Tuesday 26 August 2014

ಸಾವಿನಲ್ಲಿ ‘ಸಂಸ್ಕಾರ’ ಕಂಡ ಮೂರ್ತಿಯವರಲ್ಲಿ 'ವಂಶವೃಕ್ಷ' ಅಡಕವಾಗಿತ್ತೇ?



ಇತ್ತೀಚೆಗೆ ಭೈರಪ್ಪನವರ 'ಯಾನ' ಬಿಡುಗಡೆಯಾಯಿತಷ್ಟೇ. ಅವರ ಕಾದಂಬರಿಗಳನ್ನು ನಿಯಮಿತವಾಗಿ ಓದುವ ಒಂದು ವರ್ಗವಂತೂ ಇದ್ದೇ ಇದೆ. ಟೀಕಿಸುವ ಸಲುವಾಗಿಯೇ ಓದುವ ಪ್ರಗತಿಪರರ ಮತ್ತೊಂದು ವರ್ಗವೂ ಇದೆ. ಈ ಕಾದಂಬರಿಯ ವಿಷಯ ಹಿಂದುತ್ವ ಅಥವಾ ಧಾರ್ಮಿಕತೆಗೆ ಸಂಬಂಧ ಪಡದಿದ್ದುದು ಪ್ರಗತಿಪರರಿಗೆ ನಿರಾಸೆ ಮೂಡಿಸಿತೇನೋ. ಅಂಥಾ ದೊಡ್ದ ಮಟ್ಟದ ಚರ್ಚೆ, ಟೀಕೆಗಳಾಗಲಿಲ್ಲ. ಆದರೆ ಫೇಸ್‍ಬುಕ್ನಲ್ಲಿ, ಬೋಧಿವೃಕ್ಷದ ನೆರಳಿನಲ್ಲಿರುವವರೊಬ್ಬರು 'ಭೈರಪ್ಪನವರು ಚಿಂತನೆಯಲ್ಲಿ ಕೆಲ ವರ್ಷಗಳ ಹಿಂದೆ ಎಲ್ಲಿದ್ದರೋ ಈಗಲೂ ಅಲ್ಲೇ ನಿಂತು ಬಿಟ್ಟಿದ್ದಾರೆ' ಎಂಬರ್ಥದ ಕಾಮೆಂಟನ್ನು ಹಾಕಿಕೊಂಡಿದ್ದರು. ಅದು ಅವರ ಅಭಿಪ್ರಾಯ ಬಿಡಿ. ನಮ್ಮ ಅಭ್ಯಂತರವೇನೂ ಇಲ್ಲ. ಏಕೆಂದರೆ, ಬೋಧಿವೃಕ್ಷದ ಟೊಂಗೆಯ ಮೇಲೆ ನಿಂತು ನೋಡುವವರಿಗೆ ಕಾಣುವಷ್ಟು ಪ್ರಪಂಚ 60ಕ್ಕೂ ಹೆಚ್ಚು ದೇಶಗಳನ್ನು ಸುತ್ತಿರುವ ಭೈರಪ್ಪನವರಿಗೆ ಕಾಣದೇ ಇರಬಹುದು. ಆದ್ದರಿಂದಲೇ ಅವರು ಅಧ್ಯಯನದ ಸಲುವಾಗಿ ಆ ಪರಿ ದೇಶ ಸುತ್ತಿ, ಕೋಶ ಓದುತ್ತಾ ತಮ್ಮ ತಿಳುವಳಿಕೆ ಹೆಚ್ಚಿಸಿಕೊಳ್ಳುತ್ತಿರಬಹುದು. ಆದರೆ ಆ ಕಾಮೆಂಟಿಗೆ ಪ್ರತಿಕ್ರಿಯಿಸಿದ್ದ ರವಿ ಬೆಳಗೆರೆ ಇದೊಂದು ದೊಡ್ಡ ರಾಷ್ಟ್ರೀಯ ವಿಪತ್ತು ಎಂಬಂತೆ 'But what to do with these illegitimate sons of Bhairappa?’ ಎಂದು ಕೇಳಿದ್ದರು. ಬಹಳ ನೋವಾಗಿತ್ತು ಆ ಪದಪುಂಜವನ್ನು ನೋಡಿ. Illegitimate ಎಂಬ ಪದಕ್ಕೆ ಅಪ್ರಾಮಾಣಿಕ, ಅಕ್ರಮ, ಕ್ರಿಮಿನಲ್ ಎಂಬೆಲ್ಲ ಅರ್ಥಗಳು ಬರುತ್ತವೆ. ಹಾಗಾದರೆ ಯಾವ ಅರ್ಥದಲ್ಲಿ ಜರೆದಿದ್ದರು ಭೈರಪ್ಪನವರ ಓದುಗರನ್ನು (ಒಂದರ್ಥದಲ್ಲಿ ಅವರ ಮಕ್ಕಳನ್ನೂ) ಅವರು? ಭೈರಪ್ಪನವರ ಯಾವ ಅಕ್ರಮ, ಅಪ್ರಾಮಾಣಿಕ ಅಥವಾ ಕ್ರಿಮಿನಲ್ ಮಕ್ಕಳು ಅವರ ತಲೆಯ ಮೇಲೆ ಹತ್ತಿ ಕುಳಿತಿದ್ದರು?But what to do’ ಎಂದು ಕೇಳಿಕೊಳ್ಳಬೇಕಾದಂಥ ಸಮಸ್ಯೆಗಳನ್ನೇನು ಸೃಷ್ಟಿಸಿದ್ದರು?

ಮೊನ್ನೆಯಷ್ಟೇ ಮುಗಿದ ಅನಂತ ಮೂರ್ತಿಯವರ ಅಂತಿಮ 'ಸಂಸ್ಕಾರ' ರವಿ ಬೆಳಗೆರೆಯ ಮಾತುಗಳನ್ನು ನೆನಪಿಸಿತು. ಇಲ್ಲಿ, ಸತ್ತಿರುವವರ ಚರಿತ್ರೆಯನ್ನು ಕೆದಕುವುದು ಅಥವಾ ಅವರ ಬಗ್ಗೆ ಕಟು ನುಡಿಗಳನ್ನಾಡುವುದು ಉದ್ದೇಶವಲ್ಲ. ಹಾಗೆ ಮಾಡಲು ನಮ್ಮ ‘ಸಂಸ್ಕಾರ’ ನಮಗೆ ಅನುಮತಿಯನ್ನೂ ನೀಡುವುದಿಲ್ಲ. ಆದರೆ ಹಿರಿಯ, ಜನಪ್ರಿಯ, ಸಾಮಾಜಿಕ ಕಳಕಳಿಯುಳ್ಳ ಸಾಹಿತಿಯೊಬ್ಬರು ತಾವು ಬದುಕಿನುದ್ದಕ್ಕೂ ಪ್ರತಿಪಾದಿಸಿಕೊಂಡು ಬಂದುದನ್ನು ಸಾವಿನಲ್ಲಿ ಹೀಗೆ ಸಲೀಸಾಗಿ, ಸಾರಾಸಗಟಾಗಿ ತಿರಸ್ಕರಿಸಿದುದನ್ನು ಸುಮ್ಮನೆ ಬಿಡಲಾಗುವುದಿಲ್ಲ. ಇದನ್ನೂ 'ಅವರ ಒಂದು ವಿಚಾರಧಾರೆ' ಎಂಬ ನೆಲೆಗಟ್ಟಿನಲ್ಲಿ ವಿಮರ್ಶಿಸಲೇಬೇಕಾಗುತ್ತದೆ. ಆದ್ದರಿಂದ ಇದಕ್ಕೆ,'ಸತ್ತವರ ಬಗ್ಗೆ ಮಾನವೀಯತೆ ಇಲ್ಲದೆ ಆಡುತ್ತಿರುವ ಮಾತು' ಎಂಬ ಅರ್ಥ ಕೊಡಬಾರದಾಗಿ ಓದುಗರಲ್ಲಿ ಮನವಿ.



ಎಲ್ಲ ವೇದಿಕೆಗಳಲ್ಲೂ ಆಧುನಿಕ ವಿಚಾರಧಾರೆಯ, ಪ್ರಗತಿಪರತೆಯ ಪರವಾಗಿ ಚರ್ಚೆಗಿಳಿಯುತ್ತಿದ್ದ, ವಾದ-ವಿವಾದಗಳಿಗೆ ಈಡಾದರೂ ಬೇಸರಿಸದೆ ತಮ್ಮ ನಿಲುವನ್ನು ಉಡದಂತೆ ಗಟ್ಟಿಯಾಗಿ ಕಚ್ಚಿ ಹಿಡಿಯುತ್ತಿದ್ದ ಮೂರ್ತಿಯವರು ಕೊನೆಯಲ್ಲಿ ಹೀಗೇಕೆ ಮಾಡಿದರು? ಪರವೋ ವಿರೋಧವೋ, ಒಟ್ಟಿನಲ್ಲಿ ಅವರನ್ನು ಗಮನಿಸುತ್ತಲೇ ಇದ್ದ ನಮ್ಮ ಮುಂದೆ ಈಗಿರುವುದು ಬರೀ ಪ್ರಶ್ನೆಗಳ ಕಂತೆ. ಬದುಕಿನುದ್ದಕ್ಕೂ ಸಂಸ್ಕಾರಕ್ಕೆ ಧಿಕ್ಕಾರ ಹಾಕುತ್ತಾ ಬಂದಿದ್ದ ಅವರ ಮನದಾಳದಲ್ಲಿ ‘ಸಂಸ್ಕಾರ’ದ ಕುರಿತ ಪ್ರೀತಿ ಮೊದಲಿನಿಂದಲೂ ಇತ್ತೇ? ಅಥವಾ ಬಾಹ್ಯದಲ್ಲಿ ವಿರೋಧಿಸುತ್ತಾ ಹೋದಷ್ಟೂ ಅದು ಅಂತರಂಗದಲ್ಲಿ ಗಟ್ಟಿಯಾಗತೊಡಗಿತ್ತೇ? ವಿರೋಧಿಸಿದ್ದರಿಂದ ಸಿಗುತ್ತಿದ್ದ ಜನಪ್ರಿಯತೆ ಅವರ ಆಂತರ್ಯವನ್ನು ಮೆಟ್ಟಿ ನಿಲ್ಲುತ್ತಿತ್ತೇ? ಉತ್ತರ ಕೊಡಬಹುದಾಗಿದ್ದ ಸಂದರ್ಭದಲ್ಲಿ ಅವರು ಇಂಥ ಯಾವ ಪ್ರಶ್ನೆಗಳಿಗೂ ಆಸ್ಪದವನ್ನೇ ಕೊಡಲಿಲ್ಲ!

ಈ ಕೆಲಸವನ್ನು ಯಾರೋ ರಾಜಕಾರಣಿ ಮಾಡಿದ್ದರೆ ನಾವೂ ಅಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಏಕೆಂದರೆ ಅವರ ಮಾತುಗಳ ಅಥವಾ ಕ್ರಿಯೆಗಳ ಮೂಲಕ ನಾವು ಸಮಾಜವನ್ನು, ನಮ್ಮ ಬದುಕನ್ನು ನೋಡುವುದಿಲ್ಲ. ರೂಪಿಸಿಕೊಳ್ಳುವುದೂ ಇಲ್ಲ. ಆದರೆ ಸಾಹಿತಿಗಳದ್ದು ಹಾಗಲ್ಲ. ಅವರ ಬರಹ, ಚಿಂತನೆ ಎಲ್ಲದರ ನೇರ ಪರಿಣಾಮವೂ ನಮ್ಮ ಮೇಲೆಯೇ. ಅವರು ಸೃಷ್ಟಿಸಿದ ಪಾತ್ರಗಳಲ್ಲಿ ನಮ್ಮನ್ನು ಹುಡುಕಿಕೊಳ್ಳುವ, ಅವರ ಆಲೋಚನೆಗಳನ್ನು ನಮ್ಮದರ ಜೊತೆ ತಾಳೆ ಹಾಕಿ ನೋಡುವ, ಸಾಮ್ಯ ಕಂಡು ಬಂದರೆ ಸಂಭ್ರಮಿಸುವ ನಾವು ನಮಗರಿವಿಲ್ಲದಂತೆಯೇ ಅವರೊಡನೆ ಬೆಸೆದುಕೊಂಡುಬಿಡುತ್ತೇವೆ. ಅವರೊಡನೆ ಅವರ ಆಲೋಚನೆ, ಬರಹಗಳ ಮೂಲಕ ಪಯಣಿಸುವಾಗ ಅವರು ಹೀಗೆ ಅನಿರೀಕ್ಷಿತ ತಿರುವು ತೆಗೆದುಕೊಂಡುಬಿಟ್ಟರೆ ನಮ್ಮ ಮುಂದಿನ ಪಯಣ ಹೇಗೆ? ತಮ್ಮ ಧೋರಣೆಯಿಂದ ಚಿಂತಕರ ಒಂದಿಡೀ ವರ್ಗವನ್ನೇ ಹುಟ್ಟು ಹಾಕಿ ತಮ್ಮೊಂದಿಗೆ ಬೆಳೆಸಿದ ಮೂರ್ತಿಯವರು ಕೊನೆಗೆ ಮಾಡಿದ್ದು ನಂಬಿಕೆ ದ್ರೋಹವಲ್ಲವೇ? ಅವರಿಂದ ಪ್ರೇರಿತರಾದ ಮಂದಿ ಈಗ ಯಾವ ತತ್ವಕ್ಕೆ ಜೋತುಬೀಳಬೇಕು? ಜನಿವಾರವನ್ನು ಧರಿಸದೇ ಬಿಸುಟವರನ್ನು, ಮಧ್ಯರಾತ್ರಿ ವಿಗ್ರಹಗಳ ಮೇಲೆ ಮೂತ್ರ ಮಾಡಿ ಬಂದವರನ್ನು ಈಗ ಪಾಪ ಪ್ರಜ್ಞೆ ಕಾಡುವುದಿಲ್ಲವೇ? ಅವರೆಲ್ಲ ತಮ್ಮ ತಮ್ಮ ಆಚರಣೆ, ಸಂಸ್ಕಾರಗಳಿಗೆ ಮರಳಬೇಕೇ? ಎಂಥ ಗೊಂದಲವನ್ನು ಸೃಷ್ಟಿಸಿದ್ದಾರೆ ನೋಡಿ ಜ್ಞಾನಪೀಠದ ಗದ್ದುಗೆಯೇರಿದ್ದವರು!

ಸಾವಿನಲ್ಲೂ ತಮ್ಮ ವಿಚಾರವಾದಕ್ಕೆ ಅಂಟಿಕೊಂಡವರ ಉದಾಹರಣೆಗಳು ನಮ್ಮ ನಡುವೆಯೇ ಇದೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ನಿಮಗೆ ನೆನಪಿರಬಹುದು. ಪಕ್ಕಾ ಮಾರ್ಕ್ಸ್ ವಾದಿಯಾದ ಅವರು ತಮ್ಮ ಸಾವಿನ ನಂತರ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ದಾನ ಮಾಡಿಬಿಡುವಂತೆ ಕೋರಿದ್ದರು. ನಮ್ಮ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರೂ ಅಷ್ಟೆ. ತಮ್ಮ ಲಿಂಗಾಯಿತ ಸಮುದಾಯದ ಶಾಸ್ತ್ರಗಳ ಪ್ರಕಾರ ಸಂಸ್ಕಾರ ಮಾಡಿಸಿಕೊಳ್ಳಲೇ ಇಲ್ಲ! ಬಹುಶಃ ಬದುಕಿನುದ್ದಕ್ಕೂ ತಮ್ಮ ಮನಸ್ಸಿಗೆ ಪ್ರಾಮಾಣಿಕವಾಗಿ ನಡೆದುಕೊಂಡವರಿಗೆ ಸಾವಿನಲ್ಲಿ ಏನನ್ನೂ ನಿರೂಪಿಸುವ ಅಗತ್ಯ ಬೀಳುವುದಿಲ್ಲವೇನೋ.

ರವಿ ಬೆಳಗೆರೆಯ ಮಾತು ನೆನಪಾಗುವುದೇ ಅದಕ್ಕೆ. ಈಗ ಹೇಳಿ, ನಿಜವಾದ ಅರ್ಥದಲ್ಲಿ ಯಾರು ಅಪ್ರಾಮಾಣಿಕರು? ಭೈರಪ್ಪನವರ ವಿಷಯದಲ್ಲಿ ಕೇಳಿದ ಪ್ರಶ್ನೆಯನ್ನೇ ಆವರು ಮೂರ್ತಿಯವರ ವಿಷಯದಲ್ಲೂ ಕೇಳುತ್ತಾರಾ?  ಮಾತನ್ನೇ ಆಡದೆ, ತಮ್ಮ ಕೃತಿಗಳ ಮೂಲಕವೇ ತಮ್ಮ ಸಂಸ್ಕಾರವನ್ನು ಪ್ರತಿಪಾದಿಸಿಕೊಂಡು ಬಂದಿರುವ ಭೈರಪ್ಪನವರಿಗೆ ಅಥವಾ ಅವರ ಓದುಗ ಸಂತತಿಗೆ illegitimate ಎಂಬ ಪದ ಹೇಗೆ ಅನ್ವಯವಾಗಲು ಸಾಧ್ಯ? ಪ್ರತಿ ಕಾದಂಬರಿಯಲ್ಲೂ ತಮ್ಮ ಧಾರ್ಮಿಕ, ವೈಚಾರಿಕ ನೆಲೆಗೆ ಸಾಕಷ್ಟು ಸಾಕ್ಷ್ಯ, ಸರಕುಗಳನ್ನೂ ಒದಗಿಸುವ ಭೈರಪ್ಪನವರು ತಮ್ಮ ಓದುಗ ವರ್ಗವನ್ನು ಯಾವಾಗ ಗೊಂದಲದಲ್ಲಿ ಕೆಡವಿದ್ದಾರೆ? ಇಬ್ಬಗೆ ನೀತಿಯನ್ನು ಎಲ್ಲಿ, ಎಷ್ಟು ಬಾರಿ ಪ್ರದರ್ಶಿಸಿದ್ದಾರೆ? ಅವರ ಅಥವಾ ಅವರ ಓದುಗ ಸಂತತಿಯಿಂದ ಎಷ್ಟು ಸಮಸ್ಯೆಗಳು ಉದ್ಭವವಾಗಿವೆ?

ಬದುಕಿನ ಎಲ್ಲ ಸ್ತರಗಳಲ್ಲೂ, ವೇದಿಕೆಗಳಲ್ಲೂ ಭೈರಪ್ಪನವರನ್ನು ಕಟುವಾಗಿ ವಿರೋಧಿಸಿದ ಮೂರ್ತಿಯವರು ಸಾವಿನಲ್ಲಿ ಮಾತ್ರ ಅವರನ್ನೇ ಸಂಪೂರ್ಣವಾಗಿ ಅನುಮೋದಿಸಿಬಿಟ್ಟರು ಎನಿಸುವುದಿಲ್ಲವೇ? ಈ ವಾಸ್ತವದ ಮುಂದೆ ಅವರ ಬರಹಗಳೆಲ್ಲ ಅರ್ಥ ಕಳೆದುಕೊಳ್ಳುವುದಿಲ್ಲವೇ? ತಮ್ಮ 'ಸಂಸ್ಕಾರ'ವನ್ನು ಬದಿಗಿಟ್ಟು ಭೈರಪ್ಪನವರ 'ವಂಶ ವೃಕ್ಷ'ವನ್ನು ಅಪ್ಪಿದರು ಎಂಬ ಸಂಶಯ ಕಾಡತೊಡಗುವುದಿಲ್ಲವೇ? ವಂಶ-ವೃಕ್ಷ ಕಾದಂಬರಿಯಲ್ಲಿ, ಅಪ್ಪಟ ಬ್ರಾಹ್ಮಣ ಶ್ರೋತ್ರಿಯರ ಮನೆ ಸೊಸೆ ಕಾತ್ಯಾಯಿನಿ ಎಳವೆಯಲ್ಲೇ ವಿಧವೆಯಾಗುತ್ತಾಳೆ. ಅಕ್ಕರೆ ತೋರುವ ಅತ್ತೆ ಮಾವ, ಗಂಡನ ದ್ಯೋತಕವಾದ ಮಗ ಇದ್ದರೂ ಬೇರೊಬ್ಬನನ್ನು ಪ್ರೀತಿಸಿ ಧರ್ಮಸಂಕಟಕ್ಕೆ ಸಿಲುಕುತ್ತಾಳೆ. ಕೊನೆಗೆ, ತಾನು ಹೆತ್ತ ಮಗನನ್ನು ಅತ್ತೆ ಮಾವನಿಗೊಪ್ಪಿಸಿ, ಪ್ರೀತಿಸಿದವನನ್ನು ಮದುವೆಯಾಗುತ್ತಾಳೆ. ಆದರೆ ತಮ್ಮ ವಂಶದ ಬಗ್ಗೆ ಅಪಾರ ಅಭಿಮಾನವಿದ್ದ ಶ್ರೋತ್ರಿಯರಿಗೆ ಮೋಸ ಮಾಡಿದೆನೆಂಬ ಪಾಪ ಪ್ರಜ್ಞೆ ಅವಳನ್ನು ಕಿತ್ತು ತಿನ್ನುತ್ತದೆ. ಹೊಸ ಗಂಡನಿಗೆ ತಕ್ಕ ಮಡದಿಯೂ ಆಗಲಾರದೆ ಅವನಿಗಾಗಿ ಒಂದು ಮಗುವನ್ನೂ ಹೆರಲಾರದೆ ಕೊನೆಯವರೆಗೂ ಕೊರಗಿ ಸಾಯುತ್ತಾಳೆ. ಬಂಡಾಯವನ್ನೇ ಉಸಿರಾಗಿಸಿಕೊಂಡ ಮೂರ್ತಿಯವರಲ್ಲಿಯೂ ಓರ್ವ ಕಾತ್ಯಾಯಿನಿ ಇದ್ದಳೇ? ತಾವು ಧಿಕ್ಕರಿಸಿದ ಸಂಸ್ಕಾರಕ್ಕೆ ಕೊನೆಗಾಲದಲ್ಲಾದರೂ ಕಟ್ಟು ಬೀಳುವಂತೆ ಅವಳೇ ಇವರನ್ನು ಪ್ರೇರೇಪಿಸಿದಳೇ? ಈ ವೈರುಧ್ಯ ನಮ್ಮ ನಂಬಿಕೆಯ ಬುಡವನ್ನೇ ಅಲುಗಾಡಿಸಿದೆ. ನಮ್ಮನ್ನು ಸಂದಿಗ್ಧದಲ್ಲಿ ಸಿಲುಕಿಸಿದೆ. ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡಬೇಕು ಎಂಬುದು ನಮಗೆ ಗೊತ್ತು. ಬದುಕಿರುವಾಗ ಆಡಿದ ಮಾತು, ಮಾಡಿದ ಕಾರ್ಯಗಳು ನಂಬಿಕೆಗೆ ಅರ್ಹವಲ್ಲ ಎನ್ನುವುದಾದರೆ ಪ್ರಮಾಣಿಸಿ ನೋಡಲು ಸಾವೇ ಮಾನದಂಡವೇ?

Illegitimate ಎಂದು ಯಾರು ಎಷ್ಟೇ ಟೀಕಿಸಲಿ, ಭೈರಪ್ಪನವರು ಮೊದಲು ಎಲ್ಲಿ ಇದ್ದರೋ ಈಗಲೂ ಅಲ್ಲೇ ನಿಂತುಬಿಟ್ಟಿದ್ದಾರೆ ಎಂದು ಹೇಳಲಿ ನಮಗೆ ಅಡ್ಡಿಯಿಲ್ಲ. ಎಲ್ಲೂ ಸಲ್ಲದೆ ಕೊನೆಗೊಮ್ಮೆ ನಮ್ಮನ್ನು ಅನಾಥರನ್ನಾಗಿ, ಅಧೀರರನ್ನಾಗಿ ಮಾಡಿ ಹೋಗುವ ಸಿದ್ಧಾಂತಗಳಿಗಿಂತ ಒಂದೇ ನೆಲೆಯಲ್ಲಿ ಗಟ್ಟಿಯಾಗಿ ಬೇರೂರಿ ನಿಲ್ಲುವ ಭೈರಪ್ಪನವರ ವಿಚಾರಧಾರೆಗಳ ಅಗತ್ಯ ಎಂದಿಗಿಂತಲೂ ಈಗ ಹೆಚ್ಚಿದೆ ಎನಿಸುವುದಿಲ್ಲವೇ? ಬೇರುಗಳೇ ಇಲ್ಲದ ಆಲೋಚನೆಗಳನ್ನು ಓದುಗರ ಮನಸ್ಸಿನಲ್ಲಿ ಚಿಗುರಿಸಿ ಉಪಯೋಗವೇನು? ನಮಗೆ ಬೇರುಗಳು ಬೇಕು. ಅದು ನೀಡುವ ಆಧಾರ, ಧೈರ್ಯ ಬೇಕು. ಚಿಗುರು ಮೊಳೆಯಲೆಷ್ಟು ಹೊತ್ತು?

ಈಗ ಭೈರಪ್ಪನವರ ಬರಹಗಳನ್ನೆಲ್ಲ ಮತ್ತೊಮ್ಮೆ ಹೊಸದಾಗಿ ಓದಬೇಕೆನಿಸುತ್ತಿದೆ! 

7 comments:

  1. Just agree with your views.Infact you have put my very thought across.

    ReplyDelete
  2. ಅಕ್ಷರಶಃ ಸತ್ಯವಾದ ಮಾತು, ಈ ವ್ಯಕ್ತಿ ತಾನು ಹುಟ್ಟಿದ ಜಾತಿಗಾಗಲೀ, ಧರ್ಮಕ್ಕಾಗಲೀ, ಒಳಿತನ್ನೇನೂ ಮಾಡಲಿಲ್ಲ, ಹುಟ್ಟಿದಾಗಿನಿಂದ ಸಾಯುವವರೆಗೂ ಧರ್ಮ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ಗೊಂದಲಗಳೇ ತುಂಬಿಕೊಂಡಂತಹ ಗೊಬ್ಬರದ ಗಣಿಯಾಗಿತ್ತು ಅವರ ಮಸ್ತಿಷ್ಕ, ಇಂತಹವರಿಂದ ಸಮಾಜ ಉತ್ತಮವಾದದನ್ನು ಬಯಸಲು ಸಾಧ್ಯವೇ, ಇನ್ನು ರವಿ ಬೆಳೆಗೆರೆಯವರ ಬಗ್ಗೆ ಹೇಳಿಕೊಳ್ಳುವಂತಹ ಒಂದೇ ಒಂದು ಉತ್ತಮ ವಾಕ್ಯವೇ ಸಿಗುವುದಿಲ್ಲ, ಸೋ ಸ್ಯಾಡಿಸ್ಟ್, ಸೈಕೋ ನ ಆತ್ಮದ ಪ್ರತಿರೂಪ ಈ ಬೆಳೆಗೆರೆ. ಇನ್ನು ಭೈರಪ್ಪನವರ ಬಗ್ಗೆ ಈ ವ್ಯಕ್ತಿ ನೀಡಿದ ಹೇಳಿಕೆಗಳು toiled tissue paper ನಂತೆ. ಇಂತಹವರ ಬಗ್ಗೆ ತಲೆಕೆಡಿಸಿಕೊಳ್ಳವುದರಲ್ಲಿ ಅರ್ಥವೇ ಇಲ್ಲ. ಸನ್ಮಾನ್ಯ ಶ್ರೀಯುತ ಭೈರಪ್ಪನವರ ಪರ್ವ ಓದಿ ಅಕ್ಕ. ಅದರಲ್ಲಿ ಸಾಮಾನ್ಯ ಮನುಷ್ಯನು ತಿಳಿದುಕೊಳ್ಳಬಹುದಾದ, ಯೋಚಿಸಬೇಕಾದ ಹಲವು ವಸ್ತುಸ್ಥಿತಿಗಳು, ವಿಚಾರಗಳು ಅಡಗಿವೆ.

    ReplyDelete
  3. Excellent most appropriate article fully agree with you

    ReplyDelete
  4. ಅರ್ಥಪೂರ್ಣ ಲೇಖನ, ಬದುಕಿದ್ದಷ್ಟು ಕಾಲ ಬರೀ ಗೊಂದಲವನ್ನೇ ಸೃಷ್ಟಿಸಿ, ಸಾವಿನಲ್ಲೂ ತಮ್ಮಲ್ಲಿದ್ದ ದ್ವಂದ್ವವನ್ನು ಉಳಿಸಿ ಹೋಗುವಂಥ "ಬಂಡಾಯ" ಸಾಹಿತಿಗಳಿಗಿಂತ ಎಲ್ಲಿದ್ದರೋ ಅಲ್ಲೇ ಇರುವ ಭೈರಪ್ಪನವರು ಸಾವಿರ ಪಟ್ಟು ಮೇಲು. ಬಹುಶಃ ಈ ರವಿ ಬೆಳಗೆರೆಯ ಅಂತ್ಯ ಇದಕ್ಕಿಂತ ಹೆಚ್ಚಿನ ಗೊಂದಲವನ್ನು ಅವರ ಪಕ್ಕಾ ಓದುಗರಲ್ಲಿ ಹುಟ್ಟು ಹಾಕಲಿದೆ!

    ReplyDelete
  5. ನಮಸ್ಕಾರ,
    ಒಬ್ಬ ವ್ಯಕ್ತಿ ಮೃತ ಪಟ್ಟಮೇಲೆ ಅವರ ಆತ್ಮ ಅವರವರ ಕರ್ಮಗಳ ಅನುಸಾರವಾಗಿ ತನ್ನ ಮುಂದಿನ ಪಯಣವನ್ನು ಮುಂದುವರಿಸುತ್ತದೆ ಎಂದು ವೀದಾಂತದಲ್ಲಿ ನಾವು ಓದಿರುವುದು ಉಂಟು. ಅಂತೆಯೇ ಒಬ್ಬರ ಸಾವಿನ ನಂತರ ಅವರ ದೇಹದ ಮುಂದಿನ ಅಧಿಕಾರ ಅವರ ಸಂಭಂಧಿಗಳಿಗೆ ಇರುತ್ತದೆ i.e., ಈ ಪ್ರಕರಣದಲ್ಲಿ ಅವರ ಮಗನಿಗೆ. ಹಾಗಾಗಿ ಅವರು ಬೇಕಾದನ್ನು ಮಾಡಬಹುದು. ಅಂತೆಯೇ ಶ್ರಾಧ ಮುಂತಾದವುಗಳೂ ಕೂಡ. ಇವರು ಬಹುಶಹ ಅವರ ದೇಹಕ್ಕೆ ಯಾವ "ಸಂಸ್ಕಾರ"ವನ್ನು ಮಾಡಬೇಕು ಎಂದು ಹೇಳಿರಲಿಲ್ಲ ಎಂದೆನಿಸುತ್ತದೆ. ಹಾಗಾಗಿ ಅವರು ತಮ್ಮ ಅಭಿಪ್ರಾಯದ ಅನುಸಾರವಾಗಿ ಅವರಿಗೆ ಇಷ್ಟ ಬಂದಂತೆ ಮಾಡಿದ್ದಾರೆ. ಏನನ್ನಾದರು ಹೇಳಬೇಕೆನಿಸಿದರೆ ಅವರಿಗೆ (ಮಗನಿಗೆ) ಹೇಳಬೇಕು, ಸಾಹಿತಿಗಳಿಗಲ್ಲ ಎಂಬುದು ನಮ್ಮ ಅಭಿಪ್ರಾಯ !! ಏಕೆಂದರೆ ಅವರ ಶಿಷ್ಯರಿಗೆ ಈ ದೇಹದ ಮೇಲೆ ಯಾವುದೇ ವ್ಯಾಮೋಹವಿಲ್ಲ, ಬರೀ ವ್ಯಕ್ತಿತ್ವದ ಮೇಲೆ. ಏಕೆಂದರೆ ಅವರೆಲ್ಲರೂ "evolved being" ಅರ್ಥಾತ್ ಬುದ್ಧಿಜೀವಿಗಳು !!

    ಆಯಮಾತ್ಮ ಬ್ರಹ್ಮ !!

    ReplyDelete
    Replies
    1. *ಶ್ರಾದ್ಧ , * ಅಯಮಾತ್ಮಾ ಬ್ರಹ್ಮ
      ಕ್ಷಮೆ ಇರಲಿ!!

      Delete
  6. ಒಬ್ಬರು ಜೀವನ ಪೂರ್ತಿ ಹಿಂದೂ ಧರ್ಮ, ಬ್ರಾಹ್ಮಣರನ್ನು ತೆಗಳುತ್ತಾ, ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿ ಕಟ್ಟಿ ಜೀವನ ಸವೆಸಿ, ಕಡೆಗೆ ಅಪ್ಪಟ ಧಾರ್ಮಿಕ ವ್ಯಕ್ತಿಯಂತೆ ಇಹಲೋಕ ಮುಗಿಸಿದವರು. ಮತ್ತೊಬ್ಬರು ಜೀವನ ಪೂರ್ತಿ ರಾಷ್ಟ್ರ, ಧರ್ಮದ ಸೇವೆಗೈದು, ಕಡೆಗೆ ದೇಹಾವಸಾನದ ಬಳಿಕವೂ ದೇಹದ ಅಂಗಾಂಗಳನ್ನೂ, ದೇಹವನ್ನೂ ವೈದ್ಯಕೀಯ ಕಾಲೇಜಿಗೆ ದಾನ ನೀಡಿದವರು(RSS ನ ಹಿರಿಯ ಪ್ರಚಾರಕ್ ನ. ಕೃಷ್ಣಪ್ಪ)

    ReplyDelete