Monday 27 June 2016

ಇಂದಿರಾ ಆಗುವುದು ಅಂದುಕೊಂಡಷ್ಟು ಸುಲಭವಲ್ಲ!

ಯುಪಿಎ ಆಡಳಿತಾವಧಿಯ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. 2G, ಕಲ್ಲಿದ್ದಲು, ನ್ಯಾಷನಲ್ ಹೆರಾಲ್ಡ್ ಹಗರಣಗಳ ಪಟ್ಟಿಗೆ ಹೊಸದೊಂದು ಸೇರ್ಪಡೆಯಾಗಿದೆ. ಅದೇ, ಬಹುಕೋಟಿ ಮೌಲ್ಯದ ಹೆಲಿಕಾಪ್ಟರ್ ಹಗರಣ! ಪ್ರಕರಣವನ್ನು ಸ್ಥೂಲವಾಗಿ ಹೇಳಬೇಕೆಂದರೆ, 2000ರಲ್ಲಿ ಭಾರತ ಸರ್ಕಾರ ತನ್ನ ವಿವಿಐಪಿಗಳ ಓಡಾಟಕ್ಕೋಸ್ಕರ ಹೊಸ ಹೆಲಿಕಾಪ್ಟರ್ಗಳನ್ನು ಕೊಳ್ಳಲು ಬಯಸಿತ್ತು. ಹೆಲಿಕಾಪ್ಟರ್ ತಯಾರಿಕಾ ಕಂಪೆನಿಗಳ ಟೆಂಡರ್ ಕರೆದು ಎಲ್ಲ ತಾಂತ್ರಿಕ ಅಗತ್ಯಗಳನ್ನೂ ಪರಿಶೀಲಿಸಿದ ಮೇಲೆ, 2007ರಲ್ಲಿ ಇಟಲಿಯ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪೆನಿಯಿಂದ ಖರೀದಿಸುವುದು ನಿಕ್ಕಿಯಾಯಿತು. ಆಗ ಅಧಿಕಾರದಲ್ಲಿದ್ದಿದ್ದು ಯುಪಿಎ ಸರ್ಕಾರ. 2012ರಲ್ಲಿ ನಾಲ್ಕು ಹೆಲಿಕಾಪ್ಟರ್ಗಳು ಭಾರತಕ್ಕೆ ಬಂದೂ ಬಿಟ್ಟವು. ಆದರೆ 2013ರಲ್ಲಿ ಇಟಲಿ ಸರ್ಕಾರಕ್ಕೆ, ಪ್ರಕರಣದಲ್ಲೆಲ್ಲೋ ನಡೆದಿರಬಹುದಾದ ಭ್ರಷ್ಟಾಚಾರದ ವಾಸನೆ ಮೂಗಿಗೆ ಬಡಿಯಿತು. ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪೆನಿ, ಭಾರತದ ಟೆಂಡರ್ ಪಡೆಯುವ ಸಲುವಾಗಿ ಅಡ್ಡದಾರಿ ಹಿಡಿದಿತ್ತು ಎಂಬ ಅದರ ಗುಮಾನಿ ದಿನದಿನಕ್ಕೂ ಬಲವಾಗುತ್ತಲೇ ಹೋಯಿತು. ಕೊನೆಗೊಂದು ದಿನ ಅದು, ಅಗಸ್ಟಾ ವೆಸ್ಟ್ ಲ್ಯಾಂಡ್ ಮಾತೃ ಕಂಪೆನಿ ಫಿನ್ ಮೆಕಾನಿಕಾದ ಸಿಇಓರನ್ನು ಬಂದಿಸಿತು. ತಕ್ಷಣವೇ ಎಚ್ಚೆತ್ತ ಯುಪಿಎ ಸರ್ಕಾರ, ಹೆಲಿಕಾಪ್ಟರ್ ಒಪ್ಪಂದಕ್ಕೆ ಮಂಗಳ ಹಾಡಿ, ತಾನು ಕೊಟ್ಟಿದ್ದ ಮುಂಗಡ ಹಣವನ್ನೆಲ್ಲ ವಾಪಸ್ ಪಡೆಯಿತು.

ಆದರೆ ಇಟಲಿ ಸರ್ಕಾರ ತನಿಖೆಯನ್ನು ಕೈಬಿಡಲಿಲ್ಲ. ಭಾರತಕ್ಕೆ ಹೆಲಿಕಾಪ್ಟರ್ಗಳನ್ನು ಮಾರುವ ಒಪ್ಪಂದವನ್ನು ಕುದುರಿಸಿದ ಮಧ್ಯವರ್ತಿಗಳ ಜಾಡು ಹಿಡಿದು ಹೊರಟಿತು. ಆಗ ಬೆಳಕಿಗೆ ಬಂದಿದ್ದು, ರಾಲ್ಫ್ ಹಶ್ಕೆ, ಕಾರ್ಲೋಸ್ ಗೆರೋಸಾ ಹಾಗೂ ಕ್ರಿಸ್ಟಿಯನ್ ಮಿಚೆಲ್ ಎಂಬ ದಲ್ಲಾಳಿಗಳು ನೂರಾರು ಕೋಟಿ ರೂಪಾಯಿ ಲಂಚವನ್ನು ಕೆಲ ಭಾರತೀಯ ರಾಜಕಾರಣಿಗಳಿಗೆ ನೀಡಿದ್ದಾರೆನ್ನಲಾದ ಸತ್ಯ. ವಿಷಯ ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ ಕ್ರಿಸ್ಟಿಯನ್ ಮಿಶೆಲ್ ತನ್ನ ಕೈಯ್ಯಾರೆ ಬರೆದಿರುವ, ' ಒಪ್ಪಂದದ ಹಿಂದಿರುವ ಶಕ್ತಿಯೇ ಸೋನಿಯಾ ಗಾಂಧಿ. ಆಕೆಗೆ ಹತ್ತಿರವಿರುವವರನ್ನು ಗುರಿಯಾಗಿಟ್ಟುಕೊಂಡು ಮಾತುಕತೆ ಮುಂದುವರೆಸಿ.' ಎಂಬರ್ಥದ ಪತ್ರ ಇಟಲಿಯ ನ್ಯಾಯಾಲಯದ ಕೈಗೆ ಸಿಕ್ಕಿತು. ಜೊತೆಗೇ, ಸೋನಿಯಾರ ರಾಜಕೀಯ ಸಲಹೆಗಾರ ಅಹಮದ್ ಪಟೇಲ್, ಭಾರತೀಯ ವಾಯು ಸೇನೆಯ ಅಂದಿನ ಮುಖ್ಯಸ್ಥ ಎಸ್.ಪಿ ತ್ಯಾಗಿ, ಅಂದಿನ ರಕ್ಷಣಾ ಸಚಿವ ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿ ಮನಮೋಹನ ಸಿಂಗ್, ಆಸ್ಕರ್ ಫರ್ನಾಂಡಿಸ್‍‍ ಇವರೆಲ್ಲರೂ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನುತ್ತದೆ ನ್ಯಾಯಾಲಯ. 225 ಪುಟಗಳ ಅದರ ತೀರ್ಪಿನಲ್ಲಿ, 17 ಪುಟಗಳು ಎಸ್ಪಿ ತ್ಯಾಗಿಯವರಿಗೇ ಮೀಸಲಾಗಿವೆ. ತೀರ್ಪಿನಲ್ಲಿ ಉಲ್ಲೇಖಿಸಲಾಗಿರುವ 'ಸಿನೋರಾ ಗಾಂಧಿ' (ಶ್ರೀಮತಿ ಎನ್ನುವುದಕ್ಕೆ ಇಟಾಲಿಯನ್ನಲ್ಲಿ ಸಿನೋರಾ ಎನ್ನುತ್ತಾರೆ) ಎಂದರೆ ಸೋನಿಯಾರೇ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಅಂದಿನ ಭದ್ರತಾ ಸಲಹೆಗಾರ ಎಂ.ಕೆ ನಾರಾಯಣನ್ ಹೆಸರೂ ತೀರ್ಪಿನಲ್ಲಿ ಉಲ್ಲೇಖವಾಗಿದೆ. ಆದ್ದರಿಂದಲೇ ಭಾರತದೆಲ್ಲೆಡೆ ಈಗ ಕೋಲಾಹಲ. ಸುಬ್ರಮಣಿಯನ್ ಸ್ವಾಮಿ ರಾಜ್ಯಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸುತ್ತಿದ್ದ ಹಾಗೇ ಕಾಂಗ್ರೆಸ್ಸಿಗರೆಲ್ಲರೂ 'ಹೋ' ಎಂದು ಅರಚಿ ಬಾವಿಗಿಳಿದಿದ್ದರು. ಹಮೀದ್ ಅನ್ಸಾರಿಯವರು ಮಧ್ಯ ಪ್ರವೇಶಿಸದಿದ್ದರೆ ಜಟಾಪಟಿಯಾಗೇಬಿಡುತ್ತಿತ್ತೋ ಏನೋ!

ಕಾಂಗ್ರೆಸ್ಸಿಗರ ಪ್ರತಿಕ್ರಿಯೆಗಳೇನೇ ಇರಲಿ, ಭ್ರಷ್ಟಾಚಾರ ನಡೆದಿರುವುದಂತೂ ಸತ್ಯ ಎಂದು ಇಟಲಿಯ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಸುಲಭದಲ್ಲಿ ಯಾವ ಸ್ಪಷ್ಟೀಕರಣವನ್ನೂ ನೀಡದ ಅಹಮದ್ ಪಟೇಲ್ ಸಹ, ಅರ್ನಬ್ ಗೋಸ್ವಾಮಿಯ ಮುಂದೆ ನಿಂತು ಮೂಗು ಉಜ್ಜಿದ್ದಾರೆ. ನಿಜವಾಗಿಯೂ ನಡೆದಿದ್ದೇನು, ಯಾರ್ಯಾರು ದೋಷಿಗಳು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ ಇವೆಲ್ಲವುಗಳ ನಡುವೆಯೂ ನಮ್ಮ ಗಮನ ಸೆಳೆಯುವುದು ಸೋನಿಯಾರ ಭಂಡ ಧೈರ್ಯ. 'ನಾನು ಯಾರಿಗೂ ಹೆದರುವುದಿಲ್ಲ.' ಎಂದು ಮೊಂಡು ಮುಖ ಮಾಡಿ ಹೇಳಿದ್ದಾರೆ ಆಕೆ. ನ್ಯಾಷನಲ್ ಹೆರಾಲ್ಡ್ ಪ್ರಕರಣ ಬೆಳಕಿಗೆ ಬಂದಾಗಲೂ ಅಷ್ಟೇ. 'ನಾನು ಇಂದಿರಾ ಗಾಂಧಿಯ ಸೊಸೆ, ನಾನು ಯಾರಿಗೂ ಹೆದರಬೇಕಾಗಿಲ್ಲ.' ಎಂದು ಖದರಿನಿಂದ ಉತ್ತರಿಸಿದ್ದರು. ಪದೇಪದೇ ತಮ್ಮ ಅತ್ತೆಯಿಂದ ಸ್ಫೂರ್ತಿ ಪಡೆಯುವ ಪ್ರಯತ್ನದಲ್ಲಿದ್ದಾರೆಯೇ ಸೋನಿಯಾ? ಹೆದರಿಕೆಯನ್ನು ಹತ್ತಿಕ್ಕಿಕೊಳ್ಳಲು ಇಂದಿರಾರರನ್ನು ಎಳೆದು ತರುತ್ತಿದ್ದಾರೆಯೇ? ಅಥವಾ ತನ್ನ ಅತ್ತೆ ಎಂಥ ಗಟ್ಟಿಗಿತ್ತಿಯಾಗಿದ್ದರು ಎನ್ನುವುದನ್ನು ನಮಗೆ ನೆನಪಿಸುತ್ತಿದ್ದಾರೆಯೇ? ಇತಿಹಾಸ ಬಲ್ಲವರೆಲ್ಲರಿಗೂ ಇಂದಿರಾರ ಛಾತಿ ಗೊತ್ತಿದೆ.

ತುರ್ತು ಪರಿಸ್ಥಿತಿಯನ್ನು ಅಸಾಂವಿಧಾನಿಕವಾಗಿ ಹೇರಿ ಅದನ್ನೂ ಜೀರ್ಣಿಸಿಕೊಂಡ ಸರ್ವಾಧಿಕಾರಿ ಆಕೆ! ಸಂವಿಧಾನವವನ್ನು ರಚಿಸಿದಾಗಲೇ ಅಂಬೇಡ್ಕರ್ ಒಂದು ಮಾತು ಹೇಳಿದ್ದರು. 'ಸಂವಿಧಾನ ಎಷ್ಟೇ ಚೆನ್ನಾಗಿದ್ದರೂ ಅದನ್ನು ಆಚರಣೆಗೆ ತರುವವರು ಸರಿಯಾಗಿರದಿದ್ದರೆ ಅದೂ ಕೆಡುವುದು ಖಂಡಿತ.' ಎಂದು. ಅದನ್ನು ಅಕ್ಷರಶಃ ನಿಜ ಮಾಡಿ ತೋರಿಸಿಬಿಟ್ಟರು ಇಂದಿರಾಗಾಂಧಿ.

1975ರ ಜೂನ್ 12ರಂದು ಅಲಹಾಬಾದ್‍ನ ಉಚ್ಚ ನ್ಯಾಯಾಲಯ ಇಂದಿರಾಗಾಂಧಿಗೆ ವಿರುದ್ಧವಾಗಿ ತೀರ್ಪು ನೀಡಿದ್ದು, ಆಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಗೊತ್ತಿರದ ವಿಚಾರವೊಂದಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆಗಸ್ಟ್ 11ರಂದು ನಿಗದಿಯಾಗಿತ್ತು. ಅಷ್ಟರಲ್ಲೇ ಇಂದಿರಾ ಗಾಂಧಿ ಏನು ಮಾಡಿದರು ಗೊತ್ತೇ? ಸಂವಿಧಾನಕ್ಕೆ 39ನೇ ತಿದ್ದುಪಡಿಯನ್ನು ತಂದರು! ನ್ಯಾಯಾಲಯಗಳು ಪ್ರಧಾನ ಮಂತ್ರಿಯ ವಿರುದ್ಧ ಚುನಾವಣಾ ಅವ್ಯವಹಾರಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಸ್ವೀಕರಿಸಬಾರದು ಎಂಬುದೇ ಆ ತಿದ್ದುಪಡಿಯ ಸಾರ! ಆ ತಿದ್ದುಪಡಿ ಆತುರಾತುರವಾಗಿ ಆಗಸ್ಟ್ ಏಳನೆಯ ತಾರೀಖಿನಂದು ಲೋಕಸಭೆಯ ಹೊಸ್ತಿಲನ್ನು ದಾಟಿತು! ಮರುದಿನ ಯಾವುದೇ ತಕರಾರಿಲ್ಲದೆ ರಾಜ್ಯಸಭೆಯ ಗಡಿಯನ್ನೂ ದಾಟಿದಾಗ ಆಗಸ್ಟ್ ಒಂಭತ್ತರಂದು ಹದಿನೇಳು ರಾಜ್ಯಗಳ ವಿಧಾನಸಭಾ ಸದಸ್ಯರನ್ನು ಕರೆಸಿ ಅವ ಒಪ್ಪಿಗೆಯನ್ನು ತೆಗೆದುಕೊಳ್ಳಲಾಯಿತು! ಆಗಸ್ಟ್ ಹತ್ತು ಭಾನುವಾರ! ಸನ್ಮಾನ್ಯ ರಾಷ್ಟ್ರಪತಿಗಳು ಆತುರಾತುರವಾಗಿ ಅಂದೇ ತಮ್ಮ ಅಂಕಿತವನ್ನೂ ಹಾಕಿ, ಸಂಬಂಧಪಟ್ಟ ನಾಗರಿಕ ಸೇವಾ ಅಧಿಕಾರಿಗಳು ವಿಧೇಯರಾಗಿ ತಮ್ಮ ಕಚೇರಿಗಳನ್ನು ತೆರೆದು ಅಧಿಸೂಚನೆಯನ್ನೂ ಹೊರಡಿಸಿಬಿಟ್ಟರು! ಮರುಬೆಳಿಗ್ಗೆ ಇಂದಿರಾ ಗಾಂಧಿಯ ಪರ ವಕೀಲರು, ನ್ಯಾಯಾಧೀಶರಿಗೆ ಸಂವಿಧಾನದ ಹೊಸ ತಿದ್ದುಪಡಿಯ ಬಗ್ಗೆ ಹೇಳುತ್ತಿದ್ದರೆ ನ್ಯಾಯಾಧೀಶರು ಸುಸ್ತು! ಹೀಗೆ ರಾತ್ರೋರಾತ್ರಿ ತಿದ್ದುಪಡಿ ತಂದು ಪ್ರಧಾನಿಯನ್ನು ಕಾನೂನಿಗಿಂತ ಮೇಲೆ ಕೂಡಿಸಿ, ಅನುಚ್ಛೇದ 14(ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರು) ಅನ್ನೇ ಉಲ್ಲಂಘಿಸಿದ್ದರು!



'ಎಕ್ ಶೇರ್‍ನಿ, ಸೌ ಲಂಗೂರ್, ಚಿಕ್‍ಮಗಳೂರ್ ಭಾಯ್ ಚಿಕ್‍ಮಗಳೂರ್.' ಈ ಘೋಷಣೆ 1978ರಲ್ಲಿ ಬಹಳ ಜನಪ್ರಿಯವಾಗಿತ್ತು. ಓರ್ವ ಸಿಂಹಿಣಿಗೆ ನೂರು ಕೋತಿಗಳು ಯಾವ ಲೆಕ್ಕ ಎಂಬುದನ್ನು ಹಿಂದಿಯಲ್ಲಿ ಪ್ರಾಸಬದ್ಧವಾಗಿ ಹೇಳಿರುವ ಪರಿ ಅದು. 1977 ಲೋಕಸಭಾ ಚುನಾವಣೆಯಲ್ಲಿ ಇಂದಿರಾ ರಾಯ್ ಬರೇಲಿಯಲ್ಲಿ ಹೀನಾಯವಾಗಿ ಸೋತಿದ್ದರು. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಉಪಾಯವಾಗಿ ಚಿಕ್ಕಮಗಳೂರನ್ನೇ ಆರಿಸಿಕೊಂಡಿದ್ದರು! ತುರ್ತುಪರಿಸ್ಥಿತಿಯ ನಂತರ ಅಧಿಕಾರಕ್ಕೆ ಬಂದ ಜನತಾ ಪಕ್ಷ ಒಂದರ ಮೇಲೊಂದರಂತೆ ಅನಗತ್ಯ ತಪ್ಪುಗಳನ್ನು ಎಸಗಿತು. ಶಾಹ್ ನಿಯೋಗ ತುರ್ತು ಪರಿಸ್ಥಿತಿಯ ಸಂದರ್ಭದ ದೌರ್ಜನ್ಯಗಳನ್ನೆಲ್ಲ ಪರಿಶೀಲಿಸುತ್ತಿದೆ ಎನ್ನುವುದು ಗೊತ್ತಿದ್ದರೂ ಚೌಧರಿ ಚರಣ್ ಸಿಂಗ್ ಇಂದಿರಾ ಗಾಂಧಿಯನ್ನು ಹಣಿಯುವ ಆತುರಕ್ಕೆ ಬಿದ್ದರು. ಆಕೆಯ ವಿರುದ್ಧ ಅನವಶ್ಯಕವಾಗಿ ಕೇಸುಗಳನ್ನು ಜಡಿದರು. ಮಧು ಲಿಮಯೆ ಹಾಗೂ ರಾಜ್‍ ನಾರಾಯಣ್ ಭಾರತೀಯ ಜನಸಂಘದ ವಿರುದ್ಧ ತೋಳೇರಿಸಿ ಯುದ್ಧಕ್ಕೆ ನಿಂತರು. ಮೊರಾರ್ಜಿ ದೇಸಾಯಿ ಹಾಗೂ ಜಗಜೀವನರಾಮ್‍ರಿಗೆ ಉಳಿದವರು ಏನು ಮಾಡುತ್ತಿದ್ದಾರೆ ಎನ್ನುವುದು ಗೊತ್ತೇ ಆಗಲಿಲ್ಲ! ಎಲ್ಲೆಲ್ಲೂ ಗೊಂದಲ! ಹಲವಾರು ಅಧಿಕಾರ ಕೇಂದ್ರಗಳು. ಮುಂದಿನ ಪರಿಣಾಮವೇನಾಗಬಹುದು ಎನ್ನುವುದನ್ನೂ ಯೋಚಿಸದೆ ಇಂದಿರಾ ಗಾಂಧಿಯನ್ನು ಲೋಕಸಭೆಯಿಂದಲೂ ಕಿತ್ತೊಗೆಯಲಾಯಿತು! ಅದನ್ನೆಲ್ಲ ಬಹಳ ಚೆನ್ನಾಗಿ ತಮ್ಮ ಅನುಕೂಲಕ್ಕೆ ಬಳಸಿಕೊಂಡರು ಇಂದಿರಾ. ಉಪಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದು ಬಂದರು. ಆಮೇಲಂತೂ ಚರಣ್ ಸಿಂಗ್‍ರ ಆದೇಶದಂತೆ ಇಂದಿರಾ ಬಂಧಿಯಾದಾಗ ಜನತೆಗೆ ಆಕೆಯ ಮೇಲೆ ಕರುಣೆ ಉಕ್ಕುಕ್ಕಿ ಹರಿಯಿತು! ಆರು ದಿನಗಳ ಕಾಲ ಜೈಲಿನಲ್ಲಿದ್ದ ಇಂದಿರಾ ಅಲ್ಲೇ ಚರಣ್ ಸಿಂಗ್‍ರ ಮನವೊಲಿಸಿ, ಮೊರಾರ್ಜಿ ಸರ್ಕಾರವನ್ನು ಉರುಳಿಸಿದರು. ಎರಡೇ ವರ್ಷಗಳೊಳಗೆ ಮತ್ತೆ ಅಧಿಕಾರಕ್ಕೆ ಬಂದರು!

ಇಂದಿರಾ ಗಾಂಧಿ ತಿಹಾರ್ ಜೈಲಿನಲ್ಲಿ ಬಂದಿಯಾಗಿದ್ದಾಗ ದೇಶದಲ್ಲಿ ಎಷ್ಟೆಲ್ಲ ರಾದ್ಧಾಂತ ನಡೆಯಿತು ನೋಡಿ. ಇಂಡಿಯನ್ ಏರ್‍ಲೈನ್ಸ್ ನ ಒಂದು ವಿಮಾನವನ್ನು ಅಪಹರಿಸುವ ಪ್ರಯತ್ನ ನಡೆದಿತ್ತು. ಉತ್ತರಪ್ರದೇಶದಿಂದ ದೆಹಲಿಗೆ ಹೊರಟಿದ್ದ ವಿಮಾನವನ್ನು, ದೇವೇಂದ್ರ ಹಾಗೂ ಭೋಲಾ ಪಾಂಡೆ ಎಂಬಿಬ್ಬರು ಆಟದ ಪಿಸ್ತೂಲುಗಳನ್ನು ತೋರಿಸಿ, ವಾರಣಾಸಿಗೆ ಕೊಂಡೊಯ್ಯುವಂತೆ ಹೆದರಿಸಿದ್ದರು! ಇಂದಿರಾ ಗಾಂಧಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂಬುದೇ ಅವರ ಆಗ್ರಹವಾಗಿತ್ತು! ನಿಂತನಿಲುವಿನಲ್ಲೇ ರೋಷಾವೇಶದ ಭಾಷಣ ಬಿಗಿದು ವಿಮಾನದಲ್ಲಿದ್ದ ಹಲವು ಪ್ರಯಾಣಿಕರ ಚಪ್ಪಾಳೆಯನ್ನೂ ಗಿಟ್ಟಿಸಿದ್ದರು! ಕೆಲ ಘಂಟೆಗಳ ನಂತರ ಅವರು ಪೋಲೀಸರ ಮುಂದೆ ಶರಣಾದಾಗ, ಇನ್ನೆಲ್ಲಿ ದಂಗೆಯಾಗಿಬಿಡುತ್ತದೋ ಎಂದು ಹೆದರಿದ ಮೊರಾರ್ಜಿ ದೇಸಾಯಿ ಸರ್ಕಾರ ಅವರ ಕೂದಲನ್ನೂ ಕೊಂಕಿಸದೆ ಬಿಟ್ಟುಬಿಟ್ಟಿತ್ತು! ಆಮೇಲೆ ಅವರಿಬ್ಬರೂ 1980ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಟಿಕೇಟು ಪಡೆದು ಶಾಸಕರಾಗಿದ್ದು ಬೇರೆ ಮಾತು! ಇದು ಕೇವಲ ಒಂದು ಘಟನೆಯಷ್ಟೇ. ಇದಲ್ಲದೆ ನೂರಾರು ದಂಗೆಗಳಾಗಿದ್ದವು. ಹಲವರು ಸತ್ತು, ಸಾವಿರಾರು ಮಂದಿ ಜೈಲು ಸೇರಿದ್ದರು. ಜೈಲಿನ ಹೊರಗೆ ಕೂತ ಆಕೆಯ ಬೆಂಬಲಿಗರು, ‘ಇಂದಿರಾಗಾಂಧಿ ಜಿಂದಾಬಾದ್.’ ಎಂಬ ಘೋಷಣೆಯನ್ನು ಕೂಗಿದ್ದರು. ತಾತ್ಪರ್ಯವಿಷ್ಟೇ. ಮಾಡಿದ್ದೆಲ್ಲವನ್ನೂ ಅರಗಿಸಿಕೊಳ್ಳುವ ತಾಕತ್ತು ಇಂದಿರಾರಿಗಿತ್ತು.

ಅವುಗಳನ್ನೇ ಉದಾಹರಣೆಯಾಗಿಟ್ಟುಕೊಂಡು ಸೋನಿಯಾ ಈಗಲೂ ಧೈರ್ಯ ತಂದುಕೊಳ್ಳುತ್ತಿದ್ದಾರೋ ಏನೋ! ಆಕೆಯ ಒಂದೊಂದು ಮಾತು-ಕೃತಿಯನ್ನೂ ಅಳೆದು ನೋಡುವ ಜನರಿದ್ದಾರೆ ಎನ್ನುವುದನ್ನು ಆಕೆ ಮರೆತಂತಿದೆ. ಇಶ್ರತ್ ಜಹಾನ್ ವಿಷಯದಲ್ಲಿ ಸುಳ್ಳು ಅಫಿಡೆವಿಟ್ಗಳನ್ನು ಮಾಡಿಸಿದ, ಗೋಧ್ರಾ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯದ ಮುಖ್ಯಮಂತ್ರಿಯೊಬ್ಬರನ್ನು ಇನ್ನಿಲ್ಲದಂತೆ ಅವಮಾನಿಸಿದ, ಅಂಬೆಗಾಲಿಡಲು ಬರದ ಮಗನನ್ನು ಮ್ಯಾರಥಾನ್ಗೆ ನೂಕಿರುವ ಸೋನಿಯಾ ಒಂದು ವಿಷಯವನ್ನು ಮರೆಯುತ್ತಿದ್ದಾರೆ. ಇಂದಿನ ರಾಜಕೀಯ ಪರಿಸ್ಥಿತಿ ಹಾಗೂ ಜನರ ಮನಸ್ಥಿತಿ ಎರಡೂ ಬದಲಾಗಿದೆ.

ಅವರೆಷ್ಟೇ ಪಲ್ಟಿ ಹೊಡೆದರೂ ಇಂದಿರಾ ಆಗುವುದಕ್ಕೆ ಸಾಧ್ಯವೇ ಇಲ್ಲ!

No comments:

Post a Comment