Monday 27 June 2016

‘ಲಾಲ್ ಸಲಾಂ’ನ ಅಂತರಂಗ ಬಿಚ್ಚಿಡುವ ಬುದ್ಧ!

ಛತ್ತೀಸ್ಗಢದ ಬಸ್ತರ್ ಜಿಲ್ಲೆಯ ಒಂದು ಕಾಡು. ಮಧ್ಯದೊಳಗೊಂದು ಪುಟ್ಟ ಗುಡಿಸಲು. ಅಲ್ಲಿಯ ಬುಡಕಟ್ಟು ಜನಾಂಗಕ್ಕೆ ಸೇರಿದ ಒಂದು ನಿರ್ಗತಿಕ ಕುಟುಂಬ. ಗಂಡ - ಹೆಂಡತಿ, ಇಬ್ಬರು ಮಕ್ಕಳ ಸಂಸಾರ. ಹಾಸಿಹೊದ್ದುಕೊಳ್ಳುವಷ್ಟು ಬಡತನ. ಸೌದೆ ಒಡೆದು ಮಾರಿ ಜೀವನ ನಿರ್ವಹಿಸಿಕೊಳ್ಳುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲದ ಅಮಾಯಕರು. ಅಲ್ಲಿಗೆ ರಾಜಕಾರಣಿಯೊಬ್ಬನ ಆಗಮನವಾಗುತ್ತದೆ. ಅವನನ್ನು ನೋಡುತ್ತಿದ್ದ ಹಾಗೇ ಮನೆಯ ಹೆಂಗಸರ ಮುಖಗಳಲ್ಲಿ ಭಯ. ‘ಸಲ್ವಾ ಜುದಂಸಂಘಟನೆಯನ್ನು ಬೆಂಬಲಿಸು ಎಂದು ಅವನು ಮನೆಯ ಯಜಮಾನನ ಮೇಲೆ ಜೋರು ಮಾಡುತ್ತಾನೆ. ಪ್ರಾಣಭಯದಿಂದ ತತ್ತರಿಸುವ ಬಡ ಗಂಡಸು ಬೇಡಬೇಡವೆಂದರೂ ಬಲವಂತವಾಗಿ ಕಾಗದದ ಮೇಲೆ ಅವನ ಹೆಬ್ಬೆರಳನ್ನು ಒತ್ತಿಸಿಕೊಂಡು ಹೋಗುತ್ತಾನೆ. ಅವನು ಹೋದ ಸ್ವಲ್ಪ ಹೊತ್ತಿಗೇ ನಕ್ಸಲರು ಮನೆಗೆ ಲಗ್ಗೆಯಿಡುತ್ತಾರೆ. ‘ಸಲ್ವಾ ಜುದಂಗೆ ಸೇರಿ ನಮ್ಮನ್ನು ವಿರೋಧಿಸುವಷ್ಟು ಧೈರ್ಯ ಹುಟ್ಟಿಕೊಂಡಿತೇನೋ ನಿನ್ನಲ್ಲಿ?’ ಎಂದು ಅವನಿಗೆ ಚಿತ್ರಹಿಂಸೆ ನೀಡುತ್ತಾರೆ. ಪ್ರಾಣ ಹೋಗುವ ಹಾಗೆ ಅವನನ್ನು ಬಡಿಯುತ್ತಾರೆ. ಓಡಿ ಹೋಗಲು ಪ್ರಯತ್ನಿಸುವ ಅವನ ಮಗನನ್ನೂ ಹೊಡೆದು ನೆಲಕ್ಕುರುಳಿಸುತ್ತಾರೆ.
ಇದು ಚಿತ್ರವೊಂದರ ಆರಂಭಿಕ ಸನ್ನಿವೇಶ. ಚಿತ್ರದ ಹೆಸರು, ‘Buddha In A Traffic Jam’. ಹೆಸರು, ಕೇಳಲು ಸ್ವಲ್ಪ ವಿಚಿತ್ರವೆನಿಸುತ್ತದೆ. ತಕ್ಷಣಕ್ಕೆ ಏನೂ ಅರ್ಥವಾಗುವುದೂ ಇಲ್ಲ. ಆದರೆ ಚಿತ್ರವನ್ನು ನೋಡಿದ ಮೇಲೆ ಕೆಲ ಕ್ಷಣ ಮಾತೇ ಹೊರಡುವುದಿಲ್ಲ. ಬಾಲಿವುಡ್ ಚಿತ್ರ ಎರಡು ವರ್ಷಗಳ ಹಿಂದೆ, ಅಂದರೆ 2014ರಲ್ಲಿ ತಯಾರಾಯಿತು. ಅದೇ ವರ್ಷ ಮುಂಬಯಿಯಲ್ಲಿ ನಡೆದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ, ವರ್ಷದ ಐದು  ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎಂಬ ಖ್ಯಾತಿ ಪಡೆಯಿತು. ಚಿತ್ರದಲ್ಲಿ ಅಭಿನಯಿಸಿರುವ ಪಲ್ಲವಿ ಜೋಷಿ ಅತ್ಯುತ್ತಮ ಅಭಿನೇತ್ರಿಯಾಗಿ ಆಯ್ಕೆಯಾದರು. ಚಿತ್ರ, ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೂ ನಾಮನಿರ್ದೇಶಿತವಾಯಿತು. ವಿದೇಶಗಳಲ್ಲಂತೂ ಹೋದಲ್ಲೆಲ್ಲ ಜಯಭೇರಿ. ಸ್ಪೇನಿನ ಮ್ಯಾಡ್ರಿಡ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ವಿದೇಶೀ ಚಿತ್ರವೆಂಬ ಹೆಗ್ಗಳಿಕೆ. ಚಿತ್ರದ ಇನ್ನೋರ್ವ ಅಭಿನೇತ್ರಿ ಮಾಹಿ ಗಿಲ್‍’ ಗೂ ಪ್ರಶಸ್ತಿ. ಜಕಾರ್ತಾ ಚಿತ್ರೋತ್ಸವದಲ್ಲೂ ಅತ್ಯುತ್ತಮ ನಿರ್ದೇಶನಕ್ಕೆ ಪ್ರಶಸ್ತಿ. ಒಟ್ಟಿನಲ್ಲಿ ಚಿತ್ರ ಇಲ್ಲಿಯತನಕ ಗೆದ್ದಿರುವ ರಾಷ್ಟ್ರೀಯ, ಅಂತಾರಾಷ್ತ್ರೀಯ ಪ್ರಶಸ್ತಿಗಳು ಸುಮಾರು 30! ಆದರೆ
ಇದಿನ್ನೂ ಬಿಡುಗಡೆಯ ಭಾಗ್ಯವನ್ನೇ ಕಂಡಿಲ್ಲ! ಕಾರಣ, ವಿತರಕರೇ ಸಿಗದೆ ಕಳೆದೆರಡು ವರ್ಷಗಳಿಂದಲೂ ಪರದಾಡುತ್ತಿದ್ದರು ನಿರ್ಮಾಪಕ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಕಳೆದ ವರ್ಷ, ಅಸಹಿಷ್ಣುತೆಯ ನೆಪದಲ್ಲಿ ಸಾಹಿತ್ಯ ಕ್ಷೇತ್ರದ ಕೆಲವು ಖ್ಯಾತನಾಮರು ಅವಾರ್ಡ್ ವಾಪಸಿಶುರು ಮಾಡಿದಾಗ ಅದನ್ನು ಪ್ರತಿಭಟಿಸುವ ಸಲುವಾಗಿ ಅನುಪಮ್ ಖೇರ್ ರಸ್ತೆಗಿಳಿದಿದ್ದು ನಿಮಗೆ ನೆನಪಿರಬಹುದು. ಆಗ ಅವರಿಗೆ ಹೆಗಲು ಕೊಟ್ಟವರೇ ವಿವೇಕ್ ಅಗ್ನಿಹೋತ್ರಿ. ದೂರದರ್ಶನದ ಖ್ಯಾತ ಧಾರಾವಾಹಿಗಳಾದ ಮೃಗನಯನಿ, ಭಾರತ್ ಏಕ್ ಖೋಜ್ಗಳಲ್ಲಿ ಮನೋಜ್ಞ ಅಭಿನಯ ನೀಡಿ ಮನೆ ಮಾತಾಗಿದ್ದ ಪಲ್ಲವಿ ಜೋಷಿಯ ಪತಿ ಈತ. ದೇಶೀಯ ಕಥೆ, ಇಲ್ಲಿನ ಸಮಸ್ಯೆಗಳನ್ನು ಯಥಾವತ್ತು ಬಿಂಬಿಸುವ ಪ್ರಯತ್ನದಲ್ಲಿ ನಿರತರಾಗಿರುವಾತ. ಬಾರಿ ಅವರು ಆಯ್ದುಕೊಂಡಿದ್ದು ನಕ್ಸಲರ ಕಥೆಯನ್ನು. ಅದೇ ಅವರು ಮಾಡಿದ ತಪ್ಪು!


ಕಳೆದ ವಾರ ಸ್ವರಾಜ್ಯ ಮಾಸಪತ್ರಿಕೆ, ಬರಹಗಾರರಿಗೋಸ್ಕರ ಬೆಂಗಳೂರಿನಲ್ಲಿ ಕಾರ್ಯಾಗಾರವೊಂದನ್ನು ಆಯೋಜಿಸಿತ್ತು. ಖ್ಯಾತ ಪತ್ರಕರ್ತ ಹಾಗೂ ಸಂಪಾದಕರಾಗಿದ್ದ ಎಂ.ಜೆ ಅಕ್ಬರ್ ಹಾಗೂ ಇನ್ನೂ ಕೆಲವು ಬರಹಗಾರರನ್ನು ಆಮಂತ್ರಿಸಿ ಅವರೊಂದಿಗೆ ಒಡನಾಡುವ ಅವಕಾಶ ಮಾಡಿಕೊಟ್ಟಿತ್ತು. ಹಾಗೆ ಆಮಂತ್ರಿಸಿದ್ದವರಲ್ಲಿ ವಿವೇಕ್ ಅಗ್ನಿಹೋತ್ರಿಯೂ ಒಬ್ಬರು. ವಿವೇಕ್ ತಾವೊಬ್ಬರೇ ಬರಲಿಲ್ಲ. ಇನ್ನೂ ಬಿಡುಗಡೆಯಾಗದ ತಮ್ಮ ಚಿತ್ರವನ್ನೂ ಜೊತೆಯಲ್ಲೇ ಕರೆದುಕೊಂಡು ಬಂದರು. Pen-Driveನಲ್ಲಿ ಕೂಡಿಸಿಕೊಂಡು! ಮೊದಲ ದಿನದ ಕಾರ್ಯಾಗಾರದ ಕೊನೆಯಲ್ಲಿ ಚಿತ್ರದ ಪ್ರದರ್ಶನ. ಭರ್ತಿ 115 ನಿಮಿಷಗಳು ನಗ್ನ ಸತ್ಯದ ಅನಾವರಣ!
ನಕ್ಸಲರ ಕ್ರಾಂತಿ, ಬುಡಕಟ್ಟು ಜನಾಂಗಗಳನ್ನು ಅದು ಶೋಷಿಸುತ್ತಿರುವ ಪರಿ, ಅದರ ಹಿಂದಿರುವ ರಾಜಕೀಯ ಷಡ್ಯಂತ್ರ, ಎಲ್ಲಕ್ಕಿಂತ ಹೆಚ್ಚಾಗಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕ್ರಾಂತಿಯ ಅಮಲು ಹತ್ತಿಸುತ್ತಿರುವ ಕಮ್ಯೂನಿಸ್ಟ್ ಪ್ರೊಫೆಸರುಗಳ ಕಥೆಯನ್ನು ಎಷ್ಟು ನೇರವಾಗಿ ಹೇಳಬಹುದೋ ಅಷ್ಟೂ ನೇರವಾಗಿ ಹೇಳಿಬಿಟ್ಟಿದ್ದಾರೆ ವಿವೇಕ್! ‘ಲಾಲ್ ಸಲಾಮ್ಎಂಬ ರಕ್ತಸಿಕ್ತ ಕೂಗಿಗೆ ಧ್ವನಿಯಾಗಿರುವ ಮಂದಿಯನ್ನು ತೋರಿಸಿರುವ ಪರಿಯನ್ನಂತೂ ಮೆಚ್ಚಲೇಬೇಕು. ಇವತ್ತು ಜೆಎನ್ಯುನಲ್ಲಿ ಅಷ್ಟು ಮುಕ್ತವಾಗಿ ನಡೆಯುತ್ತಿರುವ ಕ್ರಾಂತಿ ಎರಡು ವರ್ಷದ ಹಿಂದೆಯೇ ವಿವೇಕ್ ಕಣ್ಣಿಗೆ ಬಿದ್ದಿದ್ದು ಕಾಕತಾಳೀಯವೇನೋ ಎಂದು ಮೊದಲು ಅನಿಸಿತ್ತು. ಆದರೆ ಚಿತ್ರದಲ್ಲಿ ಬರುವ ಪ್ರೊಫೆಸರರು ಆಡಿರುವ ಮಾತುಗಳು ಕಾಲ್ಪನಿಕವಲ್ಲ, ಅದು ತಮ್ಮ ಪ್ರೊಫೆಸರರು ಆಡಿದ್ದೇ ಎಂದು ವಿವೇಕ್ ಹೇಳಿದಾಗ ಎಲ್ಲರೂ ದಂಗಾದರು.
ವಿವೇಕ್ ಬಾಲಿವುಡ್ ಇನ್ನಷ್ಟು ರಹಸ್ಯಗಳನ್ನು ಬಿಚ್ಚಿಟ್ಟರು. ದುಡ್ಡಿನ, ಅಧಿಕಾರದ ರಾಜಕೀಯ ಯಾವ ಪರಿ ಬಾಲಿವುಡ್ಡನ್ನು ಆವರಿಸಿಕೊಂಡಿದೆ ಎಂಬುದನ್ನು ವಿವರಿಸಿದರು. ಸೆಕ್ಸ್ ರಾಜಕೀಯದ ವಿಷಯವನ್ನು ಹೊರಗೆಲ್ಲೂ ಚರ್ಚಿಸಬಾರದು ಎನ್ನುವುದು ಬಾಲಿವುಡ್ನವರು ಹಾಕಿಕೊಂಡಿರುವ ಅಘೋಷಿತ ನಿಯಮವಂತೆ! ಹಾಗಾಗಿ ಅದರ ಬಗ್ಗೆ ಹೆಚ್ಚು ಹೇಳಲಿಲ್ಲ. ಆದರೆ ಖಾನ್ಗಳ ಕಪಿಮುಷ್ಠಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಸಿನಿಮಾ ಉದ್ಯಮ ನೈಜ ಕಥೆಗಾರರ ಕೊರತೆ ಎದುರಿಸುತ್ತಿರುವುದನ್ನು, ಉಳಿದವರನ್ನೆಲ್ಲ ತುಳಿದು ಒಂದು ವರ್ಗ ಮಾತ್ರ ಮೇಲೇರುತ್ತಿರುವುದನ್ನು ಅವರು ಉದಾಹರಣೆಗಳ ಸಮೇತ ವಿವರಿಸಿದಾಗ ಕೇಳುಗರೆಲ್ಲರಿಗೂ ಸಂಕಟವಾಗಿದ್ದು ಸುಳ್ಳಲ್ಲ.
ಇರಲಿ, ತಮ್ಮ ಚಿತ್ರದ ಚಿತ್ರೀಕರಣ ಮುಗಿದ ಮೇಲೆ ಅವರು ಪಟ್ಟ ಪಾಡೂ ಕಡಿಮೆಯೇನಲ್ಲ. ಚಿತ್ರ ನೋಡುವವರೆಲ್ಲರೂ ಮೆಚ್ಚಿಗೆ ಸೂಚಿಸುವವರೇ. ಆದರೆ ವಿತರಣೆಯ ರಿಸ್ಕ್ ತೆಗೆದುಕೊಳ್ಳಲು ಯಾರೊಬ್ಬರೂ ಸಿದ್ಧರಾಗಲೇ ಇಲ್ಲ. ಕೊನೆಗೆ ಅವರ ಕೈಹಿಡಿದವರು ರಾಜಶ್ರೀ ಪೋಡಕ್ಷನ್ಸ್ ಸೂರಜ್ ಬರ್ಜಾತ್ಯಾರ ತಂದೆ ರಾಜ್ಕಮಲ್ ಬರ್ಜಾತ್ಯಾ! ತಮ್ಮ ಬ್ಯಾನರಿನ ಚಿತ್ರಗಳ ಹಾಗೆ ಇದು ತುಂಬಿದ ಮನೆಯ, ಅಕ್ಕರೆಯ ಮಗ-ಸೊಸೆಯರ, ಮುದ್ದಿನ ಹೆಣ್ಣುಮಕ್ಕಳಿರುವ ಚಿತ್ರವಲ್ಲ! ಹಾಡು, ಹಬ್ಬ-ಹುಣ್ಣಿಮೆಗಳಿಗಂತೂ ಇಲ್ಲಿ ಜಾಗವೇ ಇಲ್ಲ. ಹಾಗಾಗಿ ನೇರವಾಗಿ ಅವರ ಬ್ಯಾನರ್ನಡಿ ಬಿಡುಗಡೆ ಮಾಡಲಿಕ್ಕಾಗದಿದ್ದರೂ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ. ಸೆನ್ಸಾರ್ ಮಂಡಳಿಯೂ ಅಷ್ಟೇ. ಅದು ಪಾಲಿಸುವ ನಿಯಮಗಳನುಸಾರ ನ್ಯಾಯವಾಗಿ 170 ಕಟ್ಗಳನ್ನು ಮಾಡಬೇಕಾಗಿತ್ತಂತೆ! ಆದರೆ, ಜನಕ್ಕೆ ಮೋಸವಾಗಬಾರದು ಎಂಬ ಕಾರಣಕ್ಕೆ ಒಂದೇ ಒಂದು ಕಟ್ ಅನ್ನೂ ಮಾಡಿಲ್ಲವಂತೆ!


ಅಂತೂ ಚಿತ್ರ ಮೇ ತಿಂಗಳ 13ರಂದು ತೆರೆ ಕಾಣುತ್ತಿದೆ! ಅದು ಹೇಗೆ ಬಿಡುಗಡೆ ಮಾಡುತ್ತೀಯೋ ನೋಡೇ ಬಿಡುತ್ತೇವೆ ಎಂಬ ಬೆದರಿಕೆಯ ಸಂದೇಶಗಳು ವಿವೇಕ್ಗೆ ಬರುತ್ತಿವೆ. ಆದರೂ ಅವರು ಧೃತಿಗೆಟ್ಟಿಲ್ಲ. ಬೇರೊಂದು ಸಾಹಸಕ್ಕೂ ಕೈಹಾಕಿದ್ದಾರೆ. ಚಿತ್ರ ಬಿಡುಗಡೆಯಾಗುವ ಮೊದಲೇ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಅದನ್ನು ಪ್ರದರ್ಶಿಸಿದ್ದಾರೆ. ಮೊದಲು ಅವರು ಪ್ರಯತ್ನಿಸಿದ್ದು ಕ್ರಾಂತಿಯೇ ಉಸಿರಾಗಿರುವ ಜೆಎನ್ಯುನಲ್ಲಿ. ಆದರೆ ಸಿನಿಮಾ ವಿಭಾಗದ ಡೀನ್, ಸಮ್ಮತಿ ನೀಡಲಿಲ್ಲವಂತೆ! ಸೂಕ್ಷ್ಮ ವಾತಾವರಣದ ಅಲ್ಲಿಯ ಶಾಂತಿ ಕದಡಿಹೋದೀತೇನೋ ಎಂಬ ಭಯದಿಂದ. ಆದರೆ ವಿದ್ಯಾರ್ಥಿಗಳು ಬಿಡಬೇಕಲ್ಲ! ನಾಲ್ಕೂವರೆ ಸಾವಿರ ವಿದ್ಯಾರ್ಥಿಗಳು ಬಯಲು ಚಿತ್ರಮಂದಿರದ ನೆಲದ ಮೇಲೆ, ಮೆಟ್ಟಿಲುಗಳ ಮೇಲೆ, ಸಿಕ್ಕಸಿಕ್ಕಲ್ಲೆಲ್ಲ ಹತ್ತಿಕೂತು, ಮಂತ್ರಮುಗ್ಧರಾಗಿ ನೋಡಿ, ಚಿತ್ರ ಮುಗಿದ ಮೇಲೆ ಎದ್ದು ಕಿವಿಗಡಚಿಕ್ಕುವ ಹಾಗೆ ಚಪ್ಪಾಳೆ ಬಾರಿಸಿದ್ದು ದೊಡ್ಡ ಸುದ್ದಿಯಾಯಿತು! ಅಷ್ಟೇ ಅಲ್ಲ, ಗುಜರಾತಿನ ಗಾಂಧಿನಗರದ ಐಐಟಿ ವಿದ್ಯಾರ್ಥಿಗಳ ಸಲುವಾಗಿಯೂ ಚಿತ್ರವನ್ನು ಪ್ರದರ್ಶಿಸಲಾಯಿತು. ಅಲ್ಲೂ ಅದೇ ಪ್ರತಿಕ್ರಿಯೆ. ಬಾಂಬೆಯ ಐಐಟಿ ವಿದ್ಯಾರ್ಥಿಗಳೂ ಅದನ್ನು ನೋಡಿ ಮೆಚ್ಚಿದರು. ಕಾಲೇಜು ವಿದ್ಯಾರ್ಥಿಗಳ ಅಪಾರ ಬೆಂಬಲವೇ ಸದ್ಯಕ್ಕೆ ವಿವೇಕ್ಗೆ ಆಧಾರ. ಇದೇ ವಾರ, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ನಲ್ಲೂ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ. ಥಿಯೇಟರ್ನಲ್ಲಿ ಬಿಡುಗಡೆಯಾಗುವ ಮೊದಲೇ ಇಷ್ಟೊಂದು ಪ್ರದರ್ಶನಗಳನ್ನು ಏರ್ಪಡಿಸಿ ಯುವಜನತೆಯನ್ನು ತಲುಪಿರುವುದು ಒಂದು ಸಾಧನೆಯೇ ಸರಿ. ಆದರೂ ಅವರಲ್ಲಿ ಒಂದು ದಿಗಿಲಿದ್ದೇ ಇದೆ. ಬಿಡುಗಡೆಯಾದ ಮೇಲೂ ಚಿತ್ರವನ್ನು ಚಿತ್ರಮಂದಿರದಲ್ಲಿ ಉಳಿಯಗೊಡುತ್ತಾರೋ ಇಲ್ಲವೋ ಎನ್ನುವುದು! ಬಿಡುಗಡೆಯಾಗುವುದಂತೂ ಗೊತ್ತು. ಆಮೇಲಿನ ಅದರ ಉಳಿವಿನ ಬಗ್ಗೆ ಏನೇನೂ ಖಚಿತತೆಯಿಲ್ಲ. ಅದು ಹಾಗೆ ಬಂದು ಹೀಗೆ ಹೋಗಿಬಿಡುವಷ್ಟರಲ್ಲಿ ನೀವೊಮ್ಮೆ ನೋಡಿಬಿಡಿ.
ಇನ್ನೊಂದು ವಿಷಯವನ್ನೂ ಹೇಳಿದರು ವಿವೇಕ್. ಮಲ್ಟಿಪ್ಲೆಕ್ಸಿನ ಚಿತ್ರಮಂದಿರಗಳ ಮಾಲೀಕರ ಹತ್ತಿರ ಮಾತಾಡುವಾಗ, ಟಿಕೀಟಿನ ಹಣದಲ್ಲಿ ಕಡಿತ ಮಾಡಿದರೂ ತಮಗೆ ಅಭ್ಯಂತರವಿಲ್ಲ ಎಂದರಂತೆ. ದುಡ್ಡು ಮಾಡುವ ಉದ್ದೇಶವಿರುವವರು ಇಂಥ ಚಿತ್ರಗಳನ್ನು ಮಾಡುವುದು ಸಾಧ್ಯವೂ ಇಲ್ಲ. ಇರಲಿ, ಅದಕ್ಕೆ ಮಾಲೀಕರುಗಳು ಹೇಳಿಬಿಟ್ಟರಂತೆ - 'ಸರ್, ನಿಮ್ಮ ಟಿಕೇಟಿನ ದುಡ್ಡನ್ನು ಎಷ್ಟು ಬೇಕಾದರೂ ಕಡಿಮೆ ಮಾಡುತ್ತೇವೆ, ಆದರೆ ನಾವು ಮಾರುವ ಪಾಪ್ಕಾರ್ನ್ ದುಡ್ಡನ್ನು ಒಂದು ರೂಪಾಯಿಯಷ್ಟೂ ಕಡಿಮೆ ಮಾಡುವುದಿಲ್ಲ!' ಎಂದು. ಆಮೇಲೆ ಮಾತು ಮಾಲ್ ಸಂಸ್ಕೃತಿಯತ್ತ ಹೊರಳಿತು. ಅದನ್ನು ಈಗ ಹೇಳಿದರೆ ವಿಷಯಾಂತರವಾಗುತ್ತದೆ.
ಸಲ್ವಾ ಜುದಂನ ಬಗ್ಗೆ ಒಂದಷ್ಟು ಮಾಹಿತಿ. ಅದು ಬುಡಕಟ್ಟು ಜನಾಂಗದವರದ್ದೇ ಪಡೆ. ಛತ್ತೀಸ್ಗಢ ಸರ್ಕಾರದ ಬೆಂಬಲದಿಂದ, ನಕ್ಸಲರನ್ನು ಮಟ್ಟ ಹಾಕುವ ಸಲುವಾಗಿ ಹುಟ್ಟಿಕೊಂಡಿದ್ದು. ಅದಕ್ಕೆ ತರಬೇತಿ, ಶಸ್ತ್ರಾಸ್ತ್ರಗಳೆಲ್ಲ ದೊರಕುತ್ತಿದ್ದುದು ಸರ್ಕಾರದಿಂದಲೇ. 2011ರಲ್ಲಿ ಸರ್ವೋಚ್ಚ ನ್ಯಾಯಾಲಯ ಅದನ್ನು ನಿಷೇಧಿಸುವವರೆಗೂ ಬಹಳ ಸಕ್ರಿಯವಾಗಿತ್ತು. ಅದರ ಸಂಸ್ಥಾಪಕ ಮಹೇಂದ್ರ ಕರ್ಮ 2013ರಲ್ಲಿ ನಕ್ಸಲರಿಂದಲೇ ಬರ್ಬರವಾಗಿ ಹತ್ಯೆಯಾದರು.
ಸಿದ್ಧಾರ್ಥನಿಗೆ ಜ್ಞಾನೋದಯವಾಗಿ ಬುದ್ಧನಾದ. ಲಾಲ್ ಸಲಾಂ ಎಂದು ಅರಚುವ 'ಬುದ್ಧು'ಗಳಿಗೆ ಜ್ಞಾನೋದಯವಾಗುವುದೇ ಇಲ್ಲವೇನೋ! ಒಟ್ಟಿನಲ್ಲಿ, ‘Buddha In A Traffic Jam’ is a must watch!

No comments:

Post a Comment