೊಳ್ಳದಿರುತ್ತಾರೆಯೇ? ನಾಳೆ ಮಾರಾಟವಾಗಿ ಯಾರದೋ ಜೀತದಾಳಾಗಿ ಕೊನೆಗೊಮ್ಮೆ ಮೈತುಂಬ ರೋಗ-ರುಜಿನ ಹೊತ್ತು ಬೀದಿಗೆ ಬರುವುದಕ್ಕಿಂತ ಹೆಚ್ಚಿನ ನರಕ ಬೇರೇನಿರಲು ಸಾಧ್ಯ? ಆದ್ದರಿಂದಲೇ, ಹೆತ್ತವರು ಕಂಗಾಲಾಗಿದ್ದಾರೆ. 'ನಮ್ಮ ಹೆಣ್ಣುಮಕ್ಕಳನ್ನು ಕರೆತನ್ನಿ' ಎಂದು ಕಣ್ಣೀರಿಡುತ್ತ ವಿಶ್ವಸಂಸ್ಥೆಯ ಮೆಟ್ಟಿಲೇರಿದ್ದಾರೆ. ಅಮೆರಿಕ, ಬ್ರಿಟನ್ ಹಾಗೂ ಇಸ್ರೇಲ್‍ಗಳ ಮಿಲಿಟರಿ ಪಡೆಗಳು ಅಲ್ಲೇ ಬೀಡುಬಿಟ್ಟಿದ್ದರೂ ಯಾರೂ ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಗುತ್ತಿಲ್ಲ. ಏಕೆಂದರೆ ಎರಡು ವರ್ಷಗಳ ಕೆಳಗೆ ಹೀಗೇ ಒತ್ತೆಯಾಳುಗಳಾಗಿದ್ದ ಬ್ರಿಟನ್ ಹಾಗೂ ಇಟಲಿಯ ನೌಕರರನ್ನು ಬಿಡಿಸುವ ಸಲುವಾಗಿ ಕೈಗೊಂಡ ಕಾರ್ಯಾಚರಣೆಯ ಸುಳಿವು ಸಿಕ್ಕಿ ಒತ್ತೆಯಾಳುಗಳನ್ನು ಕೊಲ್ಲಲಾಗಿತ್ತು.

ಒಟ್ಟನಲ್ಲಿ ಎಲ್ಲವೂ ಅತಂತ್ರ. ಈ ಘಟನೆಯ ನಂತರವೂ ಸುಮಾರು 90 ಮಕ್ಕಳು ಕಾಣೆಯಾಗಿದ್ದಾರೆ. ಅವರಲ್ಲಿ ಮೂರು ವರ್ಷದ ಹಸುಳೆಗಳೂ ಇದ್ದಾರೆಂದರೆ ಎಷ್ಟು ಮರುಕವಾಗುತ್ತದಲ್ಲವೆ? ಮೊದಲೇ ಅನಕ್ಷರಸ್ಥ ಹೆಣ್ಣುಮಕ್ಕಳ ದೇಶ. ನಾಲ್ಕರಲ್ಲಿ ಮೂರು ಹುಡುಗಿಯರಿಗೆ ಓದು-ಬರಹ ಬಾರದು. ತೀರಾ ಎಳವೆಯಲ್ಲೇ ಮದುವೆಯಾಗಿಬಿಡುತ್ತದೆ. ಗಂಡನಿಗೆ ಹೊಸ ಹೆಂಡತಿಯರು ಬರುತ್ತಿದ್ದಂತೆ ವಿಚ್ಛೇದನವೂ ಆಗಿಬಿಡುವುದರಿಂದ ಇತ್ತ ಗಂಡನೂ ಇರದ ಅತ್ತ ಕಡುಬಡವನಾದ ತಂದೆಯೂ ಮನೆಗೆ ಸೇರಿಸದ ಅನಾಥ ಬದುಕು. ಹೊಟ್ಟೆ ಪಾಡಿಗೆ ದೇಹ ಮಾರಿಕೊಂಡು ಬೀದಿ ಬದಿಯಲ್ಲೇ ಬದುಕುತ್ತಿರುವ ಇಂಥ ಸಾವಿರಾರು ಹೆಣ್ಣುಮಕ್ಕಳಿಗೆ ಯಾರು, ಎಷ್ಟೆಂದು ಆಶ್ರಯ ಕೊಟ್ಟಾರು ಹೇಳಿ?

ಬೋಕೊ ಹರಾಮ್‍ನ ಉದಾಹರಣೆ ಕೇಳಿ ಜಿಗುಪ್ಸೆಯಾಗುತ್ತದೆ. ಅತ್ಯಾಚಾರ ಮಾಡಿಸುತ್ತೇನೆ ಎಂದು ಘಂಟಾಘೋಷವಾಗಿ ಹೇಳುವ ರಾಜಕಾರಣಿಗಳನ್ನು ಕಂಡಾಗ ಕೆಂಡದಂಥ ಕೋಪ ಬರಬಾರದೇ? ತಾನೂ ಓರ್ವ ಹೆಣ್ಣಾಗಿ, ಹೀಗೆ ಹೇಳುವ ತನ್ನ ಪಕ್ಷದವರ ಹೆಡೆ ಮುರಿ ಕಟ್ಟದೆ ಪರೋಕ್ಷವಾಗಿ ಪರವಾನಗಿ ನೀಡುವ ಮುಖ್ಯಮಂತ್ರಿಯನ್ನು ನಡುಬೀದಿಯಲ್ಲಿ ನಿಲ್ಲಿಸಿ ಪ್ರಶ್ನಿಸಬಾರದೇ? ಕವಚ-ಕುಂಡಲಗಳೊಡನೆ ಹುಟ್ಟಿದವನು ಕರ್ಣನೊಬ್ಬನೇ ಅಲ್ಲ. ನೈತಿಕತೆಯೆಂಬ ರಕ್ಷಾಕವಚ ನಮ್ಮ ಬಳಿಯೂ ಇದೆ. ಮನಸನ್ನು ತಡವಿ ನೋಡಿಕೊಳ್ಳಬೇಕಷ್ಟೇ. ಇಲ್ಲದಿದ್ದರೆ ಇಲ್ಲೂ ಒಂದು ಬೋಕೊ ಹರಾಮ್‍ ಹುಟ್ಟಿಕೊಳ್ಳುವ ದಿನ ದೂರವಿಲ್ಲ. ಅಲ್ಲವೇ? 

No comments:

Post a Comment