Monday, 27 June 2016

ಗಂಟಲಲ್ಲೇ ಉಳಿದ ಎನ್‍ಎಸ್‍ಜಿ ಎಂಬ ಬಿಸಿತುಪ್ಪ!

ಅದು 1974ರ ಮೇ 18. ಆವತ್ತು ಬುದ್ಧ ಜಯಂತಿ. ಭಾಭಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳಿಗೆ ಬೇರೆಯದೇ ಕಾರಣಕ್ಕೆ ಸಡಗರ. ತಮ್ಮ ಪ್ರಯತ್ನ ಕೈಗೂಡುತ್ತದೋ ಇಲ್ಲವೋ ನೋಡಿಬಿಡುವ ಕಾತರ. ಶಕ್ತಿ -1 ಹೆಸರಿನ ಪರಮಾಣು ಬಾಂಬ್ ಅನ್ನು ಸ್ಫೋಟಿಸಲು ಪೋಖ್ರಾನ್‍ನ ಮರುಭೂಮಿಯಲ್ಲಿ ಜಾಗವನ್ನು ಅದಾಗಲೇ ಗುರುತಿಸಿ ಆಗಿತ್ತು. ಮೂರು ವರ್ಷಗಳ ಹಿಂದಷ್ಟೇ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ್ದರೂ, ಸಮಯದಲ್ಲಿ ತನ್ನ ನೆರವಿಗೆಂದು ಸೋವಿಯತ್ ಸರ್ಕಾರ ಕಳಿಸಿದ್ದ ಅಣ್ವಸ್ತ್ರಗಳ ಪಡೆಯನ್ನು ಕಂಡು ಭಾರತ ಅಸೂಯೆ ಪಟ್ಟಿತ್ತು. ತನ್ನ ಹತ್ತಿರ ಅಣ್ವಸ್ತ್ರಗಳಿಲ್ಲವೆಂಬ ಕೊರಗು ಭಾರತವನ್ನು ಕಾಡುತ್ತಲೇ ಇತ್ತು. ಹಾಗಂತ ಅದೇನೂ ಕೈಕಟ್ಟಿಕೊಂಡು ಸುಮ್ಮನೆ ಕೂತಿರಲಿಲ್ಲ.1954ರಲ್ಲೇ ಡಾ. ಹೋಮಿ ಜಹಾಂಗೀರ್ ಭಾಭಾ ಭಾರತವನ್ನು ಅಣ್ವಸ್ತ್ರಗಳ ರಾಷ್ಟ್ರವನ್ನಾಗಿಸುವ ಕನಸು ಕಾಣತೊಡಗಿದ್ದರು. ಅವರ ಆಶಯದಂತೆಯೇ ನುರಿತ ವಿಜ್ಞಾನಿಗಳ ದಂಡೊಂದು ತಯಾರಾಗುತ್ತಿತ್ತು. ಬಾಂಬ್‍ನ ತಯಾರಿಕೆಯಿಂದ ಹಿಡಿದು, ಪರಮಾಣು ರಿಯಾಕ್ಟರ್ ತಯಾರಿಕೆ, ಅದರ ಇಂಧನ ಪ್ಲುಟೋನಿಯಂ ಅನ್ನು ಸಂಪಾದಿಸುವ ಬಗೆ ಹೇಗೆ ಎಂಬೆಲ್ಲ ಲೆಕ್ಕಾಚಾರಗಳೂ ಅವರ ಮನಸ್ಸಿನಲ್ಲಿ ನಡೆಯುತ್ತಿದ್ದವು. ಪರಮಾಣು ಶಕ್ತಿಯ ಬಗ್ಗೆ ಜನರ ಮನಸ್ಸಿನಲ್ಲಿದ್ದ ಗೊಂದಲವನ್ನು ದೂರ ಮಾಡಲು ಜನರನ್ನುದ್ದೇಶಿಸಿ ರೇಡಿಯೋದಲ್ಲಿ ಮಾತನಾಡಲೂ ಭಾಭಾ ಹಿಂಜರಿಯಲಿಲ್ಲ! ಅದರ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಷ್ಟೇ ಮುತುವರ್ಜಿಯಿಂದ ರಾಜಕಾರಣಿಗಳಿಗೂ ವಿವರಿಸಿದರು. ಪರಿಣಾಮವೇ ಮೊದಲ ಅಣುಪರೀಕ್ಷೆಯ ತಯಾರಿ. ಆಗ ಅವರ ಹೆಗಲಿಗೆ ಹೆಗಲು ಕೊಟ್ಟು ನಿಂತವರು ಖ್ಯಾತ ವಿಜ್ಞಾನಿ ಡಾ. ರಾಜಾರಾಮಣ್ಣ. ಆದರೆ ದುರಾದೃಷ್ಟ. 1966ರ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಭಾಭಾ ಸಾವನ್ನಪ್ಪಿದರು. ಅವರ ಕನಸನ್ನು ಜೀವಂತವಾಗಿರಿಸಿದರು ರಾಜಾರಾಮಣ್ಣ.

ಹೋಮಿ ಸೇತ್ನಾ, ಪಿ.ಕೆ ಅಯ್ಯಂಗಾರ್, ಆರ್ ಚಿದಂಬರಂ ಮುಂತಾದ ವಿಜ್ಞಾನಿಗಳನ್ನು ಬೆನ್ನಿಗಿಟ್ಟುಕೊಂಡು ಅಣು ಪರೀಕ್ಷೆಯ ತಯಾರಿಯಲ್ಲಿ ನಿರತರಾದ ರಾಜಾರಾಮಣ್ಣರಿಗೆ ಬೆಂಬಲವಾಗಿ ನಿಂತರು ಇಂದಿರಾ ಗಾಂಧಿ! ಇಡೀ ಕಾರ್ಯಾಚರಣೆ ಗುಟ್ಟೋ ಗುಟ್ಟು! ಸುಮಾರು 75 ವಿಜ್ಞಾನಿಗಳು, ಇಂದಿರಾ ಗಾಂಧಿ, ಅವರ ಆಪ್ತ ಸಲಹೆಗಾರರು ಹಾಗೂ ಸೈನ್ಯದ ಮುಖ್ಯಸ್ಥರನ್ನು ಬಿಟ್ಟರೆ ಬೇರಾರಿಗೂ ಈ ವಿಷಯ ಗೊತ್ತಿರಲಿಲ್ಲ. ಅಂದಿನ ರಕ್ಷಣಾ ಮಂತ್ರಿ ಜಗಜೀವನರಾಂ ಅವರ ಕಿವಿಗೆ ವಿಷಯ ಬಿದ್ದಿದ್ದೂ ಎಲ್ಲ ಮುಗಿದ ಮೇಲೇ! ಪರೀಕ್ಷೆಗೆ ಬೇಕೆಂದೇ ಬುದ್ಧ ಜಯಂತಿಯನ್ನು ಆರಿಸಿಕೊಂಡಿದ್ದರು. ಭಾರತದ ಉದ್ದೇಶ ಶಾಂತಿ ಸ್ಥಾಪನೆ ಎನ್ನುವುದನ್ನು ಸಾಂಕೇತಿಕವಾಗಿ ಜಗತ್ತಿಗೆ ಸಾರಲು! ಆದ್ದರಿಂದಲೇ ಕಾರ್ಯಾಚರಣೆಗೆ 'ಸ್ಮೈಲಿಂಗ್ ಬುದ್ಧ' ಎಂದೇ ಹೆಸರಿಡಲಾಗಿತ್ತು.ಆವತ್ತು ನಮ್ಮ ಅಣು ಬಾಂಬ್ ನೆಲದೊಳಗೆ (ಸುಮಾರು 107 ಮೀಟರ್ ಆಳದಲ್ಲಿ) ಸಿಡಿದು 70 ಮೀಟರ್ ವ್ಯಾಸದಷ್ಟು ಭೂಮಿ ಕಂಪಿಸಿ ಕುಸಿಯಿತು ನೋಡಿ, ಆಗ ಅಮೆರಿಕ ಎಚ್ಚೆತ್ತುಕೊಂಡಿತು. ಪಾಕಿಸ್ತಾನದ ಕರುಳಿನಲ್ಲಂತೂ ಮೆಣಸಿನಕಾಯಿ ಕಿವುಚಿದ ಹಾಗಾಯಿತು. ಪರಮಾಣು ಪೂರೈಕೆದಾರರ ಸಂಘ ಅಥವಾ ಎನ್‍ಎಸ್‍ಜಿ ಹುಟ್ಟಿಕೊಂಡಿದ್ದೇ ಆಗ! ಸೋವಿಯತ್ ಒಕ್ಕೂಟ, ಅಮೆರಿಕ, ಫ್ರಾನ್ಸ್, ಜಪಾನ್ ಸೇರಿದಂತೆ ಏಳು ರಾಷ್ಟ್ರಗಳು ಮೊದಲಿಗೆ ಅದರ ಸದಸ್ಯತ್ವ ಪಡೆದವು. ಉಳಿದ ರಾಷ್ಟ್ರಗಳು ಎನ್‍ಎಸ್‍ಜಿ ತಂಡಕ್ಕೆ ಸೇರ್ಪಡೆಯಾಗಬೇಕೆಂದರೆ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ (Non-Proliferation Treaty) ಸಹಿ ಹಾಕುವುದು ಅನಿವಾರ್ಯ ಎಂಬ ನಿಯಮವನ್ನು ತಂದಿದ್ದೂ ಆ ರಾಷ್ಟ್ರಗಳೇ.

ಎನ್‍ಎಸ್‍ಜಿ ತಂಡಕ್ಕೆ ಸೇರಿದರೆ ಅದರದ್ದೇ ಆದ ಲಾಭವಿದೆ. ಆ ರಾಷ್ಟ್ರಗಳು ಅಣ್ವಸ್ತ್ರಗಳ ದುರುಪಯೋಗಕ್ಕಿಳಿಯುವುದಿಲ್ಲ. ತಾವಾಗೇ ಯಾವ ರಾಷ್ಟ್ರಗಳ ಮೇಲೂ ಅಣ್ವಸ್ತ್ರ ಯುದ್ಧ ಘೋಷಿಸುವುದಿಲ್ಲ. ಪರಮಾಣು ತಂತ್ರಜ್ಞಾನವನ್ನು ವಿಜ್ಞಾನ, ವೈದ್ಯಕೀಯ ಮುಂತಾದ ಜನೋಪಯೋಗಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತವೆ. ಆದ್ದರಿಂದಲೇ ಈಗ ವಿಶ್ವದ 48 ದೇಶಗಳು ಎನ್‍ಎಸ್‍ಜಿ ಸೇರಿವೆ. ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿ ಪರಮಾಣು ತಂತ್ರಜ್ಞಾನದ ಲಾಭ ಪಡೆಯುತ್ತಿವೆ. ಭಾರತದ ಉದ್ದೇಶವೂ ಅಣ್ವಸ್ತ್ರದ ಸದ್ಬಳಕೆಯೇ ತಾನೇ, ಹಾಗಾದರೆ ನಾವ್ಯಾಕೆ ಆ ಒಪ್ಪಂದಕ್ಕೆ ಸಹಿ ಹಾಕುತ್ತಿಲ್ಲ? ಬಿಡಿಸಲಾಗದ ಒಗಟಿರುವುದೇ ಅಲ್ಲಿ!

ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದದ ಪ್ರಕಾರ 1970ಕ್ಕೆ ಮೊದಲೇ ಅಣ್ವಸ್ತ್ರ ಪರೀಕ್ಷೆ ನಡೆಸಿದ ಐದು ದೇಶಗಳನ್ನು ಬಿಟ್ಟು ಉಳಿದ ದೇಶಗಳು ಯಾವ ಕಾರಣಕ್ಕೂ ಅಣ್ವಸ್ತ್ರಗಳನ್ನು ಹೊಂದುವಂತಿಲ್ಲ! ಅಣ್ವಸ್ತ್ರ ಇಟ್ಟುಕೊಳ್ಳುವುದು ಹಾಗಿರಲಿ, ಒಂದು ಸಣ್ಣ ಪರೀಕ್ಷೆಯನ್ನೂ ನಡೆಸುವ ಹಾಗಿಲ್ಲ! ರಿಯಾಕ್ಟರ್‍ಗಳು, ಅದರಲ್ಲಿ ಬಳಕೆಯಾಗುವ ಇಂಧನ, ಪರಮಾಣು ಕೇಂದ್ರದಲ್ಲಿ ನಡೆಯುವ ಚಟುವಟಿಕೆಗಳೆಲ್ಲದರ ಮೇಲೂ ಈ ಐದು ದೇಶಗಳು ಸದಾ ಕಣ್ಣಿಟ್ಟಿರುತ್ತವೆ. ಅವುಗಳ ಅಣತಿಯಿಲ್ಲದೆ ಬೇರೆ ದೇಶಗಳೊಂದಿಗೆ ಪರಮಾಣು ತಂತ್ರಜ್ಞಾನದ ಅಥವಾ ಇಂಧನದ ಆಮದು, ರಫ್ತು ಯಾವುದೂ ಸಾಧ್ಯವಿಲ್ಲ! ಏನೇ ಮಾಡಿದರೂ ಜಗಜ್ಜಾಹೀರು ಮಾಡಲೇಬೇಕು. ಎಲ್ಲಕ್ಕಿಂತ ಆತಂಕಕಾರಿ ಸಂಗತಿಯೆಂದರೆ ಆ ಐದು ದೇಶಗಳಲ್ಲಿ ಚೀನಾ ಕೂಡ ಸೇರಿದೆ! ಈಗಾಗಲೇ ಒಂದು ಯುದ್ಧದಲ್ಲಿ ನಮಗೆ ಹೀನಾಯ ಸೋಲಿನ ರುಚಿ ತೋರಿಸಿರುವ, ತಾನು ಮಾತ್ರ ಭಾರೀ ಸಾಮರ್ಥ್ಯದ ಅಣ್ವಸ್ತ್ರ ಇಟ್ಟುಕೊಂಡಿರುವ ಚೀನಾದ ಎದುರು ನಾವು ಬರಿಗೈಲಿ ಕೂತಿರಲು ಹೇಗೆ ಸಾಧ್ಯ?

ಜೊತೆಗೆ ಚೀನಾ ಮತ್ತೂ ಒಂದು ಕೆಲಸ ಮಾಡುತ್ತಿದೆ. ಪಾಕಿಸ್ತಾನಕ್ಕೆ ನಿಯಮಿತವಾಗಿ ಪರಮಾಣು ತಂತ್ರಜ್ಞಾನವನ್ನು ರಫ್ತು ಮಾಡುತ್ತಿದೆ. ಪಾಕಿಸ್ತಾನದಲ್ಲಿ ಒಂದೆರಡಲ್ಲ, ಒಟ್ಟು ಆರು ಪರಮಾಣು ರಿಯಾಕ್ಟರ್‍ಗಳನ್ನು ಸ್ಥಾಪಿಸಲು ನೆರವಾಗುತ್ತಿದೆ! ಭಾರತ ಒಂದು ಕ್ಷಿಪಣಿ ಪರೀಕ್ಷೆ ನಡೆಸಿದರೂ ಸಾಕು, ತಾನೂ ನಿಂತನಿಲುವಿನಲ್ಲೇ ಕ್ಷಿಪಣಿ ಉಡಾಯಿಸುವ ಪಾಕಿಸ್ತಾನ ಇನ್ನು ಈ ವಿಷಯದಲ್ಲಿ ಸುಮ್ಮನಿರುತ್ತದೆಯೇ? ಚೀನಾದ ತಂತ್ರಗಾರಿಕೆ ಒಂದು ಕಡೆ, ಪಾಕಿಸ್ತಾನದ ತೀರದ ಹಗೆತನ ಇನ್ನೊಂದು ಕಡೆ. ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿಬಿಟ್ಟರೆ ನಮ್ಮ ಸುರಕ್ಷತೆಯ ಗತಿಯೇನು? ಇದು ಭಾರತದ ವಾದ. ಇದೇ ವಾದವನ್ನೇ ಪಾಕಿಸ್ತಾನವೂ ಮಾಡುತ್ತಿದೆ. ಅದರ ಮಾತಿಗೆ ಪುಷ್ಟಿ ನೀಡುವ ಹಾಗೆ ನಾವು ಎರಡನೆಯ ಸಲವೂ ಅಣು ಪರೀಕ್ಷೆ ಮಾಡಿಬಿಟ್ಟೆವಲ್ಲ! 1998ರಲ್ಲಿ!ಅದಂತೂ ಇನ್ನೂ ರೋಚಕ ಕಥೆ. ದೇಶದ ಅಭಿವೃದ್ಧಿಯ ಕನಸನ್ನು ಕಂಡ ಮಹಾನುಭಾವ ಪಿ.ವಿ ನರಸಿಂಹರಾವ್‍ಗೆ ಮತ್ತೊಂದು ಪರಮಾಣು ಪರೀಕ್ಷೆ ಮಾಡಿಬಿಡುವ ಆತುರ. ಆದರೆ ಅಮೆರಿಕ ಗದರಿಸಿದ ಕಾರಣಕ್ಕೆ, ಇನ್ನೆಲ್ಲಿ ಆರ್ಥಿಕ ಉದಾರೀಕರಣಕ್ಕೆ ಪೆಟ್ಟು ಬಿದ್ದೀತೋ ಎಂಬ ಕಾರಣಕ್ಕೆ ಕೊನೆ ಕ್ಷಣದಲ್ಲಿ ಸುಮ್ಮನಾದರು. ಆದರೆ ಈ ವಿಷಯವಾಗಿ ಐ.ಕೆ ಗುಜರಾಲ್ ಹಾಗೂ ವಾಜಪೇಯಿಯವರ ಕಿವಿ ಊದಿದರು. ವಾಜಪೇಯಿಯವರು ಅಧಿಕಾರಕ್ಕೆ ಬಂದಾಗ ಭರದ ಸಿದ್ಧತೆ ಶುರುವಾಯಿತು. ಅಮೆರಿಕದ ಬೇಹುಗಾರಿಕಾ ಉಪಗ್ರಹ ತಮ್ಮ ಮೇಲೆ ಕಣ್ಣಿಟ್ಟಿದೆ ಎಂದು ಗೊತ್ತಿದ್ದರೂ ಅದನ್ನು ಯಶಸ್ವಿಯಾಗಿ ಯಾಮಾರಿಸಿದರು. ವಿಜ್ಞಾನಿಗಳೆಲ್ಲ ಸೈನಿಕರ ಸಮವಸ್ತ್ರಗಳನ್ನು ಧರಿಸಿ ಪೋಖ್ರಾನ್‍ನಲ್ಲಿ ಜಮಾಯಿಸಿದರು. ಬಾಂಬ್‍ಗಳ ಸಾಗಾಣಿಕೆ, ಜೋಡಣೆ, ಎಲ್ಲ ನಡೆಯುತ್ತಿದ್ದುದೂ ನಟ್ಟಿರುಳಿನಲ್ಲೇ. ಅಂತೂ ಪರೀಕ್ಷೆ ಮುಗಿಯುವವರೆಗೂ ಯಾರೊಬ್ಬರಿಗೂ ಗೊತ್ತಾಗಲಿಲ್ಲ. ಆಮೇಲೆ ಅಮೆರಿಕದಿಂದ ದಿಗ್ಬಂಧನ, ಉಳಿದ ದೇಶಗಳ ಕಣ್ಣಲ್ಲಿ ಖಳನಾಯಕನೆಂಬ ಪಟ್ಟ! ಚೀನಾ ಹಾಗೂ ಪಾಕಿಸ್ತಾನಗಳಿಗೆ ನಮ್ಮ ವಿರುದ್ಧ ದನಿಯೆತ್ತಲು ಇಷ್ಟೇ ಸಾಕಾಯಿತು. ನಾವು ಪರೀಕ್ಷೆ ನಡೆಸಿದ ಒಂದೇ ತಿಂಗಳೊಳಗೆ ಪಾಕಿಸ್ತಾನವೂ ತನ್ನ ಪರಮಾಣು ಶಕ್ತಿಯನ್ನು ಪ್ರದರ್ಶಿಸಿ ತಾನೇನೂ ಕಡಿಮೆಯಲ್ಲ ಎಂದು ಸಾರಿತು. ಆದರೂ ಮೊದಲಿಗೆ ಶುರುವಿಟ್ಟುಕೊಂಡಿದ್ದು ಭಾರತ, ಆದ್ದರಿಂದ ಅದನ್ನು ಎನ್‍ಎಸ್‍ಜಿ ಗುಂಪಿಗೆ ಸೇರಿಸಿಕೊಳ್ಳಬೇಡಿ ಎಂಬ ವರಾತ ಶುರು ಮಾಡಿತು. ಅದನ್ನು ಸೇರಿಸಿಕೊಂಡರೆ ತನ್ನನ್ನೂ ಸೇರಿಸಿಕೊಳ್ಳಬೇಕಾಗುತ್ತದೆ ಎಂಬ ಧಮಕಿಯನ್ನೂ ಹಾಕಿತು. ಅದರ ಬೆಂಬಲಕ್ಕೆ ನಿಂತಿತು ಚೀನಾ. ಅಂದಿನಿಂದ ಇಂದಿನವರೆಗೂ ಈ ಅಘೋಷಿತ ಯುದ್ಧ ನಡೆಯುತ್ತಲೇ ಬಂದಿದೆ.

ಐದು ರಾಷ್ಟ್ರಗಳನ್ನು ಹೊರತುಪಡಿಸಿದರೆ, ತಮ್ಮ ಬಳಿ ಅಣ್ವಸ್ತ್ರಗಳಿವೆ ಎಂದು ಹೇಳಿಕೊಂಡಿರುವ ದೇಶಗಳು ಮೂರೇ ಮೂರು. ಭಾರತ, ಪಾಕಿಸ್ತಾನ ಹಾಗೂ ಉತ್ತರಕೊರಿಯಾ. ಏನನ್ನೂ ತೋರಿಸಿಕೊಳ್ಳದೆ ಒಳಗೊಳಗೇ ಅಣ್ವಸ್ತ್ರಗಳನ್ನು ಗುಡ್ಡೆಹಾಕಿಕೊಂಡು ಕೂತಿದೆ ಇಸ್ರೇಲ್. ಮಿಕ್ಕ ದೇಶಗಳು ಈ ಉಸಾಬರಿಗೇ ಹೋಗಿಲ್ಲ. ಉಳಿದವುಗಳ ಕಥೆ ಏನೇ ಇರಲಿ, ನಮ್ಮ ವಾದ ಸರಿಯಾಗೇ ಇದೆ. ನಾವು ಸುಮಾರು 7,500 ಕಿಮೀಗಳ ಗಡಿಯನ್ನು ಚೀನಾ ಹಾಗೂ ಪಾಕಿಸ್ತಾನಗಳೊಂದಿಗೆ ಹಂಚಿಕೊಂಡಿದ್ದೇವೆ. ಎರಡೂ ದೇಶಗಳೊಡನೆ ಈ ಹಿಂದೆ ಯುದ್ಧವೂ ನಡೆದಿದೆ. ಹೀಗಿರುವಾಗ, ನಾವು ಶಾಂತಿಪ್ರಿಯರು ಎಂಬ ಕಾರಣಕ್ಕೆ ಅವರೂ ಸುಮ್ಮನಿರುತ್ತಾರೆ ಎಂದು ನೆಚ್ಚಿಕೊಳ್ಳಲು ಹೇಗೆ ಸಾಧ್ಯ?

ಈ ಸತ್ಯವನ್ನೇ ಉಳಿದ ದೇಶಗಳಿಗೆ ಮನವರಿಕೆ ಮಾಡಿಕೊಡುತ್ತಾ ಬಂದಿದೆ ಭಾರತ ಸರ್ಕಾರ. ಅವುಗಳ ಮನಸ್ಥಿತಿಯಲ್ಲಿ ಬದಲಾವಣೆಯೂ ಇದೆ. 2008ರಲ್ಲಿ ಅಮೆರಿಕ ನಮ್ಮೊಡನೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ್ದೇ ಅದಕ್ಕೆ ಸಾಕ್ಷಿ. ಈ ಸಲವಂತೂ ಇನ್ನಿಲ್ಲದ ಪ್ರಯತ್ನ ನಡೆಸಿತು ಮೋದಿ ಸರ್ಕಾರ. ಎನ್‍ಎಸ್‍ಜಿಯ ಅಧ್ಯಕ್ಷ ರಾಫೆಲ್ ಗ್ರಾಸಿ ಇದೇ ತಿಂಗಳು ಭಾರತಕ್ಕೆ ಬಂದು ಮಾತುಕತೆಯಾಡಿ ಹೋದರು. ಒಂದೊಮ್ಮೆ ಭಾರತವನ್ನು ಸೇರಿಸಿಕೊಂಡರೆ ಪಾಕಿಸ್ತಾನವನ್ನೂ ಸೇರಿಸಿಕೊಳ್ಳಬೇಕು ಎಂದು ಚೀನಾ ಎಂದಿನಂತೆ ಪಟ್ಟು ಹಿಡಿಯಿತು. ಉಳಿದ 48 ಸದಸ್ಯ ರಾಷ್ಟ್ರಗಳ ಅಭಿಮತವನ್ನೂ ಕೇಳಿತು. ಟರ್ಕಿಯನ್ನು ಬಿಟ್ಟರೆ ಬಹುತೇಕ ಎಲ್ಲ ರಾಷ್ಟ್ರಗಳೂ ಭಾರತದ ಸೇರ್ಪಡೆಯನ್ನು ಬೆಂಬಲಿಸಿದವು. ಚೀನಾದ ಅಧ್ಯಕ್ಷ ಜಿನ್‍ಪಿಂಗ್‍ರ ಮನವೊಲಿಸಲು ಖುದ್ದು ಮೋದಿಯೇ ಮಾತುಕತೆ ನಡೆಸಿದರು. ಆದರೂ ಅದು ತನ್ನ ಹಟ ಬಿಡಲಿಲ್ಲ. ಪರಿಣಾಮ, ಎನ್‍ಎಸ್‍ಜಿ ಎಂಬ ಬಿಸಿತುಪ್ಪ ನಮ್ಮ ಗಂಟಲಲ್ಲೇ ಉಳಿದಿದೆ.

ಒಂದು ಕೆನ್ನೆಗೆ ಹೊಡೆದರೆ ಇನ್ನೊಂದನ್ನೂ ತೋರಿಸು ಎನ್ನುವುದು ಗಾಂಧಿಯ ಕಾಲಕ್ಕೇ ಮುಗಿಯಿತು. ಈಗ ಒಂದು ಕೆನ್ನೆಗೂ ಏಟು ತಿನ್ನದಿರುವುದೇ ಜಾಣತನ. ಇಂಥ ಪ್ರಯತ್ನಗಳು ಸದಾ ಜಾರಿಯಲ್ಲಿರಬೇಕು. ಫಲಿತಾಂಶ ಇಂದಲ್ಲ ನಾಳೆ ಖಂಡಿತ ಸಿಗುತ್ತದೆ!

No comments:

Post a Comment