Sunday 27 July 2014

'ಅಚ್ಛೇ' ದಿನಗಳ ಬರುವಿಕೆಯಲ್ಲಿ ಸ್ವಚ್ಛತೆಯದೂ ಪಾಲಿದೆ!

ಮೊನ್ನೆಯಷ್ಟೇ ಬ್ರೆಜಿಲ್‍ನಲ್ಲಿ ಮುಗಿಯಿತಲ್ಲ ವಿಶ್ವಕಪ್ ಫುಟ್‍ಬಾಲ್ ಪಂದ್ಯಾವಳಿ, ಅದರಲ್ಲಿ ಜಪಾನಿನ ಅಭಿಮಾನಿಗಳು ದೊಡ್ಡ ಸುದ್ದಿಯಾದರು. ಅತಿಥೇಯರಿಗಷ್ಟೇ ಅಲ್ಲ, ತಮ್ಮ ತಮ್ಮ ತಂಡಗಳನ್ನು ಬೆಂಬಲಿಸಲು ದೇಶ-ವಿದೇಶಗಳಿಂದ ಹರಿದು ಬಂದಿದ್ದ ಲಕ್ಷಾಂತರ ಅಭಿಮಾನಿಗಳಿಗೂ ಮಾದರಿಯಾದರು. ನಿಜ, ಅವರು ಕಪ್ ಗೆಲ್ಲಲಿಲ್ಲ. ಅದರ ಸನಿಹಕ್ಕೂ ಸುಳಿಯಲಿಲ್ಲ. ಆದರೆ ಸ್ವಚ್ಛತೆಯ ಬಗ್ಗೆ ತಮಗಿರುವ ಅತೀವ ಕಾಳಜಿಯನ್ನು ಮೆರೆದು ಎಲ್ಲರ ಕಣ್ಮಣಿಗಳಾದರು! ತಮ್ಮ ನೆಚ್ಚಿನ ಜಪಾನ್ ತಂಡ ಭಾಗವಹಿಸಿದ್ದ ಪ್ರತಿಯೊಂದು ಪಂದ್ಯವನ್ನೂ ವೀಕ್ಷಿಸಿದ ನಂತರ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿಯೇ ಅವರು ಹೊರಡುತ್ತಿದ್ದುದು. ಪ್ರೇಕ್ಷಕರು ಎಲ್ಲೆಂದರಲ್ಲಿ ಬಿಸಾಡಿದ್ದ ಖಾಲಿ ಕವರ್‍ಗಳು, ಕುಡಿದು ಎಸೆದಿದ್ದ ಬೀರ್ ಬಾಟಲಿಗಳನ್ನೆಲ್ಲ ಹೆಕ್ಕಿ ಒಂದು ಚೀಲಕ್ಕೆ ತುಂಬಿಸಿಕೊಳ್ಳುತ್ತಾ ಶಿಸ್ತಾಗಿ ಒಂದೆಡೆಯಿಂದ ಅವರು ಬರುತ್ತಿದ್ದರೆ ಉಳಿದವರು ಅವಾಕ್ಕಾಗಿ ನೋಡುತ್ತಾ ನಿಲ್ಲುತ್ತಿದ್ದರು. ಜಪಾನೀಯರೇ ಹಾಗೆ. ಉದ್ದಿಮೆದಾರರಾಗಿರಲಿ, ಸಾಮಾನ್ಯ ಉದ್ಯೋಗಿಗಳಾಗಿರಲಿ, ಅವರ ಮೊದಲ ಆದ್ಯತೆ ಸ್ವಚ್ಛತೆ! ಅವರು ಹಾಕಿಕೊಂಡಿರುವ ನಿಯಮ ಅತ್ಯಂತ ಸರಳ ಹಾಗೂ ಅಷ್ಟೇ ಕಠಿಣ. ಯಾವುದೇ ಜಾಗಕ್ಕೆ ಹೋದರೂ, ಅವರು ಹೋದಾಗ ಆ ಜಾಗ ಎಷ್ಟು ಸ್ವಚ್ಛವಾಗಿರುತ್ತದೋ, ಅಲ್ಲಿಂದ ಹಿಂತಿರುಗುವಾಗ ಅದಕ್ಕಿಂತ ತುಸು ಹೆಚ್ಚೇ ಸ್ವಚ್ಛವಾಗಿಟ್ಟು ಬರಬೇಕು. ಈ ನಿಯಮದ ಪಾಲನೆ ತಮ್ಮ ಮನೆ ಅಥವಾ ದೇಶಕ್ಕೆ ಮಾತ್ರ ಮೀಸಲಾಗಿರಬೇಕೆಂಬ ಸ್ವಾರ್ಥದ ಲೇಪವಿಲ್ಲ. ಆದ್ದರಿಂದಲೇ ಎಲ್ಲಿಗೆ ಹೋದರೂ ಅವರದ್ದು ಒಂದೇ ರೀತಿಯ ಅಚ್ಚುಕಟ್ಟು!



ಈ ವಿಷಯ ಈಗೇಕೆ ಪ್ರಸ್ತುತವಾಗುತ್ತದೆಂದರೆ, ‘ಅಚ್ಛೇ’ ದಿನಗಳ ನಿರೀಕ್ಷೆಯಲ್ಲಿರುವ ನಾವು ಜಪಾನೀಯರಿಂದ ಕಲಿಯಲೇಬೇಕಾದ ಪಾಠವೊಂದಿದೆ.
ಮೊದಲಿಗೆ, ಮೋದಿಯವರು ಕಟ್ಟಿ ಕೊಟ್ಟ ‘ಅಚ್ಛೇ’ ದಿನಗಳೆಂಬ ಕನಸಿನ ಸೌಧದ ನಿರ್ಮಾಣ ಯಾವ ಹಂತದಲ್ಲಿದೆ ನೋಡೋಣ ಬನ್ನಿ. ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಲಾಗಾಯ್ತು, ಮೋದಿಯವರು ದಿನದ 18 ತಾಸು ಕೆಲಸದಲ್ಲಿ ನಿರತರಾಗಿಬಿಟ್ಟಿದ್ದಾರೆ. ಯಾವ ಹೇಳಿಕೆಗಳೂ ಇಲ್ಲ, ಪ್ರತಿಕ್ರಿಯೆಗಳೂ ಇಲ್ಲ. ತೀರಾ ಅನಿವಾರ್ಯ ಎಂಬಂಥ ಸಂದರ್ಭಗಳಲ್ಲಿ ಮಾಡುತ್ತಿರುವ ಚಿಕ್ಕ-ಚೊಕ್ಕ ಸಮಯೋಚಿತ ಭಾಷಣಗಳನ್ನು ಬಿಟ್ಟರೆ ಅವರ ಇರುವಿನ ಸುಳಿವೇ ಇಲ್ಲ. ಚುನಾವಣಾ ಪ್ರಚಾರದ ಸಮಯದಲ್ಲಿ ನೂರಾರು ಸಭೆಗಳನ್ನುದ್ದೇಶಿಸಿ ಗಂಟೆಗಟ್ಟಲೆ ಭಾಷಣ ಮಾಡುತ್ತಿದ್ದ ವ್ಯಕ್ತಿ ಇವರೇನಾ ಎಂದು ಆಶ್ಚರ್ಯ ಪಡುವ ಸರದಿ ನಮ್ಮದಾಗಿದೆ. ತಮಗೆ ಅಂಟಿಸಿದ್ದ ಗೋಧ್ರಾ ನರಮೇಧದ ಕಳಂಕವನ್ನು ತಿಕ್ಕಿ ತೊಳೆಯಲು ಟೊಂಕ ಕಟ್ಟಿ ನಿಂತಿದ್ದ ವ್ಯಕ್ತಿ, ಕುಟುಂಬ ರಾಜಕಾರಣ ಮಾಡುತ್ತಿದ್ದವರನ್ನು ಮುಲಾಜಿಲ್ಲದೆ ಹಂಗಿಸುತ್ತಿದ್ದ ವ್ಯಕ್ತಿ ಈಗ ಶಾಂತರಾಗಿದ್ದಾರೆ. ಯಾವ ಉದ್ದೇಶಪೂರ್ತಿಗಾಗಿ ಗದ್ದುಗೆಯೇರಿದ್ದಾರೋ, ಅದನ್ನು ಸಫಲಗೊಳಿಸುವುದಕ್ಕಾಗಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಬಾಹ್ಯವಾಗಿ ಮೌನಿಯಾಗಿದ್ದೇ, ಆಂತರ್ಯದಲ್ಲಿ ತಮ್ಮ ಕೈಂಕರ್ಯವನ್ನು ತಪಸ್ಸಿನಂತೆ ಆಚರಿಸುತ್ತಿದ್ದಾರೆ. ಪರಿಣಾಮ, ಅಧಿಕಾರದ ಚುಕ್ಕಾಣಿ ಹಿಡಿದು ತಿಂಗಳೆರಡು ಕಳೆಯುವಷ್ಟರಲ್ಲೇ ಬದಲಾವಣೆಯ ಗಾಳಿ ಬೀಸುತ್ತಿದೆ.

ಅಷ್ಟರಲ್ಲಾಗಲೇ ಒಂದು ವರ್ಗದವರು ವರಾತ ಶುರು ಮಾಡಿದ್ದಾರೆ. ಮೋದಿಯವರು ಹೇಳಿದ ಅಚ್ಛೇ ದಿನಗಳು ಎಲ್ಲಿವೆ? ಏಕೆ ಇಷ್ಟು ತಡವಾದರೂ ಯಾವ ಪವಾಡವೂ ಕಾಣುತ್ತಿಲ್ಲ ಎಂದು ದುರ್ಬೀನು ಹಿಡಿದು ಹುಡುಕಾಟ ನಡೆಸಿದ್ದಾರೆ. ದುರ್ಬೀನುಧಾರಿಗಳೇ ಕೇಳಿ, ಆಗುತ್ತಿರುವ ಬದಲಾವಣೆಗಳನ್ನು ಕಾಣಲು ಬರಿಗಣ್ಣೇ ಸಾಕು. ಏಕೆಂದರೆ ಅದಕ್ಕೆ ಬೇಕಾಗಿರುವುದು ದುರ್ಬೀನಲ್ಲ, ಪೂರ್ವಾಗ್ರಹಗಳಿಂದ ಮುಕ್ತವಾದ, ಹೊಸತನವನ್ನು ಸ್ವೀಕರಿಸಬಲ್ಲ ಮನಸು. ಕ್ಯಾಬಿನೆಟ್ ಸಚಿವರ ಕೈಕೆಳಗಿದ್ದ ಮಂತ್ರಿಗಳ ಸಮಿತಿಯನ್ನು ವಿಸರ್ಜಿಸಿ ಸಚಿವರನ್ನೇ ನೇರವಾಗಿ ಹೊಣೆಗಾರರನ್ನಾಗಿಸಿದ್ದು, ಸಾರ್ಕ್ ದೇಶಗಳೊಡನೆ ಬಾಂಧವ್ಯದ ಹೊಸ ಭಾಷ್ಯ ಬರೆದದ್ದು, ಪಾಕಿಸ್ತಾನದ ಪ್ರಧಾನಿಯನ್ನು ನಮ್ಮ ದೇಶಕ್ಕೆ ಆಹ್ವಾನಿಸಿದ್ದು, ನಮ್ಮ ದೇಶದ ಮೇಲೆ ಬೇಹುಗಾರಿಕೆ ನಡೆಸುತ್ತಿರುವ ಅಮೆರಿಕೆಗೆ ಎಚ್ಚರಿಕೆ ಕೊಟ್ಟಿದ್ದು, ಚೊಚ್ಚಲ ವಿದೇಶ ಪ್ರವಾಸಕ್ಕೆ ಭೂತಾನ್ ದೇಶವನ್ನು ಆಯ್ದುಕೊಂಡಿದ್ದು - ಇವೆಲ್ಲಾ ಅಚ್ಛೇ ದಿನಗಳ ಮುನ್ಸೂಚನೆಗಳೇ.
ಇವೆಲ್ಲ ತೀರ ರಾಜತಾಂತ್ರಿಕ ಉದಾಹರಣೆಗಳಾದವು. ಸಾಮಾನ್ಯ ಜನರಿಗೆ ಅನ್ವಯವಾಗುವಂಥ ಉದಾಹರಣೆಯೊಂದು ಬೇಕೇ? ಇಲ್ಲಿದೆ ನೋಡಿ. ಐಸಿಸ್ ಉಗ್ರರಿಂದ ಬಿಡುಗಡೆಗೊಂಡು ಬಂದ ಕೇರಳದ ನರ್ಸ್‍ಗಳು 'ಉಗ್ರರು ನಮ್ಮನ್ನು ಸಹೋದರಿಯರಂತೆ ನೋಡಿಕೊಂಡರು. ನೀರು ಬಿಸ್ಕೆಟ್ ನೀಡಿದರು' ಎಂದು ಎರಡೂ ಕೈಯೆತ್ತಿ ಮುಗಿಯುತ್ತಿದ್ದಾರೆ. ಅಸಲಿಗೆ ಇವರಿಗೆ ನೀರು ಬಿಸ್ಕೆಟ್ ನೀಡಿದವರು ಐಸಿಸ್ ಉಗ್ರರಲ್ಲವೇ ಅಲ್ಲ. ಉಗ್ರರ ವೇಷದಲ್ಲಿದ್ದ ಭಾರತೀಯ ಕಮಾಂಡೋಗಳು! ಈ ವಿಷಯ ನರ್ಸ್‍ಗಳಿಗೂ ತಿಳಿದಿರಲಿಲ್ಲ. ಉಗ್ರರೊಂದಿಗೆ ರಹಸ್ಯವಾಗಿ ಮಾತುಕತೆ ನಡೆಸಿ, ಅವರ ಮೇಲೆ ಒತ್ತಡ ಹೇರಲು ಗಲ್ಫ್ ಕಡಲ ತೀರದತ್ತ ನಮ್ಮ ಯುದ್ಧನೌಕೆಯನ್ನು ಮುಖಮಾಡಿ ನಿಲ್ಲಿಸಿ, ಒತ್ತಡಕ್ಕೆ ಮಣಿದ ಉಗ್ರರಿಗೆ ಬೇಕಾದ ಔಷಧಗಳನ್ನು ಮಧ್ಯವರ್ತಿಗಳ ಮೂಲಕ ಪೂರೈಸಿ, ಬದಲಿಗೆ ನಮ್ಮ ನರ್ಸ್‍ಗಳನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬಂದ ತಂತ್ರಗಾರಿಕೆಯ ಶ್ರೇಯ ಸಲ್ಲುವುದು ಯಾರಿಗೆ ಎಂದುಕೊಂಡಿದ್ದೀರಿ? ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೊವೆಲ್‍ರಿಗೆ!

ದೇಶದ ಸುರಕ್ಷೆ, ಮಹಾನ್ ತಂತ್ರಗಾರಿಕೆಯ ಚಾಣಾಕ್ಷ ಬೇಹುಗಾರ ಅಜಿತ್ ದೊವೆಲ್ರ ಕೈಲಿರುವುದು ಖಂಡಿತ ನಮ್ಮ ಪಾಲಿನ ‘ಅಚ್ಛೇ’ ದಿನಗಳೇ. ಅಲ್ಲವೇ?
ಅಚ್ಛೇ ದಿನಗಳ ಮತ್ತೊಂದು ದೃಷ್ಟಾಂತ ನಮ್ಮೆದುರು ಬಂದದ್ದು ಬಜೆಟ್‍ನ ರೂಪದಲ್ಲಿ. ಈ ಬಾರಿ ಮಂಡಿಸಲ್ಪಟ್ಟ ರೈಲ್ವೆ ಬಜೆಟ್‍ಅನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ? ಎರ್ರಾಬಿರ್ರಿಯಾಗಿ ಹೊಸ ಯೋಜನೆಗಳನ್ನು ಜಾರಿಗೆ ತಂದು, ಹೊಸ ರೈಲುಗಳನ್ನು ಬಿಟ್ಟು ನಮ್ಮನ್ನು ಹಳಿ ತಪ್ಪಿಸುವ ಬದಲು, ಚಾಲ್ತಿಯಲ್ಲಿರುವ ಮಾರ್ಗಗಳನ್ನು ನವೀಕರಿಸಲು ಅನುದಾನವನ್ನು ಘೋಷಿಸಲಾಗಿದೆ. ಎಲ್ಲಕ್ಕಿಂತ ಮಿಗಿಲಾದ ಪ್ರಾಶಸ್ತ್ಯ ಸಿಕ್ಕಿರುವುದು ಯಾವುದಕ್ಕೆ ಹೇಳಿ? ನೈರ್ಮಲ್ಯಕ್ಕೆ! ಹೌದು. ನಮಗೆ ಈಗ ತುರ್ತಾಗಿ ಬೇಕಾಗಿರುವುದೇ ಅದು. ಮೇಲೆ ಹೇಳಿದ ಜಪಾನೀಯರ ಪಾಠ ನಮಗೆ ಅಳವಡಿಕೆಯಾಗುವುದು ಇಲ್ಲೇ ನೋಡಿ. ರೈಲ್ವೆ ಸಚಿವರಾದ ಸದಾನಂದಗೌಡರು ಸ್ವಚ್ಛತೆಗೆ ಮೀಸಲಿಟ್ಟಿರುವ ಹಣ ಕಳೆದ ಸಲಕ್ಕಿಂತ ಶೇಕಡ 40ರಷ್ಟು ಹೆಚ್ಚು. ಶುದ್ಧವಾದ ಕುಡಿಯುವ ನೀರು ಹಾಗೂ ಸ್ವಚ್ಛ ಶೌಚಾಲಯಗಳ ವ್ಯವಸ್ಥೆಯನ್ನು ಕಲ್ಪಿಸುವ ಭರವಸೆ ಅವರದು. ಪ್ರಮುಖವಾದ 50 ನಿಲ್ದಾಣಗಳಲ್ಲಿ ಪ್ಲಾಟ್‍ಫಾರ್ಮ್ ಹಾಗೂ ರೈಲುಗಳ ಶುಚಿತ್ವದ ಉಸ್ತುವಾರಿಯನ್ನು ಹೊರಗುತ್ತಿಗೆ ನೀಡುವ ಅವರ ನಿರ್ಧಾರವೂ ಶ್ಲಾಘನೀಯವೇ. ಇದೆಲ್ಲದರ ಸಮರ್ಪಕ ಅನುಷ್ಠಾನದ ಮೇಲ್ವಿಚಾರಣೆಗೋಸ್ಕರ ಸಿಸಿಟಿವಿಯ ಅಳವಡಿಕೆ ಬೇರೆ! ಅವರೇನೋ ತಮ್ಮ ಭರವಸೆಗಳನ್ನು ಈಡೇರಿಸಿಬಿಡುತ್ತಾರೆ, ಆದರೆ ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಭರವಸೆಯನ್ನು ನಾವೂ ಅವರಿಗೆ ಕೊಡಬಲ್ಲೆವೆ?

ಇನ್ನೂ ಒಂದು ಮುಖ್ಯವಾದ ಅಂಶವಿದೆ. ಈಗ ಕೆಲವೇ ರೈಲುಗಳಿಗೆ ಮೀಸಲಾಗಿರುವ ಬಯೋ-ಶೌಚಾಲಯದ ಸೌಲಭ್ಯ ಇನ್ನು ಮುಂದೆ ಎಲ್ಲ ರೈಲುಗಳಿಗೂ ಸಿಗಲಿದೆ. ಬಯೋ-ಶೌಚಾಲಯ ಎರಡು ರೀತಿಯಲ್ಲಿ ಲಾಭದಾಯಕ. ಮೊದಲನೆಯದಾಗಿ, ಮಲ-ಮೂತ್ರಗಳಿಂದಾಗಿ ಹಳಿಗಳ ಮೇಲಾಗುತ್ತಿರುವ ಸಾಮೂಹಿಕ ಅತ್ಯಾಚಾರ ನಿಲ್ಲುತ್ತದೆ. ಈಗಿನ ನಮ್ಮ ವಿಸರ್ಜನಾ ಪ್ರಕ್ರಿಯೆಯ ಕೃಪೆಯಿಂದ ಹಳಿಗಳು ಎಷ್ಟರ ಮಟ್ಟಿಗೆ ಸೀದು ತುಕ್ಕು ಹಿಡಿಯುತ್ತಿವೆಯೆಂದರೆ, ವಾರ್ಷಿಕ 350 ಕೋಟಿ ಬರೀ ಈ ತುಕ್ಕು ಹೋಗಲಾಡಿಸಲು ಖರ್ಚಾಗುತ್ತಿದೆ! ಎರಡನೆಯದಾಗಿ, ಇದು ತ್ಯಾಜ್ಯವನ್ನು ಸಂಸ್ಕರಿಸಿ, ಅದನ್ನು ನೀರು ಹಾಗೂ ಅನಿಲವನ್ನಾಗಿ ಪರಿವರ್ತಿಸುತ್ತದೆ.
ಹಣಕಾಸಿನ ಆಯ-ವ್ಯಯದ ಬಜೆಟ್‍ನಲ್ಲೂ ಮೋದಿ ಸರ್ಕಾರ ನೈರ್ಮಲಕ್ಕೆ ಹೆಚ್ಚು ಒತ್ತು ನೀಡಿದೆ. 'ಮೊದಲು ಶೌಚಾಲಯ ನಂತರ ದೇವಾಲಯ' ಎಂಬ ನಂಬಿಕೆಯ ಮೋದಿಯವರು 2019ರ ಹೊತ್ತಿಗೆ ಪ್ರತಿ ಮನೆಯಲ್ಲೂ ಸ್ವಚ್ಛತೆಯನ್ನು ಕಾಣುವ ಗುರಿ ಇರಿಸಿಕೊಂಡಿದ್ದಾರೆ. ನಮಾಮಿ ಗಂಗೆ ಹೆಸರಿನಲ್ಲಿ ಗಂಗಾ ನದಿಯ ಶುದ್ಧೀಕರಣಕ್ಕೆ 2037ಕೋಟಿಯನ್ನು ಮೀಸಲಿಟ್ಟಿದ್ದಾರೆ. ನದಿ ಪಾತ್ರಗಳ ಹಾಗೂ ಘಾಟ್‍ಗಳ ಅಭಿವೃದ್ಧಿಗೆ ಪ್ರತ್ಯೇಕವಾಗಿ 100ಕೋಟಿಯನ್ನು ಮೀಸಲಿಟ್ಟಿದ್ದಾರೆ. ದೇಶದ ಅಭಿವೃದ್ಧಿ ಶುರುವಾಗುವುದೇ ಸ್ವಚ್ಛತೆಯಿಂದ. ಅದರಲ್ಲೂ ಭಾರತದಂಥ ಕ್ಲಿಷ್ಟ ಪ್ರಜಾಪ್ರಭುತ್ವಕ್ಕೆ ಸರ್ವತೋಮುಖ ಅಭಿವೃದ್ಧಿಯೆಂಬುದು ಇಲ್ಲಿಯವರೆಗೂ ಮರೀಚಿಕೆಯಾಗಿತ್ತು. ಆದರೆ ಈಗ ಶುರುವಾಗಿರುವುದು ನಿಜವಾದ ಅರ್ಥದಲ್ಲಿ ಸುವರ್ಣ ಯುಗ ಎಂಬುದಕ್ಕೆ ಎಲ್ಲರನ್ನೂ ಒಳಗೊಂಡ ಮತ್ತು ಎಲ್ಲರಿಗೋಸ್ಕರ ಹೆಣೆಯಲ್ಪಟ್ಟ ಅರ್ಥಪೂರ್ಣ ಬಜೆಟ್‍ಗಿಂತ ಬೇರೆ ಸಾಕ್ಷಿ ಬೇಕೇ? ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವ ಹಾಗೂ ಪ್ರವಾಸೋದ್ಯಮವನ್ನು ಪರಿಣಾಮಕಾರಿಯಾಗಿಸುವ ದೊಡ್ದ ಮಟ್ಟದ ಕನಸುಗಳನ್ನು ಕಾಣುತ್ತಿದ್ದಾರೆ ನಮ್ಮ ನೇತಾರರು. ಅಂತಲೇ ನೈರ್ಮಲ್ಯಕ್ಕೆ ಒತ್ತು ನೀಡುತ್ತಿದ್ದಾರೆ. ಹಲವು ಕೋಟಿ ರುಪಾಯಿಗಳನ್ನು ಅದಕ್ಕೆಂದೇ ಮೀಸಲಿಡುತ್ತಿದ್ದಾರೆ. ನಾವೂ ನೀವೂ ಕೈಜೋಡಿಸದಿದ್ದರೆ ಕನಸುಗಳು ಹೇಗೆ ನನಸಾದಾವು? ನಮ್ಮ ರಾಷ್ಟ್ರ ಜಾಗತಿಕ ಮಟ್ಟದಲ್ಲಿ ಹೇಗೆ ಗುರುತಿಸಿಕೊಂಡೀತು?

ಎಲ್ಲವೂ ಅಂದುಕೊಂಡಂತೆಯೇ ಆದರೆ ಸ್ವಚ್ಛ ಭಾರತ ನಿರ್ಮಾಣವಾಗುವುದರಲ್ಲಿ ಸಂದೇಹವೇ ಇಲ್ಲ. ಆದರೆ ಹಾಗಾಗಲು ನಾವು ಬಿಡಬೇಕಲ್ಲ? ನಮ್ಮ ಮನೆಯ ಕಸವನ್ನು ಪಕ್ಕದ ಖಾಲಿ ಸೈಟಿನಲ್ಲಿ ಎಸೆದು ಬರುವ ಜಾಯಮಾನದವರು ನಾವು. ಒಂದು ಚಿತ್ರಮಂದಿರಕ್ಕೆ ಹೋದರೂ ಅಷ್ಟೆ. ಚಿತ್ರನೋಡುವುದರಲ್ಲಿ ತಲ್ಲೀನರಾಗಿ, ತಿನಿಸುಗಳನ್ನು ಎಲ್ಲೆಂದರಲ್ಲಿ ಸುರುವಿ, ಕೊನೆಗೊಮ್ಮೆ ಎದ್ದು ನಿಂತು ಮೈ ಝಾಡಿಸಿಕೊಂಡುಬಿಟ್ಟರೆ ಮುಗಿಯಿತು. ನಾವು ಸ್ವಚ್ಛರಾದಂತೆ! ಹೇಗೂ ದುಡ್ಡು ಕೊಟ್ಟಿರುತ್ತೇವಲ್ಲ, ಚಿತ್ರಮಂದಿರದವರು ಶುಚಿ ಮಾಡಿಕೊಳ್ಳುತ್ತಾರೆ. ಮಾಡದಿದ್ದರೂ ಏನಂತೆ, ನಮ್ಮ ಕೆಲಸ ಹೇಗೂ ಮುಗಿದಿರುತ್ತದೆ. ಅಲ್ಲವೇ? ರಸ್ತೆ, ಪಾರ್ಕು, ಆಟದ ಮೈದಾನ, ಫ್ಲೈ-ಓವರ್‍ಗಳನ್ನೇ ನಾವು ಬಿಡುವುದಿಲ್ಲ ಎಂದ ಮೇಲೆ ಇನ್ನು ರೈಲು, ಬಸ್ಸುಗಳು ಯಾರಪ್ಪನ ಮನೆಯ ಗಂಟು ಎಂದು ತಲೆಕೆಡಿಸಿಕೊಳ್ಳಬೇಕು?
‘ಹೇಗೂ ನಿಚ್ಚಳ ಬಹುಮತ ಕೊಟ್ಟು ಗೆಲ್ಲಿಸಿದ್ದಾಗಿದೆ, ಇಂದಲ್ಲಾ ನಾಳೆ ಅಚ್ಛೇ ದಿನಗಳನ್ನು ತಂದೇ ತೀರುವ ಹೊಣೆ ಸರ್ಕಾರದ್ದು, ನಮ್ಮದೇನಿದೆ ಪಾತ್ರ?’ ಎಂದು ಎಲ್ಲ ಭಾರವನ್ನೂ ಆಡಳಿತ ಯಂತ್ರದ ಮೇಲೆ ಹಾಕಿ ನಿರುಮ್ಮಳವಾಗಿರುವ ಧೋರಣೆ ಬದಲಾಗಬೇಕಿದೆ. ದೆಹಲಿಯಲ್ಲಿ ಜನ್ಮತಾಳುವ ಪ್ರತಿ ಯೋಜನೆ, ಪ್ರತಿ ಕನಸನ್ನೂ ನಮ್ಮ ಸ್ಪಂದನದ ಮೂಲಕ ಪೋಷಿಸಬೇಕಿದೆ. 'ಅಚ್ಛೇ ದಿನ್' ಎಂಬ ಕನಸುಗಳ ಮೂಟೆಯಲ್ಲಿ ಸ್ವಚ್ಛತೆ ಎಂಬುದು ಒಂದು ಸಣ್ಣ ಸರಕು ಮಾತ್ರ. ಇಡೀ ದೇಶದ ಧೂಳು ಝಾಡಿಸುತ್ತೇನೆಂದು ಪೊರಕೆ ಹಿಡಿದು ಹೊರಡುವುದು ಬೇಡ, ಕಡೇ ಪಕ್ಷ ನಮ್ಮ ಮನೆ, ಬೀದಿ, ನಗರಗಳ ಸ್ವಚ್ಛತೆಯ ಜವಾಬ್ದಾರಿ ಹೊತ್ತರೆ, ಅಚ್ಛೇ ದಿನಗಳಿಗೆ ಹತ್ತಿರವಾದಂತೆಯೇ ಅಲ್ಲವೇ?
ಬಿಡಿ, ಇನ್ನೆಲ್ಲಿ ಬದಲಾಗಬೇಕಾದೀತೋ ಎಂದು ನಾವೀಗ ನಮ್ಮ ಮನಸ್ಸಾಕ್ಷಿ ಎಂಬ ಕರೆಗಂಟೆಯ ಸ್ವಿಚ್‍ ಅನ್ನೇ ಆರಿಸಿಕೊಂಡು ಕೂತಿದ್ದೇವೆ! 

No comments:

Post a Comment