Monday 27 June 2016

ಬ್ರಾಹ್ಮಣನಿಗೆ ಬ್ರಾಹ್ಮಣನೇ ಶತ್ರು!

ಮಾತನ್ನು ಹೇಳಲೇಬೇಕೆನಿಸುತ್ತಿದೆ. ಅವತ್ತು ಮತ್ತೂರನ್ನೆಲ್ಲ ಸುತ್ತು ಹಾಕಿ ವಿಷಯ ಸಂಗ್ರಹ ಮಾಡಿ ದಣಿದು ರಾತ್ರಿ ಟಿವಿ ಮುಂದೆ ಕೂತೆ. ವಿಷಯದ ಪ್ರಸಾರವನ್ನೇ ದತ್ತು ಪಡೆದ ಕೆಲ ಚಾನೆಲ್ಗಳಿವೆಯಲ್ಲ, ಅವು ಏನು ಹೇಳುತ್ತಿವೆಯೋ ನೋಡೋಣವೆಂಬ ಕುತೂಹಲ ನನಗೆ. ನೋಡಿದರೆ, ಮೇಕೆಯ ಒಡೆಯ ಕುಮಾರ ಹಾಗೂ ಅವನ ಮೇಕೆಯ ನೇರಪ್ರಸಾರ! ಅವನಿಗಾದರೂ ವಿಷಯ ಅರ್ಥವಾಗುತ್ತೆ, ಆದರೆ ಪಾಪದ ಮೇಕೆಗೆಲ್ಲಿ ಹಣೆಬರಹ? ಮಧ್ಯಾಹ್ನವಷ್ಟೇ ಕುಮಾರ ಅಲವತ್ತುಕೊಂಡಿದ್ದ. 'ಮೇಕೆಯನ್ನ ಎಲ್ಲರಿಗೂ ತೋರಿಸಿ ತೋರಿಸಿ ಸಾಕಾಗಿದೆ ಮೇಡಂ. ಒಳ್ಳೆ ಕೆಲಸಕ್ಕೆ ಅಂತ ಕೊಟ್ಟಿದ್ದೇ ದೊಡ್ಡ ತಪ್ಪಾಗೋಯ್ತು ನೋಡಿ.' ಅಂತ. ಈಗ ಮತ್ತೆ ಅವನನ್ನು ಎಳೆದುಕೊಂಡು ಬಂದಿದ್ದರು. ಬಹುಶ ಐಶ್ವರ್ಯ ರೈಳನ್ನು ಬಿಟ್ಟರೆ ನಮ್ಮ ಮಾಧ್ಯಮದವರು ಹೀಗೆ ಮುಗಿಬಿದ್ದು ನೋಡಿದ್ದು ಮೇಕೆಯನ್ನೇ ಏನೋ! ಯಾರೋ ಪುಣ್ಯಾತ್ಮರು ಫೋಟೋದಲ್ಲಿದ್ದ ಮೇಕೆಯನ್ನೂ ಜೀವಂತ ಮೇಕೆಯನ್ನೂ ಹೊಂದಿಸಿ ನೋಡುತ್ತಿದ್ದರು. ಅದರ ಬಾಲ, ತಲೆ, ಮೈಬಣ್ಣ ಎಲ್ಲವನ್ನೂ ಇಂಚು ಪಟ್ಟಿ ಹಿಡಿದು ಅಳತೆ ತೆಗೆದಿರುವವರ ಹಾಗೆ ಮಾತನಾಡುತ್ತಿದ್ದರು. ಅಷ್ಟರಲ್ಲೇ ಕಿವಿಗೆ ಅಪ್ಪಳಿಸಿತು ವಿದ್ವಾಂಸರೊಬ್ಬರ ದನಿ. 'ಇದು ಸೋಮಯಾಗ ಅಲ್ಲವೇ ಅಲ್ಲ. ಅದಕ್ಕೆ ಬಾಡಿಗೆ ಮೇಕೆ ತರುವುದು ಸಿಂಧುವಲ್ಲ.' ಎಂದು ಹೇಳಿ, ಜೊತೆಗೆ ಇನ್ನೂ ಏನೇನೋ ಸೇರಿಸುತ್ತಾ, ತಮ್ಮ ಪ್ರಕಾರ ಸೋಮಯಾಗವನ್ನು ಹೇಗೆ ಮಾಡಬೇಕೆಂಬುದನ್ನು ವಿವರಿಸುತ್ತಿದ್ದರು.
ಕೇಳಿ ನಿಜವಾಗಿಯೂ ಮೈ ಉರಿದುಹೋಯಿತು. ಎಲ್ಲರೂ ಸೇರಿ ಬ್ರಾಹ್ಮಣರ ಮೇಲೆ ಮುಗಿಬಿದ್ದಿರುವ ಹೊತ್ತಿನಲ್ಲಿ, ಸತ್ಯಾಸತ್ಯತೆಯನ್ನು ಅರಿಯುವ ಒಂದೇ ಉದ್ದೇಶದಿಂದ ನನ್ನ ಖಾಸಗಿ ಕೆಲಸವನ್ನು ಬದಿಗೊತ್ತಿ ಮತ್ತೂರು ಸುತ್ತಿದ್ದೆ. ಇಲ್ಲಿ ನೋಡಿದರೆ ನಮ್ಮ ವಿದ್ವಾಂಸರುಗಳೇ ಸಾಕ್ಷಾತ್ ವಿಧ್ವಂಸಕರಾಗಿಬಿಟ್ಟಿದ್ದಾರೆ! ತಮ್ಮವರೇ ಮಾಡಿದ ಯಾಗವನ್ನು ಟಿವಿ ಚಾನೆಲ್ಗಳ ಮುಂದೆ ಹಳಿಯುತ್ತಿದ್ದಾರೆ. ತಮ್ಮ ವ್ಯಾಖ್ಯಾನವೇ ಸರಿ ಎಂದು ತೋರಿಸುವ ಉಮೇದು! ತಮ್ಮ ಪಾಂಡಿತ್ಯವನ್ನು ಜಗಜ್ಜಾಹೀರುಗೊಳಿಸುವ ತವಕ! ವೇದಗಳನ್ನು ಓದಿಕೊಂಡಿರದಿದ್ದರೂ, ಯಾವ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂಬ, ನನಗಿರುವ common sense ಅವರ ವಿದ್ವತ್ತಿಗಿಂತ ಎಷ್ಟೋ ವಾಸಿ ಎನಿಸಿಬಿಟ್ಟಿತು! ತಮ್ಮ ಜ್ಞಾನಸಂಪತ್ತನ್ನು ಹರವಿಡಲು ಕೋಳಿಜಗಳಗಳಲ್ಲಿ ಭಾಗವಹಿಸಬೇಕೇ? ಜಗತ್ತಿನೆದುರು ತಮ್ಮವರನ್ನೇ ಮಾತಿನಲ್ಲಿ ಕುಕ್ಕಿ ಹುಳುಕು ತೆಗೆಯಬೇಕೆ? ಇವರೊಬ್ಬರ ಗೆಲುವು ಇಡೀ ಸಮುದಾಯದ ಸೋಲಲ್ಲವೇ? ಹೋಗಲಿ, ಇವರು ತಮ್ಮ ಬುದ್ಧಿ ಖರ್ಚು ಮಾಡಿ ಹೇಳಿದರು ಎಂಬ ಕಾರಣಕ್ಕೆ ಚಾನೆಲ್ಗಳವರು ಇವರು ಹೇಳಿದ ರೀತಿಯಲ್ಲಿ ಯಥಾವತ್ತು ಇನ್ನೊಂದು ಯಾಗ ಮಾಡಿಸಿಬಿಡುತ್ತಾರೆಯೇ? ಟಿವಿ ಚಾನೆಲ್ಗಳ ಟಿಆರ್ಪಿ ಹಸಿವನ್ನು ನೀಗಿಸುವ ಆಹಾರವಾಗಿ ಬಳಕೆಯಾಗುತ್ತಿದ್ದೇವೆಂಬ ಪರಿಜ್ಞಾನವಾದರೂ ಬೇಡವೇ? ವಿಷಯ ಅಂತಲೇ ಅಲ್ಲ. ಉಳಿದವುಗಳಲ್ಲೂ ಅಷ್ಟೇ. ಉದಾಹರಣೆಗೆ, ಸಾಹಿತಿಯೊಬ್ಬರು ಒಂದು ವಿಷಯವಾಗಿ ಏನನ್ನಾದರೂ ಬರೆದರು ಅಂತಿಟ್ಟುಕೊಳ್ಳಿ. ಮರುಕ್ಷಣವೇ ಅದನ್ನು ಮತ್ತೊಬ್ಬ ಸಾಹಿತಿ ಖಂಡಿಸಲನುವಾಗುತ್ತಾರೆ. ವಾಗ್ಮಿಯೊಬ್ಬರು ಒಂದು ಹೇಳಿಕೆ ಕೊಟ್ಟರೆ ನಿಂತನಿಲುವಲ್ಲೇ ಅದಕ್ಕೊಂದು ಟೀಕೆ ಹುಟ್ಟು ಹಾಕುವ ಚತುರ ಬ್ರಾಹ್ಮಣರಿರುತ್ತಾರೆ. ಅಲ್ಲವೇ ಮತ್ತೆ? ಭಗವಂತ ತಲೆಯ ತುಂಬ ಧಾರಾಳವಾಗಿ ತುಂಬಿ ಕಳುಹಿಸಿರುವ ಬುದ್ಧಿ ಖರ್ಚಾಗುವುದು ಬೇಡವೇ? ಬೇರೆಯವರು ಹೇಳಿದ್ದು ಸರಿ ಎಂದು ಒಪ್ಪಿಕೊಂಡರೆ ಇವರು ವರ್ಷಗಟ್ಟಳೆ ಓದಿ ಗಳಿಸಿಕೊಂಡ ವಿದ್ಯೆಗೆ ಅವಮಾನವಲ್ಲವೇ?


ವಾಸ್ತವವಾಗಿ ಬ್ರಾಹ್ಮಣರ ನಡು ಮುರಿಯಲು ಯಾವ ಮುಸ್ಲಿಮನೂ, ಮತಾಂತರಿಯೂ ಬೇಕಿಲ್ಲ. ವಿಧ್ವಂಸಕರೇ ಸಾಕು. ಯಾರಾದರೂ ಮಾಧ್ಯಮದವರೋ ಅಥವಾ ಸೆಕ್ಯುಲರ್ ಮಂದಿಯೋ ಇವರಿಗೆ 'ಕೀ' ಕೊಟ್ಟು ತಿರುಗಿಸಿಬಿಟ್ಟರೆ ಸಾಕು, ಅವರ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಲೇ ಇರುತ್ತಾರೆ. ಒಗ್ಗಟ್ಟಾಗಿರಬೇಕೆಂಬ, ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ಬೇರೆಯವರಿಗೆ ಗೊತ್ತಾಗಬಾರದೆಂಬ ಕನಿಷ್ಠ ಸಾಮಾನ್ಯಜ್ಞಾನವಿಲ್ಲದಿದ್ದ ಮೇಲೆ ಎಷ್ಟು ಪಾಂಡಿತ್ಯವಿದ್ದರೇನು ಬಂತು? ವಿಭೂತಿಯನ್ನು ನೋಡಿದರೆ ನಾಮಕ್ಕೆ ಸಂಕಟ! ನಾಮವನ್ನು ನೋಡಿದರೆ ಮುದ್ರೆಗೆ ಇರುಸುಮುರುಸು! ಮಠಗಳಲ್ಲೂ ಅಷ್ಟೇ. ಮುಖ ನೋಡಿ ಮುಲಾಜಿಲ್ಲದೆ ಮೂರಡಿ ಮೇಲಿನಿಂದ ತೀರ್ಥ ಸುರಿಯುವ ಮಂದಿ ಇವರು! ಇದೆಲ್ಲ ಎಂದಿಗಾದರೂ ಸರಿಹೋದೀತಾ?
ಗಳಿಸಿಕೊಂಡಿರುವ ವಿದ್ಯೆಯನ್ನು ವಿನಿಯೋಗಿಸಲು ಟಿವಿ ಚಾನೆಲ್ಗಳೇ ಆಗಬೇಕೆಂದಿಲ್ಲ. ಈಗಿನ ನಮ್ಮ ಶಿಕ್ಷಣ ಪದ್ಧತಿಯತ್ತ ಒಮ್ಮೆ ಕಣ್ಣು ಹಾಯಿಸಿದರೆ ಸಾಕು, ಬೇಕಾದಷ್ಟು ಮಾರ್ಗಗಳು ಗೋಚರಿಸುತ್ತವೆ. ಧಾರ್ಮಿಕ ಶಿಕ್ಷಣದ ಗಂಧ-ಗಾಳಿಯೂ ಇಲ್ಲದ ಇಂದಿನ ಪೀಳಿಗೆಗೆ ವೇದಗಳ ಅರಿವು ಮೂಡಿಸಬಹುದಲ್ಲ? ಬೇಸಿಗೆ ರಜೆಯಲ್ಲಿ ವಿಧಿಯಿಲ್ಲದೆ ಸಮ್ಮರ್ ಕ್ಲಾಸುಗಳಿಗೆ ಹೋಗುವ ಮಕ್ಕಳನ್ನು ಒಂದು ಕಡೆ ಗುಡ್ಡೆ ಹಾಕಿಕೊಂಡು ಅವುಗಳಿಗೆ ಶಿಕ್ಷಣ ಕೊಡಬಹುದಲ್ಲ? ಎಲ್ಲಕ್ಕಿಂತ ಹೆಚ್ಚಾಗಿ, ಅಭಿಪ್ರಾಯಭೇದವಿರುವ ವಿಷಯಗಳ ಬಗ್ಗೆ ಒಟ್ಟಾಗಿ ಕೂತು ಚರ್ಚಿಸಿ ಎಲ್ಲರಿಗೂ ಒಪ್ಪಿಗೆಯಾಗುವ ನಿರ್ಣಯಕ್ಕೆ ಬರಬಹುದಲ್ಲ? ಒಬ್ಬರು ಯಾಗ ಮಾಡುವವರೆಗೂ ಕಾದು ಕೂತು, ಆಮೇಲೆ ತೋಳಗಳ ಹಾಗೆ ಅವರ ಮೇಲೆರಗುವ ಅವಶ್ಯಕತೆ ಏನಿದೆ? ನಾಲ್ಕು ದಿನ ಕಳೆದು ವಿವಾದ ತಣ್ಣಗಾದ ಮೇಲೆ, ಮತ್ತೊಂದು ಯಾಗ ನಡೆಯುವವರೆಗೂ ಇವರನ್ನು ಯಾರಾದರೂ ತಿರುಗಿ ನೋಡುತ್ತಾರಾ?
ನಮಗೆ ಮಾದರಿಯಾಗಬಲ್ಲ ಒಂದು ಉದಾಹರಣೆಯನ್ನು ಗಮನಿಸಿ. ನಮ್ಮಲ್ಲಿ ತ್ರಿಮತಸ್ಥರಿರುವ ಹಾಗೆ ಮುಸಿಮರಲ್ಲಿ ನಾಲ್ಕು School Of Thoughtಗಳಿವೆ. ಅವುಗಳೆಂದರೆ, ಇಮಾಮ್ ಹನೀಫ, ಇಮಾಮ್ ಶಫಿ, ಇಮಾಮ್ ಮಲ್ಲಿಕ್ ಹಾಗೂ ಇಮಾಮ್ ಹನ್ಬಲ್‍‍ರದ್ದು. ಕುರಾನ್, ಹದಿಸ್, ಸುನ್ನ ಹಾಗೂ ಶರಿಯಾಗಳು ಎಲ್ಲರಿಗೂ ಏಕಪ್ರಕಾರವಾಗೇ ಅನ್ವಯವಾದರೂ ಸಣ್ಣ ಪುಟ್ಟ ಅಭಿಪ್ರಾಯಭೇದಗಳು ಅವರಲ್ಲೂ ಇವೆ. ಉದಾಹರಣೆಗೆ, ಇಸ್ಲಾಮಿಗೆ ಮತಾಂತರ ಹೊಂದಲಿಚ್ಛಿಸದ ಕಾಫಿರರು ಕರ ಕೊಟ್ಟು (ಅರೇಬಿಕ್ನಲ್ಲಿ ಅದನ್ನು ಜಿಸ್ಯಾಹ್ ಎನ್ನುತ್ತಾರೆ) ಬದುಕಬಹುದು ಎಂಬುದನ್ನು ಇಮಾಮ್ ಹನೀಫ ಮಾತ್ರ ಬೆಂಬಲಿಸುತ್ತಾರೆ. ಉಳಿದವರದ್ದು ಇದಕ್ಕೆ ಕಟ್ಟಾ ವಿರೋಧ. ಅವರ ಪ್ರಕಾರ ಅಂಥ ಕಾಫಿರರಿಗೆ ಬದುಕುವ ಅವಕಾಶವನ್ನೇ ನೀಡಬಾರದು! ಅಭಿಪ್ರಾಯಭೇದವಿದೆಯೆಂದ ಮಾತ್ರಕ್ಕೆ ಅವರು ಒಬ್ಬರನ್ನೊಬ್ಬರು ಖಂಡಿಸುವುದಿಲ್ಲ. ಮತ್ತೂಬ್ಬರದು ತಪ್ಪೆಂದು ಸಾಬೀತು ಮಾಡಲು ಪ್ರಯತ್ನಿಸುವುದಿಲ್ಲ. ಅಷ್ಟ್ಯಾಕೆ, ಇಮಾಮನೊಬ್ಬ ಹೊರಡಿಸುವ ಫತ್ವಾದ ಬಗ್ಗೆ ಬೇರೊಬ್ಬ ಅಪ್ಪಿತಪ್ಪಿಯಾದರೂ ಸೊಲ್ಲೆತ್ತುವುದನ್ನೆಲ್ಲಾದರೂ ಕೇಳಿದ್ದೀರಾ? ಅದರಲ್ಲೆಷ್ಟೇ ತಪ್ಪಿರಲಿ, ಉಳಿದವರು ತೆಪ್ಪಗಿರುತ್ತಾರೆ! ತಮ್ಮವರನ್ನು ಬಿಟ್ಟುಕೊಡುವುದಿಲ್ಲ.
ತೀರ ಮೊನ್ನೆ ನನಗಾದ ಇನ್ನೊಂದು ಅನುಭವ. ಶಿವಮೊಗ್ಗದಿಂದ ರೈಲಿನಲ್ಲಿ ಬಂದು ಅಲ್ಲಿಂದ ಮನೆಗೆ ಬರುವ ಸಲುವಾಗಿ ಕ್ಯಾಬ್ ಹತ್ತಿದೆ. ಹೀಗೇ ಲೋಕಾಭಿರಾಮದ ಮಾತನ್ನಾಡುತ್ತಿದ್ದ ಕ್ಯಾಬ್ ಡ್ರೈವರ್ಗೆ ನಾನು ಬ್ರಾಹ್ಮಣಳೆನ್ನುವುದು ಗೊತ್ತಾಗಿರಬೇಕು. ಕೇಳಿದ, 'ಮೇಡಮ್, ರೈತನಿಂದ ಅನ್ನವಾದರೂ ಸಿಗುತ್ತೆ. ಕುರುಬನಿಂದ ತಿನ್ನಲು ಕುರಿ ಸಿಗುತ್ತೆ. ಬ್ರಾಹ್ಮಣರಿಂದ ಸಮಾಜಕ್ಕೆ ಏನು ಸಿಗುತ್ತೆ?' ನಾನು ಬೇಕಂತಲೇ ಸುಮ್ಮನಾದೆ. ನನ್ನ ಮೌನ ಅವನಿಗೆ ಪುಷ್ಠಿ ನೀಡಿತೇನೋ, ಸುಮಾರು ಹತ್ತು ನಿಮಿಷ ಶೋಷಣೆಯ, ಅಂಬೇಡ್ಕರ್ ಬಗ್ಗೆ ಮಾತನಾಡಿದ. ಕೇಳುವಷ್ಟು ಕೇಳಿ ಕೊನೆಗೊಮ್ಮೆ ರೋಸಿಹೋಗಿ, ‘ಭೂಮಿಯ ಮೇಲಿರುವ ಬ್ರಾಹ್ಮಣರನ್ನೆಲ್ಲ ಅಳಿಸಿ ಹಾಕಿಬಿಟ್ಟರೆ ನಿಮ್ಮ ಸಮಸ್ಯೆಗಳಿಗೆಲ್ಲ ಪರಿಹಾರ ಸಿಕ್ಕಿಬಿಡುತ್ತದಾ?' ಎಂದೆ. ನಿರುತ್ತರನಾದ. ಅಲ್ಲಿಂದ ಮುಂದೆ ನಾನು ಮಾತನಾಡಿದೆ. ಅವನು ಕೇಳಿಸಿಕೊಂಡ. ಅಂಬೇಡ್ಕರ್ರನ್ನು ಹೆಜ್ಜೆಹೆಜ್ಜೆಗೂ ಕೈಹಿಡಿದು ಕಾಪಾಡಿದ್ದು, ಅವರನ್ನು ಬೆಳೆಯಲು ಬಿಟ್ಟಿದ್ದು, ಸಂವಿಧಾನದ ಕರಡು ಪ್ರತಿಯನ್ನು ಬರೆದಿದ್ದೂ ಬ್ರಾಹ್ಮಣರೇ ಎಂಬುದನ್ನೆಲ್ಲ ಸಾದ್ಯಂತವಾಗಿ ವಿವರಿಸಿದೆ. ಮೀಸಲಿನ ದುರ್ಬಳಕೆಯಾಗುತ್ತಿರುವ ಪರಿಯನ್ನು ಹೇಳಿದಾಗಲಂತೂ ಅವನು ಹೇಳಿದ್ದು, 'ಅಯ್ಯೋ, ಇದನ್ನೆಲ್ಲ ಬ್ರಾಹ್ಮಣರು ನೀವು ಓದಿ ನಮಗೆ ಬಿಡಿಸಿ ಹೇಳಬೇಕು. ಇಲ್ಲದಿದ್ದರೆ ಸತ್ಯ ನಮಗೆ ಹೇಗೆ ಗೊತ್ತಾಗುತ್ತೆ?' ಎಂದು. ಅವನು ತಾರಕದಲ್ಲಿ ಕಿರುಚಿ ಮಾಡಿದ್ದ ವಾದಕ್ಕೆ ನನ್ನ ಪ್ರತಿವಾದ ಮೆಲುದನಿಯ ವಿವರಣೆಯೇ ಆಗಿದ್ದರೂ ಬ್ರಾಹ್ಮಣರ ಅಗತ್ಯವನ್ನು ಅವನೇ ಹೆಜ್ಜೆಹೆಜ್ಜೆಗೂ ಅನುಮೋದಿಸುತ್ತಿದ್ದುದು ಸ್ಪಷ್ಟವಾಗಿತ್ತು. ನಾನು ಹೇಳಲು ಹೊರಟಿರುವುದು ಇಷ್ಟೇ. ದುರ್ಬುದ್ಧಿಜೀವಿಗಳು ಎಂದೋ ಬಿತ್ತಿರುವ ವಿಷಬೀಜ ಇಂದು ರಾಕ್ಷಸಾಕಾರವಾಗಿ ಬೆಳೆದು ನಿಂತಿದೆ. ಒಂದು ಸಣ್ಣ ಕಾರಣ ಸಿಕ್ಕರೂ ಸಾಕು, ಬ್ರಾಹ್ಮಣರನ್ನು ಬಡಿದು ಬಾಯಿಗೆ ಹಾಕಿಕೊಳ್ಳಲು ನೂರಾರು ಮಂದಿ ಸಿದ್ಧರಿದ್ದಾರೆ. ಕ್ಯಾಬ್ಡ್ರೈವರ್ನಿಗೆ ಅರ್ಥಮಾಡಿಸುವಷ್ಟು ತಿಳುವಳಿಕೆ ನನಗಿತ್ತು. ಇಲ್ಲದಿದ್ದರೆ ಅವನ ಮಾತಿನಲ್ಲಿದ್ದ ರೋಷ, ಆವೇಶಕ್ಕೆ ಭಯಗೊಳ್ಳುವ ಸಾಧ್ಯತೆಯೇ ಹೆಚ್ಚಿದ್ದಿದ್ದು.
ನೆನಪಿಡಿ, ದಿನಂಪ್ರತಿ ಜನರೊಂದಿಗೆ ಒಡನಾಡುವಾಗ, ಇಂಥ ಸಂದರ್ಭಗಳು ಎದುರಾದಾಗ ನಮ್ಮ ಜೊತೆ ವಿದ್ವಾಂಸರುಗಳಿರುವುದಿಲ್ಲ. ನಮ್ಮ ವಾಗ್ಯುದ್ಧದ ತಯಾರಿಯನ್ನು ನಾವೇ ಮಾಡಿಕೊಳ್ಳಬೇಕಾಗುತ್ತದೆ. ಆದರೆ ನಮಗೆ ಬೇಕಾದ ಸತ್ಯಾಂಶಗಳನ್ನು ಒದಗಿಸುವ ಹೊಣೆ ಅವರದ್ದೇ ಆಗಿರುತ್ತದೆ. ಹೊಣೆಯನ್ನು ಈಗೆಷ್ಟು ಮಂದಿ ಸರಿಯಾದ ಅರ್ಥದಲ್ಲಿ ನಿಭಾಯಿಸುತ್ತಿದ್ದಾರೆ? ವೇದಬ್ರಹ್ಮರುಗಳಿಗೂ ಸಂಸ್ಕೃತ ವಿದ್ವಾಂಸರುಗಳಿಗೂ ಇರುವ ಮುನಿಸು ಯಾವತ್ತು ಮರೆಯಾಗುತ್ತದೆ? ಒಮ್ಮತವೆಂಬ ವೈಕುಂಠದ ದ್ವಾರ ತೆರೆದುಕೊಂಡು ನಮಗೆ ಯಾವಾಗ ಮೋಕ್ಷ ಪ್ರಾಪ್ತಿಯಾಗುತ್ತದೆ? ಸೋಮಯಾಗದ ವಿಷಯಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳನ್ನೇ ನೋಡಿ. ಸಿಕ್ಕಿದ್ದೇ ಅವಕಾಶ ಎಂದು ಭಗವಾನ(ರರು)ಗಳೆಲ್ಲ ತಮ್ಮ ನಾಲಗೆಯ ತೀಟೆ ತೀರಿಸಿಕೊಳ್ಳುತ್ತಿದ್ದಾರೆ. ಯಜ್ಞ-ಯಾಗಾದಿಗಳನ್ನೆಲ್ಲ ಬಹಿಷ್ಕರಿಸಿ ಎಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಮುಸ್ಲಿಮರ ವಿಷಯದಲ್ಲಿ ಮೂಕ ಬಸವಗಳಾಗಿಬಿಡುವ ಇವರಿಗೆ ಬ್ರಾಹ್ಮಣರ ವಿಷಯದಲ್ಲಿ ಇಷ್ಟೊಂದು ಸದರ ಹುಟ್ಟಿಕೊಳ್ಳಲು ಕಾರಣರಾರು? ನಮ್ಮ ವೈಮನಸ್ಸೇ ತಾನೆ?

ನಾಮದ ಗೀಟುಗಳನ್ನು, ವಿಭೂತಿ ಪಟ್ಟೆಯ ಗೆರೆಗಳನ್ನು ನೋಡಿ ಹೆಮ್ಮೆಪಟ್ಟುಕೊಳ್ಳುವ ಕಾಲ ಯಾವತ್ತೋ ಮುಗಿದಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ, 'ಒಂದಾನೊಂದು ಕಾಲದಲ್ಲಿ, ಬ್ರಾಹ್ಮಣರು ಎಂದು ಕರೆಸಿಕೊಳ್ಳುತ್ತಿದ್ದ ಜನರಿದ್ದರಂತೆ.' ಎಂಬ ಕಥೆ ಹುಟ್ಟಿಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ! ತ್ರಿಮತಸ್ಥರೇ, ಇನ್ನಾದರೂ ಒಟ್ಟಾಗಿ!

No comments:

Post a Comment