Monday, 27 June 2016

ಗ್ಯಾಲರಿಯಲ್ಲಿನ ದೇವರು ಗುಡಿಗೆ ಮರಳುತ್ತಿವೆ!

ಪ್ರಕರಣ 1: ಚೋಳ ವಂಶಕ್ಕೆ ಸೇರಿದ ನಟರಾಜನ ಕಂಚಿನ ವಿಗ್ರಹ. ತಮಿಳುನಾಡಿನ ಬೃಹದೇಶ್ವರ ದೇವಾಲಯದ್ದು. 2006 ನವೆಂಬರ್ ಸುಮಾರಿಗೆ ದೇವಸ್ಥಾನದಿಂದ ಕಳುವಾಯಿತು. ಅಲ್ಲಿಂದ ನೇರವಾಗಿ ಅಮೆರಿಕದ ‘Art of Past Gallery’ ಸೇರಿತು. ಅಲ್ಲಿ ಅದಕ್ಕೆ ನಕಲಿ ವಾರಸುದಾರರು ಹುಟ್ಟಿಕೊಂಡರು. ಅವರುಗಳ ಹೆಸರು ರಾಜ್ ಮೆಹಗೋಬ್ ಮತ್ತು ಆಕೆಯ ಪತಿ ಅಬ್ದುಲ್ಲಾ. ವಿಗ್ರಹವನ್ನು ತಾವೇ ವಾಷಿಂಗ್ಟನ್ನಿನಲ್ಲಿ ಖರೀದಿಸಿದ್ದು ಎನ್ನಲು ಸೂಕ್ತ ಪುರಾವೆಗಳನ್ನು ಸೃಷ್ಟಿಸಿದರು ದಂಪತಿ. ಇದೆಲ್ಲದಕ್ಕೂ ನೆರವಾಗಿದ್ದು ಗ್ಯಾಲರಿಯ ಮಾಲೀಕ ಸುಭಾಷ್ ಕಪೂರ್ ಹಾಗೂ ಅವನ ಮ್ಯಾನೇಜರ್ ಆರೋನ್ ಫ್ರೀಡ್ಮ್ಯಾನ್. ಅಲ್ಲಿ ವಿಗ್ರಹವನ್ನು ಹರಾಜಿಗಿಟ್ಟಾಗ, ಕ್ಯಾನ್ಬೆರಾದಲ್ಲಿರುವ ನ್ಯಾಷನಲ್ ಗ್ಯಾಲರಿ ಆಫ್ ಆಸ್ಟ್ರೇಲಿಯ ಅದನ್ನು ಖರೀದಿಸಿತು. ಎಷ್ಟಕ್ಕೆ ಗೊತ್ತೇ? ಭರ್ತಿ 50 ಮಿಲಿಯನ್ ಅಮೆರಿಕನ್ ಡಾಲರ್ಗಳಿಗೆ! ಆಸ್ಟ್ರೇಲಿಯಾ ಸೇರಿದ ವಿಗ್ರಹ ಅಲ್ಲಿ ತಣ್ಣಗೆ ಕೂತು ಎಲ್ಲರನ್ನೂ ಸೆಳೆಯುತ್ತಿತ್ತು. ಇತ್ತ 2008 ಆಗಸ್ಟ್ 18ರಂದು ಕಳುವಿನ ಪ್ರಕರಣ ದಾಖಲಾಯಿತು. ಕಳುವಿನ ಬಗ್ಗೆ ಮಾಹಿತಿಯಿದ್ದ ಕೆಲ ಅನಿವಾಸಿ ಭಾರತೀಯರು ಅಕಸ್ಮಾತ್ತಾಗಿ ಎಂಬಂತೆ ಆಸ್ಟ್ರೇಲಿಯಾದ ಗ್ಯಾಲರಿಗೆ ಭೇಟಿ ಕೊಟ್ಟರು. ಇದು ಅದೇ ವಿಗ್ರಹವಿರಬಹುದಾ ಎಂಬ ಅನುಮಾನ ಹುಟ್ಟಿ, ತಕ್ಷಣ ಅವರು ವಿಗ್ರಹದ ಮೂಲವನ್ನು ಬೆನ್ನತ್ತಿದರು. ಪಾಂಡಿಚೇರಿಯ ಫ್ರೆಂಚ್ ಇನ್ಸ್ಟಿಟ್ಯೂಟ್ ಇಂಥ ಪುರಾತನ ವಿಗ್ರಹಗಳ ಚಿತ್ರ ಸಂಗ್ರಹವನ್ನು ಇಟ್ಟುಕೊಂಡಿದೆ ಎಂಬ ವಿಷಯ ಗೊತ್ತಾಗಿ ಅಲ್ಲಿ ತಡಕಾಡಿದಾಗ ವಿಗ್ರಹದ ಚಿತ್ರ ಸಿಕ್ಕೇಬಿಟ್ಟಿತು. ಒಂದೆರಡಲ್ಲ, ಹಲವಾರು ಭಂಗಿಗಳದ್ದು! ಸರಿ, ಅದನ್ನು ತರಿಸಿಕೊಂಡ ಭಾರತೀಯರು ಮತ್ತೊಮ್ಮೆ ವಿಗ್ರಹದತ್ತ ನಡೆದರು. ಎರಡನ್ನೂ ಕೂಲಂಕಷವಾಗಿ ಪರೀಕ್ಷಿಸಿ, ಅದು ಕಳುವಾದ ವಿಗ್ರಹವೇ ಎಂಬುದನ್ನು ಖಚಿತಪಡಿಸಿಕೊಂಡರು.
ಮುಂದಿನದ್ದೇ ಸಾಹಸ. ಇದು ಕದ್ದ ಮಾಲು ಎಂಬುದು ಆಸ್ಟ್ರೇಲಿಯಾಕ್ಕೆ ಗೊತ್ತಿಲ್ಲ. ಅದನ್ನು ನೇರವಾಗಿ ಅವರಿಗೆ ಹೇಳುವ ಹಾಗೂ ಇಲ್ಲ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಿದರು ಭಾರತೀಯರು. ವಿಷಯವನ್ನು ಸಾಕ್ಷ್ಯಗಳ ಸಮೇತ ಪ್ರಸ್ತುತಪಡಿಸಲಾಯಿತು. ವಿಷಯ ಗೊತ್ತಾಗುತ್ತಿದ್ದ ಹಾಗೇ ಎಚ್ಚೆತ್ತ ಸರ್ಕಾರ ಆಸ್ಟ್ರೇಲಿಯಾಕ್ಕೆ ಇದೆಲ್ಲವನ್ನೂ ಬಿಡಿಸಿ ಹೇಳಿತು. ತಕ್ಷಣ ವಿಗ್ರಹವನ್ನು ಗ್ಯಾಲರಿಯಿಂದ ಹೊರ ತೆಗೆಯಿತು ಆಸ್ಟ್ರೇಲಿಯಾ. ಅಷ್ಟೇ ಅಲ್ಲ, ಅದರ ಪ್ರಧಾನಿ, ಟೋನಿ ಅಬಾಟ್, 2014 ಸೆಪ್ಟೆಂಬರ್ನಲ್ಲಿ ಮೋದಿಯವರನ್ನು ಭೇಟಿಯಾದಾಗ ಅವರ ಮೂಲಕ ಅದನ್ನು ಹಿಂದಿರುಗಿಸಿಯೂ ಬಿಟ್ಟಿತು! ತಾನು ಕೊಟ್ಟ ದುಡ್ಡನ್ನು ಮರಳಿ ಪಡೆಯುವ ಸಲುವಾಗಿ ಸುಭಾಷ್ ಕಪೂರ್‍, ಅವನ ಆರ್ಟ್ ಗ್ಯಾಲರಿ ಹಾಗೂ ಮ್ಯಾನೇಜರ್ ಆರೋನ್ ಫ್ರೀಡ್ಮಾನ್ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿತು.


ಪ್ರಕರಣ 2: ತಮಿಳುನಾಡಿನ ದೇವಾಲಯವೊಂದರಿಂದ, ಕಲ್ಲಿನ ಅರ್ಧನಾರೀಶ್ವರನ ವಿಗ್ರಹದ ಕಳುವು. ಕಳ್ಳತನ ಅರಿವಿಗೆ ಬರಬಾರದೆಂದು ನಕಲಿ ವಿಗ್ರಹದ ಸ್ಥಾಪನೆ. ದೆಹಲಿಯ ಉತ್ತಮ್ ಸಿಂಗ್ ಅಂಡ್ ಸನ್ಸ್ ಆರ್ಟ್ ಗ್ಯಾಲರಿಯ ನೆರವಿನಿಂದ ವಿಗ್ರಹದ ವಾರಸುದಾರಿಕೆ ಮತ್ತೆ ಮೆಹಗೋಬ್ ಹಾಗೂ ಆಕೆಯ ಗಂಡನ ಮಡಿಲಿಗೆ! ಸಲ ವಿಗ್ರಹ ಹಾರಿದ್ದು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಮ್ಯೂಸಿಯಂ ಒಂದಕ್ಕೆ. ಹರಾಜಿನ ಬೆಲೆ ಮೂರು ಮಿಲಿಯನ್ ಅಮೆರಿಕನ್ ಡಾಲರ್ಗಳು! ಅದನ್ನು ವಾಪಸ್ ತರುವ ಮತ್ತೊಂದು ಪ್ರಯತ್ನ ಅನಿವಾಸಿ ಭಾರತೀಯರಿಂದ.
ಇವೆರಡೇ ಅಲ್ಲ, ಇಂಥ ಹಲವಾರು ಪ್ರಕರಣಗಳನ್ನು ಬೆಳಕಿಗೆ ತರುತ್ತಿದ್ದಾರೆ ಆಗ್ನೇಯ ಏಷ್ಯಾದ ದೇಶಗಳಲ್ಲಿ (ಸಿಂಗಪೂರ್, ಮಲೇಷಿಯಾ, ಥಾಯ್ಲೆಂಡ್, ವಿಯೆಟ್ನಾಂ, ಕಾಂಬೋಡಿಯಾ ಮುಂತಾದವು) ನೆಲೆಸಿರುವ ಕೆಲ ಭಾರತೀಯರು. ಮಧ್ಯಪ್ರದೇಶದ ದೇವಾಲಯವೊಂದರ ಮರಳುಗಲ್ಲಿನ ಯಕ್ಷಿ, ತಮಿಳುನಾಡಿನ ದೇವಾಲಯದ ಕಂಚಿನ ಗಣೇಶ, ಚೋಳ ವಂಶದ ಕಂಚಿನ ಉಮಾಪರಮೇಶ್ವರಿಯ ವಿಗ್ರಹಗಳೆಲ್ಲ ವಿದೇಶೀ ಗ್ಯಾಲರಿಗಳಿಂದ ಹೊರಬರುತ್ತಿವೆ ಎಂದರೆ ಅದರ ಶ್ರೇಯಸ್ಸೆಲ್ಲ ಸಲ್ಲಬೇಕಾಗಿರುವುದು ಅವರಿಗೇ. ‘The India Pride Project’ ಎಂಬ ಹೆಸರಿನಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರ ಏಕೈಕ ಉದ್ದೇಶ, ಕಳುವಾದ ವಿಗ್ರಹಗಳನ್ನು, ಮೂಲಕ ನಮ್ಮ ಸಂಸ್ಕೃತಿಯ ಹೆಗ್ಗುರುತನ್ನು ಅದರ ಸ್ವಸ್ಥಾನಕ್ಕೆ ಸೇರಿಸುವುದು. ಕೆಲಸಕ್ಕೆ ಬೇಕಾದ ತನಿಖೆ, ನಿಖರತೆ, ಗೌಪ್ಯತೆಗಳು ಬಹಳ. ಇದು ಕೇಳಲು ಎಷ್ಟು ರೋಚಕವೆನಿಸುತ್ತದೋ ಅಷ್ಟೇ ಅಪಾಯಕಾರಿ ಕೂಡ. ಏಕೆಂದರೆ ಡಾಲರ್ಗಳಲ್ಲಿ ಸಂಪಾದಿಸುವ, ವಿಗ್ರಹಗಳ ಕಳ್ಳತನದ ಮಾಫಿಯಾ ಉಳಿದ ಮಾಫಿಯಾಗಳಿಗಿಂತ ಒಂದು ಕೈ ಹೆಚ್ಚೇ! ಆದ್ದರಿಂದಲೇ ತನಿಖಾ ಗುಂಪಿನ ಬಹುತೇಕ ಸದಸ್ಯರು ಅನಾಮಿಕರು! ವಿವಿಧ ದೇಶಗಳಲ್ಲಿ ಹಂಚಿ ಹೋಗಿದ್ದರೂ ತಮ್ಮದೇ ನೆಟವರ್ಕ್ ಸ್ಥಾಪಿಸಿಕೊಂಡು ತೆರೆಮರೆಯಲ್ಲಿ ಅಹರ್ನಿಶಿ ದುಡಿಯುತ್ತಿದ್ದಾರೆ. ಹೊಟ್ಟೆಪಾಡಿಗೆ ಬೇರೆ ಬೇರೆ ಉದ್ಯೋಗಗಳನ್ನು ಮಾಡುತ್ತಿದ್ದರೂ ಉದ್ದೇಶದ ಸಲುವಾಗಿ ಒಗ್ಗೂಡಿ ತಮ್ಮ ಶ್ರಮ, ಸಮಯ ಹಾಗೂ ಹಣವನ್ನು ಮೀಸಲಿಟ್ಟಿದ್ದಾರೆ. ಈಗ ಕೇಂದ್ರ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಲೂ ಇದೆ. ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಕಾಶ್ಮೀರದಿಂದ ಕಳುವಾಗಿದ್ದ ದುರ್ಗೆಯ ಮೂರ್ತಿಯನ್ನು ನಮಗೆ ಹಿಂದಿರುಗಿಸಿದ್ದು, ಕೆನಡಾ ಹಾಗೂ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಗಳು ಮೋದಿಯವರನ್ನು ಭೇಟಿಯಾಗಲು ಬರುವಾಗ ಒಂದು ಕೈಯಲ್ಲಿ ವಿಗ್ರಹಗಳನ್ನು ಹಿಡಿದು ಬರುತ್ತಿರುವುದೇ ಇದಕ್ಕೆ ಸಾಕ್ಷಿ!
ಇಷ್ಟೂ ದಿನ ನೇಪಥ್ಯದಲ್ಲೇ ಇದ್ದು ಕಾರ್ಯ ನಿರ್ವಹಿಸುತ್ತಿದ್ದ ‘The India Pride Project’ ಅನುರಾಗ್ ಸಕ್ಸೇನಾ, ವಿಗ್ರಹ ಕಳ್ಳರ ಇಡೀ ಜಾಲ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ವಿವರಿಸುತ್ತಾರೆ. ಮೊತ್ತಮೊದಲಿಗೆ, ಅಂತಾರಾಷ್ಟ್ರೀಯ ಕಳ್ಳಸಾಗಣೆದಾರರು, ಕೆಲ ಆರ್ಟ್ ಗ್ಯಾಲರಿಗಳ ಮುಖ್ಯಸ್ಥರೆಲ್ಲ ಭಾರತದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ, ಯಾವ ವಿಗ್ರಹಗಳನ್ನು ಕಳುವು ಮಾಡಬೇಕು ಎನ್ನುವುದನ್ನು ಪಟ್ಟಿ ಮಾಡಿಕೊಳ್ಳುತ್ತಾರಂತೆ. ಅವರು ಹೋದ ಮೇಲೆ, ಇಲ್ಲಿಯ ಕಳ್ಳರು ಅವುಗಳನ್ನು ಉಪಾಯವಾಗಿ ಕದ್ದು ಹಾಂಗ್ಕಾಂಗ್ಗೆ ತಲುಪಿಸುತ್ತಾರಂತೆ. ನಕಲಿ ವಾರಸುದಾರಿಕೆಯ ಖೋಟಾ ಕಾಗದ-ಪತ್ರಗಳೆಲ್ಲ ತಯಾರಾಗುವುದೇ ಅಲ್ಲಿ. ಅಲ್ಲಿಂದ ವಿಗ್ರಹಗಳು ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಹಾಗೂ ಪಶ್ಚಿಮ ಯೂರೋಪಿನ ದೇಶಗಳ ಆರ್ಟ್ ಗ್ಯಾಲರಿಗಳಿಗೆ ರಫ್ತಾಗುತ್ತವೆ. ಅಲ್ಲಿ ನಡೆಯುವ ಹರಾಜಿನಲ್ಲಿ ಲಕ್ಷಾಂತರ ಡಾಲರ್ಗಳನ್ನು ಸುರಿದು ಆಯಾ ದೇಶಗಳ ಕಲಾಪ್ರಿಯರು ಅವುಗಳನ್ನು ಖರೀದಿಸುತ್ತಾರೆ!


ಹಾಗೆ ನೋಡಿದರೆ ವಿಗ್ರಹ ಕಳ್ಳರ ಪೈಕಿ ಸುಭಾಷ್ ಕಪೂರ್ ಒಂದು ಸಣ್ಣ ಹುಳು ಅಷ್ಟೇ. ತನ್ನ ಕಳ್ಳತನ ಬೆಳಕಿಗೆ ಬರುತ್ತಿದ್ದ ಹಾಗೇ ಅಮೆರಿಕದಿಂದ ಹಾರಿದ ಅವನು ಫ್ರಾಂಕ್ಫರ್ಟಿನಲ್ಲಿ ಪೋಲೀಸರ ಕೈಗೆ ಸಿಕ್ಕಿಬಿದ್ದ. 2012ರಿಂದ ಚೆನ್ನೈನ ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ಅವನಿಗಿಂತ ಮೊದಲೇ ದೊಡ್ಡ ಪ್ರಮಾಣದಲ್ಲಿ ಕೆಲಸಕ್ಕೆ ಕೈ ಹಾಕಿದ್ದವನು ವಾಮನ ನಾರಾಯಣ ಘಿಯಾ. ಅವನು ಅನಾಮತ್ತು 20,000 ವಿಗ್ರಹಗಳನ್ನು ಕದ್ದಿದ್ದ ಭೂಪ! ಇಂಥವರು ಇನ್ನೂ ಅದೆಷ್ಟು ಮಂದಿ ಇದ್ದಾರೋ? ಈಗಂತೂ ವಿಗ್ರಹಗಳ ಕಳುವು ಹಾಗೂ ಮಾರಾಟ ದೊಡ್ಡ ಧಂಧೆಯಾಗಿಬಿಟ್ಟಿದೆ. ಅದರ ವಹಿವಾಟಿನ ಮೌಲ್ಯ ವಾರ್ಷಿಕ 40ಸಾವಿರ ಕೋಟಿರೂಗಳು! ಯುನೆಸ್ಕೋ ಹೇಳುವ ಪ್ರಕಾರ, 1989ರವರೆಗೂ ಭಾರತದಿಂದ ಕಳುವಾಗಿರುವ ವಿಗ್ರಹ ಹಾಗೂ ಸಾಂಸ್ಕೃತಿಕ ಪರಿಕರಗಳು ಸುಮಾರು 50,000ವಂತೆ! 2010 ಹಾಗೂ 2012 ನಡುವೆಯೇ 4408 ವಸ್ತುಗಳು ಕಳುವಾಗಿವೆ ಎನ್ನುತ್ತದೆ ಎನ್ಸಿಆರ್ಬಿ.
ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ತಮ್ಮ ದೇಶದ ಗ್ಯಾಲರಿಯಲ್ಲಿರುವ ವಿಗ್ರಹ ಕಳುವಿನದ್ದು ಎಂದು ಗೊತ್ತಾದ ತಕ್ಷಣ ಅಲ್ಲಿಯವರೇ ಅವುಗಳನ್ನು ಇಟ್ಟುಕೊಳ್ಳುವುದಿಲ್ಲ. ಉದಾಹರಣೆಗೆ, ಅಮೆರಿಕದ ಟೊಲೆಡೋ ಮ್ಯೂಸಿಯಂನ ನಿರ್ದೇಶಕ ಬ್ರಯಾನ್ ಕೆನಡಿ ತಾವೇ ಭಾರತೀಯ ರಾಯಭಾರಿ ಕಚೇರಿಗೆ ಖುದ್ದಾಗಿ ಪತ್ರ ಬರೆದಿದ್ದರು! ತಾವು ಸುಭಾಷ್ನಿಂದ ಖರೀದಿಸಿದ್ದ ಕಂಚಿನ ಗಣೇಶ ಕದ್ದು ತಂದಿರುವುದು ಎಂಬ ಅನುಮಾನವಿರುವುದರಿಂದ ಅದನ್ನು ದಯವಿಟ್ಟು ಪರಿಶೀಲಿಸಿ ಎಂದು ಮನವಿ ಮಾಡಿಕೊಂಡಿದ್ದರು!
ನಿಮಗೆ ಗೊತ್ತಿರಲಿ, ಇಟಲಿ, ಕ್ಯಾಂಬೋಡಿಯಾ ಹಾಗೂ ಗ್ರೀಸ್ ದೇಶಗಳಲ್ಲಿ ಪಾರಂಪರಿಕ ವಸ್ತುಗಳ ರಕ್ಷಣೆಗೆಂದೇ 'ಹೆರಿಟೇಜ್ ಪೋಲೀಸ್' ಅಥವಾ 'ಆರ್ಟ್ ಸ್ಕ್ವಾಡ್' ಎಂಬ ವಿಭಾಗಗಳಿವೆ. ಅವುಗಳು ವರೆಗೂ ಲಕ್ಷಾಂತರ ಐತಿಹಾಸಿಕ ಸ್ಮಾರಕಗಳನ್ನು ತಮ್ಮ ದೇಶಗಳಿಗೆ ಮರಳಿ ತಂದಿವೆ. ಅವುಗಳದ್ದು ಹೋಗಲಿ, ಕಮ್ಯೂನಿಸ್ಟ್ ಚೀನಾ ಸಹ, 'ಸ್ಟೇಟ್ ಬ್ಯೂರೋ ಆಫ್ ಕಲ್ಚರಲ್ ರೆಲಿಕ್ಸ್' ಎಂಬ ಅಂಗವನ್ನು ಹೊಂದಿದೆ! ಸಾವಿರಾರು ವರ್ಷಗಳ ಶ್ರೀಮಂತ ಪರಂಪರೆಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ನಾವು ಅದಕ್ಕಿಂತಲೂ ಕೇಡು! ಪುರಾತತ್ವ ಇಲಾಖೆಯನ್ನು ಬಿಟ್ಟರೆ, ಇಂಥ ಕ್ರಿಮಿನಲ್ ಪ್ರಕರಣಗಳ ತನಿಖೆಗೆ ಎಂದೇ ಮೀಸಲಾಗಿರುವ ಒಂದೇ ಒಂದು ವಿಭಾಗವೂ ನಮ್ಮಲ್ಲಿಲ್ಲ!
ಅಮೆರಿಕವನ್ನೇ ನೋಡಿ. ನೂರು ವರ್ಷದ ಹಿಂದಿನ ಒಂದು ಮಾಸಲು ಕಲ್ಲುಬೆಂಚು ಸಿಕ್ಕಿದರೂ ಸಾಕು, ಕಣ್ಣು-ಬಾಯಿ ಬಿಟ್ಟುಕೊಂಡು ನೋಡುತ್ತಾರೆ. ಅದರ ಸುತ್ತ ನೂರಾರು ಕಥೆ ಕಟ್ಟಿ, ಅದನ್ನೊಂದು ಪ್ರವಾಸಿ ತಾಣ ಮಾಡಿ, ಅದರ ಫೋಟೋ, ಕೀ-ಚೈನುಗಳನ್ನು ಹರಿಯಬಿಡುತ್ತಾರೆ. ಅದನ್ನು ನೋಡದೆ ಸತ್ತರೆ ಇನ್ನೆಂಥ ದೊಡ್ಡ ನಷ್ಟವಾಗಿಬಿಡುತ್ತದೋ ಎನ್ನುವ ಭಯ, ಕುತೂಹಲಗಳನ್ನು ಹುಟ್ಟಿಸುತ್ತಾರೆ! ಆದರೆ ನಮ್ಮಲ್ಲಿ ಶತಶತಮಾನಗಳಿಂದ ಉಳಿದುಕೊಂಡು ಬಂದಿರುವ ಪರಂಪರೆಗೆ ಕಿಮ್ಮತ್ತೇ ಇಲ್ಲ.

ಮೊದಲೆಲ್ಲ ಮುಸ್ಲಿಂ ದಾಳಿಕೋರರು ನಮ್ಮ ದೇವರುಗಳನ್ನು ವಿರೂಪಗೊಳಿಸಿ, ಅವುಗಳನ್ನು ತಮ್ಮ ಮಸೀದಿಯ ಮೆಟ್ಟಿಲುಗಳಾಗಿ ಉಪಯೋಗಿಸುತ್ತಿದ್ದುದು ನಮ್ಮ ಸಂಸ್ಕೃತಿಯ ಕಗ್ಗೊಲೆ ಮಾಡುವುದಕ್ಕೆ. ಅದೇ ಕಗ್ಗೊಲೆ ಈಗ ಬೇರೊಂದು ರೂಪ ಪಡೆದಿದೆ ಅಷ್ಟೇ. ತಡೆಯುವ ಅನಿವಾರ್ಯ ಈಗಲೂ ಇದೆ. ‘India Pride Project’ ಜೊತೆ ಕೈಜೋಡಿಸಿ ಅದನ್ನು ಸಾಧ್ಯವಾಗಿಸಬಹುದು. ಅನಿವಾಸಿ ಭಾರತೀಯರಿಗಿರುವ ಅಪಾರ ಕಾಳಜಿಯಲ್ಲಿ ನಮ್ಮ ಪಾಲನ್ನೂ ಸೇರಿಸಬಹುದು. ಏಕೆಂದರೆ ಡಾಲರುಗಳ ಲೆಕ್ಕದಲ್ಲಿ ಹರಾಜಾಗುತ್ತಿರುವುದು ದೇವರ ವಿಗ್ರಹಗಳು ಮಾತ್ರವಲ್ಲ, ನಮ್ಮ ಸಂಸ್ಕೃತಿ, ಪರಂಪರೆ, ಹೆಮ್ಮೆಗಳೂ

No comments:

Post a Comment